ಮೂಲ ಸೌಲಭ್ಯವಿಲ್ಲದ ರೈಲು ನಿಲ್ದಾಣ
ತರೀಕೆರೆ: ಪ್ರತಿನಿತ್ಯ ಹತ್ತಾರು ರೈಲು, ನೂರಾರು ಪ್ರಯಾಣಿಕರು ಬಂದು ಹೋಗುವ ತರೀಕೆರೆ ಪಟ್ಟಣದ ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಕನಿಷ್ಠ ಮೂಲ ಸೌಲಭ್ಯಗಳೂ ಇಲ್ಲದಂತಾಗಿದೆ.
ಮೂಲಭೂತವಾಗಿ ರೈಲು ನಿಲ್ದಾಣದ ಪ್ಲಾಟ್ ಫಾರಂನಲ್ಲಿ ಪ್ರಯಾಣಿಕರು ರೈಲು ಬರುವ (ರೈಲು ಗಂಟೆ ಗಟ್ಟಲೆ ತಡವಾದರೂ) ಸಮಯದ ತನಕ ಸರಕುಗಳನ್ನು ಕೈಯಲ್ಲಿ ಹಿಡಿದುಕೊಂಡು ನಿಂತೇ ಕಾಲ ಹಾಕಬೇಕು. ಪ್ರಯಾಣಿಕರಿಗೆ ಕೂರಲು ಆಸನ ವ್ಯವಸ್ಥೆಯೇ ಸಮರ್ಪಕವಾಗಿಲ್ಲ.
ರೈಲು ನಿಲ್ದಾಣದಲ್ಲಿ ಶೌಚಾಲಯದ ವ್ಯವಸ್ಥೆ ಇಲ್ಲ, ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿಲ್ಲ, ನಿಲ್ದಾಣಕ್ಕೆ ಬರುವ ಶಿವಮೊಗ್ಗ - ಮೈಸೂರು, ಚಿಕ್ಕಮಗಳೂರು- ಶಿವಮೊಗ್ಗ, ಶಿವಮೊಗ್ಗ ಬೆಂಗಳೂರು ಇಂತಹ ಪ್ರಮುಖ ರೈಲುಗಳ ಕ್ರಾಸಿಂಗ್‌ನಲ್ಲಂತೂ ಪ್ರಯಾಣಿಕರ ಪಾಡು ಭಗವಂತನಿಗೇ ಬಿಟ್ಟಿದ್ದು.
ರೈಲು ಬರುವ ಕಡೇ ಸಮಯದಲ್ಲಿ ಪ್ರಯಾಣಿಕರಿಗೆ ಆ ಪ್ಲಾಟ್ ಫಾರಂಗೆ ಹೋಗಿ ಈ ಪ್ಲಾಟ್‌ಫಾರಂಗೆ ಹೋಗಿ ಎಂಬ ಸೂಚನೆಗಳಿಂದ ಪ್ರಯಾಣಿಕರು ಪರದಾಡುವ ಸ್ಥಿತಿ ಅನುಭವಿಸಿದವರಿಗೇ ಗೊತ್ತು ಇನ್ನು ರಾತ್ರಿ ವೇಳೆ ರೈಲು ನಿಲ್ದಾಣದಲ್ಲಿ, ಅದರಲ್ಲೂ ಪ್ರಯಾಣಿಕರು ನಿಲ್ಲುವ ಪ್ಲಾಟ್‌ಫಾರಂನಲ್ಲಿ ವಿದ್ಯುತ್ ಬೆಳಕಿನ ವ್ಯವಸ್ಥೆ ಸ್ವಲ್ಪವೂ ಸರಿಯಿಲ್ಲ. ಇಲ್ಲವೇ ಇಲ್ಲವೆಂದರೆ ತಪ್ಪಿಲ್ಲ. ರೈಲು ನಿಲ್ದಾಣಕ್ಕೆ ದೂರವಾಣಿ ವ್ಯವಸ್ಥೆ ಇದಿಯೇ ಎಂಬುದನ್ನು ಪತ್ತೆ ಹಚ್ಚಬೇಕು ದೂರವಾಣಿ ಕರೆ ಎಲ್ಲವೂ ನಿರರ್ಥಕ.
ಅಕ್ಕಪಕ್ಕದ ಎಲ್ಲಾ ಊರುಗಳ ರೈಲು ನಿಲ್ದಾಣಗಳು ಕಾಲಕ್ಕೆ ಸರಿಯಾಗಿ ಆಧುನಿಕ ಸೌಲಭ್ಯ ಹೊಂದುತ್ತಿವೆ. ಆದರೆ ತರೀಕೆರೆ ರೈಲು ನಿಲ್ದಾಣ ಮಾತ್ರ ಸ್ವಾತಂತ್ರ್ಯ ಪೂರ್ವದಲ್ಲಿ ಹೇಗೆ ಇತ್ತೋ ಈಗಲೂ ಇನ್ನೂ ಹಾಗೆಯೇ ಇದೆ.
ತರೀಕೆರೆ ರೈಲು ನಿಲ್ದಾಣ ಆಧುನೀಕರಿಸುವ ಯಾವ ಆಶ್ವಾಸನೆಗಳು ಇಲ್ಲಿಯವರೆಗೂ ಕಾರ್ಯಗತವಾಗಿಲ್ಲ. ಪ್ರಯಾಣಿಕರ ಕೂಗು ಅರಣ್ಯರೋಧನವಾಗಿದೆ. ಇನ್ನಾದರೂ ರೈಲು ನಿಲ್ದಾಣಕ್ಕೆ ಕನಿಷ್ಠ ಸೌಲಭ್ಯ ಒದಗಿಸುವ ಕೃಪೆ ತೋರುವರೆ.
-ವಿನಾಯಕ ತರೀಕೆರೆ, ನಿವಾಸಿ