ಮಕ್ಕಳ ಸಂತೆಯಲ್ಲಿ ಭರ್ಜರಿ ವ್ಯಾಪಾರ
ಕ.ಪ್ರ.ವಾರ್ತೆ ಮೂಡಿಗೆರೆ ನ.29
5 ರುಪಾಯಿಗೆ ಸೊಪ್ಪು, ರು. 2 ಕ್ಕೆ ದೊಡ್ಡಲಿಕಾಯಿ, ಕೈತೋಟದಲ್ಲಿ ಬೆಳೆದ ಸೀಮೇ ಬದನೆ.., ಕಡಿಮೆ ದರದಲ್ಲಿ ಮುಗಿದರೆ ಮತ್ತೆ ಮುಂದಿನ ವರ್ಷದವರಗೆ ಕಾಯಬೇಕು.., ಎಂಬ ಕೂಗುಗಳು ಕೇಳಿಬರುತ್ತಿದ್ದವು.
ಇದೇನೆಂದು ಅಚ್ಚರಿಪಡಬೇಡಿ, ಮಕ್ಕಳಲ್ಲಿ ವ್ಯವಹಾರಿಕ ಜ್ಞಾನ ತಿಳಿಯುವ ಸಲುವಾಗಿ ಪಟ್ಟಣದ ನಳಂದ ಆಂಗ್ಲ ಶಾಲೆಯಲ್ಲಿ ಮಕ್ಕಳ ಸಂತೆಯಲ್ಲಿ ಕಂಡು ಬಂದ ದೃಶ್ಯ.
ಶುಕ್ರವಾರ ಸಂತೇ ದಿನವಾಗಿದ್ದು, ಹೊರಗೆ ದೊಡ್ಡ ಸಂತೆ ನಡೆಯುತ್ತಿದ್ದರೆ, ಶಾಲಾ ಆವರಣದಲ್ಲಿ ಮಕ್ಕಳ ಸಂತೆ ನಡೆಯುತಿತ್ತು. ಮಕ್ಕಳ ಕೂಗಿಗೆ ಮನಸೋತ ಸಾರ್ವಜನಿಕರು ಆಗಮಿಸಿ ತರಕಾರಿ, ಮೀನು, ಖಾದ್ಯ, ಹಣ್ಣು ಹಂಪಲು, ತಂಪಾದ ಪಾನಿಯಗಳು ಭರದಲ್ಲಿ ಮಾರಾಟವಾಗುವುಂತೆ ಮಾಡಿದರು.
3 ವರ್ಷದಿಂದ ಆಯೋಜನೆ: ಮಕ್ಕಳ ಸಂತೆಯನ್ನು ಶಾಲೆ ಆಡಳಿತ ಮಂಡಳಿಯ ಗಾಯತ್ರಿ ಮತ್ತು ಮುಖ್ಯ ಶಿಕ್ಷಕ ಲಕ್ಷ್ಮೀನಾರಾಯಣ್ ಉದ್ಘಾಟಿಸಿ ಮಾತನಾಡಿ, ಮಕ್ಕಳಲ್ಲಿ ವ್ಯಾವಹಾರಿಕ ಜ್ಞಾನ ಬೆಳೆಸುವ ಸಲುವಾಗಿ ಈ ಮಕ್ಕಳ ಸಂತೆಯನ್ನು ಕಳೆದ 3 ವಷಂದಿಂದ ಆಯೋಜಿಸಲಾಗಿದೆ ಎಂದರು. ನಾಲ್ಕನೇ ತರಗತಿಯಿಂದ 10ನೇ ತರಗತಿ ವಿದ್ಯಾರ್ಥಿಗಳು ತಮಗೆ ತೋಚಿದ ವಸ್ತುಗಳನ್ನು ತಂದು ಮಾರಾಟ ಮಾಡುತ್ತಿದ್ದರೆ. ಇನ್ನು ಕೆಲವು ವಿದ್ಯಾರ್ಥಿಗಳು ತಮ್ಮ ಮನೆಯ ಕೈತೋಟದಲ್ಲಿ ಬೆಳೆದ ಸೊಪ್ಪು, ಹಣ್ಣು ಹಂಪಲು ಗಳನ್ನು ತಂದು ಮಾರಾಟ ಮಾಡಿದರು.
ಶಾಲೆ ಆಡಳಿತ ಮಂಡಲಿಯ ಸುರೇಶ್, ಗಣೇಶ್, ವಿಜೇಂದ್ರ, ಶಿಕ್ಷಕ ಗೋವಿಂದರಾಜ್, ಕಣಗಿನ ಹಳ್ಳಿ, ಸತೀಶ್ ಸೇರಿದಂತೆ ಶಿಕ್ಷಕರುಗಳು, ಪೋಷಕರು ಉಪಸ್ಥಿತರಿದ್ದರು.