ಕಾಂಗ್ರೆಸ್, ಜೆಡಿಎಸ್ಗೆ ಅಪಪ್ರಚಾರವೇ ಬಂಡವಾಳ
ಚಿಕ್ಕಮಗಳೂರು: ಕ್ಷೇತ್ರದ ಅಭಿವೃದ್ಧಿ ಹಾಗೂ ಜನರ ನೆಮ್ಮದಿ ಎರಡನ್ನೂ ಕಾಪಾಡಿದ್ದೇನೆ. ಇದನ್ನರಿತ ಮತದಾರರು ಬಿಜೆಪಿಯನ್ನು ಹೃದಯದಲ್ಲಿಟ್ಟು ಬೆಂಬಲಿಸುತ್ತಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಸಿ.ಟಿ. ರವಿ ಹೇಳಿದ್ದಾರೆ.
ಕೆಜೆಪಿಯಿಂದ ಬಿಜೆಪಿಗೆ ಸೇರ್ಪಡೆಗೊಂಡ ಕಾರ್ಯಕರ್ತರನ್ನು ಪಕ್ಷದ ಕಚೇರಿಯಲ್ಲಿ ಗುರುವಾರ ಸ್ವಾಗತಿಸಿ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಜೆಡಿಎಸ್ಗೆ ಸೋಲು ಕಟ್ಟಿಟ್ಟ ಬುತ್ತಿ ಎಂದು ಖಾತರಿಯಾಗಿ ಅಪಪ್ರಚಾರವನ್ನೆ ತಮ್ಮ ಬಂಡವಾಳವನ್ನಾಗಿ ಮಾಡಿಕೊಂಡಿದ್ದಾರೆ. ಆದರೆ, ಕ್ಷೇತ್ರದ ಜನ ಅಭಿವೃದ್ಧಿ ಮತ್ತು ನೆಮ್ಮದಿಯನ್ನು ಹಾಳು ಮಾಡಿಕೊಳ್ಳಲು ತಯಾರಿಲ್ಲ ಎಂದು ತಿಳಿಸಿದರು.
ದೊಡ್ಡ ಮಟ್ಟದಲ್ಲಿ ಗೆಲವು: ಕಾಂಗ್ರೆಸ್ ಜಾತಿ ವಿಷ ಬೀಜ ಬಿತ್ತುತ್ತಿದ್ದರೆ, ಜೆಡಿಎಸ್ ಪಕ್ಷ ಜನರಲ್ಲಿ ಭೀತಿ ಮೂಡಿಸುತ್ತಿದೆ. ಸಾಮಾನ್ಯ ಮತದಾರರು ಎಲ್ಲವನ್ನೂ ಸೂಕ್ಷ್ಮವಾಗಿ ಪರಿಗಣಿಸುತ್ತಿದ್ದಾರೆ. ಗೆಲವಿನ ಹಗಲುಗನಸು ಕಾಣುತ್ತಿರುವ ಕಾಂಗ್ರೆಸ್, ಜೆಡಿಎಸ್ಅನ್ನು ಜನ ತಿರಸ್ಕರಿಸಿ ದೊಡ್ಡ ಮಟ್ಟದ ಅಂತರದಲ್ಲಿ ಬಿಜೆಪಿಗೆ ಬೆಂಬಲಿಸಲಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಕೆಜೆಪಿ ನಗರ ಯುವ ಘಟಕದ ಅಧ್ಯಕ್ಷ ಗಿರೀಶ್, ಪ್ರಧಾನ ಕಾರ್ಯದರ್ಶಿ ಮನು, ತಾಲೂಕು ಯುವ ಘಟಕದ ಪ್ರಧಾನ ಕಾರ್ಯದರ್ಶಿ ಮಹೇಶ್, ರಾಜ್ಯ ಯುವ ಘಟಕದ ಕಾರ್ಯಕಾರಿ ಸಮಿತಿ ಸದಸ್ಯ ವೀರೇಶ್, ಜೆಡಿಎಸ್ನ ಬಸವರಾಜ್, ಮಲ್ಲೇಶ್ ಬಿಜೆಪಿಗೆ ಸೇರ್ಪಡೆಗೊಂಡರು.
ಮುಖಂಡರಾದ ಎಚ್.ಡಿ. ತಮ್ಮಯ್ಯ, ಕನಕರಾಜ್, ಸಿ.ಆರ್. ಪ್ರೇಮ್ಕುಮಾರ್, ಕೆ.ಪಿ. ವೆಂಕಟೇಶ್, ವರಸಿದ್ದಿ ವೇಣುಗೋಪಾಲ್, ಹಿರೇಮಗಳೂರು ಜಾನಯ್ಯ, ಜಗದೀಶ್ ಹಾಜರಿದ್ದರು.
ಹಾಲಪ್ಪ ಮತ್ತು ಕುಮಾರ್ ಸೊರಬದಲ್ಲಿ ಮಾತ್ರ ನಾಯಕರು
ಸೊರಬ: ಹಾಲಪ್ಪ ಮತ್ತು ಕುಮಾರ್ ಬಂಗಾರಪ್ಪ ಸೊರಬದಲ್ಲಿ ಮಾತ್ರ ನಾಯಕರಾಗಲು ಲಾಯಕ್ಕು, ರಾಜ್ಯಕ್ಕಲ್ಲ ಎಂದು ಸೊರಬ ಜೆಡಿಎಸ್ ಅಭ್ಯರ್ಥಿ ಮಧುಬಂಗಾರಪ್ಪ ವ್ಯಂಗ್ಯವಾಡಿದರು.
ತಾಲೂಕಿನ ಗುಡವಿ ಗ್ರಾಮದಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿ, ಸ್ವಾಭಿಮಾನಿ ಮತದಾರರ ವಿಶ್ವಾಸ ಉಳಿಸಿಕೊಳ್ಳಲು ವಿಫಲರಾಗಿರುವ ಅವರು ಚುನಾವಣೆ ನಂತರ ಜನರಿಂದ ಶಾಶ್ವತ ಕಣ್ಮರೆಯಾಗಲಿದ್ದಾರೆ ಎಂದು ಭವಿಷ್ಯ ನುಡಿದರು.
ತಾಲೂಕಿನಾದ್ಯಂತ ಮತದಾರರು ಈ ಹಿಂದೆ ತಾವು ಮಾಡಿದ ತಪ್ಪೇನು ಎಂಬುದನ್ನು ಅರಿತುಕೊಂಡಿದ್ದಾರೆ. ಈ ಬಾರಿ ನನ್ನನ್ನು ಗೆಲ್ಲಿಸಲು ಪಣತೊಟ್ಟಿದ್ದಾರೆ ಎಂದರು.
ಇದೇ ವೇಳೆ ಬೇರೆ ಪಕ್ಷದ ಅನೇಕರು ಜೆಡಿಎಸ್ಗೆ ಸೇರಿದರು. ಈರಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಜೆಡಿಎಸ್ ಬ್ಲಾಕ್ ಅಧ್ಯಕ್ಷ ಎಚ್. ಗಣಪತಿ, ಪಕ್ಷದ ವಕ್ತಾರ ಎಂ.ಡಿ. ಶೇಖರ್, ತಾಪಂ ಸದಸ್ಯ ವೀರಭದ್ರಗೌಡ, ರಾಮಪ್ಪ, ಗುಡವಿ ಮಂಜುನಾಥ್, ಧರ್ಮಪ್ಪ, ಯುವರಾಜ್, ದ್ಯಾವಪ್ಪ, ಚಂದ್ರಪ್ಪ, ಲಕ್ಷ್ಮಣಪ್ಪ, ನಾಗಪ್ಪ ಸೇರಿದಂತೆ ಮತ್ತಿತರರು ಇದ್ದರು.