ಇ-ಪಡಿತರ ಇದ್ರೂ ಆನ್ಲೈನ್ ಅವಾಂತರ
ಬಿಜೆಪಿ ಸರ್ಕಾರದ ಆಡಳಿತದ ಕೊನೆಯಲ್ಲಿ ಜಾರಿಗೆ ತಂದ ಇ- ಪಡಿತರ ವಿತರಣಾ ವ್ಯವಸ್ಥೆಗೆ ಗ್ರಹಣ ಹಿಡಿದಿದೆ.
-ಆರ್. ತಾರಾನಾಥ್
ಕ.ಪ್ರ. ವಾರ್ತೆ ಚಿಕ್ಕಮಗಳೂರು ಮೇ 24
ಬಿಜೆಪಿ ಸರ್ಕಾರದ ಆಡಳಿತದ ಕೊನೆಯಲ್ಲಿ ಜಾರಿಗೆ ತಂದ ಇ- ಪಡಿತರ ವಿತರಣಾ ವ್ಯವಸ್ಥೆಗೆ ಗ್ರಹಣ ಹಿಡಿದಿದೆ.
ಈ ಹೊಸ ಪದ್ಧತಿ ಪಡಿತರ ಚೀಟಿಯನ್ನು ಹೊಂದಿದವರಿಗೆ ಮಾತ್ರವಲ್ಲ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯೂ ಸೇರಿದಂತೆ ಆನ್ಲೈನ್ ಸಿಸ್ಟಮ್ನ ಇ- ಪಡಿತರ ಯಂತ್ರಗಳನ್ನು ಅಳವಡಿಸಿರುವ ಸಂಸ್ಥೆಗಳಿಗೂ ದೊಡ್ಡ ತಲೆನೋವಾಗಿದೆ. ಇದರ ನಡುವೆ ಸರ್ಕಾರ ಪಡಿತರ ವಿತರಣೆಯಲ್ಲಿ ಕೆಲವು ಮಾರ್ಪಾಡು ತರುತ್ತಿರುವುದು ಹಾಲಿ ಇರುವ ವ್ಯವಸ್ಥೆ ನಿಭಾಯಿಸುವುದು ಕಷ್ಟವಾಗಿದೆ. ಅಷ್ಟೇ ಅಲ್ಲ ಈ ವ್ಯವಸ್ಥೆ ಸರಿದಾರಿಗೆ ತರುವ ನಿಟ್ಟಿನಲ್ಲಿ ಯಾವುದೇ ಪ್ರಯತ್ನಗಳೂ ಸರ್ಕಾರದ ಮಟ್ಟದಲ್ಲಿ ಆಗುತ್ತಿಲ್ಲ.
ಇ- ಪಡಿತರ ಯಂತ್ರ: ಪಡಿತರ ಚೀಟಿದಾರರಿಗೆ ವಿತರಣೆ ಆಗಲು ಬರುತ್ತಿದ್ದ ಅಕ್ಕಿ ಸೇರಿದಂತೆ ಇತರೆ ವಸ್ತುಗಳು ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿರುವ ದಂಧೆಗೆ ಕಡಿವಾಣ ಹಾಕಲು ಇ- ಪಡಿತರ ಯಂತ್ರವನ್ನು ನ್ಯಾಯಬೆಲೆ ಅಂಗಡಿಗಳಿಗೆ ಅಳವಡಿಸಲಾಗುತ್ತಿದೆ. ಮೊದಲ ಹಂತವಾಗಿ ತುಮಕೂರು ಹಾಗೂ ಚಿಕ್ಕಮಗಳೂರು ಜಿಲ್ಲೆಗಳನ್ನು ಸರ್ಕಾರ ಆಯ್ಕೆ ಮಾಡಿಕೊಂಡಿತು.
ಈ ಯಂತ್ರದಲ್ಲಿ ಪಡಿತರ ಚೀಟಿ ಕ್ರಮ ಸಂಖ್ಯೆ ನಮೂದಾಗಿರುತ್ತದೆ. ಗ್ರಾಹಕರು ಪಡಿತರ ಪಡೆದುಕೊಳ್ಳಲು ನ್ಯಾಯಬೆಲೆ ಅಂಗಡಿಗೆ ಬಂದು ಬಯೋವುಟ್ರಿಕ್ ನೀಡಿದರೆ, ಅದು, ಪಡಿತರ ಚೀಟಿದಾರರ ಹೆಸರು ತೋರಿಸುತ್ತದೆ. ಜತೆಗೆ ಪಡೆದಿರುವ ಪದಾರ್ಥಗಳ ಒಟ್ಟು ಮೊಬಲನ್ನು ಬಿಲ್ ಸಹಿತ ನೀಡುತ್ತದೆ. ಈ ಮೂಲಕ ಸರ್ಕಾರವು ಇದನ್ನು ರಾಜ್ಯಾದ್ಯಂತ ವಿಸ್ತರಣೆ ಮಾಡಿ ರಾಜ್ಯದ ಎಲ್ಲಾ ನ್ಯಾಯ ಬೆಲೆ ಅಂಗಡಿಗಳಿಂದ ಪಡಿತರ ವಿತರಣಾ ಮಾಹಿತಿ ಪಡೆಯುವ ಉದ್ದೇಶವಾಗಿತ್ತು.
ಆದರೆ, ಇದು ಆರಂಭದಲ್ಲೇ ಸಮಸ್ಯೆಗಳನ್ನು ಎದುರಿಸುತ್ತಿದೆ. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಕ್ರಮ ಆಗುತ್ತಿಲ್ಲ. ಕಾರಣ- ಗ್ರಾಮಾಂತರ ಪ್ರದೇಶದಲ್ಲಿರುವ ಈ ಯಂತ್ರಗಳ ಮಾಹಿತಿ ಸಕಾಲದಲ್ಲಿ ಲಭ್ಯವಾಗುತ್ತಿಲ್ಲ. ಪಶ್ಚಿಮಘಟ್ಟ ಪ್ರದೇಶವಾದ ಚಿಕ್ಕಮಗಳೂರು ಜಿಲ್ಲೆಗೆ ಇದೊಂದು ಸಮಸ್ಯೆಯಾಗಿದೆ.
ವೋಡಾಫೋನ್ ಕಂಪನಿ: ಇ- ಪಡಿತರ ಯಂತ್ರಗಳಿಗೆ ವೋಡಾಪೋನ್ ಕಂಪನಿಯ ಸಿಮ್ಗಳನ್ನು ಹಾಕಲಾಗಿದೆ. ಆದರೆ, ಗ್ರಾಮಾಂತರ ಪ್ರದೇಶಗಳಲ್ಲಿ ಈ ಕಂಪನಿಯ ನೆಟ್ ವರ್ಕ್ ಅಷ್ಟಕ್ಕಷ್ಟೇ. ಆದ್ದರಿಂದ ಪ್ರತಿದಿನದ ಮಾಹಿತಿ ದಾಖಲು ಮಾಡಲು ಸಾಧ್ಯವಾಗುತ್ತಿಲ್ಲ.
ತುಮಕೂರು ಜಿಲ್ಲೆಯಲ್ಲಿ 1095 ಯಂತ್ರಗಳನ್ನು ಅಳವಡಿಸಲಾಗಿದ್ದು, ಇವುಗಳಲ್ಲಿ 400 ಯಂತ್ರಗಳ ಮಾಹಿತಿ ಮಾತ್ರ ಸಿಗುತ್ತಿದೆ. ಅದೇ ರೀತಿ ಚಿಕ್ಕಮಗಳೂರು ಜಿಲ್ಲೆಯ 7 ತಾಲೂಕುಗಳಲ್ಲಿ 350 ಯಂತ್ರಗಳನ್ನು ಅಳವಡಿಸಲಾಗಿದ್ದು, ಇವುಗಳಲ್ಲಿ 40 ಯಂತ್ರಗಳ ಮಾಹಿತಿ ಲಭ್ಯವಾಗುತ್ತಿದೆ. ಇನ್ನುಳಿದ ಯಂತ್ರಗಳ ಪಡಿತರ ಪಡೆದಿರುವವರ ಮಾಹಿತಿ ದಾಖಲಾಗುತ್ತಿಲ್ಲ. ನೆಟ್ವರ್ಕ್ ಸಿಗದೆ ಇರುವ ಕಡೆಗಳಲ್ಲಿ ಯಂತ್ರಗಳ ಬಗ್ಗೆ ಇ- ಪಡಿತರ ಯಂತ್ರಗಳನ್ನು ಅಳವಡಿಸಿರುವ ಎಸ್ಎ (ಇಎಸ್ಎಸ್ಎಎಸ್ಇ) ಸಂಸ್ಥೆ ರಾಜ್ಯ ಸರ್ಕಾರಕ್ಕೆ ವರದಿ ನೀಡಿದೆ. ಆದರೆ, ಈವರೆಗೆ ಯಾವುದೇ ಪರ್ಯಾಯ ಕ್ರಮ ತೆಗೆದುಕೊಂಡಿಲ್ಲ.
ಈ ಅವ್ಯವಸ್ಥೆ ಸರಿಯಾಗಬೇಕಾದರೆ ಗ್ರಾಮಾಂತರ ಪ್ರದೇಶಗಳಲ್ಲೂ ನೆಟ್ ವರ್ಕ್ ಇರುವ ಸಂಸ್ಥೆಗಳಿಗೆ ಇದರ ಜವಬ್ದಾರಿ ನೀಡುವ ಕೆಲಸ ಸರ್ಕಾರದಿಂದ ಆಗಬೇಕು. ಹೊಸದಾಗಿ ಅಳವಡಿಸುತ್ತಿರುವ ಇ- ಪಡಿತರಯಂತ್ರಗಳಿಗೆ ಟೂವೇ ಸಾಫ್ಟ್ವೇರ್ ಅಳವಡಿಸಲಾಗುತ್ತಿದೆ. ನೆಟ್ವರ್ಕ್ ಸರಿ ಹೊಂದಿದರೂ ಈ ಹೊಸ ಕ್ರಮ ಅಷ್ಟು ಫಲಪ್ರದವಾಗುವ ಲಕ್ಷಣ ಕಾಣುತ್ತಿಲ್ಲ.
ನಾಲ್ಕು ಜಿಲ್ಲೆ
ತುಮಕೂರು, ಚಿಕ್ಕಮಗಳೂರಿನಲ್ಲಿ ಇ- ಪಡಿತರ ಯಂತ್ರಗಳನ್ನು ಅಳವಡಿಸಲಾಗಿದ್ದು, ಎರಡನೇ ಹಂತದಲ್ಲಿ ಹುಬ್ಬಳ್ಳಿ, ಬೆಳಗಾವಿ, ಧಾರವಾಡ ಹಾಗೂ ಮೈಸೂರು ಜಿಲ್ಲೆ ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಸಂಬಂಧ ಇ- ಪಡಿತರ ಯಂತ್ರಗಳ ವಿತರಣೆಗೆ ಟೆಂಡರ್ ಸಹ ಕರೆಯಲಾಗಿದೆ.