ರಕ್ತದಾನದಿಂದ ಆರೋಗ್ಯವೂ ಚೈತನ್ಯದಾಯಕ
ತರೀಕೆರೆ: ರಕ್ತದಾನದಿಂದ ಆರೋಗ್ಯವೂ ಚೇತನವಾಗುತ್ತದೆ ಎಂದು ತರೀಕೆರೆ ಉಪವಿಭಾಗಾಧಿಕಾರಿ ಅನುರಾಧ ತಿಳಿಸಿದರು. ಮಂಗಳವಾರ ರಾಜ್ಯ ಸರ್ಕಾರಿ ನೌಕರರ ಸಂಘ, ತರೀಕೆರೆ ಶಾಖೆ, ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ಮತ್ತು ಆರೋಗ್ಯ ಇಲಾಖೆ ರಕ್ತನಿಧಿ ಕೇಂದ್ರ ಶಿವಮೊಗ್ಗ ವತಿಯಿಂದ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಸಭಾಂಗಣದಲ್ಲಿ ನಡೆದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಸಮಾಜ ಸೇವೆ: ಪ್ರಸವ ಸಂದರ್ಭದಲ್ಲಿ ಮಹಿಳೆಗೆ ಹೆಚ್ಚು ರಕ್ತ ಅವಶ್ಯಕತೆ ಇರುತ್ತದೆ. ರಕ್ತದಾನ ಬಹಳ ಒಳ್ಳೆಯ ಸಮಾಜ ಸೇವೆ. ರಕ್ತದಾನದಿಂದ ನಮ್ಮಲ್ಲಿ ಹೊಸ ರಕ್ತ ಕಣಗಳು ಹುಟ್ಟಿ ನಮ್ಮ ಆರೋಗ್ಯ ಚೇತನಗೊಳ್ಳುತ್ತದೆ. ರಕ್ತದಾನಿಗಳ ನೋಂದಣಿ ಅಗತ್ಯ ಎಂದು ತಿಳಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಹರಿಪ್ರಸಾದ್ ಮಾತನಾಡಿ, ಸತ್ಕಾರ್ಯದ ಮೂಲಕ ನಾವು ಸಮಾಜದ ಋಣ ತೀರಿಸಬೇಕು ಎಂದು ತಿಳಿಸಿದರು. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಬಿ. ರಾಮಚಂದ್ರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಲೂಕು ಆರೋಗ್ಯಾಧಿಕಾರಿ ಡಾ.ಚಂದ್ರಶೇಖರ್, ಆಡಳಿತ ವೈದ್ಯಾಧಿಕಾರಿ ಡಾ.ಮಲ್ಲಿಕಾರ್ಜುನ್, ಡಾ.ಹರ್ಷ, ತಹಸೀಲ್ದಾರ್ ಶಿವಕುಮಾರ್, ಇಒ ದೇವರಾಜಪ್ಪ, ಡಾ. ಸಂಗೀತ,
ಮತ್ತಿತರರು ಭಾಗವಹಿಸಿದ್ದರು.