ಜೆಡಿಎಸ್‌ಗೆ ಈ ಬಾರಿ ಜನರ ಆಶೀರ್ವಾದ; ಧರ್ಮೇಗೌಡ
ಚಿಕ್ಕಮಗಳೂರು: ಕೇಂದ್ರದ ಕಾಂಗ್ರೆಸ್ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳ ಭ್ರಷ್ಟಾಚಾರದ ವಿರುದ್ಧ ಮತದಾರರು ತಮ್ಮ ಹಕ್ಕನ್ನು ಚಲಾಯಿಸುವ ಮೂಲಕ ಜೆಡಿಎಸ್‌ಗೆ ಈ ಬಾರಿ ಆಶೀರ್ವದಿಸಲಿದ್ದಾರೆ ಎಂದು ಜೆಡಿಎಸ್ ಅಭ್ಯರ್ಥಿ ಎಸ್.ಎಲ್. ಧರ್ಮೇಗೌಡ ಹೇಳಿದ್ದಾರೆ.
ನಿಡಘಟ್ಟ, ಬೈರಪ್ಪನಹಳ್ಳಿ, ತಿಪ್ಪನಹಳ್ಳಿ, ಚಟ್ನಳ್ಳಿ ತಾಂಡ್ಯ, ಟಿ.ಬಿ. ಕಾವಲುಗಳಲ್ಲಿ ಗುರುವಾರ ಮತಯಾಚನೆ ಮಾಡಿ ಅವರು ಮಾತನಾಡಿದರು.
ವಿದರ್ಭ ಯೋಜನೆ: ಬಯಲು ಭಾಗದಲ್ಲಿ ನೀರಿನ ಸಮಸ್ಯೆ ಪ್ರಮುಖವಾಗಿದೆ. ಸಚಿವ ರವಿಯವರು ಮತ ಕೇಳಲು ಬಂದಾಗ ಕರಗಡ ಯೋಜನೆ ಪೂರ್ಣ್ಣಗೊಂಡಿಲ್ಲ ಎಂದು ಜನ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ವಿದರ್ಭ ಯೋಜನೆಯಡಿ ಹಣ ಬಿಡುಗಡೆ ಮಾಡಿಸುವ ಮೂಲಕ ಮುಗುಳವಳ್ಳಿ ಪಿಕಪ್ ಎಂದು ನಾಮಕರಣ ಮಾಡಿ ಚಾಲನೆ ನೀಡಿದ್ದೆ. ಆ ಕಾರಣಕ್ಕೆ ಜನ ನನಗೆ ಮತ ನೀಡಲಿದ್ದಾರೆ ಎಂಬ ವಿಶ್ವಾಸವಿದೆ ಎಂದರು.
ಅಧಿಕಾರಕ್ಕೆ ಬಂದು ಅಯ್ಯನಕೆರೆ ಮತ್ತು ಮದಗದಕೆರೆಗೆ ಹೆಬ್ಬೆ ನೀರು ಹರಿಸುವುದು ಮತ್ತು ಕರಗಡ ಯೋಜನೆ ಪೂರ್ಣ ಮಾಡಿ ಉದ್ಘಾಟಿಸುವುದೇ ನನ್ನ ಮೊದಲ ಗುರಿ ಎಂದು ಹೇಳಿದರು.
ಸಿ.ಟಿ. ರವಿಯನ್ನು ಎದುರಿಸಲು ಕಾಂಗ್ರೆಸ್ ಅಭ್ಯರ್ಥಿಗೆ ಸಾಧ್ಯವಿಲ್ಲ. ಅದಕ್ಕೆ ಸಮರ್ಥರು ಜೆಡಿಎಸ್ ಮಾತ್ರ ಎಂದ ಅವರು, ಸುಳ್ಳಿನ ನಾಟಕವಾಡುವ ರವಿಯವರು ಮೊದಲು ಅದನ್ನು ಬಿಡಬೇಕು. ಈ ಭಾಗದಲ್ಲಿ ಜಾತಿ, ಭೀತಿ ಎರಡೂ ನಡೆಯುವುದಿಲ್ಲ, ಬರಿ ಪ್ರೀತಿಯಿಂದ ಮಾತ್ರ ಮತದಾರರ ಮನಸ್ಸು ಗೆಲ್ಲಲು ಸಾಧ್ಯ ಎಂದರು. ಚಂದಯ್ಯ, ಉಮೇಶ್, ಯೋಗೀಶ್, ಹೊಲದಗದ್ದೆ ಗಿರೀಶ್ ಇದ್ದರು.