ಆಟವಾಡುತ್ತಿದ್ದ ಮೂವರು ಬಾಲಕರು ಸಿಡಿಲಿಗೆ ಬಲಿ
ಚಿಕ್ಕಮಗಳೂರು: ರಾಜ್ಯದ ವಿವಿಧೆಡೆ ಅಕಾಲಿಕ ಮಳೆ ಶುಕ್ರವಾರವೂ ಮುಂದುವರಿದಿದ್ದು, ಚಿಕ್ಕಮಗಳೂರು ಸಮೀಪದ ಗಿಡ್ಡೇನಹಳ್ಳಿಯಲ್ಲಿ ಸಿಡಿಲು ಬಡಿದು ಮೂವರು ಬಾಲಕರು ಮೃತಪಟ್ಟಿದ್ದಾರೆ.
ಮೃತರನ್ನು ಲತೀಶ್(14), ಬಸವರಾಜ್(12), ಪ್ರಸನ್ನ(10) ಎಂದು ಗುರುತಿಸಲಾಗಿದೆ. ಇದೇ ಸ್ಥಳದಲ್ಲಿದ್ದ ಇತರೆ ಬಾಲಕರಾದ ಕಿರಣ್, ಮಹೇಂದ್ರ, ಕೃಷ್ಣಮೂರ್ತಿ ಹಾಗೂ ಈಶ್ವರ್ ಎಂಬವರಿಗೆ ಗಂಭೀರ ಗಾಯಗಳಾಗಿವೆ.
ಗಿಡ್ಡೇನಹಳ್ಳಿಯಲ್ಲಿ ಮರದ ಕೆಳಗೆ ಮಧ್ಯಾಹ್ನದ ವೇಳೆಯಲ್ಲಿ ಬಾಲಕರು ಆಟವಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಮಳೆ ಆರಂಭವಾಗಿದೆ. ಮಳೆಯಲ್ಲಿಯನ್ನೂ ಲೆಕ್ಕಿಸದೇ ಮಕ್ಕಳು ಆಟದಲ್ಲಿ ನಿರತರಾಗಿದ್ದರು. ಆಗ ಆಟವಾಡುತ್ತಿದ್ದ ಹುಡುಗರ ಗುಂಪಿನ ಮೇಲೆ ಸಿಡಿಲು ಬಡಿದಿದೆ. ಲತೀಶ್, ಬಸವರಾಜ್ ಹಾಗೂ ಪ್ರಸನ್ನ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇನ್ನುಳಿದಂತೆ ಇದೇ ಗುಂಪಿನಲ್ಲಿದ್ದ ಇನ್ನೂ ನಾಲ್ವರು ಬಾಲಕರು ತೀವ್ರವಾಗಿ ಗಾಯಗೊಂಡು ಭಯಪಟ್ಟಿದ್ದಾರೆ. ಅವರನ್ನು ತಕ್ಷಣವೇ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಿಡಿಲು ಬಡಿದು ಮೃತಪಟ್ಟ ಗಿಡ್ಡೇನಹಳ್ಳಿ ಗ್ರಾಮದ ಮೂವರು ಬಾಲಕರ ಕುಟುಂಬಗಳಿಗೆ ತಲಾ 2 ಲಕ್ಷ ರುಪಾಯಿ ಪರಿಹಾರವನ್ನು ಜಿಲ್ಲಾಡಳಿತ ಘೋಷಿಸಿದೆ.