ರಾಜ್ಯ ಸರ್ಕಾರ 'ಕ್ರೈಂ ಭಾಗ್ಯ' ಯೋಜನೆ ಸ್ಥಾಪಿಸಲಿ: ರವಿ
ಶಿವಮೊಗ್ಗ: ಇತ್ತೀಚೆಗೆ ನಡೆದ ಎನ್ಕೌಂಟರ್ನಲ್ಲಿ ಮೃತಪಟ್ಟ ಆರೋಪಿ ಕುಟುಂಬಕ್ಕೆ ಸರ್ಕಾರ 10 ಲಕ್ಷ ಪರಿಹಾರ ಕೊಟ್ಟಿದ್ದು ಕೋಮು ಕಾರಣಕ್ಕೆ, ಸರ್ಕಾರದವರು ಕ್ರೈಂ ಭಾಗ್ಯ ಎಂಬ ಹೊಸ ಯೋಜನೆ ಸ್ಥಾಪಿಸಲಿ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ವ್ಯಂಗ್ಯವಾಡಿದ್ದಾರೆ.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಬಿಜೆಪಿ ಜಿಲ್ಲಾ ಸಮಿತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರಕ್ಕೆ ಇನ್ನೂ ಬುದ್ಧಿ ಬಂದಂತೆ ಕಾಣುತ್ತಿಲ್ಲ. ಸಮಾಜ ಒಡೆಯುವ ಕೆಲಸಕ್ಕೆ ಅದು ಕೈಹಾಕುತ್ತಿದೆ. ಶಾದಿ ಭಾಗ್ಯ, ಪ್ರವಾಸ ಭಾಗ್ಯ ಮುಂತಾದ ಹಲವು ಯೋಜನೆಗಳು ಜಾತಿ ಆಧಾರದಲ್ಲಿ ಮೂಡಿವೆ. ಪೊಲೀಸ್ ಇಲಾಖೆಯಲ್ಲೂ ಇದು ವಿಸ್ತಾರವಾಗಿದೆ. ಕೋಮುವಾದಿಗಳು ಎಂದು ನಮ್ಮನ್ನು ಕರೆಯುವ ಇವರು ಈಗ ಮಾಡುತ್ತಿರುವುದು ಅದನ್ನೆ ಎಂದು ಟೀಕಿಸಿದರು.
ಬಿಜೆಪಿಗೆ ಮುಂದೆ ಉತ್ತಮ ಭವಿಷ್ಯವಿದೆ. ಕಾರ್ಯಕರ್ತರು ರಾಜ್ಯದಲ್ಲಿ ಬಿಜೆಪಿ ಸಾಮ್ರಾಜ್ಯವನ್ನು ಮತ್ತೊಮ್ಮೆ ವಿಸ್ತರಿಸಬೇಕಾಗಿದೆ ಎಂದು ಕರೆ ನೀಡಿದ ಅವರು, ಮುಂಬರುವ ನಗರಸಭೆ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹೀಗೆ ಎಲ್ಲ ಸ್ಥಳೀಯ ಸಂಸ್ಥೆಗಳ ಅಧಿಕಾರಗಳನ್ನು ಬಿಜೆಪಿ ಹಿಡಿಯುವ ಮೂಲಕ ತಳಪಾಯ ಬಿಗಿಗೊಳಿಸಬೇಕಾಗಿದೆ ಎಂದರು.
ಇಚ್ಛಾಶಕ್ತಿ: ಮೋದಿ ಎಲ್ಲರ ಇಚ್ಛೆಯಂತೆ ಪ್ರಧಾನಿಯಾಗಿದ್ದಾರೆ. ಅವರು ಇಡುವ ಪ್ರತಿಯೊಂದು ಹೆಜ್ಜೆಯೂ ದೇಶ ಕಟ್ಟುವ ಉತ್ಸಾಹದಲ್ಲಿದೆ. ಅವರು ಇಡುವ ಹೆಜ್ಜೆಗಳಲ್ಲಿ ಸದಾ ಹೊಸತು ಕಾಣುತ್ತಿದೆ ಎಂದು ಹೇಳಿದ ಅವರು, ದೇಶ ಕಟ್ಟಲು ಬಹುಮತವೊಂದಿದ್ದರೆ ಸಾಲದು, ಇಚ್ಛಾಶಕ್ತಿಯೂ ಬೇಕು ಎಂಬ ಮಹತ್ವಾಕಾಂಕ್ಷಿಯುಳ್ಳ ಮೋದಿ ಸಂಸತ್ಗೆ ಪ್ರವೇಶ ಮಾಡುವ ಮುನ್ನ ಶಿರಬಾಗಿ ನಮಸ್ಕರಿಸಿ ಭಾರತದ ಸಾಂಸ್ಕೃತಿಕ ಹಿರಿಮೆ ಎತ್ತಿ ತೋರಿಸಿದ್ದಾರೆ ಎಂದು ಹೇಳಿದರು.
ಮೋದಿ ಪ್ರಧಾನಿಯಾದರೆ ಬಹಳ ಕಷ್ಟ ಎಂದು ಅನೇಕರು ಹೇಳುತ್ತಿದ್ದರು. ಆದರೆ, ಇಂದು ಅದೇ ವಿರೋಧಿಗಳು ಮೋದಿಯ ಬಗ್ಗೆ ಒಳ್ಳೆಯ ಮಾತನಾಡುತ್ತಿದ್ದಾರೆ, ರ್ಜನಪೀಠ ಪ್ರಶಸ್ತಿ ಪಡೆದವರೂ ಕೂಡ ಮೋದಿಯವರ ಹೆಜ್ಜೆಗಳನ್ನು ಗೌರವಿಸುವಷ್ಟರ ಮಟ್ಟಿಗೆ ಅವರ ನಡೆ ಇದೆ ಎಂದರು.
ಹೆಗ್ಗೋಡಿನಲ್ಲಿ ಇಂದಿನಿಂದ 'ಹಲಸಿನ ಸಂತೆ'
ಸಾಗರ: ಹೆಗ್ಗೋಡಿನ ಬಾಲನಂದನ ಟ್ರಸ್ಟ್ ವತಿಯಂದ ಹಲಸು ಬೆಳೆಸು ಅಭಿಯಾನದ ಅಂಗವಾಗಿ 'ಹಲಸಿನ ಸಂತೆ' ಕಾರ್ಯಕ್ರಮವನ್ನು ಜೂ. 8 ರಿಂದ ಹಮ್ಮಿಕೊಳ್ಳಲಾಗಿದೆ. ಜೂ. 8ರಂದು ಮಧ್ಯಾಹ್ನ 3-30 ರಿಂದ ರಾತ್ರಿ 9ರವರೆಗೆ ಸೇವಾಸಾಗರ ಶಾಲೆಯ ಅಜಿತ ಸಭಾಭವನದಲ್ಲಿ, ಜೂ. 15ರಂದು ಮಧ್ಯಾಹ್ನ 3-30 ರಿಂದ ರಾತ್ರಿ 9ರವರೆಗೆ ಗಾಂಧಿಮಂದಿರದಲ್ಲಿ, ಜೂ. 22 ಹಾಗೂ 29ರಂದು ಮಧ್ಯಾಹ್ನ 3-30ರಿಂದ ಸಂಜೆ 9ರವರೆಗೆ ಅಜಿತ ಸಭಾಭವನದಲ್ಲಿ ಹಲಸಿನ ಸಂತೆ ನಡೆಯಲಿದೆ. ಸಂತೆಯಲ್ಲಿ ಹಲಸಿನಕಾಯಿ, ಹಣ್ಣುಗಳಲ್ಲದೆ ಹಲಸಿನ ಖಾದ್ಯ, ತಿಂಡಿ ಮತ್ತು ಸಸಿ ಮಾರಾಟದ ವ್ಯವಸ್ಥೆ ಮಾಡಲಾಗಿದೆ. ಭಾಗವಹಿಸಲು ಇಚ್ಛಿಸುವವರು ರವೀಂದ್ರ- 9900772404, 9483391663 ಸಂಪರ್ಕಿಸಿ.