ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ವಿಜೃಂಭಣೆಯ ಬ್ರಹ್ಮ ರಥೋತ್ಸವ

Srinivasa Murthy VN
Updated On : 14 May 2013, 11:39 am

ಕ.ಪ್ರ.ವಾರ್ತೆ ಕೊಪ್ಪ  ಮೇ 13
ತಾಲೂಕಿನ ಶ್ರೀ ಕ್ಷೇತ್ರ ಶಕಟಪುರ ಶ್ರೀ ವಿದ್ಯಾಪೀಠದಲ್ಲಿ ಸೋಮವಾರ ಏರ್ಪಡಿಸಿದ್ದ ಶ್ರೀ ಸಂತಾನ ವೇಣುಗೋಪಾಲಕೃಷ್ಣ ಸ್ವಾಮಿಯ ಬ್ರಹ್ಮರಥೋತ್ಸವ ಸಾವಿರಾರು ಭಕ್ತಾದಿಗಳು ಭಾಗವಹಿಸುವ ಮೂಲಕ ವಿಜೃಂಭಣೆಯಿಂದ ನೆರವೇರಿತು.
ಬ್ರಹ್ಮರಥೋತ್ಸವಕ್ಕೂ ಮುನ್ನಾ ಶ್ರೀ ಸಂತಾನ ವೇಣುಗೋಪಾಲಕೃಷ್ಣ ಸ್ವಾಮಿಯ ಉತ್ಸವ ಮೂರ್ತಿ ಹಾಗೂ ಶ್ರೀಮಠದ ಗುರುಗಳಾದ ಶ್ರೀ ವಿದ್ಯಾಭಿನವ ಶ್ರೀಕೃಷ್ಣಾನಂದ ತೀರ್ಥಮಹಾಸ್ವಾಮಿಯವರನ್ನು ಮಂಗಳನಾದ ಸ್ವಾರ, ಪಂಚಮಹಾವಾದ್ಯ, ಶೃಂಗಾರಮೇಳ, ಚಂಡೆವಾದ್ಯ, ಮೂವತ್ತೆರಡು ಮಹಾಪಟಹವಾದ್ಯ ಮತ್ತು ಮಹಾಶಂಕ ಕೊಂಬು ಕಹಳೆವಾದ್ಯಗಳೊಳಗೊಂಡ ಅದ್ಧೂರಿ ಮೆರವಣಿಗೆಯಲ್ಲಿ ರಥಬಳಿಗೆ ಕರೆತರಲಾಯಿತು.  
ಬ್ರಹ್ಮರಥೋತ್ಸವನ್ನು ಎಳೆಯುವ ಈ ಸಮಯದಲ್ಲಿ ರಥಕ್ಕೆ ಸ್ವಾಮೀಜಿಯವರು ಕನಕರತ್ನಾಭಿಷೇಕವನ್ನು ಮಾಡಿದರು. ಇದೇ ಸಂದರ್ಭದಲ್ಲಿ ಕೋಲಾಟ- ಡೊಳ್ಳು ಕುಣಿತ, ಕೇರಳ ಕಥಕ್ಕಳಿ ನೃತ್ಯ,ಪಟಕುಣಿತ, ಮಯೂರ ನೃತ್ಯ, ಕರಗನೃತ್ಯ, ಗುಜರಾತಿನ ಶ್ರೀದೇವಿಗರಬಾ, ಶ್ರೀಕೃಷ್ಣ ದಾಂಡಿಯಾ ರಾಸ, ಮಣಿಪುರು ನೃತ್ಯ, ಪೂಜಾಕುಣಿತ, ಡಂಬರಕುಣಿತ, ಮಹಾಭೂತ ನೃತ್ಯ, ನಂದಿಧ್ವಜ ನೃತ್ಯ, ವೀರಭದ್ರ ವೀರಗಾಸೆ, ಎತ್ತರದ ಮರಕಾಲು ಕುಣಿತ, ಕೀಲುಕುದುರೆ ಕುಣಿತ, ಯಕ್ಷಗಾನ-ಹಾಸ್ಯಗೊಂಬೆಗಳ ವಿನೋದ, ಕುದುರೆ ಸಿಪಾಯಿಗಳ ಧ್ವಜವಂದನ ತಂಡಗಳ ಕಲಾ ಪ್ರದರ್ಶನದಿಂದ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಜನರ ಜನಮನ ಸೆಳೆದವು.

ಕಾಂಗ್ರೆಸ್ ಕಾರ್ಯಕರ್ತರ ವಿಜಯೋತ್ಸವ
ಕ.ಪ್ರ.ವಾರ್ತೆ ನ.ರಾ.ಪುರ  ಮೇ 13
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿರುವುದಕ್ಕೆ ಹರ್ಷ ವ್ಯಕ್ತಪಡಿಸಿ ತಾಲೂಕು ಕಾಂಗ್ರೆಸ್ ಸಮಿತಿ ವತಿಯಿಂದ ವಿಜಯೋತ್ಸವ ಆಚರಿಸಲಾಯಿತು.
ಪಟ್ಟಣದ ಕಾಂಗ್ರೆಸ್ ಕಚೇರಿಯಿಂದ ಹಳೇ ಮಂಡಗದ್ದೆ ಸರ್ಕಲ್‌ವರೆಗೆ ಕಾಂಗ್ರೆಸ್ ಕಾರ್ಯಕರ್ತರು ಮೆರವಣಿಗೆ ನಡೆಸಿದರು. ವಾಟರ್ ಟ್ಯಾಂಕ್ ಸರ್ಕಲ್ ಸಮೀಪ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಭರವಸೆ ಈಡೇರಿಸುತ್ತೇವೆ: ನಂತರ ನಡೆದ ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ.ಕೆ.ಪಿ. ಅಂಶುಮಂತ್ ಮಾತನಾಡಿ, ಬಿಜೆಪಿ ಸರ್ಕಾರದ ದುರಾಡಳಿತವನ್ನು ನೋಡಿ ಮತದಾರರು ಬಿಜೆಪಿ ಪಕ್ಷವನ್ನು ತಿರಸ್ಕರಿಸಿದ್ದಾರೆ. ಜನಪರವಾಗಿದ್ದ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದಾರೆ. ಈ ಬಾರಿ ಕಾಂಗ್ರೆಸ್ ಜನಪರವಾದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಪ್ರಣಾಳಿಕೆಯಲ್ಲಿರುವ ಭರವಸೆಯನ್ನು ಪ್ರಾಮಾಣಿಕವಾಗಿ ಈಡೇರಿಸುತ್ತೇವೆ ಎಂದರು.
ಶೃಂಗೇರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಸೋತಿದ್ದರೂ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಇರುವುದರಿಂದ ಕ್ಷೇತ್ರದಲ್ಲಿ ಸಮರ್ಥ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸುತ್ತೇವೆ ಎಂದು ತಿಳಿಸಿದರು.
ಮುಖಂಡರಾದ ಕೆ.ಎಂ. ಗಂಗಾಧರ್, ಆರ್. ಸದಾಶಿವ ಮಾತನಾಡಿ, ಸರ್ಕಾರದ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಜವಾಬ್ದಾರಿ ಪಕ್ಷದ ಕಾರ್ಯಕರ್ತರು ಹೊತ್ತುಕೊಳ್ಳಬೇಕಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಮುಖಂಡರಾದ ರಘುವೀರ್,ಅಪ್ರೋಜ್, ಲಕ್ಷ್ಮಣ ಶೆಟ್ಟರು, ಕೆ. ವಿಜಯಕುಮಾರ್, ಕೆ.ಎ.ಅಬೂಬಕರ್, ಟಿ.ವಿ. ರಾಜು, ಖಲೀಲ್ ಸಾಬ್, ಜುಬೇದ, ಇ.ಸಿ. ಜೋಯಿ, ಶೇವಿಯಾರ್ ಮತ್ತಿತರರು ಉಪಸ್ಥಿತರಿದ್ದರು.

ಬಸವ ಜಯಂತಿ ಕಾರ್ಯಕ್ರಮ
ಶಿವಮೊಗ್ಗ: ಬಸವಣ್ಣನವರ ಜಯಂತ್ಯುತ್ಸವದ ಪ್ರಯುಕ್ತ ಶಿವಮೊಗ್ಗ ಜಿಲ್ಲಾ ಬಸವ ಯುವಸೇನೆಯಿಂದ ಸೋಮವಾರ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಇಲ್ಲಿನ ಮೆಗ್ಗಾನ್ ಆಸ್ಪತ್ರೆಯಲ್ಲಿ ಸಂಘಟನೆಯ 30 ಕಾರ್ಯಕರ್ತರು ರಕ್ತದಾನ ಮಾಡಿದರಲ್ಲದೇ, ಆಸ್ಪತ್ರೆಯಲ್ಲಿನ ರೋಗಿಗಳಿಗೆ ಹಣ್ಣು ವಿತರಿಸಿದರು.
ಕಾರ್ಯಕ್ರಮದ ನೇತೃತ್ವವನ್ನು ಸೇನೆಯ ಜಿಲ್ಲಾಧ್ಯಕ್ಷ ಎಚ್.ಪಿ. ಗಿರೀಶ್ ವಹಿಸಿದ್ದರು.
ಜಿಲ್ಲಾ ಉಪಾಧ್ಯಕ್ಷ ಸುಪ್ರೀತ್ ರುದ್ರಮುನಿ, ಪ್ರಧಾನ ಕಾರ್ಯದರ್ಶಿ ಜಿ.ಎಸ್. ಚೇತನ್, ಎಸ್.ಪಿ. ಪ್ರದೀಪ್ ಕುಮಾರ್, ಮಧು, ಎನ್.ಎಸ್. ಪ್ರಕಾಶ್, ಶಿವಕುಮಾರ್, ರುದ್ರಸ್ವಾಮಿ, ಸಿದ್ದು ಮೊದಲಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement