ಅದಿರು ಮಾಫಿಯಾ ಮೀರಿಸುತ್ತಿರುವ ಮರಳು ಗಣಿಗಾರಿಕೆ: ಆತಂಕ
ಕನ್ನಡಪ್ರಭವಾರ್ತೆ ಮೂಡಿಗೆರೆ ಮಾ. 24
ಮಲೆನಾಡಿನಲ್ಲಿ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆ, ಬಳ್ಳಾರಿಯ ಅದಿರು ಮಾಫಿಯಾವನ್ನೇ ಮೀರಿಸಿದೆ. ಇದರ ಪರಿಣಾಮ ನದಿ ಮೂಲಗಳೇ ಬತ್ತಿಹೋಗುತ್ತಿವೆ ಎಂದು ಡ್ರಾಪ್ ಬೈ ಡ್ರಾಪ್ ಟ್ರಸ್ಟ್ ನಿರ್ದೇಶಕರಾದ ಅಚ್ಚನಹಳ್ಳಿ ಸುಚೇತನ ಆರೋಪಿಸಿದ್ದಾರೆ.
ತಾಲೂಕಿನ ಜಾವಳಿ ಸಮೀಪವಿರುವ ಹೇಮಾವತಿ ಉಗಮ ಸ್ಥಾನದಲ್ಲಿ ಹಮ್ಮಿಕೊಂಡಿದ್ದ ವಿಶ್ವಜಲ ದಿನಾಚರಣೆ ಅಂಗವಾಗಿ ಜಲ ಆಂದೋಲನದಲ್ಲಿ ಅವರು ಮಾತನಾಡಿದರು.
ನದಿ ಮೂಲದ ಆಳ ಬಗೆದು ಮರಳು ತೆಗೆಯುತ್ತಿರುವುದರಿಂದ ಭೂಮಿಯ ತಾಪಮಾನ ಏರುತ್ತಿದೆ. ಇಂದಿನ ಹವಾಮಾನ ವೈಪರೀತ್ಯಕ್ಕೂ ಮರಳು ಗಣಿಗಾರಿಕೆಯೇ ಕಾರಣ. ಈ ನದಿ ಪಾತ್ರವನ್ನೇ ನಂಬಿ ಹತ್ತಾರು ತಾಲೂಕಿನ ಜನರು ಬದುಕುತ್ತಿದ್ದಾರೆ. ಆದರೂ ನದಿ ತೀರದಲ್ಲಿ ಜನವಸತಿ ಬಡಾವಣೆ ನಿರ್ಮಿಸಲು ಅಧಿಕಾರಿಗಳು ಅವಕಾಶ ನೀಡಿದ್ದಾರೆ ಎಂದವರು ಆಕ್ರೋಶ ವ್ಯಕ್ತಪಡಿಸಿದರು.
ಕೊಳಚೆ ತಡೆ: ಇಲ್ಲಿ ವಸತಿ ಸಮುಚ್ಚಯ ನಿರ್ಮಿಸಿದಲ್ಲಿ ಶೌಚಾಲಯದ ಕೊಳಚೆ ನೀರು ನದಿಗೆ ಹರಿಯಬಿಡಲಾಗುತ್ತದೆ. ಅದನ್ನು ತಕ್ಷಣದಿಂದಲೇ ತಡೆಯಬೇಕಿದೆ. ಗದ್ದೆಯಲ್ಲಿ ನಿವೇಶನ ಮಾಡಿ, ಬಡಾವಣೆ ನಿರ್ಮಿಸಲು ಅವಕಾಶವೇ ಇಲ್ಲ. ಆದರೂ ಇಲ್ಲಿ ಅಧಿಕಾರ ದುರುಪಯೋಗವಾಗಿದೆ ಎಂದು ಆರೋಪಿಸಿದರು.
ಹಾಗಾಗಿ ಬಣಕಲ್ ಗ್ರಾಮದ ಗದ್ದೆ ಬಯಲುಗಳೆಲ್ಲಾ ಕಾಣೆಯಾಗಿ ಸೈಟುಗಳಾಗಿವೆ. ಅಂತೆಯೇ ನದಿಯ ಆಸುಪಾಸಿನಲ್ಲಿಯೇ ರೆಸಾರ್ಟ್ಗಳು ತಲೆಯೆತ್ತುತಿದ್ದು, ಅಲ್ಲಿಯೂ ತೀವ್ರ ಸ್ವರೂಪದ ಪರಿಸರ ಮಾಲಿನ್ಯವಾಗುತ್ತಿದೆ. ಇದನ್ನು ತಡೆಯಲು ಜನಜಾಗದೃತಿ ಗೊಳಿಸಲು ಹೇಮಾವತಿ ನದಿ ಉಳಿಸಿ, ಜೀವಜಲ ರಕ್ಷಿಸಿ ಎಂಬ ಅಂದೋಲನಕ್ಕೆ ಚಾಲನೆ ನೀಡಲಾಗಿದೆ ಎಂದರು.
ಅಕ್ರಮ ಬಯಲು: ಇಂದಿನಿಂದ ಜಲದ ಮೂಲದಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ಬಯಲು ಮಾಡಲಾಗುವುದು. ಪ್ರಮುಖವಾಗಿ ಮರಳು ಗಣಿಗಾರಿಕೆ ತಡೆಯಬೇಕಿದೆ. ಅಂತೆಯೇ ತರಿ ಜಮೀನಿನಲ್ಲಿ ವಸತಿ ನಿವೇಶನ ನಿರ್ಮಿಸುವುದನ್ನು ತಡೆಯಲು ರಾಜ್ಯಮಟ್ಟ ದಲ್ಲಿ ಡ್ರಾಪ್ ಬೈ ಡ್ರಾಪ್ ಸಂಸ್ಥೆ ಹೋರಾಟ ನಡೆಸಲಿದೆ ಎಂದು ಅಚ್ಚನಹಳ್ಳಿ ಸುಚೇತನ ತಿಳಿಸಿದರು. ಸಂಸ್ಥೆಸದಸ್ಯರಾದ ನಯನ ತಳವಾರ, ಎಂ.ಆರ್. ಸುಧೀರ್, ಪ್ರವೀಣ್ ುಮಾರ್ ಉಪಸ್ಥಿತರಿದ್ದರು.