ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಪ್ರಾಣ ಬಿಟ್ಟರೂ ಜಾಗ ಬಿಡಲ್ಲ

Srinivasa Murthy VN
Updated On : 5 Jun 2014, 12:42 pm

ಇನಾಂ ಭೂಮಿ ವಿವಾದ: ಡಿಸಿ ಕಚೇರಿ ಬಳಿ ಅನಿರ್ದಿಷ್ಟಾವಧಿ ಧರಣಿ ಆರಂಭ
ಕ.ಪ್ರ.ವಾರ್ತೆ ಚಿಕ್ಕಮಗಳೂರು ಜೂ.4
ಕಳಸ ಇನಾಂಭೂಮಿ ತೆರವು ವಿರೋಧಿಸಿ ಆ ಭಾಗದ ರೈತರು ಹಾಗೂ ಸಾರ್ವಜನಿಕರು ವಿವಿಧ ರಾಜಕೀಯ ಪಕ್ಷಗಳ ಹಾಗೂ ಸಂಘಟನೆಗಳ ನೇತೃತ್ವದಲ್ಲಿ ಬುಧವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.
ಇನಾಂಭೂಮಿ ಸಮಸ್ಯೆ ಬಗೆಹರಿಸುವಂತೆ ಸರ್ಕಾರವನ್ನು ಒತ್ತಾಯಿಸಿದ ಪ್ರತಿಭಟನಾನಿರತರು, ನಗರದ ಬೋಳರಾಮೇಶ್ವರ ದೇವಾಲಯ ಆವರಣದಿಂದ ಮೆರವಣಿಗೆ ಹೊರಟು ಮುಖ್ಯರಸ್ತೆಯಲ್ಲಿ ಸಂಚರಿಸಿದರು.ಪ್ರಾಣ ಬಿಟ್ಟರೂ ಜಾಗ ಬಿಡಲ್ಲ, ನಾವು ಆರಿಸಿ ಕಳಿಸುವ ಪ್ರಜಾಪ್ರಭುತ್ವ ಸರ್ಕಾರ ನಮಗೆ ರಕ್ಷಣೆ ನೀಡುವುದೇ ಎಂಬ ಭಿತ್ತಿಪತ್ರ ಪ್ರದರ್ಶಿಸಿದರು.
ಪ್ರತಿಭಟನಾನಿರತರನ್ನುದ್ದೇಶಿಸಿ ಮಾತನಾಡಿದ ಮೂಡಿಗೆರೆ ಶಾಸಕ ಬಿ.ಬಿ. ನಿಂಗಯ್ಯ, ಬಹುತೇಕ ಜನರಿಗೆ ಭೂಮಿ ಮಂಜೂರಾಗಿದ್ದು, ಅಲ್ಲಿ ಬದುಕು ಸಾಗಿಸಲಾಗುತ್ತಿದೆ. ಭೂಮಿಗೆ ಸಂಬಂಧಿಸಿದಂತೆ ಪ್ರಕರಣವೊಂದು ನ್ಯಾಯಾಲಯದ ಮೇಟ್ಟಿಲೇರಿದ್ದರಿಂದ ಈ ಭೂಮಿ ಅರಣ್ಯ ಇಲಾಖೆ ಸೇರಿದ್ದಾಗಿದೆ ಎಂದು ತಿಳಿದು ಬಂತು. ಭೂಮಿ ತೆರವುಗೊಳಿಸುವಂತೆ ನ್ಯಾಯಾಲಯ ಆದೇಶ ನೀಡಿದ್ದು, ಇನಾಂ ಭೂಮಿ ಜನರು ಆತಂಕದಲ್ಲಿ ಜೀವನ ಸಾಗಿಸುವಂತಾಗಿದೆ ಎಂದರು.
ರೈತ ವಿರೋಧಿ: ಸರ್ಕಾರ ಹತ್ತು ಎಕರೆವರೆಗಿನ ಸಾಗುವಳಿ ಭೂಮಿಯನ್ನು ತೆರವುಗೊಳಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದರೂ ಅರಣ್ಯ ಇಲಾಖೆ ಹತ್ತು ಎಕರೆವರೆಗಿನ ಸಾಗುವಳಿದಾರರಿಗೆ ಭೂಮಿ ತೆರವುಗೊಳಿಸಲು ನೋಟಿಸ್ ಜಾರಿ ಮಾಡಿರುವುದನ್ನು ಗಮನಿಸಿದರೆ ಸರ್ಕಾರ ಹೇಳುವುದು ಒಂದು ಮಾಡುವುದು ಮತ್ತೊಂದು ಎನ್ನುವಂತಾಗಿದೆ. ಸರ್ಕಾರದ ನೀತಿ ಜನ ಮತ್ತು ರೈತ ವಿರೋಧಿಯಾಗಿದೆ ಎಂದು ತಿಳಿಸಿದರು.
ಒಂದು ವೇಳೆ ಸರ್ಕಾರ ನೀಡಿರುವ ಭರವಸೆ ಮರೆತು ಇನಾಂ ಭೂಮಿವಾಸಿಗಳನ್ನು ಒಕ್ಕಲೆಬ್ಬಿಸಲು ಮುಂದಾದರೆ ಯಾವುದೇ ತ್ಯಾಗಕ್ಕೂ ಸಿದ್ಧ ಎಂದು ಎಚ್ಚರಿಸಿದರು.
ಬಿಜೆಪಿ ಬೆಂಬಲ: ಶೃಂಗೇರಿ ಶಾಸಕ ಡಿ.ಎನ್. ಜೀವರಾಜ್ ಮಾತನಾಡಿ, ಇನಾಂ ಭೂಮಿ ಜನರಿಗೆ ಬದಲಿ ವಿಷಯ ಪ್ರಸ್ತಾಪ ಮಾಡುತ್ತಿರುವುದು ಸರಿಯಲ್ಲ. ತೆರವು ವಿರೋಧಿಸಿ ಹೋರಾಟ ಸಮಿತಿ ನಡೆಸುತ್ತಿರುವ ಹೋರಾಟಕ್ಕೆ ಬಿಜೆಪಿ ಸಂಪೂರ್ಣ ಬೆಂಬಲ ವ್ಯಕ್ತಪಡಿಸಲಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಹೃದಯವಂತಿಕೆ ಪ್ರದರ್ಶಿಸುವುದು ಅಗತ್ಯವಾಗಿದೆ ಎಂದು ಹೇಳಿದರು.
ಜೆಡಿಎಸ್ ಮುಖಂಡ ಜ್ವಾಲನಯ್ಯ ಮಾತನಾಡಿ, ಇನಾಂ ಭೂಮಿಯಲ್ಲಿ ವಾಸವಾಗಿರುವ ಜನರು ಭೂಮಿ ಬಿಡುವುದಿಲ್ಲ. ಇಲ್ಲಿಯ ಜನರಿಗೆ ವಿಷ ಸೇವಿಸುವ ಪರಿಸ್ಥಿತಿ ನಿರ್ಮಾಣಗೊಂಡಿದೆ ಎಂದು ತಿಳಿಸಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜಪ್ಪ, ಮುಖಂಡರಾದ ಮಂಜಪ್ಪಯ್ಯ, ಕೆ.ಭರತ್, ರೈತ ಸಂಘದ ಅಧ್ಯಕ್ಷ ದುಗ್ಗಪ್ಪಗೌಡ, ರಾಜ್ಯ ಉಪಾಧ್ಯಕ್ಷ ಮಹೇಶ್ ಮಾತನಾಡಿದರು.
ಇನಾಂ ಭೂಮಿ ಉಳುಮೆ ಮಾಡುತ್ತಿರುವ ಭೂಮಿ, ಕೃಷಿಕರಿಗೆ ಭೂ ಸುಧಾರಣೆ ಕಾಯ್ದೆಯನ್ವಯ ನೀಡಿರುವ ಭೂಮಿಯಾಗಿದೆ. ಈ ಕಾರಣದಿಂದ ದೀರ್ಘ ಕಾಲದಿಂದ ಗೇಣಿ ಮೂಲಕ ಅನುಭವಿಸುತ್ತಿದ್ದು, ಈ ಜಮೀನಿಗೆ ಕಂದಾಯ ಇಲಾಖೆ ದಾಖಲೆ ನೀಡಿರುವುದಲ್ಲದೆ ಮೂಲ ಸೌಕರ್ಯಗಳಾದ ರಸ್ತೆ, ಚರಂಡಿ, ಶಾಲೆ, ಆಶ್ರಯ ಮನೆ ಸೇರಿದಂತೆ ಇತರೆ ಯೋಜನೆ ಒದಗಿಸಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಡೀಮ್ಡ್ ಫಾರೆಸ್ಟ್, ಮೀಸಲು ಅರಣ್ಯ, ದಟ್ಟ ಅರಣ್ಯ, ಅಭಯಾರಣ್ಯ, ಹುಲಿಯೋಜನೆ, ಜೈವಿಕ ಪಾರ್ಕ್, ಉದ್ಯಾನವನದ ಹೆಸರಿನಲ್ಲಿ ಜನರ ಬದುಕು ಮತ್ತು ಆರ್ಥಿಕತೆ ಕಸಿದುಕೊಂಡು ಜಿಲ್ಲೆಯ ರೈತರನ್ನು ಒಕ್ಕಲೆಬ್ಬಿಸುವುದಕ್ಕೆ ಸಿದ್ಧತೆ ಮಾಡಿಕೊಂಡಿದೆ ಎಂದು ಹೇಳಿದ್ದಾರೆ.
ಇನಾಂ ಭೂಮಿ ಕೃಷಿಕರನ್ನು ಯಾವುದೇ ಕಾರಣದಿಂದ ತೆರವುಗೊಳಿಸಬಾರದು. ಸರ್ಕಾರ ಇನಾಂ ಕೃಷಿಕರ ಪರವಾಗಿ ನ್ಯಾಯಾಲಯದಲ್ಲಿ ಮಧ್ಯ ಪ್ರವೇಶಿಸಬೇಕು. ಕರ್ನಾಟಕ ಭೂ ಕಬಳಿಕೆ ಕಾಯ್ದೆಯನ್ನು ಗ್ರಾಮಾಂತರ ಪ್ರದೇಶದಲ್ಲಿ ಕಾರ್ಯರೂಪಕ್ಕೆ ಬಾರದಂತೆ ತಡೆಯಬೇಕು. ವಿವಿಧ ಸರ್ಕಾರಿ ಆದೇಶಗಳನ್ನು ಉದ್ದೇಶಪೂರ್ವಕವಾಗಿ ಅಧಿಕಾರಿಗಳು ನಿರ್ಲಕ್ಷಿಸುತ್ತಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಸವೋಚ್ಚ ನ್ಯಾಯಾಲಯದ 1995 ರ ಕೃಷಿಕರ ಪರವಾಗಿರುವ ನಿರ್ದೇಶನಗಳನ್ನು ಮರು ಪರಿಶೀಲಿಸಬೇಕೆಂದು ಒತ್ತಾಯಿಸಲಾಗಿದೆ.
ರೈತ ಸಂಘದ ಕಾರ್ಯಾಧ್ಯಕ್ಷ ಬಿ.ಸಿ. ದಯಾಕರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ. ನಾಗರಾಜ್, ಆರ್. ಮಂಜೇಗೌಡ, ಹೋರಾಟ ಸಮಿತಿ ಮುಖಂಡರಾದ ಮುಮ್ತಾಜ್ ಬೇಗಂ, ಪಂಚಾಯಿತಿ ಅಧ್ಯಕ್ಷೆ ಉಷಾ, ಗೌಸ್ ಮೊಹಿದ್ದೀನ್, ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಎಂ.ಕೆ. ಪ್ರಾಣೇಶ್ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement