ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕನ್ನಡ ಆಡಳಿತ ಭಾಷೆಯಾಗಲಿ

Srinivasa Murthy VN
Updated On : 14 May 2013, 11:38 am

ಕ.ಪ್ರ.ವಾರ್ತೆ ಚಿಕ್ಕಮಗಳೂರು ಮೇ 13
ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಮುಂದೆ ನಾಡು, ನುಡಿ, ಜಲ ಕುರಿತಂತೆ ಅನೇಕ ಸವಾಲುಗಳು ಇದ್ದು, ಇವುಗಳನ್ನು ಎದುರಿಸುವ ನಿಟ್ಟಿನಲ್ಲಿ ಪರಿಷತ್ ಕಾರ್ಯೋನ್ಮುಖವಾಗಬೇಕಾಗಿದೆ ಎಂದು ನಿವೃತ್ತ ಉಪನ್ಯಾಸಕರಾದ ಬಿ. ತಿಪ್ಪೇರುದ್ರಪ್ಪ ಸಲಹೆ ನೀಡಿದ್ದಾರೆ.
ನಗರದ ಬಸವಮಂದಿರದ ಆವರಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ 98ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಉಗಮ ಮತ್ತು ನಡೆದು ಬಂದ ದಾರಿಯ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.
ಇಚ್ಛಾಶಕ್ತಿ ಪ್ರದರ್ಶಿಸಲಿ: ಕಾವೇರಿ ವಿವಾದ, ಗಡಿ ತಂಟೆ, ಸದ್ಯ ನ್ಯಾಯಾಲಯದಲ್ಲಿರುವ ಕನ್ನಡವೇ ಪ್ರಾಥಮಿಕ ಹಂತದಲ್ಲಿ ಶಿಕ್ಷಣ ಮಾಧ್ಯಮವಾಗಬೇಕೆಂಬ ವಿಚಾರ, ಎಲ್ಲಾ ಹಂತದಲ್ಲಿ ಕನ್ನಡ ಆಡಳಿತ ಭಾಷೆಯಾಗುವ ಸಂಗತಿ ಇವೆಲ್ಲವೂ ಪರಿಷತ್ತಿನ ಮುಂದಿರುವ ಸವಾಲುಗಳು, ಭಾಷಾನುಷ್ಠಾನದಲ್ಲಿ ಸರ್ಕಾರ ತನ್ನ ಇಚ್ಛಾಶಕ್ತಿ ಪ್ರದರ್ಶಿಸಬೇಕು ಎಂದು ಹೇಳಿದರು.
ಕೇಂದ್ರ ಸಾಹಿತ್ಯ ಪರಿಷತ್ತು ಶತಮಾನೋತ್ಸವ ಸಂಭ್ರಮಾಚರಣೆಯ ಹೊಸ್ತಿಲಲ್ಲಿದೆ. ಆದರೆ, ನಮ್ಮ ಹಿರಿಯರು ಕಟ್ಟಿ ಬೆಳೆಸಿದ ಈ ಸಂಸ್ಥೆಯ ಆಶಯಗಳು ಈಡೇರಿವೆಯೇ ಎಂಬುದು ಪ್ರಶ್ನೆಯ ರೂಪದಲ್ಲಿದೆ ಎಂದರು.
ಕನ್ನಡ ಭಾಷೆಯ ಬೆಳವಣಿಗೆಯಲ್ಲಿ ಬಸವಾದಿ ಪ್ರಮಥರಿಂದ ಹಿಡಿದು ಕರ್ನಾಟಕದಲ್ಲಿನ ಈಗಿನ ವೀರಶೈವ ಮಠಗಳ ಪಾತ್ರ ಹಿರಿದು ಎಂದ ಅವರು, ಪರಿಷತ್ತಿನ ಮುಂದಿರುವ ಸವಾಲುಗಳನ್ನು, ಅದು ಎದುರಿಸಬೇಕಾದ  ಜರೂರತ್ತನ್ನು ತಿಳಿಸಿದರು.
ಆಂಗ್ಲ ಭಾಷೆ ವ್ಯಾಮೋಹ: ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಬಸವಮಂದಿರದ ಶ್ರೀ ಜಯಬಸವಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಆಂಗ್ಲ ಭಾಷೆಯ ವ್ಯಾಮೋಹ ನಮ್ಮ ಜನರಲ್ಲಿ ಹೆಚ್ಚಾಗುತ್ತಿದ್ದು, ಕನ್ನಡಕ್ಕೆ ಕುತ್ತು ಬಂದಿದೆ ಎಂದರು.
ಕನ್ನಡ ಸುಂದರ ಹಾಗೂ ಶ್ರೀಮಂತ ಭಾಷೆ. ನಾಡನ್ನಾಳಿದ ಅರಸರು ಘೋಷಿಸಿದ ನುಡಿ, ಕವಿಗಳ ಕೃತಿಗಳಲ್ಲಿ ರಾರಾಜಿಸಿದ ಭಾಷೆ. ಶರಣರು, ಸಂತರು, ದಾಸವರೇಣ್ಯರು ಪೂಜಿಸಿದ ಭಾಷೆ ಕನ್ನಡ,. ಇದನ್ನು ಉಳಿಸಿ ಬೆಳೆಸಿಕೊಂಡು ಹೋಗಲು, 98 ವರ್ಷ ತುಂಬುತ್ತಿರುವ ಸಾಹಿತ್ಯ ಪರಿಷತ್ತಿನೊಂದಿಗೆ ನಾವೆಲ್ಲರೂ  ಕೈ ಜೋಡಿಸಬೇಕಾಗಿದೆ ಎಂದು ಹೇಳಿದರು.
ಜಿಲ್ಲಾ ಕಸಾಪ ಎನ್.ಎಸ್. ಶಿವಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಶಿವಾನಂದಸ್ವಾಮಿ ಸ್ವಾಗತಿಸಿದರು. ತಾಲೂಕು ಕಸಾಪ ಅಧ್ಯಕ್ಷ ಎಚ್.ಸಿ. ನಟರಾಜ್ ನಿರೂಪಿಸಿದರು. ಕಡೂರು ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ವಂದಿಸಿದರು.

ಸಂಭ್ರಮದ ಅಕ್ಷಯ ತೃತೀಯಾ ಆಚರಣೆ
ಕ.ಪ್ರ.ವಾರ್ತೆ ಮೂಡಿಗೆರೆ ಮೇ 13
ಶಿಥಿಲಗೊಂಡಿದ್ದ ಶ್ರೀ ಮಾತೆಯ ಗರ್ಭಗುಡಿಯನ್ನು 1973ರಲ್ಲಿ ನೂತನವಾಗಿ ನಿರ್ಮಿಸಿ, ಶಿಲಾಮಯ ಚಕ್ರಾತ್ಮಕ ದಿವ್ಯ ಮಂದಿರದಲ್ಲಿ ಆದಿಶಕ್ತೀದೇವಿಯ ಪ್ರತಿಷ್ಠೆ ಹಾಗೂ ಅನ್ನಪೂರ್ಣೇಶ್ವರಿ ದೇವಿಯ ಪ್ರತಿಷ್ಠಾಪನೆ ನೆರವೇರಿಸಿದ ಪುಣ್ಯ ದಿನದ ಅಂಗವಾಗಿ ಅಕ್ಷಯ ತದಿಗೆಯಂದು ವರ್ಧಂತಿ ಉತ್ಸವ ನಡೆಸಲಾಗುತ್ತಿದೆ ಎಂದು ಹೊರನಾಡು ಕ್ಷೇತ್ರದ ಕ್ಷೇತ್ರದ ಧರ್ಮಕರ್ತ ಡಾ.ಭೀಮೇಶ್ವರ ಜೋಷಿ ತಿಳಿಸಿದರು.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಅನ್ನಪೂರ್ಣೇಶ್ವರಿಯನ್ನು ನಂಬಿ ಬಂದ ಭಕ್ತರನ್ನು ಕೈಬಿಟ್ಟಿಲ್ಲ ಎಂಬುವುದಕ್ಕೆ ಭಕ್ತರೇ ಉದಾಹರಣೆಯಾಗಿದ್ದಾರೆ. ವೈಶಾಖ ಶುಕ್ಲ ತದಿಗೆ ಸರ್ವರಿಗೂ ಒಳಿತು ಉಂಟು ಮಾಡಿ ಸಕಲ ಐಶ್ವರ್ಯ ತುಂಬಿ ಹರಿಸಲಿ ಎಂದು ಶುಭ ಹಾರೈಸಿದರು. ರಾಜ್ಯದ ನಾನಾ ಭಾಗಗಳಿಂದ ಭಕ್ತರು ಆಗಮಿಸಿ ದೇವಿಯ ಕೃಪೆಗೆ ಪಾತ್ರರಾದರು.
ವರ್ಧಂತಿ ಉತ್ಸವದ ಅಂಗವಾಗಿ ಗಣಪತಿ ಹೋಮ, ಚಂಡಿಕಾ ಹೋಮ, ಲಲಿತ ಹೋಮ, ಲಕ್ಷ್ಮೀನಾರಾಯಣ ಹೃದಯ ಹೋಮ, ರಾಮತಾರಕ ಹೋಮ, ಅನ್ನಪೂರ್ಣಾ ಮೂಲಮಂತ್ರ ಹೋಮ, ಬಾಲತ್ರಿಪುರ ಸುಂದರಿ ಹೋಮ, ಗಾಯತ್ರೀ ಹೋಮ, ನವಗ್ರಹ ಹೋಮ, ರುದ್ರಹೋಮ, ವೇದ ಪಾರಾಯಣ ಸಂಗೋಪಸಾಂಗವಾಗಿ ಜರುಗಿತು. ಕ್ಷೇತ್ರದ ಧರ್ಮಕರ್ತ ಡಾ.ಜಿ. ಭೀಮೇಶ್ವರ ಜೋಷಿ, ರಾಜಲಕ್ಷ್ಮೀ ಭೀ. ಜೋಷಿ ದಂಪತಿ ಹಾಗೂ ಕುಟುಂಬಸ್ಥರು ಹೋಮಗಳಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement