ದೃಢ ಸರ್ಕಾರ ರಚನೆಗೆ ಕಾಂಗ್ರೆಸ್ ಗೆಲ್ಲಿಸಿ
ಜೈಲಿಗೆ ಹೋಗುವುದರಲ್ಲೇ ಅಧಿಕಾರಾವಧಿ ಸವೆಸಿದ ಬಿಜೆಪಿ: ಟೀಕೆ
ಕಪ್ರವಾರ್ತೆ,ಚಿಕ್ಕಮಗಳೂರು,ಮೇ2
ಕರ್ನಾಟಕದಲ್ಲಿ ಬಡವರ ಪರವಾದ ಸರ್ಕಾರ ರಚನೆಗಾಗಿ ಕಾಂಗ್ರೇಸ್ ಅಭ್ಯರ್ಥಿಗಳ ಪರವಾಗಿ ಮತ ಚಲಾಯಿಸಬೇಕೆಂದು ಮಾಜಿ ಕೇಂದ್ರ ಸಚಿವೆ ಡಿ.ಕೆ. ತಾರಾದೇವಿ ಸಿದ್ಧಾರ್ಥ ಕರೆ ನೀಡಿದ್ದಾರೆ.
ಬಣಕಲ್ ಹಾಗೂ ಆಲ್ದೂರು ಹೋಬಳಿಯ ವಿವಿಧೆಡೆ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್. ಚಂದ್ರಪ್ಪ ಅವರ ಪರವಾಗಿ ಮತಯಾಚಿಸಿದ ತಾರಾದೇವಿ, ಆಲ್ದೂರು ಸಂತೆಮೈದಾನದಲ್ಲಿ ನಿವಾಸಿಗಳನ್ನುದ್ದೇಶಿಸಿ ಮಾತನಾಡಿದರು.
ಮೂರು ಹೋಳು: ಐದು ವರ್ಷ ಅಧಿಕಾರ ಅನುಭವಿಸಿದ ಬಿಜೆಪಿ ಮೂರು ಹೋಳಾಗಿ ಶಕ್ತಿ ಕಳೆದುಕೊಂಡಿದೆ. ರಾಜ್ಯದಲ್ಲಿ ಬದಲಾವಣೆ ತರಲು ಅವಕಾಶಬೇಡಿ ಅಧಿಕಾರಕ್ಕೆ ಬಂದವರು ನಿತ್ಯ ಜಗಳ, ಭ್ರಷ್ಟಾಚಾರದಿಂದ ಸಾಲು-ಸಾಲಾಗಿ ಜೈಲಿಗೆ ಹೋಗುವಲ್ಲೆ ಅವಧಿ ಸವೆಸಿದರು. ಜನಪರ ಶಕ್ತಿ ದೇಗುಲ ವಿಧಾನಸೌಧದ ಘನತೆಯನ್ನು ಕುಗ್ಗಿಸಿದರು. ಇಂತಹವರನ್ನು ಮನೆಗೆ ಕಳುಹಿಸಿ ಸಮರ್ಥ ನಾಯಕತ್ವದ ಸದೃಢ ಸರ್ಕಾರ ರಚನೆಗಾಗಿ ಕಾಂಗ್ರೇಸ್ ಪಕ್ಷವನ್ನು ಚುನಾಯಿಸಬೇಕೆಂದು ಮನವಿ ಮಾಡಿದರು.
ರೈತರ ಬದುಕು ಹಸನಾಗಲು, ಯುವಕರ ಕೈಗೆ ಕೆಲಸ ಸಿಗಲು, ಮಹಿಳಾ ಸಬಲೀಕರಣವಾಗಲು, ಗ್ರಾಮ ಸ್ವರಾಜ್ಯ ಶಕ್ತಿಯುತಗೊಳ್ಳಲು, ಸರ್ವಜನಾಂಗದ ಹಿತ ಕಾಪಾಡಲು ದೇಶದಲ್ಲಿ ಕಾಂಗ್ರೇಸ್ ಮಾತ್ರ ಸಮರ್ಥವಾಗಿದೆ. ಅನೇಕ ಸುಧಾರಣೆಗಳು ಕಾಂಗ್ರೇಸ್ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಬಡವರಿಗಾಗಿ ಇಂದಿರಾ ಆವಾಸ್ ಮನೆಗಳು, ಕಾರ್ಮಿಕ ವಿಮೆ, ಆರೋಗ್ಯ ಕವಚ ಯೋಜನೆಗಳೆಂದು ಉದಾಹರಿಸಿದ ತಾರಾದೇವಿ, ಬಡವರಿಗೆ 3 ರೂ.ಗೆ ಅಕ್ಕಿ ನೀಡುವ ಕೇಂದ್ರದ ಯೋಜನೆ ಸರಿಯಾಗಿ ಜಾರಿಗೊಳಿಸದ ಬಿಜೆಪಿ ಸರ್ಕಾರ, ಬಿ.ಪಿ.ಎಲ್. ಕಾರ್ಡ್ಗಳನ್ನು ಬಡವರಿಗೆ ಸರಿಯಾಗಿ ನೀಡದೆ ಅಸಹಕಾರ ತೋರಿದೆ ಎಂದರು.
ಕೇಂದ್ರದ ಯೋಜನೆ: ಸೋನಿಯಾಗಾಂಧಿ ಅವರ ಆಸಕ್ತಿಯ ಹಿನ್ನೆಲೆಯಲ್ಲಿ ಆಹಾರ ಭದ್ರತಾ ಕಾಯ್ದೆಯನ್ನು ಅನುಷ್ಠಾನಗೊಳಿಸಲು ಮುಂದಾಗಿರುವ ಕೇಂದ್ರ ಸರ್ಕಾರ ಆಹಾರ ಇಲ್ಲದೆ ದೇಶದಲ್ಲಿ ಯಾರೂ ಪ್ರಾಣ ಕಳೆದುಕೊಳ್ಳುವ ದುಸ್ಥಿತಿ ಬಾರದಂತೆ ವ್ಯವಸ್ಥೆ ಮಾಡುತ್ತಿದೆ. ಶಿಕ್ಷಣದ ಹಕ್ಕುಕಾಯ್ದೆ ಜಾರಿಗೆ ತರುವ ಮೂಲಕ ಬಡ ಮಕ್ಕಳು ಒಳ್ಳೆಯ ಶಾಲೆಗಳಲ್ಲಿ ಕಲಿಯಲು ಅವಕಾಶವಾಗಿದೆ. ಒಟ್ಟಾರೆ ಸಮಾಜದ ಹಿತರಕ್ಷಣೆಗಾಗಿ ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ರಚನೆಯಾಗಲು ಪೂರಕವಾಗಿ ಪಕ್ಷದ ಅಭ್ಯರ್ಥಿಗಳ ಪರ ಮತ ಚಲಾಯಿಸಬೇಕೆಂದು ತಾರಾದೇವಿ ಮನವಿ ಮಾಡಿದರು.
ಆಲೂರು ಬ್ಲಾಕ್ ಕಾಂಗ್ರೇಸ್ ಕಾರ್ಯದರ್ಶಿ ಅಶೋಕ್ ಮಾತನಾಡಿ, ಆಲ್ದೂರಿನ ಅಭಿವೃದ್ಧಿಗೆ ತಾರಾದೇವಿ ಅವರ ಕೊಡುಗೆ ಅಪಾರ. ಪ್ರೌಢಶಾಲೆ, ಕಾಲೇಜು ತಂದವರೇ ಅವರು, ಇಲ್ಲಿನ ಪ್ರಮುಖ ಜೀವಾಳ ಕಾಫಿ ಕೈಗಾರಿಕೆಯ ಮುಕ್ತ ಮಾರುಕಟ್ಟೆ ವ್ಯವಸ್ಥೆ ತಾರಾದೇವಿ ಅವರ ಪರಿಶ್ರಮದ ಫಲ. ವೈಯಕ್ತಿಕವಾಗಿ ಸಾಕಷ್ಟುನೊಂದರೂ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುತ್ತಿರುವುದು ಕಾಂಗ್ರೆಸ್ ಬದ್ಧತೆಯನ್ನು ತೋರುತ್ತದೆ ಎಂದರು. ಗ್ರಾ.ಪಂ. ಅಧ್ಯಕ್ಷೆ ಜಯಶೀಲ, ಉಪಾಧ್ಯಕ್ಷ ಅಶೋಕ್, ಸದಸ್ಯ ನವರಾಜ್, ಪ್ರಚಾರ ಸಮಿತಿ ಅಧ್ಯಕ್ಷ ಸುರೇಶ್, ಗೀತಾ, ಇಬ್ರಾಹಿಂ, ವಸಂತ್ ಪಾಲ್ಗೊಂಡಿದ್ದರು.