ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

20 ನಿಮಿಷ 20 ಸುದ್ದಿ

Srinivasa Murthy VN
Updated On : 23 Mar 2014, 10:53 am

ನರಸಿಂಹರಾಜಪುರ: ಕಮಾಲಾಪುರ ಸರ್ವೋದಯ ರೈತ ಕೂಟ ಮತ್ತು ಕೊನೋಡಿ ಸಾಧನಾ ರೈತ ಕೂಟದ ಸಂಯುಕ್ತಾಶ್ರಯದಲ್ಲಿ ಅಡಕೆ ಮರ ಏರುವ ಉಪಕರಣದ ಪ್ರಾತ್ಯಕ್ಷಿಕೆ ಮತ್ತು ಮಾಹಿತಿ ಕಾರ್ಯಕ್ರಮವು ಯಡಗೆರೆ ಕೃಷಿಕ ವೈ.ಎಸ್. ಸುಬ್ರಮಣ್ಯ ಅವರ ಕೃಷಿ ಕ್ಷೇತ್ರದಲ್ಲಿ ಶನಿವಾರ ನಡೆಯಿತು. ತೀಥಹಳ್ಳಿ ತಾಲೂಕಿನ ಮಲ್ಲೇಸರದ ಯುವಕ ಕಿರಣ್ ನೂತನವಾಗಿ ಪರಿಷ್ಕರಿಸಿದ ಅಡಕೆ ಮರ ಏರುವ ಪರಿಕರಣದ ಬಗ್ಗೆ ಪ್ರಾತ್ಯಕ್ಷಿಕೆಯೊಂದಿಗೆ ವಿವರಿಸಿದರು. ಈ ಪರಿಕರಕ್ಕೆ 2012ರಲ್ಲಿ ರಾಷ್ಟ್ರೀಯ ಪ್ರಶಸ್ತಿ ದೊರಕಿದೆ. ಮುಂದಿನ ದಿನಗಳಲ್ಲಿ ಇದಕ್ಕೆ ಸಹಾಯಧನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಬರುವ ಜೂನ್ ತಿಂಗಳ ಹೊತ್ತಿಗೆ ತೋಟಗಾರಿಕೆ ಇಲಾಖೆಯ ಮೂಲಕ ಶೇ.50 ರಷ್ಟು ಸಹಾಯಧನ ಸಿಗಬಹುದು ಎಂದು ತಿಳಿಸಿದರು. ವೈ.ಎಸ್. ಸುಬ್ರಮಣ್ಯ, ಎ.ಎಸ್. ವೆಂಕಟರಮಣ, ಕೆ.ಆರ್. ಗಣೇಶ್, ಅನಿಲ್ ಉಪಸ್ಥಿತರಿದ್ದರು.

ದೇವರಾಜ್‌ಗೆ ಅತ್ಯುತ್ತಮ ಸ್ವಯಂ ಸೇವಕ ಪ್ರಶಸ್ತಿ
ತರೀಕೆರೆ: ಸಮೀಪದ ಬೇಲೇನಹಳ್ಳಿಯ ವಿದ್ಯಾರ್ಥಿ ಬಿ. ದೇವರಾಜ್ ಅವರಿಗೆ 2012-13ನೇ ಸಾಲಿನ ವಿಶ್ವವಿದ್ಯಾನಿಲಯ ಮಟ್ಟದ ಅತ್ಯುತ್ತಮ ಎನ್‌ಎಸ್‌ಎಸ್ ಸ್ವಯಂ ಸೇವಕ ಪ್ರಶಸ್ತಿ ದೊರಕಿದೆ. ಬಿ. ದೇವರಾಜ್ ಅವರು ಶಿವಮೊಗ್ಗ ಸಹ್ಯಾದ್ರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಅಂತಿಮ ಬಿಎ ಪದವಿ ವಿದ್ಯಾರ್ಥಿಯಾಗಿದ್ದು, ಕಾಲೇಜಿನಿಂದ ಆಯೋಜಿಸಿದ್ದ  ಅತ್ಯಧಿಕ ಎನ್‌ಎಸ್‌ಎಸ್ ಸೇವಾ ಶಿಬಿರಗಳಲ್ಲಿ ಭಾಗವಹಿಸಿ ಸ್ವಯಂಸೇವಕರಾಗಿ ಉತ್ತಮ ಕಾರ್ಯ ನಿರ್ವಹಿಸಿದ್ದಕ್ಕಾಗಿ ಕುವೆಂಪು ವಿವಿ ಈ ಪ್ರಶಸ್ತಿ ಪ್ರಕಟಿಸಿದೆ. ಬಿ. ದೇವರಾಜ್ ಅವರು ಈ ಹಿಂದೆ ಎನ್‌ಎಸ್‌ಎಸ್ ವತಿಯಿಂದ ಬೆಂಗಳೂರಿನಲ್ಲಿ ನಡೆದ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಅತ್ಯುತ್ತಮ ಪಥ ಸಂಚಾಲಕ ತಂಡ ಪ್ರಶಸ್ತಿ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಶಿಮ್ಲಾದಲ್ಲಿ ನಡೆದ ಸಾಹಸ ಶಿಬಿರದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ. ಮಾ. 27 ರಂದು ನಡೆಯಲಿರುವ ಸಮಾರಂಭದಲ್ಲಿ ಕುಲಪತಿ ಪ್ರೊ. ಬಾರಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಇಂದು ಜಿಲ್ಲಾ ಮೈದಾನದಲ್ಲಿ ಯೋಗ ಮಹೋತ್ಸವ
ಚಿಕ್ಕಮಗಳೂರು:  ಪತಂಜಲಿ ಯೋಗ ಸಮಿತಿ ಹಾಗೂ ಭಾರತ ಸ್ವಾಭಿಮಾನ್ ಟ್ರಸ್ಟ್ ಆಶ್ರಯದಲ್ಲಿ ನಗರದ ಜಿಲ್ಲಾ ಆಟದ ಮೈದಾನದಲ್ಲಿ ಮಾ.23 ರಂದು ಯೋಗ ಮಹೋತ್ಸವ ಕಾರ್ಯಕ್ರಮ ನಡೆಯಲಿದೆ. ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ ಅವರ ಸ್ಮರಣೆಯ ಅಂಗವಾಗಿ ರಾಷ್ಟ್ರವ್ಯಾಪಿ ಯೋಗ ಮಹೋತ್ಸವ ಕಾರ್ಯಕ್ರಮ ನಡೆಸಲಾಗುತ್ತಿದೆ. ದಾಸ ಸಾಹಿತ್ಯ ಪ್ರಾಜೆಕ್ಟ್‌ನ ಉದಯಸಿಂಹ ಮತ್ತು ಭಜನಾ ವೃಂದದಿಂದ ಸಂಜೆ 5 ಗಂಟೆಗೆ ಸಾಮೂಹಿಕ ಭಜನೆ, 5.30 ರಿಂದ ಯೋಗ- ಪ್ರಾಣಾಯಾಮ, ರೇಖಾ ಪ್ರೇಮಕುಮಾರ್ ಅವರಿಂದ ಸಂಜೆ 6 ಗಂಟೆಗೆ ದೇಶಭಕ್ತಿಗೀತೆ, ವಂದೇ ಮಾತರಂ ಕಾರ್ಯಕ್ರಮ ನಡೆಯಲಿದೆ. ಸಂಜೆ 6.30ಕ್ಕೆ ಶಂಕರದೇವರ ಮಠದ ಶ್ರೀಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಪತಂಜಲಿ ಯೋಗ ಸಮಿತಿ ಅಧ್ಯಕ್ಷ ಜನಕರಾಜ್ ಅರಸ್ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಹರಿಹರಪುರದ ಗೌರಿಗದ್ದೆಯ ಶ್ರೀವಿನಯ ಅವಧೂತ ಗುರೂಜಿ ಉಪಸ್ಥಿತರಿರುವರು.

