ಸಮಾಜದಲ್ಲಾಗುವ ಅನ್ಯಾಯ ಎದುರಿಸಿ
ಕ.ಪ್ರ ವಾರ್ತೆ, ಚಿಕ್ಕಮಗಳೂರು, ಮಾ. 12
ರಾಷ್ಟ್ರದ ಒಳಗೆ ಸಮಾಜದ ಮೇಲಾಗುವ ಅನ್ಯಾಯವನ್ನು ಸಮರ್ಥವಾಗಿ ಎದುರಿಸಲು ಬದ್ಧರಾಗಬೇಕು ಎಂದು ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶ್ವರ ತೀರ್ಥ ಸ್ವಾಮೀಜಿಯವರು ಬಜರಂಗದಳದ ಸಂಘಟನೆಗೆ ಕರೆ ನೀಡಿದ್ದಾರೆ.
ಮೂಡಿಗೆರೆ ತಾಲೂಕಿನ ಗೋಣಿಬೀಡಿನ ಶ್ರೀ ಆದಿಸುಬ್ರಹ್ಮಣೇಶ್ವರ ದೇವಾಲಯದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಬಜರಂಗದಳದ ಜಿಲ್ಲಾ ಅಭ್ಯಾಸ ವರ್ಗದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಬಜರಂಗದಳ ಸಂಘಟನೆ ರಾಷ್ಟ್ರ ವ್ಯಾಪಿ ಬೆಳೆಯಲಿ. ಹನುಮಂತನ ಆದರ್ಶದಂತೆ ಕಾರ್ಯಕರ್ತರ ಪಡೆ ಕೆಲಸ ಮಾಡಲಿ ಎಂದು ಹೇಳಿದರು.
ನಿರಂತರ ಲವ್ ಜಿಹಾದ್: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕ್ಷೇತ್ರಿಯ ಸಂಪರ್ಕ ಪ್ರಮುಖರಾದ ಕಲ್ಲಡ್ಕದ ಪ್ರಭಾಕರ್ ಭಟ್ ಮಾತನಾಡಿ, ದೇಶದಲ್ಲಿ ಆಂತರಿಕ ಭಯೋತ್ಪಾದನೆ ಹೆಚ್ಚಿದ್ದು, ಲವ್ ಜಿಹಾದ್ ಸೇರಿದಂತೆ ಹಲವು ಘಟನೆಗಳು ನಿರಂತರವಾಗಿ ನಡೆಯುತ್ತಿದ್ದು, ಇಂತಹ ಚಟುವಟಿಕೆಗಳನ್ನು ತಡೆಯಲು ಕಾರ್ಯಕರ್ತರು ಕಟೀಬದ್ಧರಾಗಬೇಕು ಎಂದರು.
ಮತಾಂತರಕ್ಕೆ ಪ್ರೊತ್ಸಾಹ: ಮತಾಂತರ ಚಟುವಟಿಕೆಗಳು ದೇಶವನ್ನು ಮತ್ತೊಮ್ಮೆ ವಿಭಜಿಸುವ ತಂತ್ರಗಾರಿಕೆ ನಡೆಸುತ್ತಿದ್ದು, ಕೇಂದ್ರದ ಆಡಳಿತಾರೂಢ ಸರ್ಕಾರವು ಈಶಾನ್ಯ ರಾಜ್ಯಗಳಲ್ಲಿ ಈಗಾಗಲೇ ಮತಾಂತರ ಚಟುವಟಿಕೆ ತೀವ್ರಗೊಂಡಿದ್ದು, ಈ ರಾಜ್ಯಗಳು ಭಾರತದಿಂದ ಬೇರ್ಪಡಿಸುವ ಎಲ್ಲಾ ಲಕ್ಷಣಗಳು ಕಾಣುತ್ತಿದ್ದು, ಮತಾಂತರ ಚಟುವಟಿಕೆಗೆ ದೇಶದ ಸೂಪರ್ ಪ್ರಧಾನಮಂತ್ರಿಗಳ ಕೈವಾಡ ಹೆಚ್ಚಿದ್ದು, ಈ ಚಟುವಟಿಕೆ ತಡೆಯಲು ಕಾರ್ಯಕರ್ತರು ಮುಂದಾಗಬೇಕು ಎಂದು ಕರೆ ನೀಡಿದರು.
ವಿಶ್ವಹಿಂದೂ ಪರಿಷತ್ತಿನ ರಾಜ್ಯ ಸಂಘಟನಾ ಕಾರ್ಯದರ್ಶಿ ಕೇಶವ ಹೆಗಡೆ ಅವರು, ರಾಮಮಂದಿರದ ಹೋರಾಟ ಹಾಗೂ ಯುಗಾದಿಯಿಂದ ಅಕ್ಷಯತದಿಗೆಯವರೆಗೆ ನಡೆಯುವ ವಿಜಯ ಮಹಾಮಂತ್ರ ಅನುಷ್ಠಾನ ಕಾರ್ಯಕ್ರಮದ ಬಗ್ಗೆ ವಿವರಣೆ ನೀಡಿ, ಜಿಲ್ಲೆಯ ಮೂರು ಸಾವಿರ ಮನೆಗಳಲ್ಲಿ ವಿಜಯ ಮಹಾಮಂತ್ರವನ್ನು ಜಪಿಸುವ ಕಾರ್ಯಕ್ಕೆ ಕಾರ್ಯಕರ್ತರು ಹೆಚ್ಚಿನ ರೀತಿಯಲ್ಲಿ ಸಂಪರ್ಕಿಸಬೇಕು ಎಂದು ತಿಳಿಸಿದರು.
ಕಾರ್ಯಕರ್ತರು ಹಾಗೂ ಸಂಘಟನೆಯ ವಿಸ್ತಾರವನ್ನು ನಿಯಮಿತ ಬೈಠಕ್ಗಳ ಮುಖಾಂತರ ಹಾಗೂ ಕಾರ್ಯಕ್ರಮಗಳ ಮುಖಾಂತರ ಅತಿ ಹೆಚ್ಚು ಯುವಕರನ್ನು ಬಜರಂಗದಳ ಹೊಂದಬೇಕು ಎಂದು ಹೇಳಿದರು.
ಕಾಶ್ಮೀರ ಭಾರತದ ಸಿಧೂರ: ತೀರ್ಥಹಳ್ಳಿಯ ಲೋಹಿತಾಶ್ವ ಅವರು ಜಮ್ಮು ಮತ್ತು ಕಾಶ್ಮೀರದ ಸಮಸ್ಯೆಗಳ ಬಗ್ಗೆ ಮಾತನಾಡಿ, ಜಮ್ಮು ಮತ್ತು ಕಾಶ್ಮೀರ ಭಾರತ ಮಾತೆಯ ಸಿಂಧೂರವಾಗಿದ್ದು, ಶಾರದೆಯ ನೆಲೆಬೀಡಾದ ಕಾಶ್ಮೀರ ಭಾರತದಲ್ಲೇ ಉಳಿಯಬೇಕು. ಇದಕ್ಕೆ ಸಂಬಂಧಪಟ್ಟಂತೆ ಪ್ರತಿ ಮನೆಗೂ ಜಾಗೃತಿ ಸಂದೇಶವನ್ನು ತಲುಪಿಸಬೇಕು. ಪವಿತ್ರ ಅಮರನಾಥ, ಮಾತಾ ವೈಷ್ಣವಿದೇವಿ ಮಂದಿರ ಸೇರಿದಂತೆ ಹಲವಾರು ಪೂಜನೀಯ ಕೇಂದ್ರಗಳು ಈ ಸ್ಥಳಗಳಲ್ಲಿ ಇದ್ದು, ಈಗಾಗಲೇ ಕಾಶ್ಮೀರದ ಹಿಂದುಗಳು ಭಯೋತ್ಪಾದನೆ ಚಟುವಟಿಕೆಗೆ ಬೇಸತ್ತು ಮತಾಂತರ ಹೊಂದುತ್ತಿದ್ದು, ಮತಾಂತರ ಹೊಂದದ ವ್ಯಕ್ತಿಗಳು ತಮ್ಮ ಮೂಲಸ್ಥಾನವನ್ನು ಬಿಟ್ಟು ದೇಶದ ನಾನಾ ಭಾಗಗಳಲ್ಲಿ ಭಿಕ್ಷೆ ಬೇಡುವ ಪರಿಸ್ಥಿತಿ ಒದಗಿರುವುದು ದುರದೃಷ್ಟಕರ ಎಂದು ಹೇಳಿದರು.
ಸೈನ್ಯದ ಆತ್ಮಸ್ಥೈರ್ಯ ಹೆಚ್ಚಿಸಿ: ದೇಶದ ಸೈನ್ಯ ಅತ್ಯಂತ ಬಲಿಷ್ಠವಾಗಿದ್ದು, ಸೈನ್ಯಕ್ಕೆ ಆತ್ಮಸ್ಥೈರ್ಯ ನೀಡುವ ಕಾರ್ಯ ಸರ್ಕಾರ ಮಾಡದೇ ಇರುವುದರಿಂದ ಬಜರಂಗದಳದ ಕಾರ್ಯಕರ್ತರು ಈ ಸಂಬಂಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನಮ್ಮ ದೇಶದ ಸೈನ್ಯಕ್ಕೆ ಆತ್ಮಸ್ಥೈರ್ಯ ಹಾಗೂ ಗೌರವವನ್ನು ಹೆಚ್ಚಿಸುವ ಕಾರ್ಯದಲ್ಲಿ ತೊಡಗಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಬಜರಂಗದಳದ ಜಿಲ್ಲಾ ಸಂಚಾಲಕರಾಗಿ ಬಾಳೆಹೊನ್ನೂರಿನ ಆರ್.ಡಿ. ಮಹೇಂದ್ರ ಅವರನ್ನು ಪ್ರಭಾಕರ್ ಭಟ್ ಘೋಷಿಸಿದರು. ಪ್ರಾಂತ ಸುರಕ್ಷಾ ಪ್ರಮುಖ್ ಪ್ರದೀಪ್, ವಿಭಾಗ ಸಂಚಾಲಕ ಪ್ರವೀಣ್ ಖಾಂಡ್ಯ, ಜಿಲ್ಲಾ ಖಜಾಂಚಿ ಯೋಗೀಶ್ ಅರಸ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.