ಜೀವನ ಉನ್ನತಿಗೆ ಧರ್ಮ ಪಾಲನೆ ಅಗತ್ಯ
ಕನ್ನಡಪ್ರಭ ವಾರ್ತೆ ಜೇವರ್ಗಿ ಮೇ 24
ಮನುಷ್ಯನ ಬಾಳು ಉಜ್ವಲಗೊಳ್ಳಬೇಕಾದರೆ ಆದರ್ಶ ಮೌಲ್ಯಗಳ ಅವಶ್ಯಕತೆಯಿದೆ. ಧರ್ಮದ ಹೆದ್ದಾರಿ ಜೀವನದ ಶ್ರೇಯಸ್ಸಿಗೆ ದಾರಿ. ಧರ್ಮದ ದಿಕ್ಸೂಚಿಯಿಂದ ಜೀವನ ಸಾರ್ಥಕಗೊಳ್ಳುವುದೆಂದು ಬಾಳೆಹೊನ್ನೂರಿನ ರಂಭಾಪುರಿ ಪೀಠದ ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯಭಗವತ್ಪಾದರು ಅಭಿಪ್ರಾಯಪಟ್ಟರು.
ತಾಲೂಕಿನ ಸುಂಬಡ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಕಡಕೋಳ ಮಡಿವಾಳೇಶ್ವರರ ಜ್ಞಾನಯೋಗಾಶ್ರವು ಉದ್ಘಾಟನೆ ಅಂಗವಾಗಿ ಆಯೋಜಿಸಿದ್ದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿದ ವೀರಶೈವ ಧರ್ಮವನ್ನು ಜಗದ್ಗುರು ರೇಣುಕಾದಿ ಪಂಚಾಚಾರ್ಯರು ಭೂಮಂಡಲದಲ್ಲಿ ಸ್ಥಾಪಿಸಿದರು. ಅವರು ಬೋಧಿಸಿದ ಧರ್ಮಸೂತ್ರಗಳು ಸಕಲರ ಬಾಳಿಗೂ ದಾರಿದೀಪಗಳಾಗಿವೆ. ತತ್ವಜ್ಞಾನಿಗಳಾದ ಕಡಕೋಳ ಮಡಿವಾಳಪ್ಪನವರ ಚಿಂತನೆಗಳು ಮಾನವ ಜೀವನದ ಉದ್ಧಾರಕ್ಕೆ ಕಾರಣವಾಗಿವೆ ಎಂದರು.
ಧರ್ಮದಿಂದಲೇ ಮಾನವ ಜನ್ಮ ಉಜ್ವಲ: ಉಜ್ಜಯಿನಿ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಸಾನ್ನಿಧ್ಯ ವಹಿಸಿ ಮಾತನಾಡಿ, ಧರ್ಮದಿಂದಲೇ ಮಾನವ ಜನ್ಮ ಉಜ್ವಲಗೊಳ್ಳಲಿದೆ. ಆಧುನಿಕ ಜಗತ್ತಿನಲ್ಲಿ ಧರ್ಮ ಸಂಸ್ಕೃತಿ ಕಲುಷಿತಗೊಳ್ಳುತ್ತಿದೆ. ಇಂದಿನ ದಿನಗಳಲ್ಲಿ ಧರ್ಮದ ಆದರ್ಶ ಮೌಲ್ಯಗಳ ಪರಿಪಾಲನೆ ಅಗತ್ಯವಾಗಿದೆ ಎಂದರು.
ಇದಕ್ಕೂ ಮುನ್ನ ಸುಂಬಡ ಗ್ರಾಮದ ಹೊನ್ನದುಬಲಾಂಬಿಕಾ ದೇವಸ್ಥಾನದಿಂದ ಕಡಕೋಳ ಮಡಿವಾಳೇಶ್ವರರ ಜ್ಞಾನ ಯೋಗಾಶ್ರವುದವರೆಗೆ ರಂಭಾಪುರಿ ಹಾಗೂ ಉಜ್ಜಯಿನಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವವನ್ನು ವಿಜೃಂಭಣೆಯಿಂದ ನೆರವೇರಿಸಲಾಯಿತು. ಸಹಸ್ರಾರು ಭಕ್ತಾದಿಗಳು ಪಾಲ್ಗೊಂಡಿದ್ದರು.
ಜ್ಞಾನಯೋಗಾಶ್ರವು ನಿರ್ಮಿಸಲು ಭೂದಾನ ನೀಡಿದ ಸುಂಬಡ ಗ್ರಾಮದ ಸಿದ್ದಣ್ಣ ತುಕಾರಾಮ ಕರಂಡಿ ದಂಪತಿಗಳನ್ನು ಉಭಯ ಜಗದ್ಗುರುಗಳು ಸತ್ಕರಿಸಿದರು. ಕಡಕೋಳದ ರುದ್ರಮುನಿ ಶಿವಾಚಾರ್ಯರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಿಣಮಗೇರಿಯ ಸಿದ್ಧರಾಮ ಶಿವಾಚಾರ್ಯರು, ಶಖಾಪುರ ಸಿದ್ಧರಾಮ ಶಿವಾಚಾರ್ಯರು, ಹೊನ್ನಕಿರಣಗಿಯ ಚಂದ್ರಗುಂಡ ಶಿವಾಚಾರ್ಯರು, ಆಲೂರಿನ ಕೆಂಚವೃಷಭೇಂದ್ರ ಶಿವಾಚಾರ್ಯರು ಸೇರಿದಂತೆ ನಾಡಿನ ಮಠಾಧೀಶರು ಸಮ್ಮುಖ ವಹಿಸಿದ್ದರು.
ಧರ್ಮಸಭೆಯಲ್ಲಿ ಶಾಸಕ ಡಾ.ಅಜಯಸಿಂಗ್, ಬಸವರಾಜ ಪಾಟೀಲನರಿಬೋಳ, ಸಿದ್ದಣ್ಣಗೌಡ ಬಿರಾದಾರ, ಶಾಂತಗೌಡ ದುಮ್ಮದ್ರಿ, ಗೊಲ್ಲಾಳಪ್ಪಗೌಡ, ಶಿವಶರಣಪ್ಪ ಸೀರಿ, ಕಾಶಿರಾಯಗೌಡ, ರಾಜಶೇಖರ ಇತರರಿದ್ದರು.