ಹೋಳಿಯೋಕುಳಿ...
ಸೊರಬ ತಾ. ಆನವಟ್ಟಿಯಲ್ಲಿ ಶನಿವಾರ ಯುವತಿಯರು ಪರಸ್ಪರ ಬಣ್ಣ ಎರಚುವ ಮೂಲಕ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ಕಾಂಗ್ರೆಸ್‌ನಿಂದ ಅಲ್ಪಸಂಖ್ಯಾತರ ಕಡೆಗಣನೆ: ಆರೋಪ
ಚಿಕ್ಕಮಗಳೂರು: ಕಾಂಗ್ರೆಸ್, ಅಲ್ಪಸಂಖ್ಯಾತ ಮುಖಂಡರನ್ನು ಮೂಲೆಗುಂಪು ಮಾಡುತ್ತಿದೆ ಎಂದು ಬಿಜೆಪಿ ನಗರಾಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಆರೋಪಿಸಿದ್ದಾರೆ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಅಲ್ಪಸಂಖ್ಯಾತ ಮೋರ್ಚಾದ ಸಭೆಯಲ್ಲಿ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಅಲ್ಪಸಂಖ್ಯಾತರು ದೇಶದ ಹಿತದೃಷ್ಟಿಯಿಂದ ಬಿಜೆಪಿ ಪ್ರಧಾನಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿಯನ್ನು ಪ್ರಧಾನಿ ಮಾಡಲು ಶ್ರಮಿಸಬೇಕು ಮತ್ತು ಅಲ್ಪಸಂಖ್ಯಾತರನ್ನು ಭೇಟಿ ಮಾಡಿ ಈ ಬಾರಿ ನರೇಂದ್ರ ಮೋದಿ ಪರವಾಗಿ ಮತ ಚಲಾಯಿಸುವಂತೆ ಮನವಿ ಮಾಡಬೇಕು ಎಂದು ಕರೆ ನೀಡಿದರು. ಪ್ರೇಮ್‌ಕುಮಾರ್ ಮಾತನಾಡಿ, ಕೇಂದ್ರದ ಹಣಕಾಸು ಸಚಿವ ಪಿ. ಚಿದಂಬರಂ ಅವರು ಈ ಬಾರಿಯ ಚುನಾವಣೆ ಎದುರಿಸಲು ಧೈರ್ಯವಿಲ್ಲದೆ ಹಿಂದೆ ಸರಿಯುತ್ತಿದ್ದಾರೆ. ಇದಕ್ಕೆ ನರೇಂದ್ರ ಮೋದಿಯವರ ಅಲೆಯೇ ಕಾರಣ ಎಂದರು. ನಗರಸಭಾ ಸದಸ್ಯ ಖುರೇಶಿ, ಸಿ.ಎ. ದಾವೂದ್ ಅಧ್ಯಕ್ಷತೆ ವಹಿಸಿದ್ದರು.

27ರಿಂದ ಅನಿರ್ದಿಷ್ಠಾವಧಿ ಧರಣಿ: ಎಚ್ಚರಿಕೆ
ಕೊಪ್ಪ: ತಮ್ಮ ಜಮೀನಿನ ಪಕ್ಕಾಪೋಡು ಮಾಡಿಕೊಡುವಲ್ಲಿ ವಿಳಂಬ ನೀತಿ ಅನುಸರಿಸಲಾಗುತ್ತಿದೆ. ಮೋಜಣಿ ನಕಾಶೆಗಳನ್ನು ಮಾಡಿಕೊಡದಿದ್ದಲ್ಲಿ ಕಂದಾಯ ಇಲಾಖೆ ಮುಂದೆ ಮಾ.27 ರಿಂದ ಅನಿರ್ದಿಷ್ಟಾವಧಿ ಧರಣಿ ನಡೆಸುವುದಾಗಿ ಜಮೀನಿನ ವಾರಸುದಾರ ಜಗದೀಶ್ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿ ಎಚ್ಚರಿಕೆ ನೀಡಿದ್ದಾರೆ. ಪತ್ನಿ ವದನಾ ಅವರ ಹೆಸರಿಗೆ ಖಾತೆ ಇರುವ ಕೊಪ್ಪ ಗ್ರಾಮದ ಸರ್ವೆ ನಂ.77 ಆಕಾರ್ ಬಂದ್ ದುರಸ್ತಾಗಿ ಹೊಸ ನಂ.185 ರಲ್ಲಿ ಅನ್ಯಕ್ರಾಂತವಾಗಿರುವ 1 ಎಕರೆ ಪ್ರದೇಶದ ಮೋಜಣಿ ನಕಾಶೆ ಮತ್ತು ಹದ್ದುಬಸ್ತು ನಕಾಶೆ ಕೋರಿ ಕಳೆದ 5 ವರ್ಷಗಳಿಂದ ಹಲವಾರು ಅರ್ಜಿ ನೀಡಲಾಗಿದೆ. ಆದರೆ, ಇದುವರೆಗೂ ನಕಾಶೆಗಳನ್ನು ನೀಡಿಲ್ಲ. ಶ್ರೀಮಂತ ಭೂಮಾಲೀಕ ಹಾಗೂ ರಾಜಕಾರಣಿಗಳ ಲಾಭಿಗೆ ಮಣಿದು ನಮ್ಮ ಅರ್ಜಿಯ ಬಗ್ಗೆ ಗಮನ ಹರಿಸುತ್ತಿಲ್ಲ ಮತ್ತು ಆ ಬಗ್ಗೆ ಯಾವುದೇ ಸಕಾರಣವನ್ನು ಕೂಡ ನೀಡುತ್ತಿಲ್ಲ ಎಂದಿದ್ದಾರೆ. ಈ ಬಗ್ಗೆ 2014ರ ಫೆಬ್ರವರಿಯಲ್ಲಿ ಲೋಕಾಯುಕ್ತ ಅಧಿಕಾರಿಗಳ ಸಮಕ್ಷಮ 7 ದಿನಗಳ ಒಳಗಾಗಿ ಸದರಿ ಅರ್ಜಿ ಇತ್ಯರ್ಥಗೊಳಿಸುವುದಾಗಿ ನನಗೆ ಆಶ್ವಾಸನೆ ನೀಡಲಾಗಿತ್ತು. ಇದುವರೆಗೂ ಕಚೇರಿ ಆ ಕೆಲಸಗಳು ಆಗದೇ ಅನ್ಯಾಸ ಎಸಗಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

'ಪ್ಲಾಸ್ಟಿಕ್ ಮುಕ್ತ ನಗರಕ್ಕೆ ವರ್ತಕರ ಸಹಕಾರ ಅವಶ್ಯ'
ಚಿಕ್ಕಮಗಳೂರು:  ವರ್ತಕ ಬಾಂಧವರು ಸಹಕರಿಸಿದರೆ ಚಿಕ್ಕಮಗಳೂರು ನಗರವನ್ನು ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿಸಲು ಸಾಧ್ಯ ಎಂದು ನಗರಸಭಾಧ್ಯಕ್ಷ ಪುಷ್ಪರಾಜ್ ಹೇಳಿದ್ದಾರೆ.
ನಗರದ ವರ್ತಕರ ಭವನದಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ವರ್ತಕರ ಯಾವುದೇ ಸಮಸ್ಯೆಗಳನ್ನು ನ್ಯಾಯಯುತವಾಗಿ ಪರಿಹರಿಸುವಲ್ಲಿ ನಗರಸಭೆ ಎಲ್ಲಾ ರೀತಿಯ ಸಹಕಾರ ನೀಡಲಿದೆ ಭರವಸೆ ನೀಡಿದರು. ಉಪಾಧ್ಯಕ್ಷ ಅಪ್ಸರ್ ಅಹಮದ್ ಮಾತನಾಡಿ, ವರ್ತಕರ ಯಾವುದೇ ಸಮಸ್ಯೆಗಳಿಗೆ ಕಳಕಳಿಯಿಂದ ಸ್ಪಂದಿಸುವುದಾಗಿ ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ವರ್ತಕರ ಸಂಘದ ಅಧ್ಯಕ್ಷ ದಿನೇಶ್ ಗುಪ್ತ ಮಾತನಾಡಿ, ನಗರಸಭಾ ಆಯವ್ಯಯದಲ್ಲಿ ನಗರದ ವರ್ತಕರ ಕ್ಷೇಮಾಭಿವೃದ್ಧಿಗಾಗಿ ಅನುದಾನವನ್ನು ಮೀಸಲಿಡಬೇಕೆಂದು ಒತ್ತಾಯಿಸಿದರು. ಶಿವಪ್ರಕಾಶ್, ಕೆ.ಎಸ್.ನಾಗೇಶ್, ಡಿ.ಎಂ. ಕುಮಾರ್, ಸತೀಶ್, ಅಶೋಕ್ ಉಪಸ್ಥಿತರಿದ್ದರು.

ವೈಯಕ್ತಿಕ ಸ್ವಚ್ಛತೆಗೆ ಹೆಚ್ಚು ಗಮನ ನೀಡಿ: ಡಾ. ನಟರಾಜ್
ತರೀಕೆರೆ:  ಮಹಿಳೆಯರು ವೈಯಕ್ತಿಕ ಸ್ವಚ್ಚತೆ ಬಗ್ಗೆ ಹೆಚ್ಚು ಗಮನ ನೀಡಬೇಕು ಎಂದು ಬುಕ್ಕಾಂಬುಧಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ  ಡಾ.ನಟರಾಜ್ ತಿಳಿಸಿದರು. ಇಲ್ಲಿಗೆ ಸಮೀಪದ ಬುಕ್ಕಾಂಬುದಿಯಲ್ಲಿ ಸಿಪಿಆರ್ ಪರಿಸರ ಶಿಕ್ಷಣ ಕೇಂದ್ರ ಬೆಂಗಳೂರು, ಜನಚಿಂತನ ಸಂಸ್ಥೆ ವತಿಯಿಂದ ಏರ್ಪಡಿಸಿದ್ದ 'ಮಹಿಳೆ ಮತ್ತು ಪರಿಸರ' ಕುರಿತ ಕಾರ್ಯಾಗಾರ ಉದ್ಘಾಟಿಸಿ ನೆರವೇರಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಮಹಿಳೆಯರ ಪಾತ್ರ ನಿರಂತರ ಹಾಗೂ ಅನನ್ಯವಾಗಿದೆ. ಆಕೆಯ ವೈಯಕ್ತಿಕ ಆರೋಗ್ಯ ಕಾಪಾಡಿಕೊಳ್ಳುವ ಹಂತದಿಂದ ಆರಂಭವಾಗಿ ಮನೆಯ ನಿರ್ವಹಣೆಯಲ್ಲೂ ಸಿಂಹಪಾಲಿದೆ. ಆರೋಗ್ಯ ನಿರ್ವಹಣೆಯಲ್ಲಿ ಮಹಿಳೆಯರು ಕಾಲಕಾಲಕ್ಕೆ ನಿರ್ವಹಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ಮಹಿಳೆಯರ ಜೊತೆ ಸಂವಾದ ಮೂಲಕ ಮಾಹಿತಿ ಒದಗಿಸಿದರು. ಸಿಪಿಆರ್ ಪರಿಸರ ಶಿಕ್ಷಣ ಕೇಂದ್ರದ ಯೋಜನಾಧಿಕಾರಿ ರವಿಶಂಕರ್ ಮಾತನಾಡಿ, ಕಾರ್ಯಾಗಾರ ಹಮ್ಮಿಕೊಂಡಿರುವ ಉದ್ದೇಶ ಅವಶ್ಯಕತೆ ಮತ್ತು ಮಹಿಳೆಯರು ಪರಿಸರ ನಿರ್ವಹಣೆಯಲ್ಲಿ ತೊಡಗಿಕೊಳ್ಳಬೇಕಾದ ಅನಿವಾರ್ಯತೆ ಕುರಿತು ತಿಳಿಸಿದರು.

ದುರಾಲೋಚನೆ ಕೆಡಕನ್ನುಂಟು ಮಾಡುವ ಶಕ್ತಿ: ಶಿಮುಶ
ಕಡೂರು: ಮಾನವನ ದುರಾಲೋಚನೆಯೇ ಕೆಡುಕನ್ನುಂಟು ಮಾಡುವ ಶಕ್ತಿಯಾಗಿ ಮನುಕುಲವನ್ನೇ ಹಾಳುಗೆಡವುತ್ತಿದೆ ಎಂದು ಚಿತ್ರದುರ್ಗದ ಮುರುಘಾಮಠದ ಡಾ. ಶಿವಮೂರ್ತಿ ಶರಣರು ಹೇಳಿದರು.  ತಾಲೂಕಿನ ಸಖರಾಯಪಟ್ಟಣದ ಅಗ್ರಹಾರ ತಾಂಡ್ಯದಲ್ಲಿ ನಡೆದ ದುರ್ಗಾ ತ್ರಿಕೂಟ ದೇವಾಲಯ ಹಾಗೂ ಸೇವಾಲಾಲ್ ಮಠವನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.
ಸಾನ್ನಿಧ್ಯ ವಹಿಸಿದ್ದ ಪೇಜಾವರ ಮಠದ ವೀಶ್ವೇಶ ತೀರ್ಥ ಸ್ವಾಮೀಜಿ ಮಾತನಾಡಿ, ಹಿಂದೂ ಸಮಾಜ ಉನ್ನತಿಯಾಗಲು ಹಿಂದುಳಿದ ಸಮಾಜಗಳು ಒಂದಾಗಬೇಕು. ಆಗ ಮಾತ್ರ ಹಿಂದೂ ಸಮಾಜ ಬಲಿಷ್ಠವಾಗಲು ಸಾಧ್ಯ ಎಂದರು. ಇದೇ ವೇಳೆ ದೇವಾಲಯದ ಸಂಸ್ಥಾಪಕರಾದ ರಂಗನಾಥ ನಾಯ್ಕ ಮತ್ತು ಆಶಾಬಾಯಿ ಅವರನ್ನು ಶ್ರೀಗಳು ಸನ್ಮಾನಿಸಿದರು. ಹಿರಿಯ ನಿರ್ದೇಶಕ ನಾಗಾಭರಣ, ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ಹೀರಾನಾಯ್ಕ, ಅಣ್ಣಾನಾಯ್ಕ, ಪತ್ರಕರ್ತ ಸ. ಗಿರಿಜಾಶಂಕರ್ ಇದ್ದರು.

