ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಭದ್ರೆ ಒಡಲಿಗೆ ಕಸ ವಿಲೇವಾರಿ

Srinivasa Murthy VN
Updated On : 1 Jul 2014, 12:19 pm

ಬಾಳೆಹೊನ್ನೂರು: ಪ್ರಮುಖ ಯಾತ್ರಾ ಸ್ಥಳ ಹಾಗೂ ಹಲವು ಊರುಗಳಿಗೆ ಸಂಪರ್ಕ ಕಲ್ಪಿಸುವ ಕೊಂಡಿ, ವಾಣಿಜ್ಯ ಕೇಂದ್ರ ಬಾಳೆಹೊನ್ನೂರು ಪಟ್ಟಣದ ಎಲ್ಲೆಂದರಲ್ಲಿ ರಾಶಿ ರಾಶಿ ಕಸ ತುಂಬಿದ್ದು, ಅದರ ವಿಲೇವಾರಿಗೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿಲ್ಲ.
ಪಟ್ಟಣದ ಮುಖ್ಯರಸ್ತೆಯ ಬಸ್‌ನಿಲ್ದಾಣ ಸಮೀಪದ ಪೆಟ್ರೋಲ್ ಬಂಕ್, ನ.ರಾ.ಪುರ ರಸ್ತೆಯ ಡೋಬಿಹಳ್ಳ. ಭದ್ರಾನದಿಯ ಸೇತುವೆ ಬಳಿ, ರೋಟರಿ ವೃತ್ತ, ಕಾನ್ಕೆರೆ ರಸ್ತೆ ಸೇರಿದಂತೆ ಹಲವು ಭಾಗಗಳಲ್ಲಿ ಅಂಗಡಿ ಮುಂಗಟ್ಟುಗಳಿಂದ ತಂದು ಸುರಿದ ಕಸದ ರಾಶಿಯಿಂದ ಪಟ್ಟಣದಲ್ಲಿ ಕೊಳಕುಮಯ ವಾತಾವರಣ ನಿರ್ಮಾಣವಾಗಿ ದುರ್ನಾತ ಬೀರುತ್ತಿದೆ.
ಡೋಬಿಹಳ್ಳ ಹಾಗೂ ಭದ್ರಾನದಿ ಸೇತುವೆ ಮೇಲಿಂದ ಭಾರಿ ಪ್ರಮಾಣದ ಕಸವನ್ನು ಸುರಿಯುತ್ತಿರುವುದರಿಂದ ಕಸ ಹಾಗೂ ಮಲಿನ ವಸ್ತುಗಳು ಭದ್ರಾನದಿಯ ನೀರಿನಲ್ಲಿ ಸೇರಿ ಕಲುಷಿತವಾಗುತ್ತಿದೆ.
ಅದೇ ನೀರನ್ನು ಬಾಳೆಹೊನ್ನೂರು ವ್ಯಾಪ್ತಿಯ ಜನ ಕುಡಿಯುವಂತಾಗಿದೆ. ಅದಲ್ಲದೇ ಹಲವು ಕೋಳಿ ಅಂಗಡಿಗಳ ತ್ಯಾಜ್ಯವನ್ನೂ  ರಾತ್ರಿ ವೇಳೆ ಭದ್ರಾ ನದಿಗೆ ಹಾಕುತ್ತಿದ್ದು ಇದರಿಂದ ರೋಗಗಳು ಸಾರ್ವಜನಿಕರಿಗೆ ಬರುವ ಅಪಾಯ ಎದುರಿಗಿದೆ.
ಕ್ರಮ ಕೈಗೊಳ್ಳದ ಪಂಚಾಯಿತಿ:  ಪಟ್ಟಣದ ವ್ಯಾಪ್ತಿಯಲ್ಲಿ ಪಂಚಾಯಿತಿ ವತಿಯಿಂದ ಸೂಕ್ತ ಕಸದ ತೊಟ್ಟಿಗಳನ್ನು ಇಟ್ಟು ನಿರ್ವಹಣೆ ಮಾಡದೇ ಇರುವುದರಿಂದ ಹಾಗೂ ಕೆಲವು ಜಾಗಗಳಲ್ಲಿ ಕಸ ಹಾಕದಂತೆ ನಾಮಫಲಕ ಹಾಕಿದ್ದರೂ ಕೆಲವರು ಅದರ ಮುಂದೆಯೇ ಕಸ ಹಾಕುತ್ತಿರುವ ಬಗ್ಗೆ ಪಂಚಾಯಿತಿ ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ಈ ಸಮಸ್ಯೆ ಉಂಟಾಗಿದೆ ಎಂದು ಸಾರ್ವಜನಿಕರು ದೂರುತ್ತಾರೆ. ಕೆಲವೆಡೆ ಕಸದ ರಾಶಿಗೆ ಬೆಂಕಿ ಹಚ್ಚಿ ಸುಡುತ್ತಿರುವುದು ವಾಯು ಮಾಲಿನ್ಯಕ್ಕೂ ಕಾರಣವಾಗಿದೆ.
ಪಟ್ಟಣದ ಮುಖ್ಯ ರಸ್ತೆಯ ಬಸ್ ನಿಲ್ದಾಣದ ಸಮೀಪವಿರುವ ಪೆಟ್ರೋಲ್ ಬಂಕ್ ಮುಂಭಾಗದ ಲೋಕೋಪಯೋಗಿ ಇಲಾಖೆಯ ಖಾಲಿ ಜಾಗದಲ್ಲಿ ಬಸ್ ನಿಲ್ದಾಣದ ಸುತ್ತಮುತ್ತಲಿನ ಅಂಗಡಿ ಮುಂಗಟ್ಟುಗಳಿಂದ ಕಸವನ್ನು ತಂದು ಸುರಿಯುತ್ತಿದ್ದು ದುರ್ನಾತ ಬೀರುತ್ತಿದೆ. ಇದೇ ಪರಿಸ್ಥಿತಿ ಭದ್ರಾ ಸೇತುವೆ, ಡೋಬಿಹಳ್ಳದ ಸಮೀಪವೂ ಇದೆ. ಇದರಿಂದ ಆ ಭಾಗದಲ್ಲಿ ಸಂಚರಿಸುವ ಸಾರ್ವಜನಿಕರು ಮೂಗುಮುಚ್ಚಿ  ತಿರುಗಾಡಬೇಕಾಗಿದೆ.
ಬಿ.ಕಣಬೂರು ಗ್ರಾಮ ಪಂಚಾಯಿತಿ ವತಿಯಿಂದ ಕಸ ವಿಲೇವಾರಿ ಮಾಡಲು ತೋಟಗಾರಿಕೆ ಇಲಾಖೆ ಸಮೀಪ ಜಾಗ ಮೀಸಲಿಡಲಾಗಿದೆ. ಈ ಜಾಗಕ್ಕೆ ಪಟ್ಟಣದಲ್ಲಿ ಸಂಗ್ರಹವಾಗುವ ಸಂಪೂರ್ಣ ಕಸವನ್ನು ತಂದು ಹಾಕುವಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ ವಿಫಲವಾಗಿದೆ.
ಸ್ವಾಗತ ಕೋರುವ ಕಸದ ರಾಶಿ:  ಪ್ರಸಿದ್ಧ ಯಾತ್ರಾ ಸ್ಥಳ, ವೀರಶೈವರ ಪಂಚಪೀಠದ ಜಗದ್ಗುರು ರೇಣುಕಾಚಾರ್ಯರು ನೆಲೆನಿಂತ ರಂಭಾಪುರಿಗೆ ಆಗಮಿಸುವ ಭಕ್ತರಿಗೆ ಇಲ್ಲಿ ಬಂದ ಕೂಡಲೇ ಕಸದ ರಾಶಿವೇ ಸ್ವಾಗತ ನೀಡುವುದು ಅಸಹ್ಯವನ್ನುಂಟು ಮಾಡಿದೆ.
ಪಟ್ಟಣದ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ಬಿದ್ದಿರುವ ಕಸದ ರಾಶಿಯಿಂದ ಊರಿನ ಸೌಂದರ್ಯಕ್ಕೆ ಕಳಂಕ ಉಂಟಾಗಿದ್ದು, ನಾನಾ ರೀತಿಯ ರೋಗ ರುಜಿನಗಳು ಹರಡುವ ಸಾಧ್ಯತೆ ಇದ್ದು, ಭದ್ರೆಯ ಒಡಲು ಸೇರಿ ನಾನಾ ರೋಗಗಳು ಹರಡಲು ಕಾರಣವಾಗುತ್ತಿರುವ ವ್ಯಕ್ತಿಗಳ ವಿರುದ್ಧ ಶಿಸ್ತಿನ ಕ್ರಮಕೈಗೊಳ್ಳಲು ಅಧಿಕಾರಿಗಳು ಮಂದಾಗಬೇಕಾಗಿದೆ.  
ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಸ್ಥಳೀಯ ಸಂಘ ಸಂಸ್ಥೆಗಳು, ಶಾಲಾ ಕಾಲೇಜುಗಳು ಹಾಗೂ  ಸಾರ್ವಜನಿಕರ ಸಹಯೋಗದೊಂದಿಗೆ ಪಟ್ಟಣದಲ್ಲಿ ಸ್ವಚ್ಛತಾ ಪ್ರಜ್ಞೆ ಮೂಡಿಸುವ ಕಾರ್ಯ ತುರ್ತಾಗಿ ಆಗಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement