ಮಹಿಳಾ ವೃತ್ತಿ ತರಬೇತಿಗೆ ಶೇ.50 ಆರ್ಥಿಕ ನೆರವು
ಕ.ಪ್ರ.ವಾರ್ತ ಚಿಕ್ಕಮಗಳೂರಮೇ 13
ನಗರದ ಆರ್ಯವೈಶ್ಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲು 15 ಲಕ್ಷ ನೀಡುವ ಜೊತೆಗೆ ಮಹಿಳಾ ವೃತ್ತಿ ತರಬೇತಿ ಯೋಜನೆಗೆ ಶೇ. 50 ರಷ್ಟು ಆರ್ಥಿಕ ನೆರವು ನೀಡುವುದಾಗಿ ಬ್ರಿಗ್ರೇಡ್ ಗ್ರೂಪ್ ಅಧ್ಯಕ್ಷ ಎಂ.ಆರ್. ಜೈಶಂಕರ್ ಹೇಳಿದರು.
ನಗರದ ಎಂ.ಜಿ. ರಸ್ತೆಯ ದೇವಾಲಯದಲ್ಲಿ ಶ್ರೀ ಕನ್ಯಕಾ ಪರಮೇಶ್ವರಿ ಅಮ್ಮನವರ ಪ್ರತಿಷ್ಠಾಪನ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಹನ್ನೊಂದೂವರೆ ಅಡಿಯ ರಜತ ರಥ ಜೊತೆಗೆ ಮೂರು ಗರ್ಭಗುಡಿಗಳಿಗೆ ರಜತ ಬಾಗಿಲು- ರಜತ ಸೀರೆ ಸಮರ್ಪಣೆಯ ನಂತರ ಒಂದು ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲುದ್ದೇಶಿಸಿರುವ ಅರ್ಚಕರು ಹಾಗೂ ಸಿಬ್ಬಂದಿಗಳ ವಸತಿಗೃಹ ಮತ್ತು ವಾಣಿಜ್ಯ ಸಂಕೀರ್ಣಕ್ಕೆ ಸೋಮವಾರ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ನಗರದ ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಎಂ. ವೆಂಕಟಸುಬ್ಬರಾವ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆರ್ಯವೈಶ್ಯ ಪೀಠಾಧಿಪತಿ ಶ್ರೀ ಚಂದ್ರಶೇಖರಾನಂದಗಿರಿ ಸ್ವಾಮೀಜಿ ಆಶೀರ್ವಚನ ನೀಡಿದರು. ಶಾಸಕ ಸಿ.ಟಿ. ರವಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಆರ್ಯವೈಶ್ಯ ಮಂಡಳಿಯ ಉಪಾಧ್ಯಕ್ಷ ಕೆ.ಎಸ್. ರಮೇಶ್ ಸ್ವಾಗತಿಸಿದರು, ಕಾರ್ಯದರ್ಶಿ ಎಂ.ವಿ. ನಾಗೇಂದ್ರ ವಂದಿಸಿದರು. ಸುವರ್ಣ ಸಮಿತಿ ಅಧ್ಯಕ್ಷ ಎಂ.ಆರ್. ಗುರುಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿರ್ದೇಶಕ ರಾಕೇಶ್ ಕಾರ್ಯಕ್ರಮ ನಿರೂಪಿಸಿದರು.
'ಎಲ್ಲರ ಸಹಕಾರದಿಂದ ಕ್ಷೇತ್ರದ ಅಭಿವೃದ್ಧಿ'
ಕ.ಪ್ರ.ವಾರ್ತ್ಣೆಕಡೂರ್ಣು ಮೇ 13 ಮಳೆಯಿಲ್ಲದೆ ಬರಗಾಲದಿಂದ ತತ್ತರಿಸುತ್ತಿರುವ ತಾಲೂಕಿಗೆ ಶಾಶ್ವತ ನೀರಾವರಿ ಯೋಜನೆಗಳನ್ನು ಜಾರಿಗೆ ತರಲು ಕ್ಷೇತ್ರದ ಕಾಂಗ್ರೆಸ್, ಕೆಜೆಪಿ, ಬಿಜೆಪಿ ಮತ್ತು ಬಿಎಸ್ಆರ್ ಪಕ್ಷಗಳ ಮುಖಂಡರನ್ನು ಸಂಪರ್ಕಿಸಿ ಅವರ ಸಹಕಾರದಿಂದ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ದುಡಿಯುವುದಾಗಿ ಶಾಸಕ ವೈಎಸ್ವಿ ದತ್ತ ಹೇಳಿದರು.
