ಮಠಗಳಲ್ಲಿ ಅಂಬೇಡ್ಕರ್ ಜಯಂತಿ ಆಚರಿಸಲಿ
ಆಳಂದ: ಸಂವಿಧಾನ ಬಚಾವ್ ರಾಷ್ಟ್ರವ್ಯಾಪಿ ಜನಾಂದೋಲನ ಚಳವಳಿಯಲ್ಲಿ ಶೋಷಿತರು, ಸಾಮಾಜಿಕ ನ್ಯಾಯವಂಚಿತರು ಮತ್ತು ಹಿಂದುಳಿದವರು ಪಾಲ್ಗೊಳ್ಳಬೇಕು ಎಂದು ಭಾರತ ಮುಕ್ತಿ ಮೋರ್ಚಾದ ಪ್ರಮುಖ ನೇತಾರ, ಉಸ್ತುರಿ-ಧುತ್ತರಗಾಂವ ಮಠದ ವಿಶ್ವನಾಥ ಕೋರಣೇಶ್ವರ ಸ್ವಾಮೀಜಿ ಕರೆ ನೀಡಿದ್ದಾರೆ.
ತಾಲೂಕಿನ ಧುತ್ತರಗಾಂವದಲ್ಲಿ ಶನಿವಾರ ಏರ್ಪಡಿಸಿದ್ದ ಡಾ.ಅಂಬೇಡ್ಕರ್ ಜಯಂತಿ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ, ಐದು ವರ್ಷಗಳಲ್ಲಿ ದೇಶದ ಸಂವಿಧಾನವನ್ನು ಶಕ್ತಿಹೀನ ಮಾಡಲು ಹೊರಟಿರುವ ಪಟ್ಟಭದ್ರ ಶಕ್ತಿಗಳ ವಿರುದ್ಧ ಶೋಷಿತರು ಒಂದಾಗಿ ಹೋರಾಟಕ್ಕೆ ಮುಂದಾಗಬೇಕು. ವಿಶ್ವರತ್ನ ಅಂಬೇಡ್ಕರ್ ಜಯಂತಿ ನಿಜಕ್ಕೂ ಹಬ್ಬದ ಆಚರಣೆ ಆಗಿದೆ. ಅವರು ಕಂಡ ಸಮೃದ್ಧ ಭಾರತದ ಕನಸು ನನಸು ಮಾಡಬೇಕಾಗಿದೆ. ಅದಕ್ಕಾಗಿ ದೇಶಾದ್ಯಂತ ಲಕ್ಷಾಂತರ ಕಾರ್ಯಕರ್ತರ ಯುವಪಡೆ ಸಜ್ಜಾಗಿ ಕಾರ್ಯಪ್ರವೃತ್ತವಾಗಿದೆ. ಗುಲಾಮಗಿರಿಯಿಂದ ಮುಕ್ತಗೊಂಡು ದೇಶ ಸಂಪೂರ್ಣ ಸ್ವತಂತ್ರವಾದರೆ ಮಾತ್ರ ಮೂಲನಿವಾಸಿಗಳ ಕೈಗೆ ಅಧಿಕಾರ ದೊರೆಯುತ್ತದೆ ಎಂದರು.
ದಾಸ್ಯತ್ವದಿಂದ ಹೊರಬರಬೇಕು: ಮೈಸೂರಿನ ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ವಿಶೇಷ ಉಪನ್ಯಾಸ ನೀಡಿ, ದೇಶದ ಸಮಸ್ಯೆ, ಸವಾಲುಗಳಿಗೆ ಉತ್ತರವಾಗಿ ಸಂವಿಧಾನ ಬರೆದ ಡಾ. ಅಂಬೇಡ್ಕರ್‌ರ ಜಯಂತಿ ಕೇವಲ ದಲಿತ ಓಣಿಗಳಲ್ಲಿ ನಡೆದರೆ ಸಾಲದು, ಮಠ, ಚರ್ಚ್ ಹಾಗೂ ಮಸೀದಿಗಳಲ್ಲೂ ಹಮ್ಮಿಕೊಳ್ಳುವಂತಾಗಬೇಕು. ಈ ಮಠ, ಮಸೀದಿ, ಚರ್ಚ್‌ಗಳಿಗೆ ಸಂವಿಧಾನವೇ ಭದ್ರತೆ ಒದಗಿಸುತ್ತಿದೆ. ಅರ್ಥಾತ್ ಇದು ಅಂಬೇಡ್ಕರ ಅವರ ಕೊಡುಗೆಯಾಗಿದೆ. ನಮ್ಮನ್ನು ಯಾವ ದೇವರು, ಧರ್ಮಾಧಿಕಾರಿಗಳೂ ಆಳುತ್ತಿಲ್ಲ. ದಾಸ್ಯತ್ವದಿಂದ ಹೊರಬಂದು ಅಂಬೇಡ್ಕರ್, ಬಸವಣ್ಣನವರ ಹಾದಿಯಲ್ಲಿ ನಡೆಯಬೇಕೆಂದರು.
ಮೀಸಲಾತಿ ಒದಗಿಸಿ: ದಿನಗೂಲಿ ರಾಜ್ಯ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ ಹಿರೇಮಠ ಮಾತನಾಡಿ, ಸಮಾನತೆಗಾಗಿ ಸರ್ಕಾರಿ ಹುದ್ದೆಗಳ ಭರ್ತಿ, ಖಾಸಗಿ ಕಂಪನಿಗಳಲ್ಲಿ ಮೀಸಲಾತಿ ಒದಗಿಸಿ ದಲಿತರ ಹಿತಕಾಪಾಡಬೇಕು ಎಂದು ಆಗ್ರಹಿಸಿದರು.
ಶಾಸಕ ಬಿ.ಆರ್. ಪಾಟೀಲ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ನೆರವೇರಿಸಿದರು. ಭಾಮಸೇಫ್ ರಾಜ್ಯ ಅಧ್ಯಕ್ಷ ಸುಭಾಷ ಶೀಲವಂತ, ರಾಷ್ಟ್ರೀಯ ಬೌದ್ಧ ಸೇವಾ ಸಂಘದ ಅಧ್ಯಕ್ಷ ಚಂದ್ರಕಾಂತ ಇಂಗಳೆ ಮಾತನಾಡಿದರು.
ಪತ್ರಕರ್ತ ಮಹಾದೇವ ವಗಡಾಂವ, ಜಿಪಂ ಸದಸ್ಯೆ ಮಂಗಲಾ ಅರವಿಂದ ನರೋಣಿ, ಪಿಆರ್‌ಪಿ ಅಧ್ಯಕ್ಷ ಪ್ರಕಾಶ ಮೂಲಭಾರತಿ, ತಾಪಂ ಸದಸ್ಯೆ ಮಹೇಶ್ವರಿ ಗುರುನಾಥ ಗೌರಸೆ ಆಗಮಿಸಿದ್ದರು.
ಗ್ರಾಪಂ ಅಧ್ಯಕ್ಷ ಗೇಮುನಾಯಕ ಚವಾಣ ಧ್ವಜಾರೋಹಣ ನೆರವೇರಿಸಿದರು.