ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕಾಮಗಾರಿಗೆ ಮಳೆ ಅಡ್ಡಿ

Srinivasa Murthy VN
Updated On : 13 May 2013, 2:29 am

ಕ.ಪ್ರ.ವಾರ್ತ ಚಿಕ್ಕಮಗಳೂರ ಮೇ 12
ಚಿಕ್ಕಮಗಳೂರು ನಗರಕ್ಕೆ ಮುಂದೆ ಕಾದಿದೆ ಆವಾಂತರ..,
  ಇಲ್ಲಿ ನಡೆಯುತ್ತಿದ್ದ ಒಳಚರಂಡಿ ಕಾಮಗಾರಿ ಅರ್ಧಕ್ಕೆ ನಿಂತಿದೆ. ರಸ್ತೆಗಳ ಡಾಂಬರೀಕರಣ ಕೆಲಸ ಇನ್ನು ಬಾಕಿ ಇದೆ. ಕಳೆದ 15 ದಿನಗಳಿಂದ ನಗರದಲ್ಲಿ ಮಳೆ ಬರುತ್ತಿದೆ. ಇನ್ನು ಮಳೆಗಾಲ ಪ್ರಾರಂಭವಾಯಿತ್ತೆಂದರೆ, ಅದು ಮುಗಿಯುವವರೆಗೆ ಅಂದರೆ ಜೂನ್‌ನಿಂದ ಸೆಪ್ಟಂಬರ್ ತಿಂಗಳವರೆಗೆ ಕಾಯಬೇಕು.
 ಕಾಯೋದಿಕ್ಕೆ ಆಗಿಲ್ಲ, ಮಳೆ ಬಂದರೂ ಪರವಾಗಿಲ್ಲ, ಅರ್ಧಕ್ಕೆ ನಿಂತಿರುವ ಕಾಮಗಾರಿ ಆದಷ್ಟು ಬೇಗ ಮುಗಿಸಿ ಎಂಬ ಒತ್ತಾಯವನ್ನು ಮಾಡುವಂತಿಲ್ಲ. ಹಾಗೇನಾದರೂ ಮಾಡಿದರೆ, ಕಾಮಗಾರಿಗೆ ಬಂದಿರುವ ಕೋಟ್ಯಂತರ ರುಪಾಯಿ ಮಳೆಯ ನೀರಿನೊಂದಿಗೆ ಚರಂಡಿಯಲ್ಲಿ ಹರಿದು ಹೋಗಲಿದೆ. ಅದುದರಿಂದ ನಾಲ್ಕು ತಿಂಗಳು ಕಾಯಬೇಕು. ಇದು, ಅನಿವಾರ್ಯ.
ತೀವ್ರ ತೊಂದರೆ: ನಗರದ ಜನತೆಗೆ ನೆನಪಿರಬೇಕು. ಕಳೆದ ವರ್ಷ ಮುಂಗಾರು ಮಳೆ ಆರಂಭವಾಗುವ ಮೊದಲು ಒಳ ಚರಂಡಿ ಕಾಮಗಾರಿ ಆರಂಭಗೊಂಡಿತು.
   ಮ್ಯಾನ್ ಹೋಲ್ ನಿರ್ಮಾಣದ ಸಂದರ್ಭದಲ್ಲಿ ಕಾಮಗಾರಿ ನಡೆಯುತ್ತಿದ್ದ ಬಡಾವಣೆಗಳು ಕೆಸರುಮಯವಾಗಿದ್ದವು. ಮಕ್ಕಳು ಶಾಲೆಗಳಿಗೆ ಹೋಗಲು ಆಗುತ್ತಿರಲಿಲ್ಲ. ಇನ್ನು ದಿನಸಿ ಅಂಗಡಿಗೆ ಹೋಗಿ ದಿನನಿತ್ಯದ ವಸ್ತುಗಳನ್ನು ಖರೀದಿ ಮಾಡಲು ಆಗುತ್ತಿರಲಿಲ್ಲ. ಮನೆಗಳ ಕಸ ಸಂಗ್ರಹಣೆಗೆ ತೀವ್ರ ತೊಂದರೆಯಾಗಿತ್ತು. ಆಗ ಕಾಂಗ್ರೆಸ್, ಜೆಡಿಎಸ್ ಹಾಗೂ ಕೆಲವು ಸಂಘಟನೆಯವರು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದರು.
   ಈ ಬಾರಿಯ ಮುಂಗಾರು ಮಳೆ ಆರಂಭವಾಗುವ ಮೊದಲೇ ಒಳಚರಂಡಿ ಹಾಗೂ ರಸ್ತೆ ಡಾಂಬರೀಕರಣ ಕಾಮಗಾರಿಯನ್ನು ಪೂರ್ಣಗೊಳಿಸಲು ನಗರಸಭೆ ಪ್ಲಾನ್ ಮಾಡಿಕೊಂಡಿತ್ತು. ಆದರೆ, ನಿಗದಿತ ಸಮಯದೊಳಗೆ ಕಾಮಗಾರಿ ಮುಗಿಸಲು ಅಸಾಧ್ಯ.
ಎಷ್ಟೇಷ್ಟು ಕಾಮಗಾರಿ: ಚಿಕ್ಕಮಗಳೂರು ನಗರಸಭೆಗೆ ನಗರೋತ್ಥಾನದಲ್ಲಿ 30 ಕೋಟಿ ಬಂದಿದೆ. ಇದರಲ್ಲಿ 24 ಕೋಟಿ ಡಾಂಬರೀಕರಣಕ್ಕೆ. ಯುಜಿಡಿ ಆಗಿರುವ ಪ್ರದೇಶದಲ್ಲಿ ಡಾಂಬರ್ ಹಾಕಬೇಕಾಗಿತ್ತು.
   ಟೆಂಡರ್ ಪ್ರಕ್ರಿಯೆ ಮುಗಿದು, ಕಾರ್ಯಾದೇಶ ನೀಡುವ ವೇಳೆಗೆ ವಿಧಾನಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಗೆ ಬಂದಿತು. ಈಗ ಕಾರ್ಯಾದೇಶ ನೀಡಿದರೂ ಕಾಮಗಾರಿ ಕೈಗೆತ್ತಿಕೊಳ್ಳಲು ಮಳೆ ಅಡ್ಡಿಪಡಿಸಲಿದೆ.   ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಯೋಜನೆಯಲ್ಲಿ 8 ಕೋಟಿ ಬಂದಿದೆ. ಇದರಲ್ಲಿ 80 ಲಕ್ಷ ಡಾಂಬರೀಕರಣಕ್ಕೆ ಬಳಸಿಕೊಳ್ಳಲಾಗುತ್ತಿದ್ದು, ಈವರೆಗೆ 3 ಕೋಟಿ ಕಾಮಗಾರಿ ಮುಕ್ತಾಯಗೊಂಡಿದೆ.
   ಇನ್ನು ಶೇ. 40 ರಷ್ಟು ಕಾಮಗಾರಿಗೆ ಬಾಕಿ ಇದೆ. ಕೆಎಂಆರ್‌ಪಿಯಲ್ಲಿ 16 ಕೋಟಿ ವೆಚ್ಚದಲ್ಲಿ ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದ್ದು, 6 ಕೋಟಿ ಕಾಮಗಾರಿ ಪೂರ್ಣಗೊಂಡಿದೆ. ಶೇ. 50 ರಷ್ಟು ಇನ್ನು ಬಾಕಿ ಇದೆ.
   ನಗರದ ಹೃದಯ ಭಾಗದಲ್ಲಿ ಶೇ. 80 ರಷ್ಟು ಒಳ ಚರಂಡಿಯ ಮ್ಯಾನ್  ಹೋಲ್ ನಿರ್ಮಾಣದ ಕಾಮಗಾರಿ ಪೂರ್ಣಗೊಂಡಿದೆ. ಜತೆಗೆ ಸರ್ವಿಸ್ ಲೈನ್ ಕಾಮಗಾರಿ ಮುಗಿದಿದೆ. ಕೊಳಚೆ ನೀರು ಶುದ್ಧೀಕರಣ ಘಟಕದ ಕಾಮಗಾರಿ ಬಾಕಿ ಇದ್ದು, ಶೇ. 35 ರಷ್ಟು ಯುಜಿಡಿ ಕಾಮಗಾರಿ ಇನ್ನು ಮುಗಿಸಬೇಕಾಗಿದೆ.
ಪ್ರತಿದಿನ 2 ಕಿ.ಮೀ. ರಸ್ತೆಗೆ ಡಾಂಬರ್ ಹಾಕಲಾಗುತ್ತಿತ್ತು. ಕಳೆದ 25 ದಿನಗಳಿಂದ ಡಾಂಬರೀಕರಣ ಕಾಮಗಾರಿ ನಡೆದಿರುವುದಿಲ್ಲ.
   ಕಾಮಗಾರಿ ಮುಂದುವರೆಸಿದ್ದರೆ, ಈವರೆಗೆ 50 ಕಿ.ಮೀ. ರಸ್ತೆಗಳಿಗೆ ಡಾಂಬರ್ ಹಾಕಬಹುದಾಗಿತ್ತು. ಡಾಂಬರೀಕರಣದ ಗುತ್ತಿಗೆ ಪಡೆದಿರುವವರು ನಿಗದಿತ ಸಮಯದೊಳಗೆ ಕೆಲಸ ಮುಗಿಸಬೇಕು. ಇಲ್ಲದೆ ಹೋದರೆ ಗುತ್ತಿಗೆದಾರರಿಗೆ ದಿನಕ್ಕೆ 35 ಸಾವಿರ ದಂಡ ವಿಧಿಸಲಾಗುವುದು. ಆದರೆ, ವಿಧಾನಸಭಾ ಚುನಾವಣೆಯ ವೇಳೆಯಲ್ಲಿ ನಗರದ ಎಲ್ಲಾ ಕಾಮಗಾರಿಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ಮುಂದುವರೆದ ಕಾಮಗಾರಿಗೆ ನೀತಿ ಸಂಹಿತೆ ಅನ್ವಯವಾಗುವುದಿಲ್ಲ. ಆದರೂ ಜಿಲ್ಲಾಧಿಕಾರಿಗಳು ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಆದೇಶ ಹೊರಡಿಸಿದ್ದರು.
ಜನರಿಗೆ ತೊಂದರೆ: ರಾಜಕೀಯ ಲಾಭ, ನಷ್ಟದ ಲೆಕ್ಕಚಾರದಿಂದಾಗಿ ಕಾಮಗಾರಿ ಸ್ಥಗಿತಗೊಳಿಸಲಾಯಿತು.    
   ಚುನಾವಣೆ ಮುಗಿಯುತ್ತಿದ್ದಂತೆ ಕಾಮಗಾರಿ ಪುನರಾಂಭಗೊಂಡಿದೆ. ಆದಕ್ಕೆ ಪ್ರತಿ  ದಿನ ಬರುತ್ತಿರುವ ಮಳೆ ಅಡ್ಡಿಪಡಿಸುತ್ತಿದೆ. ಈಗ ಮಳೆಯಲ್ಲಿಯೇ ಡಾಂಬರ್ ಕಾಮಗಾರಿ ಮುಂದುವರೆಸಿದರೆ ರಸ್ತೆ ತುಂಬಾ ಬೇಗ ಹಾಳಾಗುವ ಸಾಧ್ಯತೆ ಹೆಚ್ಚಿದೆ. ಚಿಕ್ಕಮಗಳೂರು ನಗರದಲ್ಲಿ ಕಳೆದ 15 ದಿನಗಳಿಂದ ಪ್ರತಿ ದಿನ ಮಳೆ ಬರುತ್ತಿದೆ.
  ಇನ್ನು ಮುಂಗಾರು ಮಳೆ ಆರಂಭವಾಗಲು 15 ದಿನಗಳ ಮಾತ್ರ ಬಾಕಿ ಇದ್ದು, ಒಳ ಚರಂಡಿ ಕಾಮಗಾರಿ ನಡೆದ ರಸ್ತೆಗಳಲ್ಲಿ ಜನರು ಓಡಾಡದ ಪರಿಸ್ಥಿತಿ ಇದೆ.    ಮಳೆಗಾಲ ಆರಂಭವಾದರೆ ಕಳೆದ ವರ್ಷದಂತೆ ಈ ಬಾರಿಯು ಜನರಿಗೆ ತುಂಬಾ ತೊಂದರೆಯಾಗಲಿದೆ. ರಾಜಕೀಯ ಪಕ್ಷಗಳು ಮಾಡಿದ ಪಾಲಿಟಿಕ್ಸ್ ಗೇಮ್‌ನಿಂದ ಜನರಿಗೆ ಅನಾನುಕೂಲವಾಗಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement