ತಾತ್ಕಾಲಿಕವಾಗಿ ಫೇಸ್‌ಬುಕ್, ವಾಟ್ಸ್ಯಾಫ್ ನಿಷೇಧಕ್ಕೆ ಆಗ್ರಹ
ಚಿಕ್ಕಮಗಳೂರು: ಫೇಸ್‌ಬುಕ್ ಹಾಗೂ ವ್ಯಾಟ್ಸ್ಯಾಫ್ ದುರುಪಯೋಗವಾಗುತ್ತಿದ್ದು, ಲೋಕಸಭಾ ಚುನಾವಣೆ ಮುಗಿಯುವವರೆಗೆ ಅವುಗಳ ಮೇಲೆ ನಿರ್ಬಂಧ ಹೇರಬೇಕು ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಎಚ್. ದೇವರಾಜ್ ರಾಜ್ಯ ಚುನಾವಣಾ ಆಯೋಗಕ್ಕೆ ಆಗ್ರಹಿಸಿದ್ದಾರೆ.
ಕೆಲವು ಅಭ್ಯರ್ಥಿಗಳ ವಿರುದ್ಧ ಅಂತರ್ಜಾಲ ಮೂಲಕ ಅಪಪ್ರಚಾರ ಮಾಡಲಾಗುತ್ತಿದೆ, ಇದಕ್ಕೆ ಕಡಿವಾಣ ಹಾಕಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಸೋಮವಾರ ಒತ್ತಾಯಿಸಿದರು.
ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಧನಂಜಯಕುಮಾರ್ ಅವರ ಬಗ್ಗೆ ಅವಹೇಳನಕಾರಿಯಾಗಿ ಫೇಸ್‌ಬುಕ್‌ನಲ್ಲಿ ಬರೆಯಲಾಗಿದೆ. ಈ ಮೂಲಕ ವಿದ್ಯಾವಂತರಿಗೆ ಮಾಹಿತಿ ರವಾನೆ ಮಾಡುವ ಕೆಲಸ ನಡೆಯುತ್ತಿದೆ. ಇದು, ಬಿಜೆಪಿಯ ಮೂರನೇ ದರ್ಜೆಯ ರಾಜಕಾರಣ. ಚುನಾವಣೆಯ ಅಧಿಸೂಚನೆ ಹೊರಡಿಸಿದ ನಂತರದಲ್ಲಿ ಫೇಸ್‌ಬುಕ್ ಹಾಗೂ ವ್ಯಾಟ್ಸಾಫ್ ಮೂಲಕ ಕೆಲವು ರಾಜಕೀಯ ಪಕ್ಷದವರು ಮತ ಕೇಳಿದ್ದು, ಆಯಾ ಪಕ್ಷದ ಅಭ್ಯರ್ಥಿಯ ಚುನಾವಣಾ ವೆಚ್ಚಕ್ಕೆ ಸೇರಿಸಬೇಕು.
ಚುನಾವಣೆ ಮುಗಿಯುವವರೆಗೆ ಫೇಸ್‌ಬುಕ್ ಹಾಗೂ ವ್ಯಾಟ್ಸಾಫ್ ಅಂತರ್ಜಾಲ ನಿರ್ಬಂಧಿಸಬೇಕು ಎಂದು ರಾಜ್ಯ ಚುನಾವಣಾ ಆಯೋಗವನ್ನು ಆಗ್ರಹಿಸಿದ ಅವರು, ಈ ಕೆಲಸ ತಕ್ಷಣಕ್ಕೆ ಆಗದೆ ಹೋದರೆ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗುವುದು ಎಂದು ಹೇಳಿದರು.
ಈ ಚುನಾವಣೆಯನ್ನು ಜೆಡಿಎಸ್ ಸವಲಾಗಿ ಸ್ವೀಕರಿಸಿದೆ. ಚಿಕ್ಕಮಗಳೂರು ಜಿಲ್ಲೆಯ ಜ್ವಲಂತ ಸಮಸ್ಯೆ ಬಗೆಹರಿಸುವಲ್ಲಿ ಅಧಿಕಾರದಲ್ಲಿದ್ದಾಗ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ವಿಫಲವಾಗಿವೆ. ಈಗ ಸಮಸ್ಯೆಗಳ ಬಗ್ಗೆ ಪರಸ್ಪರ ಗೂಬೆ ಕೂರಿಸುವ ಕೆಲಸ ಮಾಡುತ್ತಿವೆ. ಜನರಿಗೆ ಮತ ಕೇಳುವ ನೈತಿಕತೆ ಇರುವುದು ಜೆಡಿಎಸ್ ಪಕ್ಷಕ್ಕೆ ಮಾತ್ರ ಎಂದರು.
