ನೀತಿ ಸಂಹಿತೆ ಉಲ್ಲಂಘನೆ: ಅಭ್ಯರ್ಥಿಗೆ ನೋಟಿಸ್
ಚಿಕ್ಕಮಗಳೂರು: ಲೋಕಸಭಾ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದರಿಂದ ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಸಿಪಿಐ ಅಭ್ಯರ್ಥಿ ಎಸ್. ವಿಜಯಕುಮಾರ್ ಅವರಿಗೆ ಜಿಲ್ಲಾ ಚುನಾವಣಾಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ.
ಎಸ್. ವಿಜಯ ಕುಮಾರ್ ಅವರು ಚುನಾವಣಾಧಿಕಾರಿಗಳ ಅನುಮತಿ ಪಡೆಯದೇ ಕರಪತ್ರ ಮುದ್ರಿಸಿ ಹಂಚಿದ್ದರು. ಈ ಕುರಿತು ಮಾಧ್ಯಮ ಪ್ರಮಾಣೀಕರಣ ಮತ್ತು ಕಣ್ಗಾವಲು ಸಮಿತಿಯು ಜಿಲ್ಲಾ ದಂಡಾಧಿಕಾರಿಗಳಿಗೆ ವರದಿ ಸಲ್ಲಿಸಿತ್ತು.
ಕರಪತ್ರವನ್ನು ಯಾವ ಮುದ್ರಣಾಲಯದಲ್ಲಿ ಮುದ್ರಿಸಲಾಗಿದೆ, ಎಷ್ಟು ಮುದ್ರಿಸಲಾಗಿದೆ ಎಂಬುದನ್ನು ನಮೂದಿಸಲ್ಲವಾದರಿಂದ ಪ್ರಜಾ ಪ್ರತಿನಿಧಿ ಕಾಯ್ದೆ 1950ರ ನಿಯಮ 127 (ಎ) ಉಲ್ಲಂಘಿಸಿದ್ದಾರೆಂದು ನೋಟಿಸ್ ನೀಡಲಾಗಿದೆ.
ಜಿಲ್ಲೆಯಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿ ಇರುವ ವೇಳೆ ಯಾವುದೇ ಅಭ್ಯರ್ಥಿಯಾಗಲಿ, ಮುದ್ರಕರಾಗಲಿ ಸಂಬಂಧಿಸಿದ ಪ್ರಾಧಿಕಾರದಿಂದ ಅನುಮತಿ ಪಡೆಯದೇ ಕರಪತ್ರ ಮುದ್ರಿಸುವುದು ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಜಾಹಿರಾತು ನೀಡುವುದು ಮಾಡಿದಲ್ಲಿ ಅಂತಹವರ ವಿರುದ್ಧ ನಿಯಮಾನುಸಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
ಜೆಡಿಎಸ್ ಕಾರ್ಯದರ್ಶಿಯಾಗಿ ನೇಮಕ
ಚಿಕ್ಕಮಗಳೂರು: ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಎಚ್.ಎಚ್. ದೇವರಾಜ್ ಅವರನ್ನು ಪಕ್ಷದ ರಾಜ್ಯಾಧ್ಯಕ್ಷ ಎ. ಕೃಷ್ಣಪ್ಪ ಅವರು ನೇಮಕ ಮಾಡಿದ್ದಾರೆ. ಇದರ ಜತೆಗೆ ಎಚ್.ಎಚ್. ದೇವರಾಜ್ ಅವರಿಗೆ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಸ್ತುವಾರಿಯನ್ನು ವಹಿಸಲಾಗಿದೆ. ಮಾಜಿ ಪ್ರಧಾನಮಂತ್ರಿ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಎಚ್.ಡಿ. ದೇವೇಗೌಡರವರ ಸೂಚನೆ ಮೇರೆಗೆ ನೇಮಕ ಮಾಡಲಾಗಿದೆ ಎಂದು ಕೃಷ್ಣಪ್ಪ ಅವರು ತಿಳಿಸಿದ್ದಾರೆ.