ಸ್ಥಳೀಯ ಸಂಸ್ಥೆ ಆಡಳಿತದತ್ತ ಕೈ ಚಿತ್ತ
ಕ.ಪ್ರ.ವಾರ್ತ ಚಿಕ್ಕಮಗಳೂರ ಮೇ 13
ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಆಡಳಿತ ತನ್ನ ವಶಕ್ಕೆ ತೆಗೆದುಕೊಳ್ಳಲು ಕಾಂಗ್ರೆಸ್ ಕಾರ್ಯ ತಂತ್ರ ರೂಪಿಸುತ್ತಿದೆ.
ಇದಕ್ಕೆ ಅವಕಾಶ ಎಲ್ಲಿದಿಯೋ ಅಂತಹ ಸಂಸ್ಥೆಗಳಲ್ಲಿ ಈ ಪ್ರಯತ್ನ ನಡೆಸಲಾಗುವುದು. ಅದರಲ್ಲೂ ಚಿಕ್ಕಮಗಳೂರು ನಗರಸಭೆ ಕಾಂಗ್ರೆಸ್‌ನ ಟಾರ್ಗೆಟ್.
ಈ ಸಂಬಂಧ ತೆರೆಯ ಮರೆಯಲ್ಲಿ ಕಾಂಗ್ರೆಸ್ ಮುಖಂಡರು ಕಸರತ್ತು ನಡೆಸುತ್ತಿದ್ದು, ಕೆಲವು ನಗರಸಭಾ ಸದಸ್ಯರನ್ನು ಸಂಪರ್ಕಿಸಿದ್ದಾರೆ. ಈ ಪ್ರಯತ್ನ ನಗರಸಭಾ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆಯವರೆಗೂ ಮುಂದುವರೆಯಲಿದೆ.
ಜಿಲ್ಲೆಯಲ್ಲಿರುವ ಒಟ್ಟು 8 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಚಿಕ್ಕಮಗಳೂರು, ಕೊಪ್ಪ ಹಾಗೂ ಶೃಂಗೇರಿಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ನಿಶ್ಚಳವಾದ ಬಹುಮತ ಇದೆ. ಇನ್ನುಳಿದಂತೆ ಬೀರೂರು, ಕಡೂರು, ತರೀಕೆರೆಯಲ್ಲಿ ಕಾಂಗ್ರೆಸ್‌ಗೆ ಬಹುಮತ ಇದೆ. ಇನ್ನುಳಿದ ಎರಡು ಸ್ಥಳೀಯ ಸಂಸ್ಥೆಗಳಲ್ಲಿ ಯಾವುದೇ ರಾಜಕೀಯ ಪಕ್ಷಗಳಿಗೆ ಅಧಿಕಾರಕ್ಕೆ ಬರಲು ಸ್ಪಷ್ಟವಾದ ಬಹುಮತ ಇಲ್ಲ.
ಅತಂತ್ರ ಇರುವ ಸ್ಥಳೀಯ ಸಂಸ್ಥೆಗಳ ಜತೆಗೆ ಬಿಜೆಪಿ ಹೆಚ್ಚು ಸ್ಥಾನಗಳನ್ನು ಪಡೆದಿರುವ ಸಂಸ್ಥೆಗಳಲ್ಲಿ ಕಾಂಗ್ರೆಸ್ ಕೈ ಹಾಕುತ್ತಿದೆ.
ನಗರಸಭೆ ಟಾರ್ಗೆಟ್: ಬಿಜೆಪಿ ಬಹುಮತ ಪಡೆದಿರುವ ಮೂರು ಸ್ಥಳೀಯ ಸಂಸ್ಥೆಗಳ ಪೈಕಿ ಕಾಂಗ್ರೆಸ್‌ನ ಟಾರ್ಗೇಟ್ ಚಿಕ್ಕಮಗಳೂರು ನಗರಸಭೆ.
ಇಲ್ಲಿನ 35 ವಾರ್ಡ್‌ಗಳಲ್ಲಿ ಬಿಜೆಪಿ 18 ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿದೆ. ನಗರಸಭೆಯಲ್ಲಿ ಅಧಿಕಾರಕ್ಕೆ ಬರಲು 18 ಸಂಖ್ಯಾ ಬಲ ಸಾಕು. ಈ ಸಂಖ್ಯೆ ಬಿಜೆಪಿಯಲ್ಲಿದೆ. ಅದುದರಿಂದ ಅಧಿಕಾರಕ್ಕೆ ಬರಲು ಯಾವುದೇ ಅಡಚಣೆ ಇಲ್ಲ, ಆದರೂ ಕಾಂಗ್ರೆಸ್ ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಕೈ ಹಾಕುವ ಸಾಧ್ಯತೆ ಇದೆ.
ಚಿಕ್ಕಮಗಳೂರು ನಗರಸಭೆಯಲ್ಲಿ ಕಾಂಗ್ರೆಸ್- 10, ಜೆಡಿಎಸ್- 2, ಪಕ್ಷೇತರರು 5 ಮಂದಿ ಇದ್ದಾರೆ, ಪಕ್ಷೇತರರಲ್ಲಿ ಕೆಲವರು ಬಿಜೆಪಿ ಬೆಂಬಲಿತರು ಸಹ ಇದ್ದಾರೆ. ಕಾಂಗ್ರೆಸ್, ಜೆಡಿಎಸ್ ಮತ್ತು ಪಕ್ಷೇತರ ಎಲ್ಲಾ ಸದಸ್ಯರು ಒಂದಾದರೆ ಸದಸ್ಯರ ಸಂಖ್ಯಾ ಬಲ 17 ಆಗಲಿದೆ. ಬಿಜೆಪಿಯಲ್ಲಿರುವುದು 18 ಮಂದಿ ಸದಸ್ಯರು. ಜತೆಗೆ ಸ್ಥಳೀಯ ಶಾಸಕರು ನಗರಸಭೆಗೆ ಮತ ಹಾಕುವ ಅಧಿಕಾರ ಹೊಂದಿದ್ದರಿಂದ ಅಲ್ಲಿಗೆ ಬಿಜೆಪಿಯ ಸಂಖ್ಯಾ ಬಲ 19ಕ್ಕೆ ಏರಲಿದೆ.
ಲೋಕಸಭಾ ಸದಸ್ಯರು ಹಾಗೂ ವಿಧಾನಪರಿಷತ್ ಸದಸ್ಯರು ಕಾಂಗ್ರೆಸ್ ಪಕ್ಷದವರಾಗಿದ್ದು, ಇವರು ಕಾಂಗ್ರೆಸ್ ಪರವಾಗಿ ವೋಟ್ ಮಾಡಿದರೆ ಸಂಖ್ಯಾ ಬಲ 19ಕ್ಕೆ ಏರಲಿದೆ. ಅಲ್ಲಿಗೆ ಸದಸ್ಯರ ಸಂಖ್ಯೆ ಪರಸ್ಪರ ಸಮಾನಂತರವಾಗಲಿದೆ.
ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯ ವೇಳೆಯಲ್ಲಿ ಬಿಜೆಪಿಯ ಯಾರೇ ಒಬ್ಬ ಸದಸ್ಯರು ಕಾಂಗ್ರೆಸ್‌ಗೆ ಬೆಂಬಲ ಸೂಚಿದರೆ ಅಲ್ಲಿಗೆ ಕಾಂಗ್ರೆಸ್‌ನ ಸಂಖ್ಯಾ ಬಲ ಹೆಚ್ಚಳವಾಗಲಿದೆ. ಆಗ ಅಧಿಕಾರದ ಗದ್ದುಗೆ ಏರುವ ದಾರಿ ಸುಗಮವಾಗಲಿದೆ.
ಸದಸ್ಯರಿಗೆ ವಿಪ್ ಜಾರಿ: ಚುನಾವಣೆಯ ಸಂದರ್ಭದಲ್ಲಿ ಎಲ್ಲಾ ರಾಜಕೀಯ ಪಕ್ಷದವರು ತಮ್ಮ ಪಕ್ಷದ ಸದಸ್ಯರಿಗೆ ವಿಪ್ ಜಾರಿ ಮಾಡುತ್ತವೆ. ಇದನ್ನು ಉಲ್ಲಂಘನೆ ಮಾಡಿ ಬೇರೆ ಪಕ್ಷಕ್ಕೆ ಮತ ಹಾಕಿದರೆ ಅವರನ್ನು ಪಕ್ಷಾಂತರ ನಿಷೇಧ ಕಾಯ್ದೆಯಡಿ 6 ವರ್ಷಗಳ ಕಾಲ ಸದಸ್ಯತ್ವದಿಂದ ಉಚ್ಛಾಟಿಸಲು ಅವಕಾಶ ಇರುವ ಅಸ್ತ್ರವನ್ನು ಪ್ರಯೋಗ ಮಾಡಲಾಗುವುದು.
ಈ ಭಯದ ಬಾಣವನ್ನು ಸದಸ್ಯರ ಮೇಲೆ ಬಿಟ್ಟು ಬೇರೆ ಪಕ್ಷಗಳಿಗೆ ಬೆಂಬಲ ಸೂಚಿಸದಂತೆ ಬಿಜೆಪಿ ತಡೆ ಹಾಕಬಹುದು. ಈ ಸಂದರ್ಭದಲ್ಲಿ ಬಿಜೆಪಿ ಸದಸ್ಯರು ಬುದ್ಧಿವಂತಿಕೆಯಿಂದ ಬೇರೆ ಕಾರಣವನ್ನು ನೀಡಿ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆಯಲ್ಲಿ ಗೈರು ಹಾಜರಾದರೆ, ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಆಗುವುದಿಲ್ಲ.
ಇವೆಲ್ಲವುದನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಪಕ್ಷ ಬಿಜೆಪಿಯ ಕೆಲವು ಸದಸ್ಯರನ್ನು ತನ್ನತ್ತ ಸೆಳೆಯಲು ಕಾರ್ಯತಂತ್ರ ಹೆಣೆಯುತ್ತಿದೆ.
ನಿರೀಕ್ಷಿತ: ರಾಜ್ಯದಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆಯೋ ಆ ಪಕ್ಷ ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರಕ್ಕೆ ಬರಲು ಹಲವು ಮಾರ್ಗದಲ್ಲಿ ಪ್ರಯತ್ನ ನಡೆಸುತ್ತದೆ.
ಇದು, ಸಹಜವಾದ ಪ್ರಕ್ರಿಯೆ. ಬೇರೆ ಪಕ್ಷಕ್ಕೆ ಹೋದರೆ ಅಧಿಕಾರ ಸಿಗುತ್ತದೆ ಎಂದರೆ ಯಾರೂ ಕೂಡ ಬೇಡ ಎಂದು ಹೇಳುವುದಿಲ್ಲ. ಹಿಂದಿನ ಸರ್ಕಾರದ ಅವಧಿಯಲ್ಲೂ ಈ ರೀತಿಯ ಬೆಳವಣಿಗೆಗಳು ಬರೀ ನಗರ ಸ್ಥಳೀಯ ಸಂಸ್ಥೆಗಳಷ್ಟೇ ಅಲ್ಲ, ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ, ಗ್ರಾಮ ಪಂಚಾಯ್ತಿಯಲ್ಲೂ ನಡೆದಿವೆ.
ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಮುಗಿದ್ದು, ಅಧ್ಯಕ್ಷ- ಉಪಾಧ್ಯಕ್ಷರ ಮೀಸಲಾತಿ ಪ್ರಕಟವಾಗುವ ಮೊದಲೇ ವಿಧಾನಸಭಾ ಚುನಾವಣೆ ನಡೆದಿದ್ದು, ಮುಂದಿನ ದಿನಗಳಲ್ಲಿ ಸ್ಥಳೀಯ ಸಂಸ್ಥೆಗಳ ಮೀಸಲಾತಿ ಪ್ರಕಟಗೊಳ್ಳಲಿದೆ. ಅದುದರಿಂದ ಸಾಧ್ಯತೆವಿರುವ ಕಡೆಗಳಲ್ಲಿ ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಲು ಕಾರ್ಯತಂತ್ರ ರೂಪಿಸುತ್ತಿದೆ.