ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ತೊಟ್ಟಿ ಸಾಮರ್ಥ್ಯ ಹೆಚ್ಚಿಸಿ ನೀರು ಸರಬರಾಜು ಮಾಡಿ

Srinivasa Murthy VN
Updated On : 13 Mar 2013, 10:17 am

ಕ.ಪ್ರ.ವಾರ್ತೆ, ಕೊಪ್ಪ, ಮಾ12
ತಾಲೂಕಿನ ನರಸೀಪುರ ಗ್ರಾಪಂ ವ್ಯಾಪ್ತಿಯ ಆರ್ಡಿಕೊಪ್ಪದಲ್ಲಿ ಪರಿಶಿಷ್ಟರಿಗಾಗಿ ನೀರು ಸರಬರಾಜು ಮಾಡಲು ನಿರ್ಮಿಸಿದ್ದ ತೊಟ್ಟಿಯಿಂದ ಪರಿಶಿಷ್ಟರಲ್ಲದವರ ಕುಟುಂಬಗಳಿಗೆ ನೀರು ಸರಬರಾಜು ಮಾಡುವ ಕಾಮಗಾರಿಯನ್ನು ಆರ್ಡಿಕೊಪ್ಪ ಕಾಲೋನಿ ವಾಸಿಗಳು ತಡೆಹಿಡಿದು ಪ್ರತಿಭಟಸಿದರು.
ಆರ್ಡಿಕೊಪ್ಪ ಗುಡ್ಡದಲ್ಲಿ 2 ವರ್ಷದ ಹಿಂದೆ ಪಂಚಾಯಿತಿ ಪರಿಶಿಷ್ಟರ ಅನುದಾನ ಬಳಕೆ ಮಾಡಿ 15,000 ಲೀ ಸಾಮರ್ಥ್ಯದ ನೀರಿನ ತೊಟ್ಟಿ ನಿರ್ಮಿಸಿದ್ದು, ಇದಕ್ಕೆ ತುಂಗಾ ನದಿಯಿಂದ ನೀರೆತ್ತಿ ಸರಬರಾಜು ಮಾಡಿ, ನಂತರ ಆರ್ಡಿಕೊಪ್ಪದ 40 ಪರಿಶಿಷ್ಟ ಕುಟುಂಬಗಳಿಗೆ ಸರಬರಾಜು ಮಾಡಲಾಗುತ್ತಿತ್ತು.
ಪೈಪ್ ಲೈನ್ ಸರಿಯಲ್ಲ: ಸಾಕಷ್ಟು ಪ್ರಮಾಣದಲ್ಲಿ ನೀರು ದೊರೆಯುತ್ತಿಲ್ಲವಾಗಿದ್ದು, ಇದೇ ತೊಟ್ಟಿಯಿಂದ ಸ್ವಂತ ಬಾವಿ ಹೊಂದಿರುವ ಮೂರು ಅನ್ಯ ಕೋಮಿನ ಕುಟುಂಬಗಳಿಗೆ ನೀರು ಸರಬರಾಜು ಮಾಡಲು ಗ್ರಾಪಂ ಪೈಪ್ ಲೈನ್ ನಿರ್ಮಿಸುತ್ತಿರುವುದು ಕಾಲೋನಿ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ರಸ್ತೆ ನಿರ್ಮಿಸುತ್ತೇವೆಂದು ಪೈಪ್ ಲೈನ್ ಅಳವಡಿಸಲು ಜೆ.ಸಿ.ಬಿ. ಯಿಂದ ಕಾಲುವೆ ನಿರ್ಮಿಸಿರುವುದನ್ನು ಕಂಡು ನೂರಾರು ಕಾಲೋನಿ ವಾಸಿಗಳು ಕಾಲುವೆ ಮುಚ್ಚಿ ಪ್ರತಿಭಟಸಿದರು.
ನೀರಿನ ತೊಟ್ಟಿಗೆ ಮುಚ್ಚಳ ನಿರ್ಮಿಸಿಲ್ಲ. ಹಾವು, ಹಲ್ಲಿ ಬಿದ್ದ ನೀರನ್ನೇ ಸರಬರಾಜು ಮಾಡಲಾಗುತ್ತಿದೆ. ತೊಟ್ಟಿಯ ಸಾಮರ್ಥ್ಯ ಹೆಚ್ಚಿಸಿ ನಂತರ ಇತರರಿಗೆ ನೀರು ಸರಬರಾಜು ಮಾಡಲಿ. ಅಲ್ಲಿವರೆಗೆ ಪೈಪ್ ಲೈನ್ ಅಳವಡಿಸಿಕೆಗೆ ಅವಕಾಶ ನೀಡುವುದಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಪಂ ಸದಸ್ಯ ಪ್ರಸನ್ನ ಘಟನೆ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿ, ಪರಿಶಿಷ್ಟರ ಅನುದಾನದ ಜೊತೆಗೆ ಇತರ ಯೋಜನೆ ಅನುದಾನ ಬಳಸಿ ತೊಟ್ಟಿ ನಿರ್ಮಿಸಲಾಗಿದ್ದು, ಪೈಪ್‌ಲೈನ್ ಅಳವಡಿಕೆ ಕ್ರಮಬದ್ದವಾಗಿದೆ ಎಂದಿದ್ದಾರೆ.
ಪ್ರತಿಭಟನೆ ನಿರತ ಕಾಲೋನಿ ವಾಸಿಗಳೊಂದಿಗೆ ದಲಿತ ಮುಖಂಡ ಬೆಳಗೊಳ ಆನಂದ್ ಮೊದಲಾದವರಿದ್ದರು.

ಪ್ರಸನ್ನ ಕುಮಾರ್‌ಗೆ ಕುವೆಂಪು ವಿಶ್ವ ವಿದ್ಯಾಲಯ ಚಿನ್ನದ ಪದಕ
ತರೀಕೆರೆ: ಕುವೆಂಪು ವಿವಿ ವಾಣಿಜ್ಯ ವಿಭಾಗ 2012 ರಲ್ಲಿ ನೆಡೆಸಿದ ಮಾಸ್ಟರ್ ಆಫ್ ಬ್ಯಾಂಕಿಂಗ್ ಫೈನಾನ್ಸ್ ಮತ್ತು ಇನ್ಶುರೆನ್ಸ್  ಪದವಿ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ ಪಡೆದ ತರೀಕೆರೆ ವಿದ್ಯಾರ್ಥಿ ಟಿ.ಎನ್. ಪ್ರಸನ್ನಕುಮಾರ್‌ಗೆ ದಿವಂಗತ ವೆಂಕಟಾಚಲರಾವ್ ಮೆಮೋರಿಯಲ್ ಚಿನ್ನದ ಪದಕ, ಅರ್ಹತಾ ಪತ್ರ ಮತ್ತು ರ್ಯಾಂಕ್ ಆರ್ಹತಾ ಪತ್ರ ನೀಡಿ ಗೌರವಿಸಿದೆ.
ಕುವೆಂಪು ವಿವಿಯಿಂದ ಮಂಗಳವಾರ ಶಂಕರಘಟ್ಟ ಜ್ಞಾನ ಸಹ್ಯಾದ್ರಿ ಕ್ಯಾಂಪಸ್‌ನಲ್ಲಿ ನೆಡೆದ 23ನೇ ಘಟಿಕೋತ್ಸವ ಸಮಾರಂಭದಲ್ಲಿ ವಿವಿ ಕುಲಪತಿ ಎಸ್.ಎ. ಬಾರಿ ವಿದ್ಯಾರ್ಥಿ ಪ್ರಸನ್ನಕುಮಾರ್‌ಗೆ ಚಿನ್ನದ ಪದಕ ನೀಡಿ ಗೌರವಿಸಿದರು. ಪ್ರಸನ್ನಕುಮಾರ್ ತರೀಕೆರೆ ನಿಂಗಪ್ಪ ಮತ್ತು ತಾಯಮ್ಮ ಅವರ ಪುತ್ರರಾಗಿದ್ದಾರೆ. ಘಟಿಕೋತ್ಸವದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ, ಪ್ರೊ. ರಾಮೇಗೌಡ ಇದ್ದರು.
ಅಭಿನಂದನೆ: ಕುವೆಂಪು ವಿವಿಯಿಂದ ಚಿನ್ನದ ಪದಕ ಗಳಿಸಿದ ವಿದ್ಯಾರ್ಥಿ ಟಿ.ಎನ್. ಪ್ರಸನ್ನಕುಮಾರ್‌ರನ್ನು ತರೀಕೆರೆ ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಟಿ.ಎಲ್. ರಮೇಶ್, ರಶ್ಮಿ ರಮೇಶ್, ಮಂಜುನಾಥ ಪ್ರಸಾದ್, ಬೆಂಗಳೂರು ರಾಜಶೇಖರ್, ಜಯ್ಯಣ್ಣ, ಮ್ಯಾಮ್‌ಕೋಸ್ ನಿರ್ದೇಶಕ ಆರ್. ದೇವಾನಂದ್, ಎ.ವಿ. ನಾಗಬೂಷಣ್ ಅಭಿನಂದಿಸಿದ್ದಾರೆ.

ಚಿಕ್ಕಮಗಳೂರಲ್ಲಿ ಗುಡುಗು ಸಹಿತ ಮಳೆ
ಕ.ಪ್ರ ವಾರ್ತೆ, ಚಿಕ್ಕಮಗಳೂರು, ಮಾ. 12
ನಗರದಲ್ಲಿ ಮಂಗಳವಾರ ಮಧ್ಯಾಹ್ನ ಗುಡುಗು, ಆಲಿಕಲ್ಲು ಸಹಿತ ಮಳೆ ಬಂದಿದೆ.
ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಧಾರಾಕಾರವಾಗಿ ಸುರಿಯಿತು. ಚರಂಡಿಗಳು ಮುಚ್ಚಿ ಹೋಗಿರುವ ಪ್ರದೇಶಗಳಲ್ಲಿ ಮಳೆಯ ನೀರು ರಸ್ತೆಯ ಮೇಲೆ ಹರಿಯಿತು. ಇದರಿಂದ ವಾಹನ ಸಂಚಾರಕ್ಕೆ ಕೆಲಕಾಲ ಅಡ್ಡಿ ಆಯಿತು.
ಕಳೆದ ಒಂದು ವಾರದಿಂದ ಜಿಲ್ಲೆಯ ಮಲೆನಾಡಿನಲ್ಲಿ ಆಗಾಗ ಮಳೆ ಬರುತ್ತಿದೆ. ಆದರೆ, ಚಿಕ್ಕಮಗಳೂರು ನಗರದಲ್ಲಿ ಮೋಡ ಕವಿದ ವಾತಾವರಣ ಇತ್ತು. ಮಂಗಳವಾರ ಮಧ್ಯಾಹ್ನ ಸುಮಾರು ಒಂದು ಗಂಟೆಯ ವೇಳೆಗೆ ಆಲಿಕಲ್ಲು ಸಹಿತ ಮಳೆ ಬಂದಿತು.
ಮಧ್ಯಾಹ್ನ ಊಟಕ್ಕಾಗಿ ಮನೆಗಳಿಗೆ ತೆರಳಬೇಕಾಗಿದ್ದ ನೌಕರರು ಕಚೇರಿಯಲ್ಲಿಯೇ ಸುಮಾರು ಅರ್ಧ ಗಂಟೆಗಳ ಕಾಲ ಕಳೆದರು. ಮಳೆಯಿಂದ ಕೆಲ ಸಮಯ ತೊಂದರೆ ಆದಂತೆ ಕಂಡು ಬಂದರೂ ಬಿಸಿಲಿನ ಬೇಗೆಯಿಂದ ಬಸವಳಿದ ನಗರಕ್ಕೆ ಈ ಮಳೆ ತಂಪೇರೆದಿತು.
ಮಳೆ ಬಂದು  ಹೋದ ತಕ್ಷಣವೇ ಬಿಸಿಲು ಮುಂದುವರೆದಿತು. ಆದರೆ, ಸಂಜೆ ನಗರದಲ್ಲಿ ತಂಪಾದ ವಾತಾವರಣ ಇತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement