ನೆಮ್ಮಾರಿನಲ್ಲಿ ಉರೂಸ್ ಆಚರಣೆ
ಕ.ಪ್ರ.ವಾರ್ತೆ ಶೃಂಗೇರಿ ಮೇ 13
ಪ್ರತಿಯೊಬ್ಬರು ಶ್ರದ್ಧೆ ಭಕ್ತಿಯಿಂದ ದೇವರನ್ನು ಆರಾಧಿಸಿದರೆ ದೇವರ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದು ಗುಲ್ಬರ್ಗದ ಇಸ್ಲಾಮಿ ತಂಡದ ಜನಾಬ್ ಅಬ್ದುಲ್ ಸತ್ತಾರ್ ಅಭಿಪ್ರಾಯಪಟ್ಟರು.
ನೆಮ್ಮಾರಿನ ಸೂಫಿ ಸಂತ ಹಜರತ್ ದಿಲಾವರುಷ ಔಲಿಯಾ ದರ್ಗಾದ ಆವರಣದಲ್ಲಿ ಉರೂಸ್ ಸಮಾರಂಭದ ಅಂಗವಾಗಿ ಆಯೋಜಿಸಲಾಗಿದ್ದ ಧಾರ್ಮಿಕ ಮತಪ್ರಸಂಗ ಕಾರ್ಯಕ್ರಮದಲ್ಲಿ ಮಾತನಾಡಿ, ದೇವರಲ್ಲಿ ಬಡವ,ಶ್ರೀಮಂತ ಎಂಬ ಯಾವುದೇ ಭೇದ ಭಾವವಿಲ್ಲ. ರಾಗ ದ್ವೇಷಗಳಿಲ್ಲ, ಸೂಫಿ ಸಂತರು ಜಾತಿ- ಮತ ಮರೆತು ಜನರಲ್ಲಿ ಐಕ್ಯತೆ ಭಾವನೆ ಮೂಡಿಸುವುದರ ಜೊತೆಗೆ ಸಮಾಜದಲ್ಲಿ ಶಾಂತಿ ವಾತಾವರಣ ಮೂಡಿಸಿದರು ಎಂದರು.
ಶೃಂಗೇರಿ ಜಾಮೀಯಾ ಮಸೀದಿ ಧರ್ಮಗುರು ಖಾರಿ ನೌಶಾದ್ ರಿಜ್ವಿ, ಜನಾಬ್ ಅಬ್ದುಲ್ ರಜಾಕ್ ಮತ್ತಿತರರು ಉಪಸ್ಥಿತರಿದ್ದರು. ಸಂಜೆ ದರ್ಗಾದ ಮುಂಬಾಗದಿಂದ ಸಂದಲ್ ಮೆರವಣಿಗೆ ಹೊರಟಿತು. ದರ್ಗಾದ ಮುಖ್ಯಸ್ಥ ನೆಮ್ಮಾರ್ ಅಬೂಬಕರ್ ಸಂದಲ್ ಮೆರವಣಿಗೆಗೆ ಚಾಲನೆ ನೀಡಿದರು.
ಸಂದಲ್ ಮೆರವಣಿಗೆ ಪಟ್ಟಣದ ಮುಖ್ಯ ಬೀದಿಯಲ್ಲಿ ಸಾಗಿ ನಂತರ ಸಂಜೆ ದರ್ಗಾದಲ್ಲಿ ಲೋಕಕಲ್ಯಾಣಾರ್ಥ ಸಾಮೂಹಿಕ ಪ್ರಾರ್ಥನೆ ನೆರವೇರಿತು. ಆಕರ್ಷಕ ಝರಬ್ ವಿಶೇಷ ಮೆರುಗು ನೀಡಿತು.
ನ್ಯಾಯ ಕೊಡಿಸುವಲ್ಲಿ ಪ್ರಾಮಾಣಿಕ ಹೋರಾಟ
ಕ.ಪ್ರ.ವಾರ್ತೆ ಕಡೂರು ಮೇ 13
ಕೆಜೆಪಿ ನಾಯಕ ಯಡಿಯೂರಪ್ಪನವರ ಹಾದಿಯಲ್ಲಿಯೇ ಸಾಗುವ ಮೂಲಕ ಜನರಿಗೆ ಅನ್ಯಾಯವಾದಾಗ ಅವರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಹೋರಾಟ ಮಾಡುತ್ತೇನೆ ಎಂದು ಕಡೂರು ವಿಧಾನಸಭಾ ಕ್ಷೇತ್ರದ ಕೆಜೆಪಿ ಅಭ್ಯರ್ಥಿಯಾಗಿದ್ದ ಬೆಳ್ಳಿ ಪ್ರಕಾಶ್ ಹೇಳಿದರು.
ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಡೂರು ಕ್ಷೇತ್ರದ ಮತದಾರರು ನಮ್ಮ ನಾಯಕ ಯಡಿಯೂರಪ್ಪ ಮುಖ್ಯಮಂತ್ರಿ ಅವಧಿಯಲ್ಲಿ ಮಾಡಿರುವ ಸಾಧನೆ ಹಾಗೂ ನಾನು ಕಳೆದ 13 ವರ್ಷದಿಂದ ಕ್ಷೇತ್ರದಲ್ಲಿ ಜನರ ಪರವಾಗಿ ರಾಜಕಾರಣದಲ್ಲಿ ಸಲ್ಲಿಸುತ್ತಿರುವ ಸೇವೆಯನ್ನು ಪರಿಗಣಿಸುವ ಮೂಲಕ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ನನಗೆ ಮತ ನೀಡಿ ಕೆಜೆಪಿಗೆ ಎರಡನೇ ಸ್ಥಾನ ನೀಡಿದ್ದಾರೆ ಎಂದರು.
ಸೋಲಿನಿಂದ ಕಂಗೆಟ್ಟಿಲ್ಲ: ಪಕ್ಷದ ಸೋಲಿನಿಂದ ನಾನು ಯವುದೇ ರೀತಿಯಿಂದಲೂ ಕಂಗೆಟ್ಟಿಲ್ಲ. ಬದಲಾಗಿ ಎರಡನೇ ಸ್ಥಾನ ನೀಡಿರುವ ಜನರಿಗೆ ಶಾಸಕರ ರೀತಿಯಲ್ಲಿಯೇ ನನ್ನ ಪ್ರಭಾವ ಬಳಸಿ ಮತ್ತು ನಮ್ಮ ರಾಜ್ಯಮಟ್ಟದ ನಾಯಕರ ಉತ್ತಮ ಒಡನಾಟದಿಂದ ಕ್ಷೇತ್ರದ ಜನರಿಗೆ ಆಗಬೇಕಾಗಿರುವ ಅಭಿವೃದ್ಧಿ ಕೆಲಸ ಕಾರ್ಯ ಮಾಡಿಕೊಡುತ್ತೇನೆ ಎಂದರು.
ಕ್ಷೇತ್ರದ ಮತದಾರರು ದತ್ತರವರಿಗೆ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ನಾನು ಅವರನ್ನು ಅಭಿನಂದಿಸುತ್ತೇನೆ. ಕ್ಷೇತ್ರದಲ್ಲಿ ನಮ್ಮ ಜನರಿಗೆ ಯಾರಿಂದಲಾದರೂ ಅಥವಾ ಯಾವ ವ್ಯವಸ್ಥೆಯಿಂದಾಗಲೀ ತೊಂದರೆ ಉಂಟಾದಲ್ಲಿ ನಾನು ಅವರ ಪರವಾಗಿ ನಿಲ್ಲುವ ಮೂಲಕ ಅವರಿಗೆ ನ್ಯಾಯ ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ ಎಂದರು.
ಮುಖಂಡ ತಾಲೂಕು ಕೆಜೆಪಿ ಅಧ್ಯಕ್ಷ ಉಮಾಪತಿ, ಟೀಕೇಶ್, ಬಾಬು, ಶಾಮಿಯಾನ ಚಂದ್ರು ಮೊದಲಾದವರು ಉಪಸ್ಥಿತರಿದ್ದರು.