ದೇವಿ ವಿಗ್ರಹ ನಿರ್ಮಾಣ ಆರಂಭ
ನರಸಿಂಹರಾಜಪುರ: ಕೋಟೆ ಮಾರಿಕಾಂಬ ದೇವಿ ವಿಗ್ರಹ ನಿರ್ಮಾಣ ಕಾರ್ಯದಲ್ಲಿ ಎಲ್ಲಾ ಭಕ್ತರ ಸಹಕಾರ ಇರಬೇಕು ಎಂಬ ಉದ್ದೇಶದಿಂದ ದೇವಸ್ಥಾನದ ಸಮಿತಿಯವರು ಧನ,ಧಾನ್ಯ ಸಂಗ್ರಹ ಕಾರ್ಯಕ್ರಮ ಹಮ್ಮಿಕೊಂಡಿರುವುದು ಉತ್ತಮ ಕಾರ್ಯ ಎಂದು ಸಿಂಹನಗದ್ದೆ ಬಸ್ತಿಮಠದ ವ್ಯವಸ್ಥಾಪಕ ಪ್ರಭಾಕರ ರೈ ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರವಾಸಿ ಮಂದಿರದಲ್ಲಿ ಕೋಟೆ ಮಾರಿಕಾಂಬ ದೇವಸ್ಥಾನ ಆಡಳಿತ ಮಂಡಳಿ ಕೋಟೆ ಮಾರಿಕಾಂಬ ದೇವಿ ವಿಗ್ರಹ ನಿರ್ಮಾಣಕ್ಕೆ ತಗಲುವ ವೆಚ್ಚವನ್ನು ಸಾರ್ವಜನಿಕರಿಂದ ಸಂಗ್ರಹಿಸುವ ಕಾರ್ಯಕ್ರಮವನ್ನು ಮೂರು ಮುಷ್ಟಿ ಅಕ್ಕಿ ನೀಡುವುದರೊಂದಿಗೆ ಉದ್ಘಾಟಿಸಿ ಮಾತನಾಡಿದರು.
ವಿಗ್ರಹ ನಿರ್ಮಾಣದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು ಎಂಬ ಉದ್ದೇಶದಿಂದ ಪ್ರಾರಂಭಗೊಂಡ ಕಾರ್ಯಕ್ರಮಕ್ಕೆ ತಾಲೂಕಿನ ಜನತೆ ಕೈ ಜೋಡಿಸಬೇಕು ಎಂದು ಅವರು ಕರೆ ನೀಡಿದರು.
ಕೋಟೆ ಮಾರಿಕಾಂಬ ದೇವಸ್ಥಾನ ಸಮಿತಿ ಅಧ್ಯಕ್ಷ ಕೆ.ವಿ.ವಸಂತಕುಮಾರ್ ಮಾತನಾಡಿದರು. ಪಪಂ ಅಧ್ಯಕ್ಷೆ ಲೇಖಾ ವಸಂತ್, ಸಮಿತಿ ಮುಖಂಡ ಕೆ.ಪಿ.ಸುರೇಶ್‌ಕುಮಾರ್, ಪಪಂ ಸದಸ್ಯ ಲಕ್ಷ್ಮಣಶೆಟ್ಟಿ, ಸುನಿಲ್‌ಕುಮಾರ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಪ್ಪ, ಶೃಂಗೇರಿ, ನ.ರಾ.ಪುರ ತಾಲೂಕು ಯೋಜನಾಧಿಕಾರಿ ಕು.ಉಮಾವತಿ, ನ.ರಾ.ಪುರ ತಾಲೂಕು ಮೇಲ್ವೀಚಾರಕ ಗಣೇಶ್, ಮುಖಂಡ ನಾರಾಯಣಮೂರ್ತಿ, ವೈ.ಎನ್.ಇಂದುಶೇಖರ್, ಹೂವಪ್ಪ, ವೆಂಕಟೇಶ, ಡಿ.ಕೃಷ್ಣಮೂರ್ತಿ ಇದ್ದರು.
ಕೆಲಸದ ಆಮಿಷ: ವ್ಯಕ್ತಿ ಬಂಧನ
ಚಿಕ್ಕಮಗಳೂರು: ರೇಲ್ವೆ ಇಲಾಖೆಯಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿ ಇಬ್ಬರನ್ನು ವಂಚಿಸಿರುವ ಬಿಜಾಪುರ ಜಿಲ್ಲೆಯ ಕೂಡಲಸಂಗಮದ ಬಸವರಾಜ ನಿಡಗುಂದಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಈತ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಇಬ್ಬರು ಯುವಕರನ್ನು ವಂಚಿಸಿ ಅವರಿಂದ ರು. 2.78 ಲಕ್ಷ ಪಡೆದುಕೊಂಡಿದ್ದ ಎಂದು ಜಿಲ್ಲಾ ರಕ್ಷಣಾಧಿಕಾರಿ ಆರ್. ಚೇತನ್ ಸುದ್ದಿಗೋಷ್ಠಿಯಲ್ಲಿ ಸೋಮವಾರ ತಿಳಿಸಿದರು.
ಮೂಡಿಗೆರೆ ತಾ. ಕಳಸ ಹೋಬಳಿಯ ಹೆಮ್ಮಕ್ಕಿ ಇಡಕಿಣಿ ಗ್ರಾಮದ ವಿಶ್ವನಾಥ್ ಹಾಗೂ ಕೋಟೆಮಕ್ಕಿ ಗ್ರಾಮದ ಸುಜಿತ್ ಅವರಿಂದ ಹಣವನ್ನು ಪಡೆದಿದ್ದು, ಆತನನ್ನು ಬಂಧಿಸಿ ಅವನ ಬಳಿ ಇದ್ದ 6,435 ಹಾಗೂ ಒಂದು ಮೊಬೈಲ್ ಫೋನ್ ಮತ್ತು ಎರಡು ಎಟಿಎಂ ಕಾರ್ಡ್‌ಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.
ವಿಶ್ವನಾಥ್ ಬರೆದ ಲೇಖನ ಪತ್ರಿಕೆಯೊಂದರಲ್ಲಿ ಪ್ರಕಟಗೊಂಡಿದ್ದು, ಅದರಲ್ಲಿ ತನ್ನ ಮೊಬೈಲ್ ಹಾಕಿರುವುದನ್ನು ಕಂಡಿರುವ ಬಸವರಾಜ್, ಆ ಮೊಬೈಲ್‌ಗೆ ಸಂಪರ್ಕಿಸಿ ರು. 5 ಲಕ್ಷ ನೀಡಿದರೆ ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿದ್ದು, ಅದರಂತೆ ವಿಶ್ವನಾಥ್ ವಿವಿಧ ಹಂತಗಳಲ್ಲಿ ಬಸವರಾಜ ನಿಡಗುಂದಿ ಸ್ನೇಹಿತ ಮಹಾಂತೇಶ್ ಚನ್ನಯ್ಯನವರ್ ಅಕೌಂಟ್‌ಗೆ ರು. 2.28 ಲಕ್ಷ ಸಂದಾಯ ಮಾಡಿದ್ದಾನೆ. ಇದರ ಜತೆಗೆ ವಿಶ್ವನಾಥ್ ಸ್ನೇಹಿತ ಸುಜಿತ್ ಸಹ ಕೆಲಸಕ್ಕಾಗಿ ರು. 50 ಸಾವಿರ ಸಂದಾಯ ಮಾಡಿದ್ದಾರೆ.
ಬಸವರಾಜ ನಿಡಗುಂದಿ ಹೇಳಿದಂತೆ ಆತನನ್ನು ಭೇಟಿ ಮಾಡಲು ಬಿಜಾಪುರಕ್ಕೆ ಹೋಗಿದ್ದರು. ಆ ಸಂದರ್ಭದಲ್ಲಿ ಬಸವರಾಜ ಬೇರೆ ಬೇರೆ ಕಾರಣ ಹೇಳಿ ತಪ್ಪಿಸಿಕೊಂಡಿದ್ದ. ಇದರಿಂದಾಗಿ ಅನುಮಾನಗೊಂಡ ವಿಶ್ವನಾಥ್ ಕಳಸ ಪೊಲೀಸರಿಗೆ ದೂರು ನೀಡಿದ್ದು, ಈ ಪ್ರಕರಣದ ತನಿಖೆಗಾಗಿ ಪೊಲೀಸ್ ಸಿಬ್ಬಂದಿ ತಂಡ ರಚನೆ ಮಾಡಿದ್ದು, ತಾಂತ್ರಿಕ ಸಾಕ್ಷಾಧಾರದ ಆಧಾರದ ಮೇಲೆ ಬಸವರಾಜನನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ತಿಳಿಸಿದ್ದಾರೆ.