ಮಾನವ ಹಕ್ಕು ರಕ್ಷಣೆ ಎಲ್ಲರ ಕರ್ತವ್ಯ: ಬಾಲಕೃಷ್ಣ
ಶೃಂಗೇರಿ: ಮಾನವ ಜನ್ಮ ಶ್ರೇಷ್ಠ ಜನ್ಮವಾಗಿದ್ದು, ಮಾನವ ಹಕ್ಕು ಪವಿತ್ರವಾದುದು. ಅದನ್ನು ರಕ್ಷಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದು ಮಂಗಳೂರಿನ ಮಾನವ ಹಕ್ಕು ಹೋರಾಟಗಾರ ಕೊಲ್ಯಾಡಿ ಬಾಲಕೃಷ್ಣ ಅವರು ಹೇಳಿದರು.
ಅವರು ತಾಲೂಕಿನ ಉಳವಳ್ಳಿಯ ಕೊರನಕೊಡಿಗೆಯಲ್ಲಿ ಆಯೋಜಿಸಲಾಗಿದ್ದ ಮಾನವ ಹಕ್ಕುಗಳ ರಕ್ಷಣೆ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿ, ಹಿಂಸೆ, ದೌರ್ಜನ್ಯ, ಬಡತನ, ಹಸಿವುಗಳಿಂದಾಗಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ.
ನಶಿಸುತ್ತಿರುವ ಮಾನವೀಯ ಮೌಲ್ಯಗಳಿಂದಾಗಿ ಮಾನವ ಹಕ್ಕು ಉಲ್ಲಂಘನೆ ಪ್ರಕರಣಗಳು ಹೆಚ್ಚಾಗುತ್ತಿದೆ ಎಂದರು.
ಅಸ್ತವ್ಯಸ್ತ: ವಿಶ್ವದಾದ್ಯಂತ ಭಯೋತ್ಪಾದನೆ, ಅಶಾಂತಿ, ಅಸಹಕಾರಗಳಿಂದಾಗಿ ಮಾನವನ ಜೀವನ ಅಸ್ತವ್ಯಸ್ತವಾಗಿದೆ. ದುರುದ್ದೇಶಗಳಿಗೆ ಬಲಿಯಾದ ನಾಗರಿಕರ ರಕ್ಷಣೆಗೆ ಮಾನವ ಹಕ್ಕು ಹೋರಾಟ ಸಮಿತಿ ಸದಸ್ಯರು ಮುಂದಾಗಬೇಕು ಎಂದವರು ಹೇಳಿದರು.
ಜನರ ಬದುಕುವ, ಆಹಾರದ, ಕಾರ್ಮಿಕರ, ಮಹಿಳಾ ಮತ್ತು ಮಕ್ಕಳ, ಅಂಗವಿಕಲರ ಹಕ್ಕು ಮತ್ತಿತರರ ಹಕ್ಕುಗಳ ರಕ್ಷಣೆಗೆ ಪ್ರಾಮಾಣಿಕವಾಗಿ ದುಡಿಯುವುದು ಸಂಸ್ಥೆಯ ಪ್ರತಿಯೊಬ್ಬ ಸದಸ್ಯನ ಆದ್ಯ ಕರ್ತವ್ಯವಾಗಿರಬೇಕು.
ಜೊತೆಗೆ ಜನಜಾಗೃತಿ ಮೂಡಿಸುವ ಕೆಲಸ ನಡೆಯಬೇಕಿದೆ. ನಮ್ಮ ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಮೂಲ ಹಕ್ಕುಗಳು ಹಾಗೂ ಕರ್ತವ್ಯಗಳನ್ನು ದಯಪಾಲಿಸಲಾಗಿದೆ. ಅವರ ಹಕ್ಕು ಕರ್ತವ್ಯಗಳಿಗೆ ಅಡ್ಡಿಪಡಿಸಬಾರದು ಎಂದರು.
ಇದೇ ಸಂದರ್ಭದಲ್ಲಿ ಎಚ್‌ಆರ್ ಎಫ್‌ಐ ಚಿಕ್ಕಮಗಳೂರು ಸಂಸ್ಥೆಯ ಜಿಲ್ಲಾಧ್ಯಕ್ಷ ವಿಕ್ಟರಿ ಪಿಂಟೋ ಅವರಿಗೆ ಮಾನವ ಹಕ್ಕುಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಶೃಂಗೇರಿ ಘಟಕದ ನಿಸಾರ್ ಅಹಮದ್, ಜೆ. ಗಿರಿಧರ್, ಅನ್ನಪೂರ್ಣ, ಶೋಭಾ ಮೊದಲಾದವರು ಉಪಸ್ಥಿತರಿದ್ದರು.