ಧನಂಜಯಕುಮಾರ್ ನಾಮಪತ್ರ
ಚಿಕ್ಕಮಗಳೂರು: ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ನಾಮಪತ್ರ ಸಲ್ಲಿಕೆಗೆ ಮೂರನೇ ದಿನವಾದ ಶುಕ್ರವಾರದಂದು ಧನಂಜಯಕುಮಾರ್(ಜೆಡಿಎಸ್) ಅವರು 2 ನಾಮಪತ್ರ ಸಲ್ಲಿಸಿದರು. ಕ್ಷೇತ್ರದಲ್ಲಿ ಇದುವರೆಗೆ ಬಿಜೆಪಿ 1, ಜೆಡಿಎಸ್‌ನ 2 ಸೇರಿದಂತೆ ಒಟ್ಟು 3 ನಾಮಪತ್ರಗಳು ಸಲ್ಲಿಕೆಯಾಗಿವೆ. ನಾಮಪತ್ರಗಳ ಸಲ್ಲಿಕೆಗೆ ಮಾ. 26 ಕೊನೆಯ ದಿನಾಂಕವಾಗಿರುತ್ತದೆ ಎಂದು ಕ್ಷೇತ್ರದ ಚುನಾವಣಾಧಿಕಾರಿ ಹಾಗೂ ಉಡುಪಿ ಜಿಲ್ಲಾಧಿಕಾರಿ ಡಾ. ಮುದ್ದುಮೋಹನ್ ಅವರು ತಿಳಿಸಿದ್ದಾರೆ.
ಪಿಡಿಒ ಅಮಾನತು
ಕಡೂರು: ಚುನಾವಣಾ ನೀತಿ ಸಂಹಿತೆ ಜಾರಿಯಾಗಿದ್ದರೂ ಕಾಮಗಾರಿಗೆ ಚಾಲನೆ ನೀಡಿದ್ದ ಪ್ರಕರಣಕ್ಕೆ ಸಂಭಂದಿಸಿದಂತೆ ಕಡೂರು ತಾಲೂಕು ಹೋಚೀಹಳ್ಳಿ ಗ್ರಾಮ ಪಂಚಾಯ್ತಿ ಅಭಿವೃದ್ದಿ ಅಧಿಕಾರಿಯನ್ನು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಅಮಾನತುಗೊಳಿಸಿರುವ ಪ್ರಕರಣ ವರದಿಯಾಗಿದೆ. ತಾಲೂಕಿನ ಹೋಚೀಹಳ್ಳಿ ಗ್ರಾಮ ಪಂಚಾಯ್ತಿಯ ಅಭಿವೃದ್ದಿ ಅಧಿಕಾರಿ ನಾಗೇಶ್ ಎಂಬುವರು ಮಾರ್ಚ್ 4 ರಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಸಹ ಎನ್ ಎಂ ಆರ್ನ್ನು ಪಡೆದುಕೊಂಡು ಮಾರ್ಚ್ 10 ರಂದು 5 ಕಾಮಗಾರಿಗಳನ್ನು ಆರಂಭಿಸಿ ಕಾಮಗಾರಿಗೆ ಚಾಲನೆ ನೀಡಿದ್ದರು ಎನ್ನಲಾಗಿದೆ.