ಜಾತೀಯತೆ ಹುಟ್ಟುಹಾಕಿದ ಕಾಂಗ್ರೆಸ್
ಮೂಡಿಗೆರೆ: ಕಾಂಗ್ರೆಸ್ ಸರ್ಕಾರ ಮಕ್ಕಳಿಗೆ ಶೈಕ್ಷಣಿಕ ಪ್ರವಾಸ ಎಂಬ ನೆಪದಲ್ಲಿ ಕೆಲವೊಂದು ವರ್ಗದ ವಿದ್ಯಾರ್ಥಿಗಳನ್ನು ಸೀಮಿತಗೊಳಿಸಿ ಮಕ್ಕಳ ಮನಸ್ಸಿನಲ್ಲಿ ಜಾತೀಯತೆ ಹುಟ್ಟು ಹಾಕುತ್ತಿರುವುದು ಕಾಂಗ್ರೆಸ್ ಸರ್ಕಾರ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಡಿ.ಎಸ್. ಸುರೇಂದ್ರ ಆರೋಪಿಸಿದರು. ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು. ಬಿಜೆಪಿ ಅಧಿಕಾರದಲ್ಲಿದ್ದಾಗ ಜನರ ಸೇವೆಗಾಗಿ ಮತ್ತು ಆರೋಗ್ಯ ರಕ್ಷಣೆಗೆ ಹತ್ತು ಹಲವು ಯೋಜನೆ ಕೈಗೊಂಡು ಯಶಸ್ವಿಯಾಗಿದೆ. ಆದರೆ ಸಿದ್ದರಾಮಯ್ಯನವರ ರಾಜಕೀಯ ದ್ವೇಷದ ರಾಜಕಾರಣ ಕಾಂಗ್ರೆಸ್ ಮತ್ತು ಜೆಡಿಎಸ್ ಜಾತಿ ರಾಜಕಾರಣ ಮಾಡುತ್ತಾ ಜಾತ್ಯತೀತ ಎಂದು ಹೇಳಿಕೊಂಡು ಮತದಾರರನ್ನು ವಂಚಿಸಲು ಹೊರಟಿದೆ ಎಂದರು. ಕ್ಷೇತ್ರಾಧ್ಯಕ್ಷ ಎಂ.ಸಿ. ಸುದರ್ಶನ್ ಮಾತನಾಡಿ, ದೇಶ ಮತ್ತು ರಾಜ್ಯದಲ್ಲಿ ನರೇಂದ್ರ ಮೋದಿ ಅಲೆ ಎದ್ದಿದ್ದು, ಪ್ರತಿಯೊಬ್ಬರ ಮನಸ್ಸಿನಲ್ಲಿ ಮುಂದಿನ ಪ್ರಧಾನಿ ನರೇಂದ್ರ ಮೋದಿ ಎಂದು ನಿರ್ಧರಿಸಿದ್ದಾರೆ. ಪಕ್ಷದ ಕಾರ್ಯಕರ್ತರು ಈ ಬಾರಿ ಬಿಜೆಪಿಯನ್ನು ಗೆಲ್ಲಿಸಲು ಪಣ ತೊಟ್ಟು ನಿಂತಿದ್ದಾರೆ ಎಂದರು. ಅಭ್ಯರ್ಥಿ ಶೋಭಾ ಕಂದ್ಲಾಜೆ ಅವರು 28 ರಂದು ಮೂಡಿಗೆರೆ ಕಸಬಾ, ಬಣಕಲ್ ಮತ್ತು ಕಳಸ ಭಾಗದಲ್ಲಿ ಪ್ರಚಾರ ಕಾರ್ಯ ನಡೆಸಲಿದ್ದು, ಕಳಸದಲ್ಲಿ ರೋಡ್ ಶೋ ಕಾರ್ಯಕ್ರಮ ನಡೆಯಲಿದೆ ಎಂದರು. ಈ ಗೋಷ್ಠಿಯಲ್ಲಿ ತಾಲೂಕು ಉಪಾಧ್ಯಕ್ಷ ಮನೋಜ್, ಕಸಬಾ ಹೋಬಳಿ ಅಧ್ಯಕ್ಷ ಪಂಚಾಕ್ಷರಿ, ಕಣಚೂರ್ ವಿನೋದ್ ಉಪಸ್ಥಿತರಿದ್ದರು.
ಪದಾಧಿಕಾರಿಗಳ ನೇಮಕ
ಚಿಕ್ಕಮಗಳೂರು: ಬಿಜೆಪಿ ಎಸ್.ಸಿ. ನಗರ ಘಟಕದ ಅಧ್ಯಕ್ಷರಾಗಿ ಎಚ್.ಎಂ. ರಾಜ್ಕುಮಾರ್, ಉಪಾಧ್ಯಕ್ಷರಾಗಿ ಉಮೇಶ್, ನರಸಿಂಹ, ಲಕ್ಷ್ಮಣ, ಪ್ರಧಾನ ಕಾರ್ಯದರ್ಶಿಗಳಾಗಿ ಕಾಶೀನಾಥ್, ವರುಣ್ ಹಾಗೂ ಶಿವಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ. ಸಹ ಕಾರ್ಯದರ್ಶಿಗಳಾಗಿ ಯೋಗೇಶ್, ರಾಜು, ಕೇಶವಮೂರ್ಶಿ, ಕಾರ್ತಿಕ್, ಮಲ್ಲೇಶ್, ವೆಂಕಟೇಶ್, ಕುಮಾರ್, ಸಂತೋಷ್ ಹಾಗೂ ಚಂದ್ರು ಅವರನ್ನು ನಗರ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ನೇಮಕ ಮಾಡಿದ್ದಾರೆ.
ಸಮಸ್ಯೆಗೆ ಸ್ಪಂದಿಸದ ಸಂಸದ: ಆರೋಪ
ನರಸಿಂಹರಾಜಪುರ: ಸಂಸದ ಜಯಪ್ರಕಾಶ ಹೆಗ್ಡೆ ಅವರು ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂಬ ಜೆಡಿಎಸ್ ರಾಜ್ಯ ಉಪಾಧ್ಯಕ್ಷರ ಆರೋಪವನ್ನು ಕಾಂಗ್ರೆಸ್ ಖಂಡಿಸಿದೆ. ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್. ಸುಬ್ರಮಣ್ಯ ಪತ್ರಿಕಾ ಹೇಳಿಕೆ ನೀಡಿ, 1 ವರ್ಷ 10 ತಿಂಗಳ ಅವಧಿಯಲ್ಲಿ ಜಯಪ್ರಕಾಶ ಹೆಗ್ಡೆ ಅವರು ಅಡಕೆ ಬೆಳೆಗಾರರ ಪರವಾಗಿ ಕೆಲಸ ಮಾಡಿದ್ದರು. 15 ಸಾವಿರ ಇದ್ದ ಅಡಕೆ ಬೆಲೆ 30 ಸಾವಿರಕ್ಕೆ ಏರಿಕೆಯಾಗಲೂ ಕಾರಣರಾಗಿದ್ದಾರೆ. ಡಾ. ಗೋರಕ್ಸಿಂಗ್ ವರದಿ ಜಾರಿಗೆ ತರಲು ಆಗ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಸರಿಯಾಗಿ ಸ್ಪಂದಿಸಿರಲಿಲ್ಲ ಎಂದು ತಿಳಿಸಿದ್ದಾರೆ.
ನಾಗಿರೆಡ್ಡಿಅಮಾನತು ರದ್ದು
ನಾಯಕನಹಟ್ಟಿ: ಬಿಎಸ್ಆರ್ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಬಿಜೆಪಿ ಜಿಪಂ ಸದಸ್ಯ ಎಚ್.ಟಿ. ನಾಗಿರೆಡ್ಡಿ ಅವರನ್ನು ಅಮಾನತು ಮಾಡಿದ್ದ ಆದೇಶವನ್ನು ಭಾನುವಾರ ರದ್ದುಗೊಳಿಸಿದೆ. ಬಿಜೆಪಿ ಹಾಗೂ ಬಿಎಸ್ಆರ್ ಕಾಂಗ್ರೆಸ್ ಪಕ್ಷ ವಿಲೀನ ಪ್ರಕ್ರಿಯೆ ಪ್ರಾರಂಭವಾದುದ್ದರಿಂದ ರಾಜ್ಯಧ್ಯಕ್ಷರ ಸೂಚನೆ ಮೇರೆಗೆ ಅಮಾನತನ್ನು ರದ್ದುಗೊಳಿಸಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನರೇಂದ್ರನಾಥ್ ತಿಳಿಸಿದ್ದಾರೆ.
ಚುನಾವಣೆ: ಟೋಲ್ ಫ್ರೀ ದೂರವಾಣಿ
ದಾವಣಗೆರೆ: ಲೋಕಸಭಾ ಚುನಾವಣೆ- 2014ಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಮುಕ್ತ ಹಾಗೂ ಶಾಂತಿಯುತ ಮತದಾನ ನಡೆಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಟೋಲ್ ಫ್ರೀ ದೂರವಾಣಿ ಸಂಖ್ಯೆ ಆರಂಭಿಸಲಾಗಿದೆ. ಟೋಲ್ ಫ್ರೀ ದೂ. 18004252027 ಕರೆ ಮಾಡಿ, ಮಾಹಿತಿ ನೀಡಬಹುದು.