ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ವಿದ್ಯಾರ್ಥಿಗಳ ದೃಷ್ಟಿಯಿಂದ ಸಮ್ಮೇಳನ ನಡೆಸಿ

Srinivasa Murthy VN
Updated On : 11 Mar 2013, 2:20 am

ಕ.ಪ್ರ.ವಾರ್ತೆ ಟಿ ಕಡೂರು ಟಿ  ಮಾ.10
ಸಾಹಿತಿಗಳನ್ನಷ್ಟೇ ದೃಷ್ಟಿಯಾಗಿಟ್ಟುಕೊಂಡು ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸುವುದಕ್ಕಿಂತ ಶಾಲಾ ಕಾಲೇಜು ವಿದ್ಯಾರ್ಥಿಗಳನ್ನೂ ಗುರಿಯಾಗಿಸಿಕೊಂಡು ಸಮ್ಮೇಳನಗಳನ್ನು ನಡೆಸಿದಲ್ಲಿ ಸಮ್ಮೇಳನಗಳು ಸಾರ್ಥತೆಯನ್ನು ಪಡೆಯುತ್ತವೆ ಎಂದು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಹೇಳಿದರು.
ಅರ್ಥಪೂರ್ಣ ಕನ್ನಡ: ತಾಲೂಕಿನ ಕವಿ ಲಕ್ಷೀಶನ ಜನ್ಮಸ್ಥಳವಾದ ದೇವನೂರಿನಲ್ಲಿ ನಡೆದ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನದ ಸಮಾರೋಪ ಭಾಷಣದಲ್ಲಿ ಮಾತನಾಡಿ, ಕನ್ನಡ ಭಾಷೆಯ ಬಳಕೆ ಸರಿಯಾಗಿದ್ದಲ್ಲಿ ಭಾಷೆ ಉಳಿಯಲು ಸಾಧ್ಯ. ಇಂದಿಗೂ ಹಳ್ಳಿಗಳಲ್ಲಿ ಗ್ರಾಮೀಣ ಜನರ ಅರ್ಥಪೂರ್ಣ ಕನ್ನಡದ ಸೊಗಡಿನ ಪರಿಚಯವನ್ನು ನಾವು ಮಾಡಿಕೊಂಡಿಲ್ಲ.
ನಮ್ಮ ಮಕ್ಕಳಿಗೆ ನಮ್ಮ ಭಾಷೆಯ ಸೊಗಡನ್ನು ಪರಿಚಯಿಸುವಲ್ಲಿ ಸೋತಿದ್ದೇವೆ. ಅದನ್ನು ನಮ್ಮ ಮುಂದಿನ ಪೀಳಿಗೆಗೆ ಮಾಡಿಕೊಡುತ್ತಿಲ್ಲ. ಮಕ್ಕಳಿಗೆ ಅಪ್ಪ, ಅಮ್ಮ ಬದಲು ಮಮ್ಮಿ, ಡ್ಯಾಡಿ, ದೊಡ್ಡಮ್ಮ ಚಿಕ್ಕಮ್ಮ ಬದಲು ಮಾಕ್ಸಿಮಂ ಮಿನಿಮಂ ಎಂದು ಹೇಳಿಕೊಡುತ್ತಿದ್ದೇವೆ ಎಂದು ವಿಷಾದ ವ್ಯಕ್ತಪಡಿಸಿದರು.
ಪ್ರಮುಖವಾಗಿ ಚರ್ಚೆ: ಬೇರೆ ಭಾಷೆಯನ್ನು ಕಲಿಯಬೇಕು, ಪ್ರೀತಿಸಬೇಕು ಆದರೆ ನಮ್ಮ ಸಂಸ್ಕೃತಿಯಲ್ಲಿ ಜೀವಿಸುವುದನ್ನು ಕಲಿಯಬೇಕು. ನಮ್ಮ ತಾಯಿ ಭಾಷೆಯ ಸೊಗಡನ್ನು ಕಲಿಸದೇ ಇದ್ದರೆ ಕನ್ನಡ ಹೇಗೆ ಉಳಿಯುತ್ತದೆ. ಈ ಕುರಿತು ಇಂತಹ ಸಾಹಿತ್ಯ ಸಮ್ಮೇಳನಗಳಲ್ಲಿ ಪ್ರಮುಖವಾಗಿ ಚರ್ಚೆಯಾಗಬೇಕು. ಕವಿ ಲಕ್ಷ್ಮೀಶನ ನೆಲದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಿರುವುದರ ಬಗ್ಗೆ ಹರ್ಷ ವ್ಯಕ್ತಪಡಿಸಿ ಮುಂದಿನ ದಿನಗಳಲ್ಲಿ ಎ.ಆರ್. ಕೃಷ್ಣಶಾಸ್ತ್ರಿಗಳ ಊರಾದ ಅಂಬಳೆಯಲ್ಲಿ ಸಮ್ಮೇಳನ ನಡೆಸುವಂತೆ ಸಲಹೆ ಮಾಡಿದರು.
ಲಕ್ಷ್ಮೀಶನಿಗೆ ಗೌರವ: ಸಾನ್ನಿಧ್ಯ ವಹಿಸಿದ್ದ ಸಿರಿಗೆರೆ ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ದೇವನೂರಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಏರ್ಪಡಿಸುವ ಮೂಲಕ ಕನ್ನಡದ ಮಹಾಕವಿ ಲಕ್ಷ್ಮೀಶನಿಗೆ ಗೌರವ ಸಲಿಸಿದ್ದು ಅಭಿನಂದನಾರ್ಹ.
ಕನ್ನಡ ಕಟ್ಟುವ ಕೆಲಸ ಇಂತಹ ಸಾಹಿತ್ಯ ಸಮ್ಮೇಳನಗಳಿಂದ ಆಗುತ್ತಿದೆ. ಹಲವಾರು ಸಂಸ್ಕೃತ ಶ್ಲೋಕಗಳ ಕನ್ನಡ ರೂಪಾಂತರವನ್ನು ಉಲ್ಲೇಖಿಸಿ ಮಾತನಾಡಿದರು. ಉನ್ನತ ಶಿಕ್ಷಣ ಸಚಿವ ಸಿ.ಟಿ. ರವಿ, ವ್ಯವಸ್ಥಿತವಾಗಿ ಸಮ್ಮೇಳನ ಆಯೋಜಿಸಿರುವುದರ ಬಗ್ಗೆ ಶ್ಲಾಘಿಸಿದರು. ಸಮ್ಮೇಳನಾಧ್ಯಕ್ಷ ಚಟ್ಟನಹಳ್ಳಿ ಮಹೇಶ್, ಹಳ್ಳಿಹಳ್ಳಿಗಳಲ್ಲಿಯೂ ಯಾವುದೇ ಅಪರಾಧ ನಡೆಯದೆ ಅಪರಾಧ ಮುಕ್ತ ಗ್ರಾಮ ಎಂಬ ನಾಮಫಲಕ ಇರುವ ಗ್ರಾಮಗಳಾಗಬೇಕೆಂಬ ಕನಸು ನನಸಾಗಬೇಕು ಎಂದು ಹೇಳಿ ಸಮ್ಮೇಳನಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಅರ್ಪಿಸಿದರು.
ಪ್ರಮುಖ ನಿರ್ಣಯ: ಇದಕ್ಕೂ ಮುನ್ನ ತಾಲೂಕು ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ನಡೆದ ಭಹಿರಂಗ ಅಧಿವೇಶನದಲ್ಲಿ ಪ್ರಮುಖ ನಿರ್ಣಯ ಕೈಗೊಳ್ಳುವ ಮೂಲಕ ನೃತ್ಯ ಕಲಾವಿದೆ ದಿ.ಡಾ.ಕೆ. ವೆಂಕಟಲಕ್ಷ್ಮಮ್ಮನವರ ಹೆಸರಿನಲ್ಲಿ ನೃತ್ಯಕಲಾ ಅಕಾಡೆಮಿಯಿಂದ ನೃತ್ಯ ಕಲಾ ಶಾಲೆ ಸ್ಥಾಪನೆ, ತಾಲೂಕಿನ ಕೆರೆಕಟ್ಟೆಗಳ ಅಂತರ್ಜಲ ಹೆಚ್ಚಿಸಿ ಎಲ್ಲ ಕೆರೆಗಳು ತುಂಬಲು ಆದ್ಯತೆ, ದೇವನೂರು ಮಾರ್ಗವಾಗಿ ಓಡಾಡುವ ರೈಲಿಗೆ ಕವಿ ಲಕ್ಷ್ಮೀಶನ ಹೆಸರಿಡಬೇಕು ಮತ್ತು ದೇವನೂರಿನಲ್ಲಿ ಲಕ್ಷ್ಮೀಶನ ಹೆಸರಿನಲ್ಲಿ ಸ್ಮಾರಕ ನಿರ್ಮಿಸಬೇಕು ಎಂಬ ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಸಮಾರಂಭದಲ್ಲಿ ದೇವನೂರಿನ ಸಾಹಿತಿ ಡಾ.ಡಿ.ಆರ್. ಪಾಂಡುರಂಗರವರಿಗೆ ಸಾಹಿತ್ಯ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಮಾರಂಭದಲ್ಲಿ ಜಿಪ ಸದಸ್ಯ ಕಲ್ಮರುಡಪ್ಪ, ಚಿಕ್ಕ ದೇವನೂರು ರವಿ, ಜಿಲ್ಲಾ ಕಸಾಪ ಅಧ್ಯಕ್ಷ ಎನ್.ಎಸ್. ಶಿವಸ್ವಾಮಿ, ಮಾಜಿ ಅಧ್ಯಕ್ಷ ಕೆ.ಜಿ.ಶ್ರೀನಿವಾಸಮೂರ್ತಿ, ರವಿಪ್ರಕಾಶ್ ಇದ್ದರು.

ಶಿವನಾಮ ಸ್ಮರಣೆ
ಕಡೂರು: ಎರಡನೇ ದಕ್ಷಿಣ ಕಾಶಿ ಎಂದು ಕರೆಯಲ್ಪಡುವ ಶ್ರೀ ಚಂದ್ರಮೌಳೇಶ್ವರ ದೇವಾಲಯದಲ್ಲಿ ನೂತನ ದೇವಾಲಯ ಆರಂಭವಾಗಿ 9 ನೇ ವರ್ಷ ತುಂಬುತ್ತಿರುವ ಸಂದರ್ಭದಲ್ಲಿ 9ನೇ ವರ್ಷದ ಮಹಾಶಿವರಾತ್ರಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಮಹಾಶಿವರಾತ್ರಿ ಅಂಗವಾಗಿ ದೇವಾಲಯದಲ್ಲಿ 108 ಏಕ ಶತ ರುದ್ರಾಭಿಷೇಕವನ್ನು ಏರ್ಪಡಿಸಲಾಗಿತ್ತು. ಭಕ್ತರು ಸ್ವತಹ ಶ್ರೀ ಸ್ವಾಮಿಯರ ಲಿಂಗವನ್ನು ಸ್ಪರ್ಶಿಸಿ ರುದ್ರಾಭಿಷೇಕ ಆಚರಿಸಲು ಅವಕಾಶ ಮಾಡಿಕೊಟ್ಟ ಹಿನ್ನೆಲೆಯಲ್ಲಿ ಬೆಳಿಗ್ಗೆಯಿಂದಲೇ ಸಾವಿರಾರು ಭಕ್ತರು ಭಾಗವಹಿಸಿ ಸ್ವಾಮಿಯವರ ಅಭಿಷೇಕದ ಸೇವಾಕಾರ್ಯದಲ್ಲಿ ಭಾಗವಹಿಸಿ ಪುನೀತರಾದರು.
ಉತ್ತರ ಭಾರತದ ಶೈಲಿಯಲ್ಲಿ ಗೋಪುರ ರಚನೆಯಾಗಿ ವಿವಿಧ ರೀತಿಯ ಕೆತ್ತನೆ ಹಾಗೂ ನಿಂತಿರುವ ಶಿವನ ಪ್ರತಿಮೆ ಹೊಂದಿ ರಾಷ್ಚ್ರೀಯ ಹೆದ್ದಾರಿಯಲ್ಲಿ ಕಂಗೊಳಿಸುತ್ತಿರುವ ಈ ದೇವಾಲಯದಲ್ಲಿ ಬೆಳಿಗ್ಗೆ 6 ಗಂಟೆಯಿಂದಲೇ 108 ಶತ ರುದ್ರಾಭಿಷೇಕಕ್ಕೆ ಚಾಲನೆ ನೀಡಿ ಸೋಮವಾರ ಬೆಳಗಿನ ಜಾವ 4.30 ರವರೆಗೂ ಅಭಿಷೇಕದಲ್ಲಿ ಭಾಗವಹಿಸಲು ಭಕ್ತರಿಗೆ ಅವಕಾಶ ಮಾಡಿಕೊಡಲಾಯಿತು. ಭಾನುವಾರ ಬೆಳಿಗ್ಗೆ 10 ರಿಂದ 1 ಗಂಟೆಯವರೆಗೆ ರುದ್ರಹೋಮ, ಪೂರ್ಣಾಹುತಿ ಕಾರ್ಯಕ್ರಮಗಳು ಜರುಗಿದವು. ಶಿವರಾತ್ರಿ ಅಂಗವಾಗಿ ಸಂಜೆ 6.30 ರಿಂದ ರಾತ್ರಿ 12 ರವರೆಗೆ ಕಡೂರಿನ ಕುಮಾರ್ ಮತ್ತು ತಂಡದವರಿಂದ ವಿಶೇಷ ಭಕ್ತಿಗೀತೆ ಭಾವಗೀತೆ ಕಾರ್ಯಕ್ರಮಗಳು ಜರುಗಿದವು.
ದೇವಾಲಯದ ಅಭಿವೃದ್ಧಿ  ಕಾರ್ಯಗಳಿಗೆ ಭಕ್ತಾದಿಗಳು ಸಹಕಾರ ನೀಡಬೇಕೆಂದು ಚಂದ್ರಮೌಳೇಶ್ವರ ಚಾರಿಟಬಲ್ ಟ್ರಸ್ಟ್ ಕೋರಿದೆ. ಇದೇ ಸಂದರ್ಭದಲ್ಲಿ ದೇವಸ್ಥಾನದ ಸಮಿತಿಯ ಪದಾಧಿಕಾರಿಗಳಾದ ಕೆ.ಎಚ್.ಎ. ಪ್ರಸನ್ನ, ಕೆ.ಎಚ್. ಶಂಕರ್, ಮಂಡಿ ರೇಣುಕಪ್ಪ, ಬೆಂಕಿ ಲೋಕೇಶ್, ಜನರಲ್ ತಿಮ್ಮಯ್ಯ, ವಸಂತಕುಮಾರ್, ಗಂಗಾಧರಯ್ಯ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement