ಶಿಕ್ಷಣ, ಸಂಘಟನೆಯಿಂದ ಸಮಸ್ಯೆಗೆ ಪರಿಹಾರ
ಕ.ಪ್ರ.ವಾರ್ತೆ ಚಿಕ್ಕಮಗಳೂರು ಮಾ. 21
ಶಿಕ್ಷಣದ ಮೂಲಕ ಸಂಘಟಿತರಾದಲ್ಲಿ ಎಲ್ಲ ಬಗೆಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯೆ ಎ.ವಿ. ಗಾಯತ್ರಿ ಶಾಂತೇಗೌಡ ಹೇಳಿದ್ದಾರೆ.
ತಾಲೂಕಿನ ಬಸವನಕೋಡಿಯಲ್ಲಿ ಶುಕ್ರವಾರ ಚಿಕ್ಕಮಗಳೂರು ಜಿಲ್ಲಾ ಭೋವಿ ಜನಾಂಗದ ಸಂಘ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ಸಂಘವನ್ನು ಸ್ಥಾಪಿಸುವುದು ಸುಲಭ. ಆದರೆ, ಅದನ್ನು ಸರಿದಾರಿಯಲ್ಲಿ ಕೊಂಡೊಯ್ಯುವುದು ಕಷ್ಟ. ಯಾವುದೇ ರೀತಿಯ ರಾಜಕೀಯಕ್ಕೆ ಅವಕಾಶವಾಗದಂತೆ ಪದಾಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿ. ಶಿಕ್ಷಣ ಮೂಲಕ ಸಮಾಜದಲ್ಲಿ ಎಲ್ಲ ರೀತಿಯ ಸಾಧನೆ ಮಾಡಬಹುದು ಎಂದ ಅವರು, ಜನಪರ, ಸಮಾಜಮುಖಿ ಕಾರ್ಯಗಳ ಜತೆಯಲ್ಲಿ ಜನಾಂಗದವರ ಏಳ್ಗೆಗೆ ಒತ್ತು ಕೊಡಲು ಪದಾಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ನಡೆಸಬೇಕು ಎಂದು ಹೇಳಿದರು.
ಸಂಘಟನೆ ಸಹಕಾರಿ: ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎಸ್. ನಿರಂಜನ ಮಾತನಾಡಿ, ಜನಾಂಗದವರ ಸಮಸ್ಯೆಗಳ ಪರಿಹಾರಕ್ಕೆ ಸಂಘಟನೆ ಸಹಕಾರಿಯಾಗುತ್ತದೆ. ಈ ಜನಾಂಗದವರು ಶ್ರಮಜೀವಿಗಳು. ಅವರು ಸಂಘಟನೆ ಮೂಲಕ ಅಭಿವೃದ್ಧಿ ಹೊಂದಲು ಪ್ರಯತ್ನಿಸಬೇಕು ಎಂದು ತಿಳಿಸಿದರು.
ಕಳಸಾಪುರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ತಿಮ್ಮೇಗೌಡ ಮಾತನಾಡಿ, ರಾಜಕೀಯ, ಶೈಕ್ಷಣಿಕ, ಸಾಮಾಜಿಕವಾಗಿ ಅಭಿವೃದ್ಧಿ ಹೊಂದಬೇಕಾದಲ್ಲಿ ಸಂಘಗಳ ಅಗತ್ಯವಿದೆ. ಆದರೆ, ಸಂಘದ ಉದ್ದೇಶವನ್ನು ಸರಿಯಾದ ರೀತಿಯಲ್ಲಿ ಈಡೇರಿಸಬೇಕು ಎಂದರು.
ಸರ್ವತೋಮುಖ ಅಭಿವೃದ್ಧಿ: ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆಂಗೇಗೌಡ ಮಾತನಾಡಿ, ಭೋವಿ ಜನಾಂಗದ ಸರ್ವತೋಮುಖ ಅಭಿವೃದ್ಧಿಗೆ ಸಂಘ ಕೆಲಸ ಮಾಡಬೇಕು. ಈ ಮೂಲಕ ಮುಖ್ಯವಾಹಿನಿಗೆ ಜನಾಂಗ ಸೇರುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕೆ.ಎಸ್. ಶಾಂತೇಗೌಡ ಮಾತನಾಡಿ, ಸಂಘದ ಮೂಲಕ ಭೋವಿ ಜನಾಂಗ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದಬೇಕು. ಎಲ್ಲರೂ ಪ್ರಾಮಾಣಿಕವಾಗಿ ಕೆಲಸ ಮಾಡುವ ಮೂಲಕ ಸಮಾಜದ ಉದ್ಧಾರಕ್ಕೆ ಶ್ರಮಿಸಬೇಕು ಎಂದು ತಿಳಿಸಿದರು.
ನಗರಸಭೆ ಸದಸ್ಯ ಹಿರೇಮಗಳೂರು ಪುಟ್ಟಸ್ವಾಮಿ ಮಾತನಾಡಿ, ಇಂದು ಸಂಘ- ಸಂಸ್ಥೆಗಳು ಬೇರೆ ಬೇರೆ ಕಾರಣಗಳಿಗಾಗಿ ಸ್ಥಾಪನೆಗೊಳ್ಳುತ್ತವೆ. ಹಾದಿ ತಪ್ಪಿ ಅದೇ ರೀತಿಯಲ್ಲಿ ಅವನತಿ ಹೊಂದುತ್ತವೆ. ಆ ರೀತಿ ಈ ಸಂಘ ಆಗಬಾರದು. ರಾಜಕೀಯವನ್ನು ಸಂಘದಲ್ಲಿ ಬೆರೆಸುವ ಕೆಲಸ ಮಾಡಬಾರದು. ಅಂಬೇಡ್ಕರ್ ವಾಣಿಯಂತೆ ಶಿಕ್ಷಣ, ಸಂಘಟನೆ, ಹೋರಾಟವನ್ನು ಸಂಘ ಅಳವಡಿಸಿಕೊಂಡು ಏಳ್ಗೆ ಹೊಂದಬೇಕು ಎಂದು ಹೇಳಿದರು.
ಸಂಘವನ್ನು ಉದ್ಘಾಟಿಸಿದ ಭೂದಾನಿ ಮೈಸೂರಿನ ವರದರಾಜು ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಜಿಲ್ಲಾ ಭೋವಿ ಸಂಘ ಅಧ್ಯಕ್ಷ ಹೊನ್ನಭೋವಿ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಸವರಾಜು, ಎಪಿಎಂಸಿ ಅಧ್ಯಕ್ಷ ನಿಂಗೇಗೌಡ, ಈಶ್ವರಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಈ.ಆರ್. ಮಹೇಶ್ ಮಾತನಾಡಿದರು.
ಈಶ್ವರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಮ್ಮ ಲಕ್ಷ್ಮಣ ಭೋವಿ, ಮೇದರಹಳ್ಳಿಯ ಲಕ್ಷ್ಮಮ್ಮ ಬೀರೇಗೌಡ, ಮಾಜಿ ಅಧ್ಯಕ್ಷ ಡಿ. ರಮೇಶ್, ಗ್ರಾಪಂ ಸದಸ್ಯೆ ಚೌಡಮ್ಮ ಚೌಡಭೋವಿ, ಸಿಂದಿಗೆರೆ ಗ್ರಾಪಂ ಅಧ್ಯಕ್ಷ ಚೌಡಮ್ಮ ದಾಸಾಭೋವಿ, ಬೆಳವಾಡಿ ಗ್ರಾಪಂ ಸದಸ್ಯ ಕೃಷ್ಣೇಗೌಡ, ರಾಮೇಗೌಡ, ಶಿವಣ್ಣ, ಗಿಡ್ಡೇಗೌಡ ಹಾಜರಿದ್ದರು. ಶಬ್ಬೀರ್ ಸ್ವಾಗತಿಸಿದರು. ದಾಸಬೋವಿ ನಿರೂಪಿಸಿದರು.