ಪೂರ್ವಸಿದ್ಧತಾ ಸಭೆ
ಚಿಕ್ಕಮಗಳೂರು: ಜಿಲ್ಲಾ ಆಟದ ಮೈದಾನದಲ್ಲಿ ಡಿ. 7 ರಂದು ಆಯೋಜಿಸಿರುವ ಮೂಡಬಿದರೆಯ ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮದ ಪೂರ್ವಭಾವಿ ಸಿದ್ಧತಾ ಸಭೆಯು ನಗರದ ಯುರೇಕಾ ಅಕಾಡೆಮಿಯಲ್ಲಿ ನುಡಿಸಿರಿ ಘಟಕ ಅಧ್ಯಕ್ಷ ಸ. ಗಿರಿಜಾಶಂಕರ್ ಅಧ್ಯಕ್ಷತೆಯಲ್ಲಿ ನಡೆಯಿತು. ಅಂದು ಬೆಳಗ್ಗೆ 11.30ಕ್ಕೆ ಟಿಎಂಎಸ್ ಸವೂರ್ ಸಭಾಂಗಣದಲ್ಲಿ ನಗರದ ಸಂಘ- ಸಂಸ್ಥೆಗಳು ಹಾಗೂ ನಾಗರಿಕರೊಂದಿಗೆ ಡಾ. ಮೋಹನ್ ಆಳ್ವ ಅವರ ಸಂವಾದ ಏರ್ಪಡಿಸಲು ತೀರ್ಮಾನಿಸಲಾಯಿತು. ಡಿ. 19ರಿಂದ 24 ರವರೆಗೆ ಮೂಡಬಿದರೆಯಲ್ಲಿ ನಡೆಯುವ ವಿಶ್ವ ನುಡಿಸಿರಿ ವಿರಾಸತ್‌ಗೆ ಜಿಲ್ಲೆಯಿಂದ ತೆರಳುವ ಪ್ರತಿನಿಧಿಗಳ ಸಂಖ್ಯೆ ಹೆಚ್ಚಿಸಲು ಚರ್ಚಿಸಿದ್ದು, ಅಲ್ಲಿಗೆ ಜಿಲ್ಲೆಯಿಂದ ಹೊರೆ ಕಾಣಿಕೆಯಾಗಿ ಕಾಫಿ ಪುಡಿ, ಕಾಳು ಮೆಣಸು, ತರಕಾರಿ ಮುಂತಾದವುಗಳನ್ನು ಕಳುಹಿಸಲು ಚರ್ಚಿಸಲಾಯಿತು. ಕರುಣಾಕರ ಹೆಗ್ಡೆ, ಮಹೇಶಗೌಡ, ಚೂಡನಾಥ ಅಯ್ಯರ್, ನಾಗೇಂದ್ರ, ಯಶವಂತ್, ಡಾ. ಸುಬ್ರಾಯ, ಅಕ್ಕಿಕಾಳು ವೆಂಕಟೇಶ್ ಹಾಗೂ ವಿಶ್ವಕರ್ಮರನ್ನು ನುಡಿಸಿರಿ ಘಟಕದ ಕಾರ್ಯಕಾರಿ ಸಮಿತಿಗೆ ಸೇರ್ಪಡೆ ಮಾಡಿಕೊಳ್ಳಲಾಯಿತು. ನಾಗರಾಜರಾವ್ ಸ್ವಾಗತಿಸಿದರು.