ಬೀಜೋಪಚಾರದಿಂದ ರಾಗಿ ಇಳುವರಿ ಹೆಚ್ಚಳ
ಮೂಡಿಗೆರೆ: ರಾಗಿ ಬೆಳೆಯಲ್ಲಿ ಉತ್ತಮ ಇಳುವರಿ ಪಡೆಯಲು ಬರ ನಿರೋಧಕ ಮತ್ತು ಅಜೋಸ್ಫಿರಿಲಂ ಬೀಜೋಪಚಾರ ನೀಡಬೇಕು ಎಂದು ಕೃಷಿ ವಿಜ್ಞಾನ ಕೇಂದ್ರದ ವಿಸ್ತರಣಾ ವಿಷಯ ತಜ್ಞ ಭರತ್ಕುಮಾರ್ ಟಿ.ಪಿ. ಹೇಳಿದರು. ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಆಯೋಜಿಸಿದ್ದ ರಾಗಿಯಲ್ಲಿ ಸಮಗ್ರ ಬೆಳೆ ನಿರ್ವಹಣೆಯಲ್ಲಿ ಬರ ನಿರೋಧಕ ರಾಗಿ ತಳಿ ಮತ್ತು ಅಜೋಸ್ಫಿರಿಲಂ ಜೀವಾಣು ಬಳಕೆಯ ಪ್ರಾತ್ಯಕ್ಷಿತೆಯ ಬೆಳೆ ಕ್ಷೇತ್ರೋತ್ಸವ ಉದ್ಘಾಟಿಸಿ ಮಾತನಾಡಿ, ಬಯಲುಸೀಮೆ ವಲಯಗಳಾದ ಕಡೂರು ಮತ್ತು ತರೀಕೆರೆ ತಾಲೂಕಿನಲ್ಲಿ ರಾಗಿ ಬೆಳೆ ಇಳಿಮುಖವಾಗಿದ್ದು, ಅಜೋಸ್ಫಿರಿಲಂ ಬೀಜೋಪಚಾರದಿಂದ ಇಳುವರಿ ಹೆಚ್ಚಿಸುತ್ತದೆ ಎಂದರು. ಸಸ್ಯ ಸಂರಕ್ಷಣಾ ತಜ್ಞ ಡಾ. ಗಿರೀಶ್ ಆರ್. ಮಾತನಾಡಿ, ಬರಪೀಡಿತ ಪ್ರದೇಶಗಳಾದ ತರೀಕೆರೆ ಹಾಗೂ ಕಡೂರು ತಾಲೂಕಿನ ರೈತರು ಸಾಕಷ್ಟು ನೀರಿನ ಅಭಾವದಿಂದ ರಾಗಿ ಬೆಳೆಯಲ್ಲಿ ಕಡಿಮೆ ಇಳುವರಿ ಪಡೆಯುವಂತಾಗಿದೆ. ಈ ಸಮಸ್ಯೆಯ ಪರಿಹಾರಕ್ಕಾಗಿ ನಿರೋಧಕ ರಾಗಿ ತಳಿಯಾದ ಎಂ.ಎಲ್- 365ಅನ್ನು ರೈತರಿಗೆ ನೀಡಲಾಗಿದ್ದು, ಈ ತಳಿಯು ಬರಪೀಡಿತ ಪ್ರದೇಶದಲ್ಲಿ ಇತರೆ ಸ್ಥಳೀಯ ತಳಿಗಳಿಗಿಂತ ಹೆಚ್ಚಿನ ಇಳುವರಿ ಪಡೆದಿದೆ ಎಂದು ತಿಳಿಸಿದರು. ಕ್ಷೇತ್ರೊತ್ಸವದಲ್ಲಿ ಭಾಗಿಯಾದ ರೈತ ಫಲಾನುಭವಿಗಳು ಮಾತನಾಡಿ, ಈ ತಳಿಯಿಂದ (ಎಂ.ಎಲ್-365) ಹೆಚ್ಚಿನ ಇಳುವರಿ ಪಡೆದಿದ್ದು, ಕಡಿಮೆ ನೀರಾವರಿ ಇರುವ ಪ್ರದೇಶದಲ್ಲಿ ಈ ತಳಿಯು ಸೂಕ್ತವೆನಿಸಿದೆ. ಆದ್ದರಿಂದ ಮುಂದಿನ ಬಿತ್ತನೆ ಸಮಯದಲ್ಲಿ ಈ ತಳಿಯ ಬೀಜಗಳನ್ನು ಬಳಸುವುದಾಗಿ ಮತ್ತು ಸುತ್ತಮುತ್ತಲಿನ ರೈತರಿಗೆ ಈ ತಳಿಯ ಬಗ್ಗೆ ಮಾಹಿತಿ ಕೊಡುವುದಾಗಿ ತಿಳಿಸಿದರು. ಕೇಂದ್ರದ ಸಹ ಸಂಶೋಧಕ ಡಾ. ಯೋಗೀಶಾರಾಧ್ಯ ಆರ್. ಹಾಗೂ ಗ್ರಾಮದ ರೈತರು, ರೈತ ಮಹಿಳೆಯರು ಉಪಸ್ಥಿತರಿದ್ದರು.