ಸಂಭಾಜಿ ಬಂಧನಕ್ಕೆ ಆಗ್ರಹ
ಚಿಕ್ಕಮಗಳೂರು: ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸುವಂತೆ ಒತ್ತಾಯಿಸಿರುವ ಎಂಇಎಸ್ ಶಾಸಕ ಸಾಂಬಾಜಿ ಪಾಟೀಲ್ ಅವರನ್ನು ತಕ್ಷಣ ಬಂಧಿಸುವಂತೆ ಒತ್ತಾಯಿಸಿ ಕನ್ನಡ ಸೇನೆ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ಪಿ.ಸಿ. ರಾಜೇಗೌಡ ಅವರ ನೇತೃತ್ವದಲ್ಲಿ ಸಂಘಟನೆಯ ಕಾರ್ಯಲಯದಿಂದ ಸಾಂಬಾಜಿ ಪಾಟೀಲ್ ಅವರ ಪ್ರತಿಕೃತಿಯೊಂದಿಗೆ ಅಣಕು ಶವಯಾತ್ರೆಯಲ್ಲಿ ಮೆರವಣಿಗೆಯಲ್ಲಿ ಹೊರಟ ಕಾರ್ಯಕರ್ತರು ಇಲ್ಲಿನ ಹನುಮಂತಪ್ಪ ವೃತ್ತದಲ್ಲಿ ಪ್ರತಿಕೃತಿ ದಹಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಸೇನೆಯ ಜಿಲ್ಲಾಧ್ಯಕ್ಷ ಪಿ.ಸಿ. ರಾಜೇಗೌಡ, ಕನ್ನಡ ನೆಲ, ಜಲದ ಋಣದಲ್ಲಿ ಜೀವಿಸುತ್ತಿರುವ ಮರಾಠಿ ಶಾಸಕರುಗಳು ನಾಡು, ನುಡಿಯನ್ನು ಗೌರವಿಸದೆ 6 ಕೋಟಿ ಕನ್ನಡಿಗರ ಸ್ವಾಭಿಮಾನವನ್ನೆ ಕೆಣಕುವ ಕೆಲಸ ಮಾಡುತ್ತಿರುವುದು ಖಂಡನಾರ್ಹವಾದುದು, ಪ್ರತಿಬಾರಿ ಕನ್ನಡ ನೆಲ, ಜಲದ ಬಗ್ಗೆ ಇಲ್ಲ ಸಲ್ಲದ ಹೇಳಿಕೆ ನೀಡಿ ಕಾಲ್ಕೆರೆದುಕೊಂಡು ಬಂದು ಗೊಂದಲ ಸೃಷ್ಟಿಸುವವರ ಬಗ್ಗೆ ಸರ್ಕಾರ ತಮ್ಮ ರಾಜಕೀಯ ತೆವಲಿಗೆ ಮೃದು ಧೋರಣೆ ಅನುಸರಿಸುತ್ತಿರುವುದು ಸರಿಯಲ್ಲ ಎಂದು ಹೇಳಿದರು.
ಸದಸ್ಯತ್ವ ರದ್ದುಗೊಳಿಸಿ: ಉಂಡ ಮನೆಗೆ ದ್ರೋಹ ಬಗೆಯುವ ಕೆಲಸ ಮಾಡುತ್ತಿರುವ ಮರಾಠಿ ಶಾಸಕರ ಸದಸ್ಯತ್ವ ರದ್ದುಗೊಳಿಸಿ ಪ್ರಚೋದನಾಕಾರಿ ಹೇಳಿಕೆ ನೀಡಿರುವವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ರಾಜ್ಯದ ಪಾಲಿಗೆ ಮುಂದೆ ಬಿಸಿತುಪ್ಪವಾಗಿ ಪರಿಣಮಿಸಲಿದ್ದು ಅದಕ್ಕೂ ಮುನ್ನ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ರಾಜ್ಯಾಧ್ಯಂತ ಇರುವ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಬೆಳಗಾವಿಗೆ ಬಂದು ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಹಿಂಭಾಗಿಲ ರಾಜಕಾರಣ: ನಗರಾಧ್ಯಕ್ಷ ಪ್ರವೀಣ್ ಮಾತನಾಡಿ, ಹಲವು ವರ್ಷಗಳಿಂದ ನಿರಂತರವಾಗಿ ಕನ್ನಡಿಗರನ್ನು ಕೆರಳಿಸುವ ಹೇಳಿಕೆಗಳನ್ನು ನೀಡುತ್ತಾ ಗೂಸುಂಬೆ ರಾಜಕಾರಣ ಮಾಡುತ್ತಿರುವ ಮರಾಠಿ ಶಾಸಕರ ವಿರುದ್ಧ ಯಾವುದೇ ನಿರ್ಧಾಕ್ಷಿಣ್ಯ ಕ್ರಮಕ್ಕೆ ಮುಂದಾಗದಿರುವುದು ಸರ್ಕಾರದ ಮಂಡತನದ ಪರಮಾವಧಿಯಾಗಿದೆ, ನೇರವಾಗಿ ಹೋರಾಟ ಮಾಡುವ ತಾಕತ್ತಿಲ್ಲದ ಮರಾಠಿ ಶಾಸಕರುಗಳು ಹಿಂಭಾಗಿಲ ರಾಜಕಾರಣ ಮಾಡುತ್ತಿದ್ದಾರೆ ಎಂದು ದೂರಿದರು.
ಸ್ವಾಭಿಮಾನಕ್ಕೆ ಸವಾಲ್: ರಾಜ್ಯೋತ್ಸವ ಮಾಸದಲ್ಲಿ ಕನ್ನಡ ಭಾಷೆ ಬಳಸದೆ ಮರಾಠಿಯಲ್ಲಿ ಮಾತನಾಡಿರುವುದೇ ಅಕ್ಷಮ್ಯ, ಇದರೊಂದಿಗೆ ಕನ್ನಡಿಗರ ಸ್ವಾಭಿಮಾನಕ್ಕೆ ಸವಾಲೆಸೆದಿರುವುದು ನಮ್ಮ ಕೆಚ್ಚನ್ನು ಕೆರಳಿಸಿದ್ದು ಈ ಬಗ್ಗೆ ಸರ್ರ್ಕ್ಕಾರ ಎಚ್ಚೆತ್ತುಕೊಂಡು ಸದಸ್ಯತ್ವ ರದ್ದುಮಾಡಬೇಕಾದ ಅವಶ್ಯವಿದೆ ಎಂದು ಒತ್ತಾಯಿಸಿದರು.
ಜಿಲ್ಲಾ ವಕ್ತಾರ ಇಂದಾವರ ಲೋಕೇಶ್, ಉಪಾಧ್ಯಕ್ಷ ದೇವರಾಜ್, ನಗರ ಉಪಾಧ್ಯಕ್ಷ ರಾಜು, ಸಂಘಟನಾ ಕಾರ್ಯದರ್ಶಿ ನೀಲೇಶ್, ತಾಲೂಕು ಅಧ್ಯಕ್ಷ ಚಂದ್ರಶೇಖರ್, ಹರೀಶ್, ತಿಮ್ಮಶೆಟ್ಟಿ, ನಂದನ್ ಹಾಜರಿದ್ದರು.