ಮತದಾರರ ತೀರ್ಪಿಗೆ ಬದ್ಧ
ಕಡೂರು: ಪ್ರಜಾಪ್ರಭುತ್ವದಲ್ಲಿ ಬದಲಾವಣೆ ಅನಿವಾರ್ಯವಾಗಿದ್ದು, ಸ್ಥಳೀಯ ವೈಯಕ್ತಿಕ ವರ್ಚಸ್ಸು ಹಾಗೂ ಸಂಬಂಧಗಳ ಆಧಾರದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ನಡೆಯುತ್ತಿದ್ದು, ಕಡೂರು ಹಾಗೂ ಬೀರೂರು ಪುರಸಭಾ ಚುನಾವಣೆಯಲ್ಲಿ ಮತದಾರರು ನೀಡಿರುವ ತೀರ್ಪಿಗೆ ತಾವು ತಲೆಬಾಗುವುದಾಗಿ ಜೆಡಿಎಸ್ ಮುಖಂಡ ವೈ.ಎಸ್.ವಿ. ದತ್ತ ಹೇಳಿದರು.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ದತ್ತ, ಈ ಫಲಿತಾಂಶದ ಮೂಲಕ ಜನರು ಜೆಡಿಎಸ್‌ಗೆ ಎಚ್ಚರಿಕೆ ನೀಡಿರುವುದನ್ನು ನಾನು ಸ್ವೀಕರಿಸುತ್ತೇನೆ. ಜನರ ನೀರೀಕ್ಷೆಗೆ ತಕ್ಕಂತೆ ಪುರಸಭೆಯ ಆಡಳಿತದಲ್ಲಿ ಎಲ್ಲೋ ಕೆಲವೆಡೆ ಲೋಪ ಆಗಿದೆ ಎಂಬುದನ್ನು ಬುದ್ಧಿವಂತ ಮತದಾರು ಈ ಫಲಿತಾಂಶದ ಮೂಲಕ ತೋರಿಸಿಕೊಟ್ಟಿದ್ದಾರೆ. ಮತದಾರರ ಅಭಿರುಚಿಗೆ ತಕ್ಕಂತೆ ಕೆಲಸ ಮಾಡುವಲ್ಲಿ ಕೆಲವೆಡೆ ಲೋಪ ಆಗಿರುವುದರ ಬಗ್ಗೆ ನಾವೂ ತಿದ್ದಿಕೊಳ್ಳಲು ಈ ಫಲಿತಾಂಶದ ಮೂಲಕ ಅವಕಾಶ ನೀಡಿದ್ದಾರೆ ಎಂದು ಭಾವಿಸುತ್ತೇನೆ ಎಂದರು.
2008ರಲ್ಲಿ ಈ ಬಾರಿಯಂತೆಯೇ ತಾವು ಮತದಾರರ ಮನೆಮನೆ ಬಾಗಿಲಿಗೆ ತೆರಳಿ ಮತಯಾಚನೆ ನಡೆಸಿದಾಗ ಮತದಾರರು ಅಂದೂ ಕೂಡ ಯಾವುದೇ ಪಕ್ಷದ ಹಿನ್ನೆಲೆಯನ್ನಾಗಲೀ ಗಣನೆಗೆ ತೆಗೆದುಕೊಳ್ಳದೇ ವೈಯಕ್ತಿಕ ನೆಲೆಗಟ್ಟು ಹಾಗೂ ಸಂಬಂಧಗಳ ಆಧಾರದಲ್ಲಿ ಚುನಾವಣೆ ನಡೆದು ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಿದರು. ಈ ಬಾರಿಯೂ ಅದೇ ನೆಲೆಗಟ್ಟಿನಲ್ಲಿ ಕಡೂರು ಹಾಗೂ ಬೀರೂರು ಪುರಸಭಾ ಚುನಾವಣೆ ನಡೆಯುವ ಮೂಲಕ ಮತದಾರರು ಕಾಂಗ್ರೆಸನ್ನು ಬೆಂಬಲಿಸಿದ್ದಾರೆ. ಈ ತೀರ್ಪನ್ನು ನಾನು ಪಕ್ಷದ ಮುಖಂಡನಾಗಿ ಸಮಾನವಾಗಿ ಸ್ವೀಕರಿಸುತ್ತೇನೆ ಎಂದರು.
ಬದಲಾವಣೆ ಅನಿವಾರ್ಯ: ಪ್ರಜಾತಂತ್ರ ವ್ಯವಸ್ಥೆಯಲ್ಲಿ ಬದಲಾವಣೆ ಅನಿವಾರ್ಯ. ಆದರೆ ಪುರಸಭಾ ಚುನಾವಣೆ ಫಲಿತಾಂಶದಿಂದ ಜೆಡಿಎಸ್ ವರ್ಚಸ್ಸಿಗೆಯ ಯಾವುದೇ ಕುಂದು ಬಂದಿಲ್ಲ. ಪಕ್ಷ ಕಡೂರು ಹಾಗೂ ಬೀರೂರು ಪಟ್ಟಣಗಳಲ್ಲಿ ಸಧೃಢವಾಗಿದೆ. ತಮಗೆ ಮತದಾರರು ಎಲ್ಲೆಡೆ ತೋರಿಸುತ್ತಿರುವ ಅಭಿಮಾನ, ಪ್ರೀತಿ, ಮಮತೆಯು ಜೆಡಿಎಸ್ ಸದೃಢವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದರು.
ಪಕ್ಷದ ಅಸ್ತಿತ್ವವನ್ನು ಯಾರೂ ಅಲುಗಾಡಿಸಲು ಸಾಧ್ಯವಿಲ್ಲ ಎಂದು ಹೇಳಿದ ದತ್ತ, ಜನರು ನೀಡಿರುವ ತೀರ್ಪಿಗೆ ತಲೆಬಾಗುವ ಮೂಲಕ ಮುಂದಿನ ದಿನಗಳಲ್ಲಿ ಜೆಡಿಎಸ್ ಜನರಿಗೆ ಮತ್ತಷ್ಟು ಹತ್ತಿರವಾಗುವಂತೆ ನನ್ನ ಪಕ್ಷದ ಮುಖಂಡರು ಹಾಗು ಕಾರ್ಯಕರ್ತರೊಂದಿಗೆ ಕೆಲಸ ಮಾಡುವುದಾಗಿ ಹೇಳಿದರು.