ಸನ್ಮಾನ...
ಚಿಕ್ಕಮಗಳೂರಿನ ವರ್ತಕರ ಭವನದಲ್ಲಿ ನಗರಸಭಾ ಅಧ್ಯಕ್ಷ ಪುಷ್ಪರಾಜ್, ಉಪಾಧ್ಯಕ್ಷ ಅಪ್ಸರ್ ಅಹಮದ್ ಹಾಗೂ ಸದಸ್ಯ ರವೀಂದ್ರ ಪ್ರಭು ಅವರನ್ನು ಸನ್ಮಾನಿಸಲಾಯಿತು.

ಶಾಲೆಗೆ ಕುಡಿವ ನೀರಿನ ಸೌಕರ್ಯ ಕಲ್ಪಿಸಲು ಆಗ್ರಹ
ಕಡೂರು: ಕೊಳವೆ ಬಾವಿ ಕೊರೆದು ಒಂದೂವರೆ ವರ್ಷವಾದರೂ ಮೋಟಾರ್ ಹಾಗೂ ವಿದ್ಯುತ್ ಸಂಪರ್ಕ ನೀಡದೆ ಮುಸ್ಲಾಪುರದ ಹಟ್ಟಿಯ ಸರ್ಕಾರಿ ಶಾಲಾ ಮಕ್ಕಳು ಕುಡಿಯಲು ನೀರಿಲ್ಲದೆ ಪರದಾಡುವಂತಾಗಿದೆ ಎಂದು ಎಮ್ಮೇದೊಡ್ಡಿಯ ಬಿಜೆಪಿ ಮುಖಂಡ ರಮೇಶ ನಾಯ್ಕ ದೂರಿದ್ದಾರೆ. ತಾಲೂಕು ಎಮ್ಮೇದೊಡ್ಡಿಯ ಮುಸ್ಲಾಪುರದ ಹಟ್ಟಿಯ ಸರ್ಕಾರಿ ಶಾಲಾ ಮಕ್ಕಳಿಗೆ ಕುಡಿಯುವ ನೀರೊದಗಿಸುವ ಹಿನ್ನೆಲೆಯಲ್ಲಿ ಶಾಲೆಯ ಪಕ್ಕದಲ್ಲಿ ಹೊಸದಾಗಿ ಕೊಳವೆ ಬಾವಿ ಕೊರೆದು ಸುಮಾರು ಒಂದೂವರೆ ವರ್ಷವಾದರೂ ತಾಪಂ ಇಒ ಹಾಗೂ ಜಿಪಂ ಅಧಿಕಾರಿಗಳಿಗೆ ಮನವಿ ಮಾಡಿದರೂ ಕೊಳವೆ ಬಾವಿಗೆ ಮೋಟಾರ್ ಅಳವಡಿಸದೆ, ವಿದ್ಯುತ್ ಸಂಪರ್ಕ ನೀಡದೆ ಮಕ್ಕಳು ತೊಂದರೆ ಅನುಭವಿಸುವಂತಾಗಿದೆ. ಇದರಿಂದ ಆಗಿರುವ ತೊಂದರೆ ಕುರಿತು ಕೇಳಿದರೆ ಗ್ರಾಮಸ್ಥರೇ ಹಣ ಹಾಕಿ ಮಾಡಿಸಿಕೊಳ್ಳಿ ಈಗ ದುಡ್ಡಿಲ್ಲ ಎಂದು ತಾಪಂ ಇಒ ಉತ್ತರಿಸುತ್ತಾರೆ. ಈ ಬಗ್ಗೆ ಜಿಪಂ ಸಿಇಒ ಅವರಿಗೂ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದಿದ್ದಾರೆ.

ಅಸಮರ್ಪಕ ವಿದ್ಯುತ್: ರೈತರ ಪ್ರತಿಭಟನೆ
ಶಿರಾಳಕೊಪ್ಪ: ವಿದ್ಯುತ್ ಕಣ್ಣಾಮುಚ್ಚಾಲೆ ಆಟದಿಂದ ರೈತರು ಮತ್ತು ವಿದ್ಯಾರ್ಥಿಗಳಿಗೆ ತೀವ್ರ ತೊಂದರೆ ಆಗುತ್ತಿದೆ ಎಂದು ಉಡಗಣಿ-ತಾಳಗುಂದ ಹೋಬಳಿ ರೈತರು ಶಿರಾಳಕೊಪ್ಪ ಹತ್ತಿರವಿರುವ 220 ಕೆವಿ ಬಳಿ ಪ್ರತಿಭಟನೆ ನಡೆಸಿದರು. ಈ ಹಿಂದೆ ಶಿರಾಳಕೊಪ್ಪ ಮೆಸ್ಕಾಂ ಕಚೇರಿಯಲ್ಲಿ ರೈತರೊಂದಿಗೆ ಸಭೆ ನಡೆದಾಗ ರೈತರಿಗೆ ಮಾತು ಕೊಟ್ಟಂತೆ ನಡೆಯುತ್ತಿಲ್ಲ. ಪರೀಕ್ಷೆ ಸಮಯವಾದ್ದರಿಂದ ಪ್ರತಿದಿನ ರಾತ್ರಿ ಶಾಲಾ -ಕಾಲೇಜಿನ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೀವ್ರ ತೊಂದರೆ ಆಗುತ್ತಿದೆ ಎಂದು ರೈತರು ಪ್ರತಿಭಟಿಸಿದ್ದಾಗಿ ತಿಳಿಸಿದರು. ಸಂಜೆ ಆದ ತಕ್ಷಣ ವಿದ್ಯುತ್ ಇಲ್ಲದಿದ್ದರೆ ಗ್ರಾಮಾಂತರ ಪ್ರದೇಶಗಳಲ್ಲಿ ಮಕ್ಕಳು ಓದುವುದಾದರೂ ಹೇಗೆ? ರೈತರ ಪ್ರತಿಭಟನೆ ಮಾಡುತ್ತಿರುವ ಸಂಗತಿ ಆರಿತು ಶಿರಾಳಕೊಪ್ಪ ಮೆಸ್ಕಾಂ ಎಇಇ ಮತ್ತು ಆನವಟ್ಟಿ ಎಇಇ ಸ್ಥಳಕ್ಕೆ ಆಗಮಿಸಿದರು. ರೈತರೊಂದಿಗೆ ಮಾತನಾಡಿದ ಅವರು, ಸೋಮವಾರದವರೆಗೆ ಸಮಯ ಕೊಡಿ. ಅವ್ಯವಸ್ಥೆ ಸರಿಪಡಿಸುವ ಭರವಸೆ ನೀಡಿದರು. ಮುಗಳಿಕೊಪ್ಪ ರಾಜಣ್ಣ, ಮಾಳಗೊಂಡನಕೊಪ್ಪ ವೀರಣ್ಣ, ಉಡಗಣಿ ಕೊಟ್ಟೇಶ್, ಪರಮೇಶಪ್ಪ ಹಾಗೂ ಇತರರು ವಹಿಸಿದ್ದರು.

25ರಂದು ಶನೈಶ್ಚರ ದೇವರ ಜಾತ್ರೋತ್ಸವ
ತ್ಯಾಗರ್ತಿ: ಇಲ್ಲಿಗೆ ಸಮೀಪದ ಹೊಸೂರಿನ ಶನೈಶ್ಚರ ದೇವಾಲಯದ ವಾರ್ಷಿಕ ಜಾತ್ರೋತ್ಸವ ಮಾ. 25ರಂದು ನಡೆಯಲಿದೆ.
ಜಾತ್ರೆ ನಿಮಿತ್ತ ಬೆಳಗ್ಗೆ ದೇವರಿಗೆ ಪಂಚಾಮೃತ ಅಭಿಷೇಕ, ಶನೈಶ್ಚರ ಮೂಲಮಂತ್ರ ಹವನ, ನವಗ್ರಹ ಹೋಮ, ಸಾಮೂಹಿಕ ಸತ್ಯನಾರಾಯಣ ವ್ರತ, ಪರಿವಾರ ದೇವತೆಗಳಾದ ಗಣಪತಿ, ಕಾಲಭೈರವ, ನಾಗದೇವರು ಮತ್ತು ಸತ್ಯನಾರಾಯಣ ದೇವರಿಗೆ ವಿಶೇಷ ಅಲಂಕಾರ ಸಹಿತ ಮಹಾಪೂಜೆ, ಮಹಾ ಮಂಗಳಾರತಿ ನಂತರ ಸಾರ್ವಜನಿಕರಿಗೆ ಅನ್ನಸಂತರ್ಪಣೆ ನಡೆಸಲಾಗುತ್ತದೆ. ಗ್ರಾಮದ ಬೀದಿಯಲ್ಲಿ ಶನೈಶ್ಚರ ದೇವರ ಪಲ್ಲಕ್ಕಿ ಉತ್ಸವ, ಸಂಜೆ 7.30ಕ್ಕೆ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 9 ಗಂಟೆಗೆ ಸಾಮೂಹಿಕ ನವಗ್ರಹ ಪೂಜೆ ಹಮ್ಮಿಕೊಳ್ಳಲಾಗಿದೆ. ರಾತ್ರಿ 10 ಗಂಟೆಯಿಂದ ವಿವಿಧ ಕಲಾವಿದರ ಕೂಡು ಬಳಗದಿಂದ ಬೆಳಗಿನ ವರೆಗೆ ಶನೈಶ್ಚರ ಮಹಾತ್ಮೆ ಎಂಬ ಪೌರಾಣಿಕ ಪ್ರಸಂಗದ ಕಥಾ ಭಾಗದ ಅಭಿನಯ ಪ್ರದರ್ಶನ ನಡೆಯಲಿದೆ.

ಹೊಳಲೂರಿನಲ್ಲಿ ಚರ್ಚಾಸ್ಪರ್ಧೆ ಮೂಲಕ ಮತದಾನ ಜಾಗೃತಿ
ಶಿವಮೊಗ್ಗ: ತಾಲೂಕಿನ ಹೊಳಲೂರು ಗ್ರಾಮದಲ್ಲಿರುವ ಕೆನರಾ ಬ್ಯಾಂಕ್ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಸ್ವಯಂ ಉದ್ಯೋಗದ ಪ್ರಾರಂಭಿಸುವ ಕುರಿತು ತರಬೇತಿ ಪಡೆಯುತ್ತಿರುವ ಪುರುಷರಿಗೆ ಮತ್ತು ಮಹಿಳೆಯರಿಗೆ ಮತದಾನದ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಚರ್ಚಾಸ್ಪರ್ಧೆಯ ಮೂಲಕ ವಿಶಿಷ್ಟವಾಗಿ ನಡೆಸಲಾಯಿತು. ಚುನಾವಣೆಯಲ್ಲಿ ಇತರರನ್ನು ತಪ್ಪದೆ ಮತ ಚಲಾಯಿಸಲು ಮತಗಟ್ಟೆಗೆ ಕರೆತರುವುದಾಗಿ ಪ್ರಮಾಣ ಮಾಡಿದರು.
ಶಿವಮೊಗ್ಗ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಹಾಗೂ ಸ್ವೀಪ್ ನೋಡಲ್ ಅಧಿಕಾರಿ ಎಚ್.ಎಂ. ಶ್ರೀನಿವಾಸ ಮಾತನಾಡಿ, ಯಾವುದೇ ಅಭ್ಯರ್ಥಿಗಳಿಗೆ ಮತ ನೀಡಲು ಇಷ್ಟವಿಲ್ಲದಿದಲ್ಲಿ ನೋಟಾ ಎನ್ನುವ ಬಟನ್‌ಅನ್ನು ವಿದ್ಯುನ್ಮಾನ ಯಂತ್ರದಲ್ಲಿ ಬಳಸಬಹುದು ಎಂದು ತಿಳಿಸಿದರು. ಮತದಾನ ಮಾಡುವ ಬಗ್ಗೆ ಪ್ರತಿಜ್ಞಾವಿಧಿ ನೀಡಲಾಯಿತು. ಸೋಮಪ್ಪ, ನಾಗರಾಜ ಮತ್ತು ತರಬೇತುದಾರರು ಹಾಜರಿದ್ದರು.

ಕ್ರೀಡಾಪಟುಗಳಿಗೆ ಹೆಚ್ಚಿನ ಅವಕಾಶ: ಕೃಷ್ಣಗೌಡ
ಶಿವಮೊಗ್ಗ: ದೇಶೀಯ ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೋತ್ಸಾಹ ಅಗತ್ಯವಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಸಾಧನೆ ಮಾಡಲು ಅವಕಾಶವಿದೆ ಎಂದು ಅಂತಾರಾಷ್ಟ್ರೀಯ ಮಾಜಿ ಕಬಡ್ಡಿ ಆಟಗಾರ ಎಚ್.ಎನ್. ಕೃಷ್ಣಗೌಡ ಅಭಿಪ್ರಾಯ ವ್ಯಕ್ತಪಡಿಸಿದರು. ಶನಿವಾರ ಬೆಳಗ್ಗೆ ನಗರದ ಆಚಾರ್ಯ ತುಳಿಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ಚಂದನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕ್ರೀಡಾ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಯಾವುದೇ ಒಂದು ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೆ, ಶ್ರಮವಹಿಸಿ ಅಭ್ಯಾಸ ನಡೆಸಿದರೆ, ವೈಯುಕ್ತಿ ಬದುಕಿನಲ್ಲಿ ಸಾಧನೆ ಮಾಡಬಹುದೆಂದರು. ಎನ್‌ಇಎಸ್ ಸಹ ಕಾರ್ಯದರ್ಶಿ ಜಿ.ಎಸ್.ನಾರಾಯಣ ರಾವ್, ದೈಹಿಕ ಶಿಕ್ಷಣ ನಿರ್ದೇಶಕ ಕೆ.ಎಂ. ನಾಗರಾಜು ಉಪಸ್ಥಿತರಿದ್ದರು.

ವಿದ್ಯುತ್ ಕಡಿತವಿಲ್ಲ: ಶಾಸಕರ ನಿಯೋಗಕ್ಕೆ ಮೆಸ್ಕಾಂ ಭರವಸೆ
ಶಿವಮೊಗ್ಗ: ಪರೀಕ್ಷೆ ಸಂದರ್ಭದಲ್ಲಿ ಪದೇ ಪದೆ ವಿದ್ಯುತ್ ಕಡಿತ ಮಾಡುತ್ತಿರುವುದರಿಂದ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದ್ದು ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಶಾಸಕ ಕೆ.ಬಿ. ಪ್ರಸನ್ನಕುಮಾರ್ ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಶನಿವಾರ ಶಾಸಕರ ನೇತೃತ್ವದ ನಿಯೋಗ ಮೆಸ್ಕಾಂ ಕಚೇರಿಗೆ ಭೇಟಿ ನೀಡಿ ಚರ್ಚೆ ನಡೆಸಿತು. ವಿದ್ಯುತ್ ಲೋಡ್‌ಶೆಡ್ಡಿಂಗ್‌ನಿಂದ ತೊಂದರೆಗೊಳಗಾಗಿದ್ದಾರೆ. ಶಾಸಕರ ಸೂಚನೆಗೆ ಪ್ರತಿಕ್ರಿಯೆ ನೀಡಿದ ಅಧಿಕಾರಿಗಳು, ತಾಂತ್ರಿಕ ಕಾರಣಗಳಿಂದಾಗಿ ಈ ರೀತಿ ಸಮಸ್ಯೆಯಾಗಿದೆ. ಏಪ್ರಿಲ್ 10ರ ವರೆಗೆ ಲೋಡ್‌ಶೆಡ್ಡಿಂಗ್ ಮಾಡಲಾಗುವುದು ಎಂದು ಹೇಳಿದರು. ಅಂತಿಮವಾಗಿ ಶಾಸಕರ ಒತ್ತಾಯಕ್ಕೆ ಮಣಿದ ಮುಖ್ಯ ಅಭಿಯಂತರ ಈಶ್ವರ್ ಹಾಗೂ ಕಾರ್ಯಪಾಲಕ ಅಭಿಯಂತರ ಶಶಿಧರ್ ಅವರು, ಸದ್ಯ ಪರೀಕ್ಷೆ ನಡೆಯುತ್ತಿರುವ ಕಾರಣ ಹಾಗೂ ಕೃಷಿಕರಿಗೆ ಸಮಸ್ಯೆಯಾಗದಂತೆ ವಿದ್ಯುತ್ ಸರಬರಾಜು ಮಾಡಲು ಇರುವ ವ್ಯವಸ್ಥೆಯಲ್ಲಿ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಆಪ್ ಅಭ್ಯರ್ಥಿ ಶ್ರೀಧರ ಕಲ್ಲಳ್ಳ ನಾಮಪತ್ರ
ಶಿವಮೊಗ್ಗ: ಲೋಕಸಭಾ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ಶ್ರೀಧರ್ ಕಲ್ಲಳ್ಳ ಅವರು ನಾಮಪತ್ರ ಸಲ್ಲಿಸಿದ್ದಾರೆ.ಶ್ರೀಧರ್ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಹಿರಿಯ ರೈತ ಮುಖಂಡ ಕಡಿದಾಳು ಶಾಮಣ್ಣ, ಎಚ್.ಆರ್. ಬಸವರಾಜಪ್ಪ, ಎಚ್.ಎನ್. ಚಂದ್ರಶೇಖರ್ ಹಾಗೂ ಕೃಷ್ಣಮೂರ್ತಿ ಜೊತೆಗಿದ್ದರು. ನಾಮಪತ್ರ ಸಲ್ಲಿಕೆಗೂ ಮುನ್ನ ಶ್ರೀಧರ್ ಕಲ್ಲಳ್ಳ ಅವರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಮುಂಭಾಗದಿಂದ ತಮ್ಮ ಬೆಂಬಲಿಗರೊಂದಿಗೆ ಮೆರವಣಿಗೆಯ ಮೂಲಕ ಡಿಸಿ ಕಚೇರಿಗೆ ಆಗಮಿಸಿದರು. ಬಿ.ಎಚ್.ರಸ್ತೆ, ನೆಹರೂ ರಸ್ತೆ, ಗೋಪಿ ವೃತ್ತ, ಬಾಲರಾಜ ಅರಸ್ ರಸ್ತೆ, ಮಹಾವೀರ ವೃತ್ತದಲ್ಲಿ ಮೆರವಣಿಗೆ ಅಂತ್ಯಗೊಂಡಿತು. ತಲೆಗೆ ಪಕ್ಷದ ಟೋಪಿ, ಕೈಯಲ್ಲಿ ಪಕ್ಷದ ಚಿಹ್ನೆಯಾದ ಪೊರಕೆ, ಪಕ್ಷದ ಸಂಸ್ಥಾಪಕ ಅರವಿಂದ್ ಕೇಜ್ರಿವಾಲ್ ಭಾವಚಿತ್ರವಿದ್ದ ಭಿತ್ತಿಪತ್ರ - ಟೀ ಶರ್ಟ್ ಹಾಗೂ ರಾಷ್ಟ್ರಧ್ವಜ ಹಿಡಿದ ಕಾರ್ಯಕರ್ತರು ಪಕ್ಷದ ಅಭ್ಯರ್ಥಿ ಹಾಗೂ ಮುಖಂಡರ ಪರವಾಗಿ ಘೋಷಣೆಕೂಗಿ ಗಮನ ಸೆಳೆಯಲು ಯತ್ನಿಸಿದರು.

ಆಶೀರ್ವಾದ...
ಹೊಸನಗರ ತಾಲೂಕು ಹೊಂಬುಜ ಜೈನ ಮಠಕ್ಕೆ ಭೇಟಿ ನೀಡಿದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ದೇವೇಂದ್ರಕೀರ್ತಿ ಸ್ವಾಮೀಜಿಗಳ ಆಶೀರ್ವಾದ ಪಡೆದರು. ಮಾಜಿ ಶಾಸಕ ಆರಗ ಜ್ಞಾನೇಂದ್ರ ಇದ್ದರು.

ಶತ್ರುಗಳಿಗೆ ಇಂದು ಹುಷಾರ್ ಎನ್ನುವ ಪ್ರಧಾನಿ ಬೇಕು
ಹೊಸನಗರ: ದೇಶದಲ್ಲಿ ಇಂದು ಪರಕೀಯರ ಅಟ್ಟಹಾಸ ಮೀತಿಮೀರುತ್ತಿದೆ. ಪಾಕ್, ಚೀನಾ, ಬಾಂಗ್ಲಾ ನಮ್ಮ ಜಾಗ ಅತಿಕ್ರಮಿಸಿ ಪುಂಡಾಟ ನಡೆಸುತ್ತಿದೆ. 60 ವರ್ಷಗಳಿಂದ ನಮ್ಮನ್ನು ಆಳಿದ ಕಾಂಗ್ರೆಸ್ ಪರಕೀಯರ ದಾಳಿಗೆ ಉತ್ತರಿಸದೇ ಅವರನ್ನು ಸಾಕಿಕೊಂಡು ಬಂದು ತಲೆ ಬಾಗಿದೆ. ನಮಗೆ ಇಂದು ಶತ್ರುಗಳಿಗೆ ಹುಷಾರ್ ಎನ್ನುವ ಧೈರ್ಯವಂತ ಪ್ರಧಾನಿ ಬೇಕು. ಆ ಪ್ರಾಬಲ್ಯ ನರೇಂದ್ರ ಮೋದಿ ಅವರಲ್ಲಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.
ತಾಲೂಕಿನ ಬಿದನೂರು ನಗರದಲ್ಲಿ ಶನಿವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ದೇಶ ರಕ್ಷಕ ಮೋದಿ ಪ್ರಧಾನಿ ಆಗುವ ಭಾಗ್ಯದ ದಿನಗಳು ನಮಗಾಗಿ ಕಾದಿದೆ ಎಂದರು. ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಆರಗ ಜ್ಞಾನೇಂದ್ರ, ಪದ್ಮನಾಭರಾವ್, ಜಿ.ಪಂ ಸದಸ್ಯೆ ಶುಭಾ ಕೃಷ್ಣ, ಕೆ.ವಿ.  ಕೃಷ್ಣಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement