ಬಸವಣ್ಣರ ತತ್ವ, ಸಿದ್ಧಾಂತಗಳು ಸಾರ್ವಕಾಲಿಕವಾದವು
ಕ.ಪ್ರ.ವಾರ್ತೆ ಚಿಕ್ಕಮಗಳೂರು ಮೇ 13
ಭಕ್ತಿ ಭಂಡಾರಿ ಬಸವಣ್ಣನವರ ವಚನಗಳು ಹಾಗೂ ಅವರ ತತ್ವ ಸಿದ್ಧಾಂತಗಳು ಇಡೀ ವಿಶ್ವ ಒಪ್ಪಿಕೊಳ್ಳುವ ಕಾಲ ಇಂದು ಸನ್ನಿಹಿತವಾಗಿದೆ ಎಂದು ಬಸವ ಮಂದಿರದ ಶ್ರೀ ಜಯಬಸವಾನಂದ ಸ್ವಾಮೀಜಿ ಹೇಳಿದ್ದಾರೆ.
ನಗರದ ಕುವೆಂಪು ಕಲಾ ಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಸೋಮವಾರ ನಡೆದ ಬಸವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.
ರೂಢಿಸಿಕೊಳ್ಳಬೇಕಿದೆ: ಭಕ್ತಿ ಭಂಡಾರಿ ಬಸವಣ್ಣನವರ ವಚನಗಳು ಹಾಗೂ ತತ್ವ ಸಿದ್ಧಾಂತಗಳು ಸರ್ವಕಾಲಕ್ಕೂ ಸತ್ಯವಾಗಿವೆ, ಅದನ್ನು ಬಹುತೇಕ ಎಲ್ಲಾ ಪಾಶ್ಚಿಮಾತ್ಯ ದೇಶಗಳಲ್ಲಿ ಅನುಸರಿಸಲಾಗುತ್ತಿದೆ ಎಂದ ಅವರು, ಬಸವಣ್ಣನವರ ಆದರ್ಶಗಳನ್ನು ನಾವುಗಳೆಲ್ಲಾ ರೂಢಿಸಿಕೊಳ್ಳಬೇಕೆಂದರು.
ಧಾರವಾಡ ಜಗನ್ಮಾತೆ ಅಕ್ಕಮಹಾದೇವಿ ಮಹಿಳಾ ಪೀಠದ ಪೀಠಾಧೀಶೆ ಶ್ರೀ ಜಗದ್ಗುರು ಮಾತಾ ಗಂಗಾದೇವಿ ಮಾತನಾಡಿ, ಮಹಿಳೆಯರಿಗೆ ಸ್ವಾತಂತ್ರ್ಯ ನೀಡಿದ ಮೊಟ್ಟಮೊದಲ ದಾರ್ಶನಿಕ ಬಸವಣ್ಣನವರು ಎಂದ ಅವರು, ಹಿಂದಿನ ಕಾಲದಲ್ಲಿ ಹೆಣ್ಣಿನ ಎಲ್ಲಾ ಸ್ವಾತಂತ್ರವನ್ನು ಕಸಿದುಕೊಂಡು ಆಕೆಯನ್ನು ಅಡುಗೆ ಮನೆಗೆ ಸೀಮಿತಗೊಳಿಸಲಾಗಿತ್ತು. ಆದರೆ, 12ನೇ ಶತಮಾನದಲ್ಲಿ ಬಸವಣ್ಣನವರು ಹೆಣ್ಣು ಮಕ್ಕಳಿಗೆ ಸಮಾನತೆ ಮತ್ತು ಸ್ವಾತಂತ್ರ್ಯವನ್ನು ನೀಡುವ ಮೂಲಕ ಸಮಾಜದಲ್ಲಿ ಕ್ರಾಂತಿ ಮಾಡಿದರು ಎಂದರು.
ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಸವಣ್ಣನವರು 12ನೇ ಶತಮಾನದಲ್ಲಿಯೇ ಜಾತಿ, ಲಿಂಗಭೇದ, ಮೇಲು ಕೀಳು ಎಂಬ ಭೇದವನ್ನು ತಡೆಯಲು ಹೋರಾಡಿದರು. ಬಸವಣ್ಣನವರ ಆದರ್ಶಗಳನ್ನು ನಾವುಗಳು ಅಳವಡಿಸಿಕೊಳ್ಳಬೇಕೆಂದರು.
ತಾಪಂ ಅಧ್ಯಕ್ಷ ಬಿ.ಎಸ್. ಬಸವರಾಜ್, ಜಿಲ್ಲಾಧಿಕಾರಿ ವಿ. ಯಶವಂತ್, ಡಿಎಸ್ಎಸ್ ಜಿಲ್ಲಾ ಸಂಚಾಲಕ ಕೆ.ಟಿ. ರಾಧಾಕೃಷ್ಣ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂಗವಾಗಿ ನಗರದ ಹಳೇ ತಾಲೂಕು ಕಚೇರಿ ಆವರಣದಿಂದ ಎಂ.ಜಿ. ರಸ್ತೆಯ ಮೂಲಕ ಕುವೆಂಪು ಕಲಾ ಮಂದಿರದವರೆಗೆ ಬಸವೇಶ್ವರರ ಭಾವಚಿತ್ರದೊಂದಿಗೆ ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಮೆರವಣಿಗೆ ನಡೆಯಿತು.
ಮಾನವೀಯತೆ ಬೋಧಿಸಿದ ವ್ಯಕ್ತಿ
ನರಸಿಂಹರಾಜಪುರ: ಸಮಾನತೆ ಹಾಗೂ ಮಾನವೀಯತೆಯ ತತ್ವವನ್ನು ಬೋಧಿಸಿದ ಶ್ರೇಷ್ಠ ವ್ಯಕ್ತಿ ಬಸವಣ್ಣನವರು ಎಂದು ಮೆಣಸೂರಿನ ಬಸವ ಕೇಂದ್ರದ ಬಸವಯೋಗಿ ಪ್ರಭು ಶರಣರು ತಿಳಿಸಿದರು.
ಸೋಮವಾರ ಅಂಬೇಡ್ಕರ್ ಭವನದಲ್ಲಿ ನಡೆದ ಬಸವ ಜಯಂತಿಯ ಸಾನ್ನಿಧ್ಯ ವಹಿಸಿ ಮಾತನಾಡಿದರು.
ನುಡಿದರೆ ಮುತ್ತಿನ ಹಾರದಂತಿರಬೇಕು ಎಂಬ ಮಾತಿನಂತೆ ಮಾತು ಮತ್ತು ಕೃತಿ, ನಡೆ ಹಾಗೂ ನುಡಿಯು ಒಂದೇ ಆಗಿರಬೇಕು ಎಂದು ಬಸವಣ್ಣನವರು ಪ್ರತಿಪಾದಿಸಿದ್ದರು. ಬಸವಣ್ಣನವರಿಗೆ ಅನುಭವ ಮಂಟಪವು ಪ್ರಥಮ ಪಾರ್ಲಿಮೆಂಟ್ ಆಗಿತ್ತು. ಸಮಾಜದ ಕಂದಾಚಾರ ತೆಗೆದು ಸಮಾನತೆ ಬೋಧಿಸಿದ್ದರು. ಕೆಳ ವರ್ಗದವರನ್ನು ಅನುಭವ ಮಂಟಪದಲ್ಲಿ ಸೇರಿಸಿ ಅವರಿಗೂ ಜೀವನದಲ್ಲಿ ಸಾಧನೆ ಮಾಡಲು ಅವಕಾಶ ಕಲ್ಪಿಸಿದ್ದರು ಎಂದು ಅವರು ತಿಳಿಸಿದರು.
ಈ ವರ್ಷ ಶತಮೋನೋತ್ಸವ: ಈ ವರ್ಷ ಬಸವಜಯಂತಿಯನ್ನು ಶತಮಾನೋತ್ಸವ ಕಾರ್ಯಕ್ರಮವಾಗಿ ಆಚರಿಸಲಾಗುತ್ತಿದೆ. ಕರ್ನಾಟಕ ಗಾಂಧಿ ಎಂದೇ ಹೆಸರಾಗಿದ್ದ ಹರ್ಡೀಕರ್ ಮಂಜಪ್ಪ ಅವರು 1913 ರಲ್ಲಿ ದಾವಣಗೆರೆಯಲ್ಲಿ ಚಿತ್ರದುರ್ಗದ ಸ್ವಾಮೀಜಿ ನೇನೃತ್ವದಲ್ಲಿ ಬಸವ ಜಯಂತಿ ಪ್ರಾರಂಭಿಸಿದ್ದರು. ಜಾತಿರಹಿತ ಸಮಾಜ ನಿರ್ಮಾಣ ಮಾಡುವುದೇ ಬಸವಣ್ಣನವರ ಗುರಿಯಾಗಿತ್ತು. ಸಪ್ತ ಸೂತ್ರಗಳನ್ನು ಎಲ್ಲರೂ ಪಾಲಿಸಿದ್ದರೆ ಸುಖೀ ರಾಜ್ಯ ಸ್ಥಾಪನೆ ಮಾಡುವುದು ಸಾಧ್ಯ ಎಂದು ಅವರು ಕನಸು ಕಂಡಿದ್ದರು ಎಂದು ಅವರು ತಿಳಿಸಿದರು.
ಸಭೆಯ ಅಧ್ಯಕ್ಷತೆಯನ್ನು ತಹಸೀಲ್ದಾರ್ ಕೃಷ್ಣಮೂರ್ತಿ ವಹಿಸಿದ್ದರು. ಪೊಲೀಸ್ ವೃತ್ತ ನಿರೀಕ್ಷಕ ಕೃಷ್ಣಮೂರ್ತಿ, ಬಸವ ಕೇಂದ್ರ ಸಮಿತಿ ಅಧ್ಯಕ್ಷ ಶಾಂತರಾಜ್, ದಲಿತ ಸಂಘರ್ಷ ಸಮಿತಿ ಮುಖಂಡ ಶಿವಣ್ಣ ಉಪಸ್ಥಿತರಿದ್ದರು.
ಬಿ.ಜಿ. ಮಾಳಮ್ಮನವರ್ ಸ್ವಾಗತಿಸಿದರು. ಸುರೇಶ ನಿರೂಪಿಸಿದರು. ಕೆ. ಮೌನೇಶರಾಚಾರ ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ಸರ್ಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ವಿತರಿಸಲಾಯಿತು.