ಇಲಾಖೆಯಿಂದಲೇ ಅರಣ್ಯ ನಾಶ!
ಕ.ಪ್ರ.ವಾರ್ತೆ ಚಿಕ್ಕಮಗಳೂರು ನ.29
ಪಶ್ಚಿಮಘಟ್ಟ ಸಾಲಿನ ತಪ್ಪಲಿನಲ್ಲಿರುವ ತಾಲೂಕಿನ ಕರಡಿಹಳ್ಳಿ ಕಾವಲಿನ ಅರಣ್ಯ ಪ್ರದೇಶದಲ್ಲಿ ಟ್ರೀಪಾರ್ಕ್ ಯೋಜನೆ ಹೆಸರಿನಲ್ಲಿ ಬೆಟ್ಟದಲ್ಲಿ ರಸ್ತೆ ನಿರ್ಮಿಸಿ ಅರಣ್ಯ ಪ್ರದೇಶವನ್ನು ಇಲಾಖೆಯೇ ನಾಶಗೊಳಿಸುತ್ತಿದೆ ಎಂದು ಸ್ಥಳೀಯರು ಆರೋಪಿಸಿದರು.
ಕರಡಿಹಳ್ಳಿ ಕಾವಲು ಗುಡ್ಡ ಪ್ರದೇಶವು ಚುಚ್ಚೆಗುಡ್ಡ ಅರಣ್ಯ ಪ್ರದೇಶಗಳ ಸಾಲಿಗೆ ಸೇರಿಕೊಳ್ಳುತ್ತದೆ. ಈ ಭಾಗದ ಅರಣ್ಯ ಪ್ರದೇಶವು ಹಸಿರಿನಿಂದ ಕಂಗೊಳಿಸುತ್ತಿದ್ದು, ಸುಂದರವಾಗಿ ಕಾಣುತ್ತಿತ್ತು. ಈ ಅರಣ್ಯ ಪ್ರದೇಶವನ್ನು ಸಂರಕ್ಷಣೆ ಮಾಡಬೇಕಾಗಿದ್ದ ಅರಣ್ಯ ಇಲಾಖೆ ರಸ್ತೆ ನಿರ್ಮಿಸುವ ಮೂಲಕ ಸಾಕಷ್ಟು ಮರ- ಗಿಡ ಕಡಿಯುವ ಮೂಲಕ ನಾಶ ಮಾಡಲು ಹೊರಟಿರುವುದು ಅತ್ಯಂತ ಖಂಡನೀಯ ಎಂದು ಅಲ್ಲಂಪುರ, ಬಾಳೆಹಳ್ಳಿ, ಹಾಲೇನಹಳ್ಳಿಯ ಗ್ರಾಮಸ್ಥರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಹಣದ ಆಸೆ: ಯಾರಿಗೂ ಉಪಯೋಗವಾಗದ ಈ ಯೋಜನೆಯನ್ನು ಅರಣ್ಯ ಇಲಾಖೆ ಕೂಡಲೇ ಕೈಬಿಟ್ಟು ಅರಣ್ಯ ಸಂರಕ್ಷಣೆಯ ಕೆಲಸ ಚಟುವಟಿಕೆಗಳಿಗೆ ಮಾತ್ರ ಮೀಸಲಿಡಬೇಕು ಎಂದು ಒತ್ತಾಯಿಸಿದ್ದಾರೆ.