ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕಠಿಣವಾದ ಎಸ್‌ಎಂಎಸ್ ವ್ಯವಸ್ಥೆ

Srinivasa Murthy VN
Updated On : 5 Jun 2014, 12:42 pm

ಕಡೂರು ಕೃಷ್ಣಮೂರ್ತಿ
ಕ.ಪ್ರ.ವಾರ್ತೆ, ಕಡೂರು, ಜೂ.4
ಎಸ್‌ಎಂಎಸ್‌ನಿಂದ ಪಡಿತರ ಚೀಟಿ ನೋಂದಣಿ ಮತ್ತು ಪಡಿತರ ವಿವರ ಪಡೆಯುವ ಯೋಜನೆ ಜಾರಿಗೆ ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮ ಟೀಕೆಗೆ ಗುರಿಯಾಗುತ್ತಿದೆ. ಕಡೂರು ತಾಲೂಕಿನ ಜನಸಾಮಾನ್ಯರು, ಅಕ್ಷರ ಗೊತ್ತಿಲ್ಲದ ಅನಕ್ಷರಸ್ಥರು, ಕೂಲಿ ಕಾರ್ಮಿಕರು, ಮೊಬೈಲ್ ಇಲ್ಲದ ಬಡವರು ಈ ಸೌಲಭ್ಯ ಪಡೆಯುವುದು ಹೇಗೆ ಎಂಬಗೊಂದಲದಲ್ಲಿದ್ದಾರೆ.
ಅಕ್ಷರಸ್ಥರು, ಅನಕ್ಷರಸ್ಥರು, ಮೊಬೈಲ್ ಕೊಳ್ಳಲು ಸಾಧ್ಯವಿಲ್ಲ ಬಹುತೇಕ ಕುಟುಂಬಗಳಲ್ಲಿ ಸರ್ಕಾರ ನೀಡುವ 1 ದರದ ಅಕ್ಕಿ ಯೋಜನೆಯಿಂದ ಬದುಕು ದೂಡುತ್ತಿವೆ. ಆದರೆ, ಇದೀಗ ಎಸ್‌ಎಂಎಸ್ ಮಾಡಿ ಸೌಲಭ್ಯ ಪಡೆಯುವ ವ್ಯವಸ್ಥೆಗೆ ಸರ್ಕಾರ ಮುಂದಾಗಿರುವುದು ಬಡವರಿಗಷ್ಟೇ ಅಲ್ಲ, ತಾಲೂಕಿನ ಪಡಿತರ ಇಲಾಖೆಯ ಅಧಿಕಾರಿಗಳನ್ನೂ ಚಿಂತೆಗೀಡು ಮಾಡಿದೆ.
ಹೊಸ ರೇಶನ್ ಕಾರ್ಡ್ ಮತ್ತು ಹಳೇ ರೇಶನ್ ಕಾರ್ಡ್ ನವೀಕರಿಸಲು ಸರ್ಕಾರ ನೀಡಿರುವ ಮೊಬೈಲ್ ಸಂಖ್ಯೆಗೆ ಎಸ್.ಎಂ.ಎಸ್. ಮಾಡಿ ಕಾರ್ಡುದಾರರ ಮೊಬೈಲ್‌ನಿಂದ ಸಂದೇಶ ರವಾನೆ ಮಾಡಬೇಕಾಗಿದೆ. ಫಲಾನುಭವಿಗಳು ವಿದ್ಯಾವಂತರು, ಚುರುಕಮತಿಗಳೂ ಆಗಿ ಮೊಬೈಲ್ ಹೊಂದಿದ್ದರೆ ಈ ಚಿಂತನೆ ಖಂಡಿತ ಯಶಸ್ವಿಯಾಗುತ್ತದೆ. ಆದರೆ, ಇಂಥ ಆಧುನಿಕತೆಯ ಸೋಂಕು ಇಲ್ಲದ ಅದೆಷ್ಟೋ ಕುಟುಂಬಗಳು ಈ ವ್ಯವಸ್ಥೆಯಿಂದ ವಂಚಿತವಾಗುವ ಸಾಧ್ಯತೆ ಹೆಚ್ಚಾಗಿದೆ.
ಕಾರ್ಡುದಾರರ ಬಳಿ ಮೊಬೈಲ್ ಇಲ್ಲದಿದ್ದ ಪಕ್ಷದಲ್ಲಿ ಅವರಿಗೆ ಪರಿಚಯವಿರುವ ವ್ಯಕ್ತಿಯ ಮೊಬೈಲ್‌ನಿಂದ ಸಂದೇಶ ಕಳಿಸಬೇಕಾಗುತ್ತದೆ. ಈ ವಿಧಾನ ಮೊಬೈಲ್ ಬಳಕೆದಾರರಿಗೆ ಪ್ರಯೋಜನವಾಗಬಹುದೇ ಹೊರತು, ಅಕ್ಷರ ಜ್ಞಾನವಿಲ್ಲದ ಅದರಲ್ಲೂ ಇಂಗ್ಲಿಷ್‌ನ ಗಂಧ ಗಾಳಿ ಅರಿಯದ ಗ್ರಾಮೀಣ ಭಾಗದ ರೈತರು, ಕೂಲಿ ಕಾರ್ಮಿಕರು ಮತ್ತು ಮೊಬೈಲ್ ಬಳಸಲು ಬಾರದವರು ಇಲ್ಲದವರು ಪಡಿಪಾಟಲು ಅನುಭವಿಸುವಂತಾಗಿದೆ. ಎಸ್‌ಎಂಎಸ್ ಹೇಗೆ, ಯಾರಿಗೆ ಮಾಡಿ ತಮ್ಮ ಪಡಿತರ ಚೀಟಿಗೆ ನೋಂದಾಯಿಸುತ್ತಾರೆ ಎಂಬುದೇ ಪ್ರಜ್ಞಾವಂತರ ಪ್ರಶ್ನೆಯಾಗಿದೆ.
ಕಡುಬಡವರಿಗೆ ಎದುರಾಗುವ ಇಂಥ ಅವಾಂತರಗಳ ಬಗ್ಗೆ ಹೊಣೆ ಹೊರಬೇಕಾದವರು ಯಾರು? ಸರ್ಕಾರ, ಅಧಿಕಾರಿಗಳು ಈ ಬಗ್ಗೆ ಗಂಭೀರ ಚಿಂತನೆ ನಡೆಸಲಿ ಎಂಬುದು ಸಾರ್ವಜನಿಕರ ಅಭಿಪ್ರಾಯ. ಹಾಗಾಗುವುದೇ?

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement