'ಕಾಂಗ್ರೆಸ್ ಅಧಿಕಾರಕ್ಕೆ ಖಚಿತ'
ತರೀಕೆರೆ: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ ಎಂದು ಕೇಂದ್ರ ಸಚಿವ ಮುನಿಯಪ್ಪ ತಿಳಿಸಿದ್ದಾರೆ. ಗುರುವಾರ ಕಾಂಗ್ರೆಸ್ನಿಂದ ಸಮೀಪದ ಕುಡ್ಲೂರಿನಲ್ಲಿ ಏರ್ಪಡಿಸಿದ್ದ ಪಕ್ಷದ ಅಭ್ಯರ್ಥಿ ಜಿ.ಎಚ್. ಶ್ರೀನಿವಾಸ್ ಪರ ಮತಯಾಚನೆಯಲ್ಲಿ ಮಾತನಾಡಿ, ಸಾಮಾಜಿಕ ನ್ಯಾಯ ಅನುಸರಿಸಿ ಜಿ.ಎಚ್. ಶ್ರೀನಿವಾಸ್ಗೆ ಪಕ್ಷ ಟಿಕೆಟ್ ನೀಡಿದೆ ಅವರನ್ನು ಗೆಲ್ಲಿಸಿಕೊಡಬೇಕೆಂದು ತಿಳಿಸಿದರು. ಅಭ್ಯರ್ಥಿ ಜಿ.ಎಚ್. ಶ್ರೀನಿವಾಸ್ ಮಾತನಾಡಿ, ಎಲ್ಲ ಹಳ್ಳಿಗಳಿಗೆ ಮೂಲ ಸೌಕರ್ಯ ಒದಗಿಸಬೇಕು, ಅಬ್ಬೆ ಜಲಪಾತದಿಂದ ತಾಲೂಕಿಗೆ ನೀರು ಹರಿಸಲಾಗುವುದು. ತಮಗೆ ಮತ ನೀಡಿ ಗೆಲ್ಲಸಿಕೊಡಬೇಕೆಂದು ಮನವಿ ಮಾಡಿದರು. ಕುಡ್ಲೂರು ಮತ್ತು ಬಗ್ಗವಳ್ಳಿ ಸಭೆಗಳಲ್ಲಿ ಅಜ್ಜಂಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಅರ್. ದ್ರುವಕುಮಾರ್, ಟಿ.ಆರ್. ಬಸವರಾಜ್, ಚಂದ್ರಶೇಖರ್, ತಿಪ್ಪೇಶ್, ರವಿ ಶ್ಯಾನುಭೋಗ್ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಘನಿ ಅನ್ವರ್, ಜಿಲ್ಲಾ ಕಾಂಗ್ರೆಸ್ ಸಮಿತಿ ಖಚಾಂಚಿ ಆರ್. ಮಂಜುನಾಥ್, ಸಮೀವುಲ್ಲಾ ಷರೀಫ್, ಎಸ್. ತಿಪ್ಪೇರುದ್ರಯ್ಯ, ಎಚ್. ವಿಶ್ವನಾಥ್, ಟಿ.ಎಂ. ವೆಂಕಟೇಶ್, ಮಂಜನಾಥ ಪ್ರಸಾದ್ ಇದ್ದರು.
ಅಪಘಾತ; ಲಾರಿ ಕ್ಲೀನರ್ ಸಾವು
ಶಿವಮೊಗ್ಗ: ನಾಟ ತುಂಬಿಕೊಂಡು ನಿಂತಿದ್ದ ಲಾರಿಗೆ ಹಿಂದಿನಿಂದ ಬಂದ ಮತ್ತೊಂದು ಲಾರಿ ಡಿಕ್ಕಿ ಹೊಡೆದ ಪರಿಣಾಮ ಕ್ಲೀನರ್ ಸ್ಥಳದಲ್ಲೇ ಮೃತಪಟ್ಟ ಘಟನೆ ಮಲವಗೊಪ್ಪದ ಬಳಿ ನಡೆದಿದೆ. ಆರೀಫ್ ಅಹಮದ್ ಮೃತಪಟ್ಟ ವ್ಯಕ್ತಿ. ಲಾರಿಯನ್ನು ಮನವಗೊಪ್ಪದಲ್ಲಿ ರಸ್ತೆ ಬದಿ ನಿಲ್ಲಿಸಲಾಗಿತ್ತು. ಈ ವೇಳೆ ಹಿಂದಿನಿಂದ ವೇಗವಾಗಿ ಬಂದ ಮತ್ತೊಂದು ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ಆರೀಫ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪ್ರಕರಣ ಸಂಚಾರಿ ಪೂರ್ವ ಠಾಣೆಯಲ್ಲಿ ದಾಖಲಾಗಿದೆ.