ಅಡಕೆ ಬೆಳೆಗಾರರ ಸಮಸ್ಯೆ ಬಗ್ಗೆ ಧನಂಜಯಕುಮಾರ್ ಅವರು ಸ್ಪಂಧಿಸಿದ್ದಾರೆ. ಒತ್ತುವರಿ ತೆರವು ಕೆಲಸವನ್ನು ಜೆಡಿಎಸ್ ತಡೆ ಹಿಡಿದಿದೆ. ಕಳಸದ ಇನಾಂಭೂಮಿ ತೆರವು ವಿರೋಧಿಸಿ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು ಸ್ವತಃ ಸ್ಥಳಕ್ಕೆ ಆಗಮಿಸಿ ಧರಣಿ ನಡೆಸುವ ಮೂಲಕ ತೆರವು ಪ್ರಕ್ರಿಯೆಗೆ ಕಡಿವಾಣ ಹಾಕಿಸಿದ್ದಾರೆ ಎಂದು ಹೇಳಿದರು.
ಈ ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷದ ಸಮನ್ವಯ ಸಮಿತಿ ರಚನೆ ಮಾಡಲು ಮಂಗಳವಾರ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.
ಭೋವಿ ವಡ್ಡರ ಸಂಘ ಒಡೆಯುವ ತಂತ್ರ: ಆರೋಪ
ಚಿಕ್ಕಮಗಳೂರು: ಕಾಂಗ್ರೆಸ್ ಪಕ್ಷ ಭೋವಿ ವಡ್ಡರ ಸಂಘದಲ್ಲಿ ಬಿರುಕುಂಟು ಮಾಡುತ್ತಿದೆ ಎಂದು ಸಂಘದ ಅಧ್ಯಕ್ಷ ಎಚ್.ಆರ್. ದಿಲೀಪ್‌ಕುಮಾರ್ ಆರೋಪಿಸಿದ್ದಾರೆ.
ನಗರದಲ್ಲಿ ಸೋಮವಾರ ನಡೆದ ಜಿಲ್ಲಾ ಭೋವಿ ವಡ್ಡರ ಸಂಘದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಂಗ್ರೆಸ್ ಪಕ್ಷ ರಾಜಕೀಯ ದುರುದ್ದೇಶದಿಂದ ಸಂಘವನ್ನು ಒಡೆಯುವ ಕೆಲಸ ಮಾಡುತ್ತಿದೆ. ಇದು ಶೋಭೆ ತರುವಂತದ್ದಲ್ಲ ಎಂದು ಹೇಳಿದರು.
ಚಿತ್ರದುರ್ಗದ ಗುರುಸಿದ್ದರಾಮೇಶ್ವರ ಸ್ವಾಮಿಗಳ ಸಮ್ಮುಖದಲ್ಲಿ ಸಂಘಟನೆ ಅಸ್ತಿತ್ವಕ್ಕೆ ಬಂದು ಸಮಾಜದ ಎಲ್ಲ ಬಂಧುಗಳು ಒಗ್ಗೂಡಿ ಸ್ವಾಮಿಗಳ ಮಾರ್ಗದರ್ಶನ, ಹಿರಿಯರ ಸಲಹೆ, ಸಹಕಾರಗಳೊಂದಿಗೆ ಏಳು-ಬೀಳು ಸರಿದೂಗಿಸಿಕೊಂಡು ಸಾಗುತ್ತಿದ್ದೇವೆ. ಬಸವನಕೋಡಿಯಲ್ಲಿ ಕೆಲ ಕಾಂಗ್ರೆಸ್ ಮುಖಂಡರು ಸಭೆ ನಡೆಸಿ ಭೋವಿ ಜನಾಂಗದ ಕೆಲ ಮುಗ್ಧರನ್ನು ಎತ್ತಿಕಟ್ಟಿ ಬಿರುಕು ಮೂಡಿಸುವ ತಂತ್ರಕ್ಕೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಂಘದ ಒಡಕಿಗೆ ಯಾವುದೇ ರಾಜಕೀಯ ಪಕ್ಷಗಳು ಮಧ್ಯಸ್ತಿಕೆ ವಹಿಸಿ ಬಿರುಕು ಮೂಡಿಸುವ ಪ್ರಯತ್ನ ನಡೆಸಿದರೆ ಅಂಥವರ ವಿರುದ್ಧ ಹೋರಾಟಕ್ಕೆ ಮುಂದಾಗಬೇಕಾಗುತ್ತದೆಂದು ಹೇಳಿದರು.
ಉಪಾಧ್ಯಕ್ಷ ಶೃಂಗೇರಿ ಶಿವಣ್ಣ, ಪ್ರಧಾನ ಕಾರ್ಯದರ್ಶಿ ಚಟ್ನಪಾಳ್ಯ ಕೊಲ್ಲಾಭೋವಿ, ಖಜಾಂಚಿ ತಿಮ್ಮರಾಜು, ಗೋವಿಂದರಾಜು, ಮಂಜುನಾಥ್, ಬಾಲರಾಜ್ ಸಭೆಯಲ್ಲಿ ಉಪಸ್ಥಿತರಿದ್ದರು.