ಮಾಜಿ ಶಾಸಕರ ಬಿಡುಗಡೆಗೆ ರೈತ ಸಂಘ ಆಗ್ರಹ
ಚಿಕ್ಕಮಗಳೂರು: ಭದ್ರಾ ಮೇಲ್ದಂಡೆ ಯೋಜನೆಯಡಿ ತರೀಕೆರೆ ತಾಲೂಕಿಗೆ ನೀರು ಕೊಡುವಂತೆ ಆಗ್ರಹಿಸಿ ಅಜ್ಜಂಪುರದಲ್ಲಿ ಪ್ರತಿಭಟನೆ ನಡೆಸಿ, ಬಂಧನಕ್ಕೆ ಒಳಗಾಗಿರುವ ರೈತರು ಹಾಗೂ ಮಾಜಿ ಶಾಸಕರನ್ನು ಬಿಡುಗಡೆ ಮಾಡುವಂತೆ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಕೆ.ಪಿ. ಚಂದ್ರೇಗೌಡ ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.
ಮಾಜಿ ಶಾಸಕ ಬಿ.ಆರ್. ನೀಲಕಂಠಪ್ಪ ಸೇರಿದಂತೆ 14 ಮಂದಿ ರೈತರನ್ನು ಬಿಡುಗಡೆಗೊಳಿಸಿ, ಅವರ ಮೇಲೆ ಹಾಕಿರುವ ಕೇಸುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ.
ತರೈತ ಸಂಘದ ನೇತೃತ್ವದಲ್ಲಿ ಅಜ್ಜಂಪುರದಲ್ಲಿ ಶನಿವಾರ ಪ್ರತಿಭಟನೆ ನಡೆದಿದ್ದು, ಈ ಸಂಬಂಧ ರಾಜ್ಯದ ನೀರಾವರಿ ಸಚಿವರು ಸ್ಥಳಕ್ಕೆ ಆಗಮಿಸಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಡಲಾಗುವುದೆಂದು ರೈತರು ಹೇಳಿದ್ದರು.
ಮನೆಗೆ ತೆರಳುತ್ತಿದ್ದ ರೈತರು: ನೀರಾವರಿ ಸಚಿವರನ್ನು ಇಲ್ಲಿಗೆ ಕರೆಸಿ ರೈತರೊಂದಿಗೆ ಚರ್ಚೆ ನಡೆಸಿದ ಬಳಿಕ ಕಾಮಗಾರಿಯನ್ನು ಆರಂಭಿಸಲಾಗುವುದೆಂದು ತರೀಕೆರೆ ಉಪ ವಿಭಾಗಾಧಿಕಾರಿಗಳು ಭರವಸೆ ನೀಡಿದ ಬಳಿಕ ರೈತರು ಪ್ರತಿಭಟನೆಯನ್ನು ಕೈಬಿಟ್ಟು ಮನೆಗಳಿಗೆ ತೆರಳಿದ್ದರು.
ಆಗ ಪೊಲೀಸ್ ಅಧಿಕಾರಿಗಳು ಮನೆಗಳಿಗೆ ಹೋಗುತ್ತಿದ್ದ ರೈತರು ಹಾಗೂ ಮಾಜಿ ಶಾಸಕ ಬಿ.ಆರ್. ನೀಲಕಂಠಪ್ಪ ಅವರನ್ನು ಉದ್ದೇಶಪೂರ್ವಕವಾಗಿ ಬಂಧಿಸಿದ್ದಾರೆ. ಬಂಧಿತರನ್ನು ಕೂಡಲೇ ಬಿಡುಗಡೆ ಮಾಡದೇ ಹೋದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟವನ್ನು ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.