ಶಾರ್ಟ್ ಸರ್ಕೀಟ್: 50ಕ್ಕೂ ಹೆಚ್ಚು ಟಿವಿಗಳಿಗೆ ಹಾನಿ
ವಿದ್ಯುತ್ ತಂತಿ ಮೇಲೆ ಬೃಹತ್ ಮರದ ರೆಂಬೆ ಬಿದ್ದದ್ದೇ ಕಾರಣ
ಹರಿಹರ: ಸ್ಥಳೀಯರ ವಿರೋಧದ ನಡುವೆಯೂ ಹರಿಹರೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಇದ್ದ ಮರ ಕಡಿಯುವ ಸಂದರ್ಭದಲ್ಲಿ ಅದರ ಬೃಹತ್ ರೆಂಬೆ ವಿದ್ಯುತ್ ತಂತಿಯ ಮೇಲೆ ಬಿದ್ದು ಉಂಟಾದ ಶಾರ್ಟ್ ಸರ್ಕೀಟ್ ಉಂಟಾದ ಪರಿಣಾಮ ಕೋಟೆ ಕೇರಿಯ ಸುಮಾರು 50ಕ್ಕೂ ಹೆಚ್ಚು ಮನೆಗಳಲ್ಲಿ ಟಿವಿ, ರೆಫ್ರಿಜರೇಟರ್ ಮತ್ತು ಇತರೆ ಎಲೆಕ್ಟ್ರಾನಿಕ್ ಉಪಕರಣಗಳು ಹಾನಿಗೀಡಾಗಿವೆ.
ಬೆಳಗ್ಗೆ 11ರ ಸುಮಾರಿಗೆ ಸ್ಥಳಕ್ಕೆ ಆಗಮಿಸಿದ ಮರ ಕಡಿಯುವವರು ಮರ ಕಡಿಯಲು ಪ್ರಾರಂಭಿಸುತ್ತಿದ್ದಂತೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲಿದ್ದ ಗುತ್ತಿಗೆದಾರರು ಮರ ಕಡಿಯಲು ನಮಗೆ ನಗರಸಭೆಯಿಂದ ಹರಾಜಿನಲ್ಲಿ ಪಡೆದಿದ್ದೇವೆ. ಅದಕ್ಕೆ ಅನುಮತಿ ಪತ್ರ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಮರ ಕಡಿಯಲು ನಗರಸಭೆ ಹಾಗೂ ಅರಣ್ಯ ಇಲಾಖೆ ನೀಡಿದ ಅನುಮತಿ ಪತ್ರ ನೀಡಿ ಎಂದು ಸ್ಥಳೀಯರು ಒತ್ತಾಯ ಮಾಡಿದಾಗ ಆಫೀಸಿನಲ್ಲಿವೆ. ಮನೆಯಲ್ಲಿವೆ ಎಂದು ಗುತ್ತಿಗೆದಾರು ಸಬೂಬು ಹೇಳಿದ್ದಾರೆ. ಅನುಮತಿ ಪತ್ರ ತರುತ್ತೇನೆ ಎಂದು ತೆರಳಿದ ಗುತ್ತಿಗೆದಾರ ಮಧ್ಯಾಹ್ನ ಕಳೆದರೂ ಬರಲಿಲ್ಲ. ಈ ನಡುವೆ ಮರ ಕಡಿಯುವ ಕಾರ್ಯ ಮುಂದುವರಿದಿತ್ತು.
ತರಾತುರಿಯಲ್ಲಿ ಮರ ಕಡಿದಿದ್ದರಿಂದ ಮರದ ರೆಂಬೆ ವಿದ್ಯುತ್ ತಂತಿಯ ಮೇಲೆ ಬಿದ್ದಿದೆ ಇದರಿಂದಾಗಿ ಟಿವಿ, ಕಂಪ್ಯೂಟರ್ ಮುಂತಾದ ವಸ್ತುಗಳು ಸಂಪೂರ್ಣ ಹಾಳಾಗಿವೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ ಮರ ಕಡಿಯುವುದನ್ನು ನಿಲ್ಲಿಸಿದರು.
ಸಂಜೆಯಾದರೂ ಯಾರು ಬಾರದ ಕಾರಣ ಯಾವುದೇ ಕಾರಣಕ್ಕೂ ಕಡಿದ ಮರ ಸಾಗಿಸಲು ಬಿಡುವುದಿಲ್ಲ ಎಂದು ಎಚ್ಚರಿಸಿದರು. ಕೂಡಲೇ ಸಂಬಂಧಿಸಿದ ನಗರಸಭಾ ಅಧಿಕಾರಿಗಳು, ಗುತ್ತಿಗೆದಾರರು, ಸ್ಥಳಿಯರಿಗೆ ಆಗಿರುವ ಅನ್ಯಾಯ ಪರಿಹಾರ ನೀಡಬೇಕು ಎಂದು ಸ್ಥಳೀಯರು ಆಗ್ರಹಿಸಿದರು.
ರಾಮಮೂರ್ತಿ, ಜೋಶಿ, ನಾಗಭೂಷಣ ದಿಕ್ಷಿತ್, ಸುಶೀಲೇಂದ್ರ, ವಿಮಲಮ್ಮ, ಶ್ರೀರಾಮದೀಕ್ಷಿತ್ ವೆಂಕಟೇಶ್ ಅರೆಮಲ್ಲಾಪುರ ಸೇರಿ ಅನೇಕ ಸ್ಥಳೀಯರು ಮರ ಕಡಿಯದಂತೆ ತಡೆಯೊಡ್ಡಿದರು.