ಪಟ್ಟಣದ ಚೆಕ್ಪೋಸ್ಟ್ ಬಳಿ ಇರುವ ಬಸವೇಶ್ವರ ವೃತ್ತದಲ್ಲಿ ಬಸವ ಜಯಂತಿ ಪ್ರಯುಕ್ತ ಶ್ರೀ ಬಸವೇಶ್ವರರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿ ಮಾತನಾಡಿದ ಅವರು, 12ನೇ ಶತಮಾನದಲ್ಲಿ ಬಸವಣ್ಣನವರು ಜಾತಿ ರಹಿತ ಸಮಾಜ ನಿರ್ಮಾಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ತಿಳಿಸಿದರು.
ಅನಿಷ್ಠ ಪದ್ಧತಿ ಹೋಗಲಾಡಿಸಲು ಶ್ರಮ: ಜಾತಿ ವ್ಯವಸ್ಥೆಯನ್ನು ಬೇರು ಸಹಿತ ಕಿತ್ತು ಹಾಕಲು ಅವರು ಕೈಗೊಂಡ ಸಮಾಜ ಸುಧಾರಣಾ ಕಾರ್ಯಗಳು ಅಂದಿನ ವ್ಯವಸ್ಥೆಯ ಕ್ರಾಂತಿಕಾರಕ ಚಳವಳಿಗಳ ಮೂಲಕ ಸಮಾಜದಲ್ಲಿದ್ದ ಅನಿಷ್ಠ ಕಟ್ಟುಪಾಡುಗಳನ್ನು ಕಿತ್ತೊಗೆಯುವ ಕನಸು ಕಂಡಿದ್ದರು ಎಂದು ನುಡಿದರು.
ಪಟ್ಣಣದಲ್ಲಿ ಜಿಲ್ಲಾ ವೀರಶೈವ ಮಹಾಸಭಾದಿಂದ ಶ್ರೀ ಬಸವೇಶ್ವರ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸುತ್ತಿರುವುದು ಸಂತಸದ ಸಂಗತಿ. ತಾಲೂಕಿನಲ್ಲಿ ಈ ಬಾರಿ ಬಸವಣ್ಣನವರ ಸ್ಮರಣೆ ಮತ್ತು ವಿಚಾರಧಾರೆಯನ್ನು ತಿಳಿಸುವ ಅದ್ಧೂರಿ ಕಾರ್ಯಕ್ರಮವನ್ನು ಸರ್ಕಾರದಿಂದ ಆಚರಿಸಲು ಅಧಿಕಾರಿಗಳೊಂದಿಗೆ ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ ಎಂದರು.
ಸಿದ್ದು ಬಗ್ಗೆ ವಿಶ್ವಾಸ: ರಾಜ್ಯದ 28ನೇ ನೂತನ ಮುಖ್ಯಮಂತ್ರಿಗಳಾಗಿ ಅಧಿಕಾರ ವಹಿಸಿಕೊಂಡಿರುವ ಹಿಂದುಳಿದ ಎಲ್ಲ ವರ್ಗಗಳ ನಾಯಕರಾದ ಸಿದ್ದರಾಮಯ್ಯನವರಿಗೆ ಕ್ಷೇತ್ರದ ಎಲ್ಲ ಸಮುದಾಯಗಳ ಪರವಾಗಿ ಅಭಿನಂದನೆ ಸಲ್ಲಿಸುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಸಿದ್ದರಾಮಯ್ಯನವರ ಕೊಡುಗೆ ಖಂಡಿತ ಇರುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಕ್ಷೇತ್ರಕ್ಕೆ ಆಗಬೇಕಾಗಿರುವ ಸಮಗ್ರ ಅಭಿವೃದ್ಧಿ ಬಗ್ಗೆ ಕ್ಷೇತ್ರದ ಮುಖಂಡರಾದ ಕೆ.ಬಿ. ಮಲ್ಲಿಕಾರ್ಜುನ್, ಬೆಳ್ಳಿಪ್ರಕಾಶ್, ಬೀರೂರು ದೇವರಾಜು ಮತು ಕೆ.ಎಂ. ಕೆಂಪರಾಜು ಸೇರಿದಂತೆ ಹಿರಿಯ ಮುಖಂಡರೊಂದಿಗೆ ಸೇರಿ ಶಾಶ್ವತ ನೀರಾವರಿ ಯೋಜನೆ ಕಾರ್ಯಗತಗೊಳಿಸಲು ಪ್ರಯತ್ನಿಸುತ್ತೇನೆ ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲಾ ವೀರಶೈವ ಮಹಾಸಭಾದ ಅಧ್ಯಕ್ಷ ಎಚ್.ಎಂ. ಲೋಕೇಶ್, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಭಂಡಾರಿ ಶ್ರೀನಿವಾಸ್, ಚನ್ನಯ್ಯ, ಮುಖಂಡರಾದ ಎಚ್.ವಿ. ಗಿರೀಶ್, ನೀಲಕಂಠಪ್ಪ, ಗಂಗಾಧರ್, ನಂದಕುಮಾರ್, ತಮ್ಮಯ್ಯ, ಯತೀಶ್ ಮತ್ತಿತರರು ಉಪಸ್ಥಿತರಿದ್ದರು.