ಯುವಕ ಸಾವು
ಶಿವಮೊಗ್ಗ: ನೇರಳೆ ಮರಕ್ಕೆ ಹತ್ತಲು ಹೊಂದ ಯವಕನೊಬ್ಬ ವಿದ್ಯುತ್ತ್ಂತಿಯ ಮೇಲೆ ಬಿದ್ದ ಪರಿಣಾಮ ಸ್ಥಳದಲ್ಲೇ ಮೃತಪಟ್ಟ ಘಟನೆ ನಗರದ ಹೊಸಮನೆ ಬಡಾವಣೆಯಲ್ಲಿ ಗುರುವಾರ ನಡೆದಿದೆ. ಸುರೇಶ್ (16) ಮೃತ ಯವಕ. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ: ದೂರು ದಾಖಲು
ಸಾಗರ: ಪಟ್ಟಣದ ಶ್ರೀಧರನಗರದ ಸಮುದಾಯ ಭವನದ ಬಳಿ ಟ್ಯಾಂಕರ್ಗಳ ಮೂಲಕ ಕುಡಿಯುವ ನೀರು ವಿತರಣೆ ಮಾಡುತ್ತಿದ್ದ ನೌಕರರ ಮೇಲೆ ಸಾರ್ವಜನಿಕರು ಹಲ್ಲೆ ನಡೆಸಿದ ಘಟನೆ ಗುರುವಾರ ನಡೆದಿದೆ. ನಗರಸಭೆಯ ಬಿಲ್ ಕಲೆಕ್ಟರ್ಗಳಾದ ರಘು ಹಾಗೂ ಸುರೇಶ್ ಎಂಬುವವರ ಮೇಲೆ ಟೈಲರ್ ಶಂಕರ್ ಹಲ್ಲೆ ನಡೆಸಿದ್ದು, ಈ ಸಂಬಂಧ ಪೌರಾಯುಕ್ತರು ಪೊಲೀಸರಿಗೆ ದೂರು ನೀಡಿದ್ದಾರೆ.
'ಬುದ್ದಿಜೀವಿಗಳ ಬೆಂಬಲ ಹಾಸ್ಯಾಸ್ಪದ'
ಕ.ಪ್ರ.ವಾರ್ತೆ, ಸಾಗರ, ಮೇ.2 ಇಂದಿನ ರಾಜಕಾರಣ, ರಾಜಕೀಯ ವ್ಯವಸ್ಥೆ ಪ್ರಾಮಾಣಿಕವಾಗಿರದೆ ದೋಷಪೂರಿತವಾಗಿದೆ ಎಂದು ಕೆಲವು ಬುದ್ದಿಜೀವಿಗಳು, ಚಿಂತಕರು, ಸಾಹಿತಿಗಳು ಈ ಚುನಾವಣೆಯಲ್ಲಿ ಕಾಗೋಡು ತಿಮ್ಮಪ್ಪನವರನ್ನು ಬೆಂಬಲಿಸಿ ಹೇಳಿಕೆ ನೀಡಿರುವುದು ಹಾಸ್ಯಾಸ್ಪದ ಎಂದು ಸಾಗರ ವಿಧಾನಸಭಾ ಕ್ಷೇತ್ರದ ಆರಾಧನಾ ಸಮಿತಿ ಅಧ್ಯಕ್ಷ ಅದರಂತೆ ಚಂದ್ರಶೇಖರ ಹೇಳಿದ್ದಾರೆ.
ಯಾವ ಮಾನದಂಡ ಅನುಸರಿಸಿ ಸಾಮಾಜಿಕ ಜವಾಬ್ದಾರಿ ಇರುವ ಸಾಹಿತಿಗಳು ಬೆಂಬಲದ ಹೇಳಿಕೆ ನೀಡಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕು. 2008ರ ಚುನಾವಣೆಯ ಜನಾದೇಶವನ್ನು ಧಿಕ್ಕರಿಸಿ, ಜನತೆಯ ತೀರ್ಪನ್ನು ಅಗೌರವಿಸಿ ಹೇಳಿಕೆ ನೀಡಿ ಸಾಗರದ ರಾಜಕೀಯ ಇತಿಹಾಸದಲ್ಲಿ ಎಂದೂ ಕಂಡರಿಯದ ಕೆಟ್ಟ ಪರಂಪರೆಗೆ ಈ ಬುದ್ಧಿಜೀವಿಗಳು ಎನಿಸಿಕೊಂಡವರು ನಾಂದಿ ಹಾಡಿದ್ದಾರೆ ಎಂದರು.
ಈಗ ಏಕಾಏಕಿ ಸಾಹಿತಿಗಳು, ಚಿಂತಕರು, ಬುದ್ಧಿಜೀವಿಗಳು ಪಕ್ಷವೊಂದರ ಮುಖವಾಣಿಯಂತೆ ನೀಡಿರುವ ಹೇಳಿಕೆ ಹಲವು ಅನುಮಾನಗಳಿಗೆ ಕಾರಣವಾಗುತ್ತದೆ. ಸಾಗರ ಕ್ಷೇತ್ರದ ಸಾಹಿತ್ಯ, ಸಂಸ್ಕೃತಿ ಹಾಗೂ ಸಾಂಸ್ಕೃತಿಕ ಲೋಕಕ್ಕೆ ಅದರದ್ದೇ ಆದ ಗೌರವವಿದೆ. ಆದರೆ ಕೆಲವೇ ಕೆಲವರು ಯಾರನ್ನೋ ತೃಪ್ತಿಪಡಿಸಲು ನೀಡಿರುವ ಇಂತಹ ಹೇಳಿಕೆ ಖಂಡಿಸುವುದಾಗಿ ಚಂದ್ರಶೇಖರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಿಜೆಪಿಯಿಂದ ಅನಾಹುತಗಳು ನಿರಂತರ; ಆರೋಪ
ಶಿವಮೊಗ್ಗ: ಬಿಜೆಪಿ ಸರ್ಕಾರ ತನ್ನ ಐದು ವರ್ಷದ ಅಧಿಕಾರಾವಧಿಯಲ್ಲಿ ರಾಜ್ಯದಲ್ಲಿ ಭ್ರಷ್ಟಾಚಾರ ಸೇರಿದಂತೆ ಅನೇಕ ಅನಾಹುತಗಳನ್ನು ನಿರಂತರವಾಗಿ ಮಾಡಿಕೊಂಡು ಬಂದಿದೆ ಎಂದು ಕೋಮು ಸೌಹಾರ್ದ ವೇದಿಕೆ ರಾಜ್ಯ ಕಾರ್ಯದರ್ಶಿ ಕೆ.ಎಲ್. ಅಶೋಕ ಆರೋಪಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ರಾಜ್ಯದ ಪ್ರತಿಷ್ಠೆ, ಘನತೆಯನ್ನು ರಾಷ್ಟ್ರಮಟ್ಟದಲ್ಲಿ ಹಾಳು ಮಾಡಿದೆ. ಅಲ್ಲದೇ, ಆರ್ಎಸ್ಎಸ್ ಹಾಗೂ ಸಂಘ ಪರಿವಾರದ ತತ್ವ, ಆದರ್ಶಗಳನ್ನು ರಾಜ್ಯದ ಎಲ್ಲಾ ವರ್ಗದ ಜನತೆ ಪಾಲಿಸುವಂತೆ ಒತ್ತಡ ಏರುತ್ತಿದೆ ಎಂದರು.
ಪ್ರತಿ ಮಾತಿಗೂ ದೇಶಪ್ರೇಮ, ಮಹಿಳೆಯರ ರಕ್ಷಣೆ ಬಗ್ಗೆ ಭಾಷಣ ಬೀಗಿಯುವ ಆರ್ಎಸ್ಎಸ್ ಹಾಗೂ ಸಂಘ ಪರಿವಾರದ ನಾಯಕರು ಸರ್ಕಾರ ಬಂದ ನಂತರ ಮಾಡಿದ ಸಾಧನೆಯಾದರೂ ಏನು. ಸ್ತ್ರೀಯರ ಮೇಲೆ ದೌರ್ಜನ್ಯ ಹೆಚ್ಚಾಯಿತು ಎಂದ ಅವರು, ಜಿಲ್ಲೆಯ ಶಾಸಕರೊಬ್ಬರು ಅತ್ಯಾಚಾರ ನಡೆಸಿದರೆ, ಮತ್ತೊಬ್ಬ ಶಾಸಕರ ರಾಸಲೀಲೆ ಸಿಡಿ ಬೆಳಕಿಗೆ ಬಂದಿದೆ. ಅಲ್ಲದೇ, ವಿಧಾನಸಭೆಯಲ್ಲಿಯೇ ಮೂವರು ಶಾಸಕರು ಅಶ್ಲೀಲ ಚಿತ್ರ ವೀಕ್ಷಿಸಿ ಸಿಕ್ಕಿಬಿದ್ದರು. ಇದು ಮಹಿಳೆಯರ ಬಗ್ಗೆ ಬಿಜೆಪಿ(ಸಂಘ ಪರಿವಾರ)ಗಿರುವ ಕಾಳಜಿ ಅಲ್ಲವೇ ಎಂದು ಲೇವಡಿ ಮಾಡಿದರು.
ಸಮಾಜವಾದಿ ಹೋರಾಟಗಾರ ಪುಟ್ಟಯ್ಯ ಮಾತನಾಡಿ, ಈ ಬಾರಿಯ ಚುನಾವಣೆಯಲ್ಲಿ ಹಣದ ಹೊಳೆ ಹರಿಯುತ್ತಿದೆ. ಶಿವಮೊಗ್ಗ ವಿಧಾನಸಭಾ ಕ್ಷೇತ್ರವೊಂದರಲ್ಲಿಯೇ ಚುನಾವಣೆಗಾಗಿ 100 ಕೋಟಿ ಖರ್ಚು ಮಾಡಲು ಅಭ್ಯರ್ಥಿಯೊಬ್ಬರು ಮುಂದಾಗಿದ್ದಾರೆ ಎಂದರು.
ಇದೇ ವೇಳೆ ಬಿಜೆಪಿ ನೇತೃತ್ವದ ಸರ್ಕಾರ ಕಳೆದ 5 ವರ್ಷಗಳ ಆಡಳಿತಾವಧಿಯಲ್ಲಿ ನಡೆಸಿದ ಭ್ರಷ್ಟಾಚಾರ, ಹಗರಣ, ಆಡಳಿತ ವೈಖರಿಯ ಕುರಿತಂತೆ ವೇದಿಕೆ ಮಹಾದ್ರೋಹದ ಕರಾಳ ದಿನಗಳು ಎಂಬ ಪುಸ್ತಕ ಬಿಡುಗಡೆ ಮಾಡಿತು.
ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಜಿಲ್ಲಾ ಕಾರ್ಯದರ್ಶಿ ಕೆ.ಪಿ. ಶ್ರೀಪಾಲ್, ಭದ್ರಾವತಿಯ ರಾಜೇಂದ್ರ, ರಾಜು ಮತ್ತಿತರರು ಇದ್ದರು.
ತುಮಕೂರು ಬಾಲಕಿ ಸಾವು
ಸಾಗರ: ತಾಲ್ಲೂಕಿನ ಸಿಗಂದೂರು ಕ್ಷೇತ್ರಕ್ಕೆ ಬಂದಿದ್ದ ತುಮಕೂರು ತಾಲ್ಲೂಕಿನ ಗುಗ್ಗಡನ ಹಳ್ಳಿಯ ನಂದಿತಾ (12) ಎಂಬಾಕೆ ಸ್ನಾನ ಮಾಡಲು ಶರಾವತಿ ಹಿನ್ನೀರಿಗೆ ಹೋದಾಗ ಕಾಲುಜಾರಿ ನೀರಿಗೆ ಬಿದ್ದು ಮೃತಪಟ್ಟ ಘಟನೆ ಬುಧವಾರ ನಡೆದಿದೆ. ಶರಾವತಿ ಹಿನ್ನೀರಿನಲ್ಲಿ ಸ್ನಾನಕ್ಕೆ ಇಳಿದ ಸಂದರ್ಭದಲ್ಲಿ ನಂದಿತಾ ಕಾಲುಜಾರಿ ನೀರು ಪಾಲಾಗಿದ್ದರೆ, ಇನ್ನೋರ್ವ ಬಾಲಕಿ ವರ್ಷತಾ (15) ನೀರಿನಲ್ಲಿ ಮುಳುಗುತ್ತಿದ್ದ ಸಂದರ್ಭದಲ್ಲಿ ಸ್ನಾನ ಮಾಡುತ್ತಿದ್ದ ಮಹಿಳೆಯರು ಕೂಗಿಕೊಂಡಿದ್ದರಿಂದ ಸ್ಥಳೀಯರು ಬಂದು ವರ್ಷತಾಳ ಪ್ರಾಣ ಕಾಪಾಡಿದ್ದಾರೆ. ನಂತರ ಕಾರ್ಗಲ್ನಿಂದ ಈಜುಗಾರರನ್ನು ಕರೆಸಿ ನಂದಿತಾ ಶವವನ್ನು ಮೇಲೆತ್ತಲಾಗಿದೆ. ಈ ಸಂಬಂಧ ಕಾರ್ಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಜೆಪಿ ಪ್ರಚಾರ
ಶೃಂಗೇರಿ: ವಿಧಾನಸಭೆ ಚುನಾವಣೆಗೆ ಇನ್ನೆರೆಡು ದಿನ ಬಾಕಿ ಉಳಿದಿದ್ದು, ಬಿಜೆಪಿ ಬಿರುಸಿನ ಚುನಾವಣಾ ಪ್ರಚಾರ, ಮತಯಾಚನೆ ನಡೆಸಿತು. ನೆಮ್ಮಾರು, ಶೃಂಗೇರಿ ಪಟ್ಟಣ, ಮರ್ಕಲ್, ಕೆರೆ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಬಿಜೆಪಿ ಕಾರ್ಯಕರ್ತರು ತಮ್ಮ ಅಭ್ಯರ್ಥಿ ಡಿ.ಎನ್. ಜೀವರಾಜ್ ಪರ ಪ್ರಚಾರ ನಡೆಸಿ ಮತಯಾಚಿಸಿದರು.
ಪಟ್ಟಣದಲ್ಲಿ ಸ್ವತಃ ಡಿ.ಎನ್. ಜೀವರಾಜ್ ತಮ್ಮ ಬೆಂಬಲಿಗರೊಂದಿಗೆ ಮನೆ ಮನೆಗೆ ತೆರಳಿ ತನಗೆ ಮತಹಾಕಿ ಗೆಲ್ಲಿಸುವಂತೆ ಮನವಿ ಮಾಡಿಕೊಂಡರು. ಸಂಜೆಯವರೆಗೂ ಪಟ್ಟಣ, ಗ್ರಾಮೀಣ ಪ್ರದೇಶಗಳಲ್ಲಿ ಬಿರುಸಿನ ಪ್ರಚಾರ ಕೈಗೊಂಡಿತು.
ಮಾನವ ಸರಪಳಿ ರಚಿಸಿ ಮತದಾನ ಜಾಗೃತಿ
ನರಸಿಂಹರಾಜಪುರ: ತಾಲೂಕು ಆಡಳಿತದ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಪಟ್ಟಣದ ವಾಟರ್ ಟ್ಯಾಂಕ್ ಸಮೀಪದ ಸರ್ಕಲ್ನಲ್ಲಿ ಗುರುವಾರ ಮಾನವ ಸರಪಳಿ ರಚಿಸಿ ಮತದಾರರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ವಿಜಯಕುಮಾರ್, ಜಿಲ್ಲಾ ಯವಜನ ಸೇವಾ ಕ್ರೀಡಾ ಇಲಾಖೆಯ ನಿರ್ದೇಶಕಿ ಉಷಾ ದೇವಿ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗುರುಶಾಂತಪ್ಪ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗೌಸ್ ಮೊಯಿದ್ದೀನ್, ಶಿಕ್ಷಣ ಇಲಾಖೆಯ ಕೆ. ಮೌನೇಶ್ವರಾಚಾರ್, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ನಾಗೇಂದ್ರ, ಶೇಷಗಿರಿ, ಪುರುಶೋತ್ತಮ್,ತಾಲೂಕು ಛಾಯಾಗ್ರಾಹಕರ ಸಂಘದ ಎಂ.ಓ. ಜೋಯಿ, ರೋಟರಿ ಸಂಸ್ಥೆ, ವರ್ತಕರ ಸಂಘ, ವಕೀಲರ ಸಂಘ, ಸ್ತ್ರೀ ಶಕ್ತಿ ಸಂಘ, ಸ್ವಸಹಾಯ ಸಂಘದ ಪದಾಧಿಕಾರಿಗಳು ಮಾನವ ಸರಪಳಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮಾನವ ಸರಪಳಿ ನಿರ್ಮಿಸಿ ಜಾಗೃತಿ
ಮೂಡಿಗೆರೆ: ಪಟ್ಟಣದಲ್ಲಿ ತಾಲೂಕು ಆಡಳಿತ ಸಹಿತ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ನೌಕರರು, ಆಶಾ ಕಾರ್ಯಕರ್ತೆಯರು ಪಟ್ಟಣದ ಪೊಲೀಸ್ ಠಾಣಾ ಮುಂಭಾಗದ ವೃತ್ತದ ಬಳಿ ಗುರುವಾರ ಬೃಹತ್ ಮಾನವ ಸರಪಳಿ ನಿರ್ಮಿಸಿ ಮತದಾನದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.
ಪ್ರವಾಸಿ ಮಂದಿರದ ಆವರಣದಿಂದ ಹೊರಟ ಅಧಿಕಾರಿಗಳು ಮತ್ತು ನೌಕರರು ಜನ ಜಾಗೃತಿ ದೃಷ್ಟಿಯಿಂದ ಮತದಾನ ನಮ್ಮ ಹಕ್ಕು. ಮತದಾನದ ಬಗ್ಗೆ ತಿರಸ್ಕಾರ ಮಾಡದಿರಿ ಎನ್ನುವ ವಿವಿಧ ಘೋಷಣೆಗಳನ್ನು ಕೂಗಿದರು. ಮಾನವ ಸರಪಳಿ ನಿರ್ಮಿಸಿದ ಬಳಿಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಈ ವೇಳೆ ತಹಸೀಲ್ದಾರ್ ರುದ್ರಪ್ಪಾಜಿರಾವ್, ಕ್ಷೇತ್ರ ಶಿಕ್ಷಣಾಧಿಕಾರಿ ಕೊಮಾರಯ್ಯ, ಪ.ಪಂ. ಮುಖ್ಯಾಧಿಕಾರಿ ಗಣೇಶ್, ಯುವಜನ ಮತ್ತು ಕ್ರೀಡಾಧಿಕಾರಿ ಶ್ರೀನಿವಾಸ್, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಕೃಷ್ಣಪ್ಪ, ತಾಪಂ ಇಒ ಚನ್ನಬಸಪ್ಪ ಮೇಕಾಲೆ, ಆರೋಗ್ಯಾಧಿಕಾರಿ ಡಾ. ಯೋಗೇಶ್, ಮೂರ್ತಿ ಇದ್ದರು.
ಸಾರಿಗೆ ನೌಕರರ ವೇತನ ಶೇ.10 ಹೆಚ್ಚಳ
ಕೊಪ್ಪ: ನೌಕರರ ಆರ್ಥಿಕ ಹಿತದೃಷ್ಟಿಯಿಂದ ಸಹಕಾರ ಸಾರಿಗೆ ಸಂಸ್ಥೆ ನೌಕರರ ಮೂಲ ವೇತನದ ಮೇಲೆ ಶೇ.10 ರಷ್ಟು ವೇತನ ಏರಿಸಲಾಗಿದೆ ಎಂದು ಸಹಕಾರ ಸಾರಿಗೆ ಸಂಸ್ಥೆಯ ಅಧ್ಯಕ್ಷ ಜಿ.ಆರ್. ವಿಶ್ವನಾಥ್ ತಿಳಿಸಿದರು. ಬುಧವಾರ ಕಾರ್ಮಿಕರ ದಿನಚಾರಣೆ ಅಂಗವಾಗಿ ಸಹಕಾರ ಸಾರಿಗೆ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. , ಸಾರಿಗೆ ಉದ್ಯಮಕ್ಕೆ ಪೂರಕವಾಗಿರುವ ಡೀಸೆಲ್, ಟಯರ್ ಮತ್ತು ವಾಹನದ ಬಿಡಿಭಾಗಗಳ ಬೆಲೆ ಹೆಚ್ಚಾಗುತ್ತಿರುವುದರಿಂದ ದುಡಿದ ಶೇ.80 ರಷ್ಟು ಮೊತ್ತ ಇವುಗಳಿಗೆ ವ್ಯಯವಾಗುತ್ತಿದೆ. ಇನ್ನು ಉಳಿದ ಶೇ.20 ರಷ್ಟರಲ್ಲಿ ಸಮತೋಲನಮಾಡಿಕೊಂಡು ಸಾರಿಗೆ ಉದ್ಯಮ ನಡೆಸಲು ಕಷ್ಟ ಸಾಧ್ಯವಾಗಿದ್ದರೂ ಪ್ರಯಾಣಿಕರ ಮತ್ತು ಕಾರ್ಮಿಕರ ಹಿತದೃಷ್ಟಿಯಿಂದ ಉದ್ಯಮವನ್ನು ನಡೆಸುತ್ತಿದ್ದೇವೆ ಎಂದರು. ಏಷ್ಯಾದಲ್ಲೇ ಕಾರ್ಮಿಕರಿಂದ ಕಾರ್ಮಿಕರಿಗಾಗಿ ನಡೆಸುತ್ತಿರುವ ಪ್ರಥಮ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದು ಅಲ್ಲದೇ ಸಂಸ್ಥೆಯಿಂದ ಸಮಾಜಕ್ಕೆ ನೀಡುತ್ತಿರುವ ಉತ್ತಮ ಸೇವೆ ಗುರುತಿಸಿ ರಾಷ್ಟ್ರಮಟ್ಟದಲ್ಲಿ ಹಲವು ಪ್ರಶಸ್ತಿಗಳು ಲಭ್ಯವಾಗಿರುವುದರಿಂದ ಸಂಸ್ಥೆಯನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕಾದ ಹೊಣೆ ಕಾರ್ಮಿಕರ ಮೇಲೆ ಇದೆ. ಕಾರ್ಮಿಕರಿರ ಕ್ಷೇಮಾಭಿವೃದ್ಧಿಗಾಗಿ ಬೋನಸ್, ಸಮವಸ್ತ್ರ, ಡಿವಿಡೆಂಟ್, ಭವಿಷ್ಯ ನಿಧಿ, ಪಿಂಚಣಿ ನಿಧಿ ಇತ್ಯಾದಿ ವ್ಯವಸ್ಥೆಯನ್ನು ಮಾಡಿಕೊಂಡಿದ್ದು, ಪ್ರಸಕ್ತಾ ಸಾಲಿನಲ್ಲಿ ವಾರ್ಷಿಕ ಸಮಾರು ರು. 14.81 ಲಕ್ಷ ವೇತನ ಹೆಚ್ಚಳ ಮಾಡಿದ್ದು ಹಾಗೂ ಭತ್ಯವನ್ನು ರು. 4.82 ಲಕ್ಷಗಳಷ್ಟು ಹೆಚ್ಚಳ ಮಾಡಲಾಗಿದೆ ಎಂದು ತಿಳಿಸಿದರು. ನಂತರ ತಾಲೂಕು ಕಾನೂನು ಸೇವಾ ಸಮಿತಿ ಮತ್ತು ವಕೀಲಞ ಸಂಘದಿಂದ ಕಾನೂನು ಸುರಕ್ಷತಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಶಿಬಿರದಲ್ಲಿ ತಾಲೂಕು ಸಿವಿಲ್ನ್ಯಾಯಲಯದ ನ್ಯಾಯಾಧೀಶ ವೀರಭದ್ರಪ್ಪ, ವಕೀಲರಾದ ನಾರಯಾಣಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎನ್. ಪ್ರಕಾಶ್ ಮೊದಲಾದವರು ಇದ್ದರು.
ಜೆಡಿಎಸ್ ಪರ ಜನರ ಒಲವು: ನಿಂಗಯ್ಯ
ಮೂಡಿಗೆರೆ: ಬಿಜೆಪಿಯನ್ನು ಅಧಿಕಾರಕ್ಕೆ ತರಲು ಪ್ರಾಮಾಣಿಕವಾಗಿ ದುಡಿದಿರುವ ಕಾರ್ಯಕರ್ತರು ಬಿಜೆಪಿ ಪಕ್ಷದ ದುರಾಡಳಿತದಿಂದ ಬೇಸತ್ತು ಜೆಡಿಎಸ್ ಕಡೆಗೆ ಒಲವು ತೋರಿಸುತ್ತಿದ್ದಾರೆಂದು ಜೆಡಿಎಸ್ ಅಭ್ಯರ್ಥಿ ಬಿ.ಬಿ. ನಿಂಗಯ್ಯ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕ್ಷೇತ್ರದಲ್ಲಿ ಜೆಡಿಎಸ್ಗೆ ಬಿಜೆಪಿ ನೇರ ಸ್ಪರ್ಧೆಯಾಗಿದ್ದು ಜೆಡಿಎಸ್ ಗೆಲುವು ಶತಸಿದ್ದ ಎಂದರು. ಕಾಂಗ್ರೆಸ್ ಅಭ್ಯರ್ಥಿಗಳ ಟಿಕೆಟ್ ಹಂಚಿಕೆ ಹಿಂದೆ ಕಾಂಗ್ರೆಸ್ ಅಧಿಕಾರಕ್ಕೆ ಬರತ್ತದೆ ಎಂದು ವರದಿಯಾಗಿತ್ತು. ಆದರೆ ಕಾಂಗ್ರೆಸ್ನಲ್ಲಿ ಕೆಲ ಮುಖಂಡರು ಮುಖ್ಯಮತ್ರಿಯಾಗಬೇಕೆಂಬ ದುರಾಸೆಯಿಂದ ಸೀಟಿಗಾಗಿ ಕಿತ್ತಾಟ ಪ್ರಾರಂಭವಾಯಿತು.
ಗೆಲ್ಲುವ ಅಭ್ಯರ್ಥಿಗಳನ್ನು ಬಿಟ್ಟು ಸೋಲುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಯಿತು ಎಂದರು.
ವಸಂತಕುಮಾರಿ ಮಾತನಾಡಿ, ಬಿಜೆಪಿ ದುರಾಡಳಿತದಿಂದ ಬೆಸತ್ತ ಬಿಜೆಪಿ ಕಾರ್ಯಕರ್ತರು ಅಸಂಘಟಿತರಾಗಿದ್ದಾರೆ. ಮತದಾರರು ಸದ್ದಿಲ್ಲದಂತೆ ಜೆಡಿಎಸ್ಗೆ ಮತ ನೀಡುವ ಮೂಲಕ ಗೆಲ್ಲಿಸಲು ಸಿದ್ದರಾಗಿದ್ದಾರೆ ಎಂದು ಹೇಳಿದರು.
ರಾಜಿನಾಮೆ ನೀಡಿದರೂ ಸ್ವೀಕರಿಸಿಲ್ಲ: ಸುಬ್ರಾಯ ಗೌಡ ಆರೋಪ
ಮೂಡಿಗೆರೆ: ಕಾಂಗ್ರೆಸ್ಗೆ ರಾಜಿನಾಮೆ ನೀಡಲು ಮುಂದಾದರೂ ಅದನ್ನು ಸ್ವೀಕಾರ ಮಾಡದೆ ಸಸ್ಪೆಂಡ್ ಮಾಡಲಾಗಿದೆ ಎಂದು ಕಾಂಗ್ರೆಸ್ ನಾಯಕರು ಹೇಳಿಕೆ ನೀಡಿರುವುದು ಹಾಸ್ಯಾಸ್ಪದವಾಗಿದೆ ಎಂದು ತಾಪಂ ಸದಸ್ಯ ಸುಬ್ರಾಯಗೌಡ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿ.ಬಿ. ನಿಂಗಯ್ಯ ಜೆಡಿಎಸ್ ಪ್ರಭಲ ಅಭ್ಯರ್ಥಿಯಾಗಿದ್ದು, ಅವರಿಗೆ ಬೆಂಬಲ ನೀಡಲು ತಾನು ಕಾಂಗ್ರೆಸ್ ಪಕ್ಷಕ್ಕೆ 3 ಬಾರಿ ರಾಜಿನಾಮೆ ನೀಡಲು ಹೋದಾಗ ಅದನ್ನು ಸ್ವೀಕಾರ ಮಾಡದೇ ಏಕಾಏಕಿ ತನ್ನನ್ನು ಪಕ್ಷದಿಂದ ವಜಾಗೊಳಿಸಿದ್ದಾರೆ.
ಆದ್ದರಿಂದ ಜೆಡಿಎಸ್ಗೆ ಸೇರ್ಪಡಿಗೊಂಡು ಶ್ರಮ ವಹಿಸುವುದಾಗಿ ತಿಳಿಸಿದರು.
ಪತ್ನಿಗೆ ಕಿರುಕುಳ: 3 ವರ್ಷ ಜೈಲು
ಕ.ಪ್ರ.ವಾರ್ತೆ ಚಿಕ್ಕಮಗಳೂರ್ಣು ಮೇ 2
ಪತ್ನಿಗೆ ನಿರಂತರ ಮಾನಸಿಕ, ದೈಹಿಕ ಹಿಂಸೆ ನೀಡುತ್ತಿದ್ದ ಪತಿಗೆ ಸ್ಥಳೀಯ ಜೆಎಂಎಫ್ಸಿ ನ್ಯಾಯಾಲಯ 3 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ದಂಡ ವಿಧಿಸಿದೆ.
ಚಿಕ್ಕಮಗಳೂರಿನ ಹೌಸಿಂಗ್ ಬೋರ್ಡ್ನ ಲತಾ ಎಂಬವರನ್ನು ಹಂಪಾಪುರದ ನಿಂಗೇಗೌಡನಿಗೆ ಮದುವೆ ಮಾಡಿಕೊಡಲಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದರು. ಪಿಡಬ್ಲ್ಯೂಡಿ ಇಲಾಖೆಯಲ್ಲಿ ಕಾವಲುಗಾರನಾಗಿದ್ದ ನಿಂಗೇಗೌಡನು ಪ್ರತಿನಿತ್ಯ ಮದ್ಯಪಾನ ಮಾಡಿ ಪತ್ನಿಗೆ ಹಿಂಸೆ ನೀಡುತ್ತಿದ್ದು, ಈ ಬಗ್ಗೆ ಹಲವಾರು ಬಾರಿ ಹಿರಿಯರ ಸಮ್ಮುಖದಲ್ಲಿ ರಾಜಿ ಮಾಡಿಸಲಾಗಿತ್ತು. ಆದರೂ ಈತ ಕಿರುಕುಳ ಮುಂದುವರೆಸಿದ್ದು, 2005ರ ಡಿಸೆಂಬರ್ 21 ರಂದು ಪತ್ನಿಗೆ ಹೊಡೆದು, ಮನೆಯಿಂದ ಹೊರಗೆ ಹಾಕಿ, ಬೆದರಿಕೆ ಹಾಕಿದ್ದನು. ಅಲ್ಲದೆ, ಆ ಸಂದರ್ಭದಲ್ಲಿ ಅಲ್ಲಿಗೆ ಬಂದಿದ್ದ ಲತಾ ತಾಯಿಯ ಮೇಲೆಯೂ ಹಲ್ಲೆ ಮಾಡಿದ್ದನು.
ಈ ಬಗ್ಗೆ ಚಿಕ್ಕಮಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿ ನ್ಯಾಯಾಲಯದಲ್ಲಿ ದೋಷಾರೋಪಣೆ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ ಪ್ರಧಾನ ಜೆಎಂಎಫ್ಸಿ ನ್ಯಾಯಾಲಯದ ನ್ಯಾ. ಎನ್. ಸುಬ್ರಹ್ಮಣ್ಯ ಅವರು ಅರೋಪಿಗೆ 3 ವರ್ಷ ಜೈಲು ಶಿಕ್ಷೆ ಮತ್ತು 10 ಸಾವಿರ ದಂಡ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಯು. ನಾರಾಯಣ ಶೇರಿಗಾರ್ ವಾದ ಮಂಡಿಸಿದರು.
ಪತಿ, ಪತ್ನಿ ನಾಪತ್ತೆ
ಮೂಡಿಗೆರೆ ತಾಲೂಕಿನ ಹೆಸ್ಗಲ್ ಗ್ರಾಮದ ಬಾಪುನಗರದ ವಾಸಿ ಬಿ.ಎಸ್. ಶಬೀನಾ (20) ಹಾಗೂ ಅವರ ಪತಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆ ವಾಸಿ ಶಂಶುದ್ದೀನ್ (23) ನಾಪತ್ತೆಯಾಗಿರುವ ಬಗ್ಗೆ ಮೂಡಿಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏ.27ರಂದು ಮನೆಯಿಂದ ಹೋಗಿ ಕಾಣೆಯಾಗಿದ್ದಾರೆ. ಇವರ ಮಾಹಿತಿ ದೊರೆತಲ್ಲಿ ಮೂಡಿಗೆರೆ ಗ್ರಾಮಾಂತರ ಪೊಲೀಸ್ ಠಾಣೆಗೆ ಅಥವಾ ದೂರವಾಣಿ ಸಂಖ್ಯೆ 08262- 235608 ಸಂಪರ್ಕಿಸಲು ಕೋರಲಾಗಿದೆ.
ಜೆಡಿಎಸ್ ಸೇರ್ಪಡೆ
ಮೂಡಿಗೆರೆ: ತಾಲೂಕಿನ ಜನ್ನಾಪುರ ಗ್ರಾಮದಲ್ಲಿ ಗುರುವಾರ ನಡೆದ ಸಭೆಯಲ್ಲಿ ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ರಂಜನ್ ಅಜೀತ್ ಕುಮಾರ್, ಪ್ರಧಾನ ಕಾರ್ಯದರ್ಶಿ ವಿಜೇಂದ್ರ, ತಾಪಂ ಸದಸ್ಯ ಸುಭ್ರಾಯಗೌಡ, ಹೊಬಳಿ ಅಧ್ಯಕ್ಷ ರಾಮೇಗೌಡ, ಸುಧಾಕರ ನೇತೃತ್ವದಲ್ಲಿ ಊರುಬಗೆ ಗ್ರಾಪಂ ಸದಸ್ಯೆ ಜಯಮ್ಮ ಹಾಗೂ ಬೆಂಬಲಿಗರು ಕಾಂಗ್ರೆಸ್ ತೊರೆದು ಜೆಡಿಎಸ್ಗೆ ಸೇರ್ಪಡೆಗೊಂಡರು.
ವಿದ್ಯುತ್ ವ್ಯತ್ಯಯ
ಚಿಕ್ಕಮಗಳೂರು: ನಗರದ ರತ್ನಗಿರಿ ರಸ್ತೆಯ ಪಕ್ಕದಲ್ಲಿರುವ ವಿದ್ಯುತ್ ಕಂಬಗಳು ಮತ್ತು ವಾಹಕಗಳನ್ನು ಸ್ಥಳಾಂತರಿಸಬೇಕಾಗಿರುವುದರಿಂದ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೊಮ್ಮುವ ಮಾರ್ಕೆಟ್ ರಸ್ತೆ ಫೀಡರ್ನ ವಿಜಯಪುರ ಬಡಾವಣೆ, ಬಸವರಾಜ ಲೇಔಟ್, ಆರ್.ಜಿ. ರಸ್ತೆ, ತಿಲಕ್ ಪಾರ್ಕ್, ಪೆನ್ಷನ್ ಮೊಹಲ್ಲಾ, ದುಬೈ ನಗರ ಮತ್ತು ಮಲ್ಲಂದೂರು ರಸ್ತೆಯಲ್ಲಿ ಶುಕ್ರವಾರ ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ನಿಲುಗಡೆಯಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕಾಗಿ ಮೆಸ್ಕಾಂ ಪ್ರಕಟಣೆ ತಿಳಿಸಿದೆ.