ನಕ್ಸಲ್ ಪ್ರದೇಶಾಭಿವೃದ್ಧಿ ಹಣ ಅನ್ಯ ಉದ್ದೇಶಕ್ಕಿಲ್ಲ
-ಆರ್. ತಾರಾನಾಥ್
ಚಿಕ್ಕಮಗಳೂರು: ಜಿಲ್ಲೆಯ ನಕ್ಸಲ್ ಪೀಡಿತ ಪ್ರದೇಶಗಳ ಅಭಿವೃದ್ಧಿಗೆ ಬಿಡುಗಡೆಯಾದ ಹಣವನ್ನು ಬೇರೆ ಉದ್ದೇಶಗಳಿಗೆ ಬಳಸುವುದನ್ನು ಜಿಲ್ಲಾಡಳಿತ ಕೈಬಿಟ್ಟಿದೆ.
ನಕ್ಸಲ್ ಪೀಡಿತ ಪ್ರದೇಶವಿರುವ ಮೂಡಿಗೆರೆ, ಶೃಂಗೇರಿ ಹಾಗೂ ಕೊಪ್ಪ ತಾಲೂಕುಗಳಿಗೆ ರಾಜ್ಯ ಸರ್ಕಾರ 15 ಕೋಟಿ ಮಂಜೂರು ಮಾಡಿದ್ದು, ಈ ಪೈಕಿ 13.75 ಕೋಟಿ ಬಿಡುಗಡೆಯಾಗಿದೆ.
ಸರ್ಕಾರ ಬಿಡುಗಡೆ ಮಾಡಿದ ಹಣದಲ್ಲಿ ಈ ಮೂರು ತಾಲೂಕುಗಳಲ್ಲಿ 129 ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದ್ದು, ಇದರಲ್ಲಿ 80 ಕಾಮಗಾರಿಗಳಿಗೆ ಆಡಳಿತಾತ್ಮಕ ಮಂಜೂರಾತಿ ನೀಡಿ, ಈ ಕಾಮಗಾರಿಗಳನ್ನು ನಿರ್ಮಿತಿ ಕೇಂದ್ರ ಹಾಗೂ ಭೂ ಸೇನಾ ನಿಗಮಕ್ಕೆ ವಹಿಸಲಾಗಿದ್ದು, ಬಹುತೇಕ ಕಾಮಗಾರಿಗಳು ಮುಗಿಯುವ ಹಂತಕ್ಕೆ ಬಂದಿವೆ.
ಮಂಜೂರಾತಿ ನೀಡಿರುವ 129 ಕಾಮಗಾರಿಗಳ ಪೈಕಿ 20 ಕಾಮಗಾರಿಗಳನ್ನು ಕೈಬಿಡಲಾಗಿದೆ. ಇವುಗಳಲ್ಲಿ ನಕ್ಸಲ್ ನಿಗ್ರಹ ದಳದ ಕ್ಯಾಂಪ್ಗಳಿಗೆ ಮೂಲಭೂತ ಸೌಲಭ್ಯ ಒದಗಿಸುವುದು ಹಾಗೂ ಟರ್ಬೋ ಯಂತ್ರಗಳ ಮೂಲಕ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವುದನ್ನು ಜಿಲ್ಲಾಡಳಿತ ಕೈಬಿಟ್ಟಿದೆ.
ಕೈಬಿಟ್ಟಿರುವ 20 ಕಾಮಗಾರಿಗಳ 1.73 ಕೋಟಿಯನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕಗೊಂಡ 161 ಶಿಕ್ಷಕರಿಗೆ ವೇತನ ನೀಡಲು 60.50 ಲಕ್ಷ ಕಾಯ್ದಿರಿಸಲಾಗಿದೆ ಹಾಗೂ ಕ್ರಿಯಾ ಯೋಜನೆಯಲ್ಲಿ ಅನುಮೋದನೆಗೊಂಡ ಕಾಮಗಾರಿಗಳಿಗೆ ಹೆಚ್ಚುವರಿಯಾಗಿ 20.38 ಲಕ್ಷ ಖರ್ಚು ಮಾಡಲಾಗಿದ್ದು, ಇನ್ನುಳಿದ 92.12 ಲಕ್ಷ ರುಪಾಯಿಯನ್ನು ಹೊಸ ಕಾಮಗಾರಿಗೆ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ.
ಎಎನ್ಎಫ್: ಜಿಲ್ಲೆಯ ಮೂರು ತಾಲೂಕುಗಳಿಗೆ ರಾಜ್ಯ ಸರ್ಕಾರ 3-9-2012 ರಂದು 15 ಕೋಟಿ ಮಂಜೂರು ಮಾಡಿದ ಸಂದರ್ಭದಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸುವಾಗ ಶೃಂಗೇರಿ ತಾಲೂಕಿನ ಕೆರೆಕಟ್ಟೆ, ದೇವಾಲೆಕೊಪ್ಪ ಮತ್ತು ಕಿಗ್ಗಾದಲ್ಲಿರುವ ಎಎನ್ಎಫ್ ಕ್ಯಾಂಪ್ಗಳ ವಸತಿ ಗೃಹ ನಿರ್ಮಾಣ, ಸರ್ಚ್ಲೈಟ್ ಹಾಕುವುದು, ಕ್ಯಾಂಪ್ಗೆ ಕಾಂಪೌಂಡ್ ನಿರ್ಮಾಣ, ಕಿಚನ್ ಮತ್ತು ಕ್ಯಾಂಪ್ ಬಿಲ್ಡಿಂಗ್ ದುರಸ್ತಿ, ಕ್ಯಾಂಪಿನ ಮೇಲ್ಚಾವಣಿ ದುರಸ್ತಿ, ಹೆಚ್ಚುವರಿ ಕೊಠಡಿ ನಿರ್ಮಾಣ, ಸೆಂಟ್ರಿ ನಿರ್ಮಾಣ, ಸೋಲಾರ್ ದೀಪಗಳ ಅಳವಡಿಕೆಗೆ 90 ಲಕ್ಷವನ್ನು ಮೀಸಲಿಡಲಾಗಿತ್ತು.
ನಕ್ಸಲ್ ಪ್ರದೇಶಗಳ ಅಭಿವೃದ್ಧಿಗೆ ಬಿಡುಗಡೆಯಾಗಿರುವ ಹಣವನ್ನು ಎಎನ್ಎಫ್ ಕ್ಯಾಂಪಿಗೆ ಬಳಕೆ ಮಾಡುತ್ತಿರುವ ಬಗ್ಗೆ “OÚ«ÚsÚ®Úúڒ¥ÚÆÇ ವರದಿ ಪ್ರಕಟಗೊಂಡ ಹಿನ್ನಲೆಯಲ್ಲಿ ರಾಜ್ಯ ಲೆಕ್ಕ ಪರಿಶೋಧನಾ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿ ಎಎನ್ಎಫ್ ಕ್ಯಾಂಪಿಗೆ ಹಣ ಬಳಕೆ ಮಾಡಬಾರದೆಂದು ತಡೆ ಹಾಕಿತು. ಅದುದರಿಂದ ಜಿಲ್ಲಾಡಳಿತ ಎಎನ್ಎಫ್ ಕ್ಯಾಂಪಿಗೆ ಬಳಕೆ ಮಾಡಲು ಮೀಸಲಿಟ್ಟಿದ್ದ ಹಣವನ್ನು ನಕ್ಸಲ್ ಪೀಡಿತ ಪ್ರದೇಶಗಳ ಅಭಿವೃದ್ದಿಗೆ ಬಳಸಿಕೊಳ್ಳಲು ಆದೇಶ ಹೊರಡಿಸಿ, ಇದೀಗ ಬೇರೆ ಕಾಮಗಾರಿಗಳಿಗೆ ಈ ಹಣವನ್ನು ಬಳಸಿಕೊಳ್ಳುತ್ತಿದೆ.
ನಿರ್ಲಕ್ಷ: ನಕ್ಸಲ್ ಪೀಡಿತ ಪ್ರದೇಶದಲ್ಲಿ ರಸ್ತೆ, ಸೇತುವೆ ನಿರ್ಮಾಣ, ಕುಡಿಯುವ ನೀರು, ಬೀದಿ ದೀಪದ ವ್ಯವಸ್ಥೆ ಸೇರಿದಂತೆ ಇತರೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಕೆಲವು ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು 8 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಇದರ ಹೊಣೆಯನ್ನು ಮೆಸ್ಕಾಂ ಇಲಾಖೆಗೆ ವಹಿಸಲಾಗಿತ್ತು. ಆದರೆ, ಮೆಸ್ಕಾಂ ಇಲಾಖೆ ತಾಂತ್ರಿಕ ಕಾರಣವನ್ನು ಮುಂದಿಟ್ಟುಕೊಂಡು ಈವರೆಗೆ ಒಂದೂ ಕಾಮಗಾರಿಯನ್ನು ಸಹ ಕೈಗೆತ್ತಿಕೊಂಡಿಲ್ಲ. ಈ ಸಂಬಂಧ ಜಿಲ್ಲಾಡಳಿತ ಹಲವು ಬಾರಿ ಮೆಸ್ಕಾಂನೊಂದಿಗೆ ಪತ್ರ ವ್ಯವಹಾರ ನಡೆಸಿದರೂ ಪ್ರಯೋಜನವಾಗಿಲ್ಲ.
ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಮೂಲಭೂತ ಸೌಲಭ್ಯಗಳಿಗೆ ಹಣ ಬಿಡುಗಡೆ ಮಾಡಿ, ಆ ಪ್ರದೇಶಗಳನ್ನು ಅಭಿವೃದ್ಧಿ ಪಡಿಸಿದರೆ ನಕ್ಸಲ್ ಸಮಸ್ಯೆ ಪರಿಹಾರವಾಗಲಿದೆ ಎಂಬ ಉದ್ದೇಶದಿಂದ ಸರ್ಕಾರ ಹಣ ಬಿಡುಗಡೆ ಮಾಡಿದೆ. ಮೆಸ್ಕಾಂ ಇಲಾಖೆ ಸಮಸ್ಯೆಯ ಪರಿಹಾರಕ್ಕಾಗಿ ಸರ್ಕಾರದೊಂದಿಗೆ ಕೈ ಜೋಡಿಸದೆ ಇರುವುದು ವಿಪರ್ಯಾಸ.