ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಅಕ್ರಮ ನಲ್ಲಿ ಸಕ್ರಮಕ್ಕೆ ಸಮ್ಮತಿ

Srinivasa Murthy VN
Updated On : 1 Jul 2014, 12:20 pm

ಕಡೂರು:  ಪಟ್ಟಣದ ಮರವಂಜಿ ವೃತ್ತದಲ್ಲಿ ದಿ. ಶಾಸಕ ಕೆ.ಎಂ.ಕೃಷ್ಣಮೂರ್ತಿಯವರ ಪುತ್ಥಳಿ ನಿರ್ಮಾಣಕ್ಕೆ ಅನುಮೋದನೆ, ಅಕ್ರಮ ನಲ್ಲಿಗಳ ಸಕ್ರಮಕ್ಕೆ ಸದಸ್ಯರ ಒಪ್ಪಿಗೆ, ಪಟ್ಟಣದ ಕಸ ವಿಲೇವಾರಿ ಮೂಲಕ ಸ್ವಚ್ಚತೆಗೆ ಆದ್ಯತೆ ಇದು ಕಡೂರು ಪುರಸಭಾ ಸದಸ್ಯರ ಪ್ರಥಮ ಸಾಮಾನ್ಯ ಸಭೆಯ ಚಿತ್ರಣ.
ಪುರಸಭೆಯ ಕನಕ ಸಭಾಂಗಣದಲ್ಲಿ ನಡೆದ ನೂತನ ಸದಸ್ಯರ ಪ್ರಥಮ ಸಾಮಾನ್ಯ ಸಭೆ ಅಧ್ಯಕ್ಷೆ ಸರಸ್ವತಿ ಕೃಷ್ಣಮೂರ್ತಿ ಅಧ್ಯಕ್ಷತೆ ಹಾಗೂ ಉಪಾಧ್ಯಕ್ಷ ಜಯಣ್ಣ ಮತ್ತು ಮುಖ್ಯಾಧಿಕಾರಿ ಕುಮಾರನಾಯ್ಕರ ಸಮ್ಮುಖದಲ್ಲಿ ನಡೆಯಿತು.
ಪಟ್ಟಣದಲ್ಲಿ ಕಸದರಾಶಿ ಹೆಚ್ಚಾಗಿದ್ದು, ರು. 6 ಲಕ್ಷ ವೆಚ್ಚದಲ್ಲಿ ಕಸ ವಿಲೇವಾರಿ ಮಾಡಲಾಗಿದೆ ಎಂದು ವಿವರ ನೀಡಿದ್ದೀರಿ. ಎಲ್ಲೆಲ್ಲಿ ಕಸ ತೆಗೆಸಿದ್ದೀರಿ ಎಂದು ವಿವರ ನೀಡಿ ಎಂದು ಸದಸ್ಯ ಈರಳ್ಳಿ ರಮೇಶ್ ಅಧ್ಯಕ್ಷರನ್ನು ಕೇಳಲಾಗಿ, ಅಧ್ಯಕ್ಷರ ಪರವಾಗಿ ಸದಸ್ಯ ಬಶೀರ್‌ಸಾಬ್ ಮಾತನಾಡಲು ಮುಂದಾದಾಗ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ಮಧ್ಯ ಪ್ರವೇಶಿಸಿದ ಮುಖ್ಯಾಧಿಕಾರಿ ಪಟ್ಟಣದ ಯಾವ ವಾರ್ಡುಗಳಲ್ಲಿ ಕಸ ಇರುವ ಬಗ್ಗೆ ವಿವರ ನೀಡಿದಲ್ಲಿ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
3 ಸಾವಿರ ಅಕ್ರಮ ನಲ್ಲಿ: ಪಟ್ಟಣದಲ್ಲಿ 3 ಸಾವಿರ ನಲ್ಲಿಗಳಿದ್ದು ಅದರಲ್ಲಿ ಅಕ್ರಮ ನಲ್ಲಿಗಳ ಸಂಪರ್ಕ ಹೆಚ್ಚಾಗಿವೆ. ಅವುಗಳನ್ನು ಗುರುತಿಸಿ ಸಕ್ರಮ ಗೊಳಿಸಿದಲ್ಲಿ ಪುರಸಭೆಗೆ ಆದಾಯ ಬರಲಿದೆ ಎಂದು ಸದಸ್ಯೆ ಪುಷ್ಪಲತಾ ಸೋಮೇಶ್ ಸಲಹೆ ನೀಡಿದಾಗ ಸರ್ವ ಸದಸ್ಯರು ಒಪ್ಪಿಗೆ ಸೂಚಿಸುವ ಮೂಲಕ ಈ ಬಗ್ಗೆ ಇಂಜಿನಿಯರ್‌ಗಳು ಕಾರ್ಯಪ್ರವೃತ್ತರಾಗುವಂತೆ ಸೂಚನೆ ನೀಡಲಾಯಿತು.
ಪಟ್ಟಣದಲ್ಲಿ ಡೆಂಗ್ಯೂ, ಮಲೇರಿಯಾದಂತಹ ಸಾಂಕ್ರಾಮಿಕ ಕಾಯಿಲೆಗಳು ಹರಡುತ್ತಿವೆ ಎಂದು ಸದಸ್ಯರು ದೂರಿದಾಗ, ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ ಮುಖ್ಯಾಧಿಕಾರಿ ಪರಿಸರ ಇಂಜಿನಿಯರ್ ಕ್ರಮ ವಹಿಸುವಂತೆ ಸೂಚನೆ ನೀಡಿದರು.  ಸದಸ್ಯ ಎಂ.ಸೋಮಶೇಖರ್, ತೋಟದ ಮನೆ ಮೋಹನ್, ಕೋಳಿ ಲೋಕೇಶ್ ಸೇರಿದಂತೆ ಅನೇಕ ಸದಸ್ಯರು ಪಟ್ಟಣದ ಮರವಂಜಿ ವೃತ್ತದಲ್ಲಿ ದಿ. ಶಾಸಕ ಕೆ.ಎಂ.ಕೃಷ್ಣಮೂರ್ತಿ ಪುತ್ಥಳಿ ನಿರ್ಮಿಸಬೇಕೆಂಬ ವಿಷಯಕ್ಕೆ ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿದರು.
ರಸ್ತೆಗೆ ಸಾಹಿತಿ ಜಿ.ಸೂರಿ ಹೆಸರು:  ಮಾಜಿ ಪುರಸಭಾಧ್ಯಕ್ಷ ದಿ.ಜನರಲ್ ತಿಮ್ಮಯ್ಯ ಮತ್ತು ಸಾಹಿತಿ ಜಿ.ಸೂರಿಯವರ ಹೆಸರನ್ನು ರಸ್ತೆಗಳಿಗೆ ನಾಮಕರಣ ಮಾಡುವಂತೆ ಸಭೆ ನಿರ್ಣಯ ಕೈಗೊಂಡಿತು. 2013 ಸಾಲಿನ ಎಸ್‌ಎಫ್‌ಸಿ ಶೇ 7.2 ಮತ್ತು 22.75 ಯೋಜನೆಯಡಿಯಲ್ಲಿ ಫಲಾನುಭವಿಗಳನ್ನು ಗುರುತಿಸಿ ಸಹಾಯ ಧನಕ್ಕೆ ಬಂದಿರುವ ಅರ್ಜಿಗಳನ್ನು ಸದಸ್ಯರ ಅಭಿಪ್ರಾಯದ ಮೇರೆಗೆ ಪರಿಶೀಲಿಸಿ ನೀಡುವಂತೆ ಸಭೆ ಒಪ್ಪಿಗೆ ಸೂಚಿಸಿತು.
ಇದೇ ಸಂದರ್ಭದಲ್ಲಿ 23 ನೂತನ ಪುರಸಭಾ ಸದಸ್ಯರನ್ನು ಪುರಸಭೆ ಅಧಿಕಾರಿ, ಸಿಬ್ಬಂದಿ ವರ್ಗ ಮುಖ್ಯಾಧಿಕಾರಿ ಕುಮಾರನಾಯ್ಕ ನೇತೃತ್ವದಲ್ಲಿ ಸನ್ಮಾನಿಸಿತು. ಸದಸ್ಯ ಎಂ.ಸೋಮಶೇಖರ್, ಕೋಳಿ ಲೋಕೇಶ್, ತೋಟದಮನೆ ಮೋಹನ್, ವೆಂಕಟೇಶ್, ಹಾಜಿರಾಬಿ ಖಾದರ್, ಇಂಜಿನಿಯರ್ ಮಂಜುನಾಥ್, ಆರೋಗ್ಯಾಧಿಕಾರಿ ಹರೀಶ್, ಈಶ್ವರ್, ಸಿಬ್ಬಂದಿ ತಿಮ್ಮಯ್ಯ, ನಾಗರಾಜು, ಸುಬ್ರಹ್ಮಣ್ಯ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement