ಬೆಂಗಳೂರು-ಮಂಗಳೂರು ವೀಕ್ಲಿ ರೈಲಿಗೆ ನಾಳೆ ಚಾಲನೆ
ಮಂಗಳೂರು: ಕೇಂದ್ರ ರೇಲ್ವೆ ಬಜೆಟ್ನಲ್ಲಿ ಘೋಷಿಸಿದ ಬೆಂಗಳೂರು-ಮಂಗಳೂರು-ಯಶವಂತಪುರ ವೀಕ್ಲಿ ಎಕ್ಸ್ಪ್ರೆಸ್(ನಂ.06565/06566) ರೈಲು ಸಂಚಾರಕ್ಕೆ ಆ.4ರಂದು ಬೆಂಗಳೂರು ನಗರದಲ್ಲಿ ಚಾಲನೆ ಸಿಗಲಿದೆ. ಈ ರೈಲು ಮೈಸೂರು ಅಥವಾ ಅರಸೀಕೆರೆ ಬದಲು ತಮಿಳುನಾಡು, ಕೇರಳ ಮಾರ್ಗವಾಗಿ ಮಂಗಳೂರಿಗೆ ಸಂಚರಿಸುವುದು ಸ್ಪಷ್ಟವಾಗಿದೆ.
ಉದ್ಘಾಟನಾ ವಿಶೇಷವಾಗಿ ಈ ರೈಲು ಬೆಂಗಳೂರು ನಗರದಿಂದ ಬೆಳಗ್ಗೆ 11ಕ್ಕೆ ಹೊರಟು ಆ.5ರಂದು ಮುಂಜಾನೆ 3.30ಕ್ಕೆ ಮಂಗಳೂರು ಸೆಂಟ್ರಲ್ ನಿಲ್ದಾಣ ತಲುಪಲಿದೆ. ಅಲ್ಲಿಂದ ರಾತ್ರಿ 8ಕ್ಕೆ ಹೊರಟು ಆ.6ರಂದು ಮಧ್ಯಾಹ್ನ 2.30ಕ್ಕೆ ಬೆಂಗಳೂರು ತಲುಪಲಿದೆ. 2 ಎಸಿ 3-ಟೈರ್, 3 ಸ್ಲೀಪರ್ ಕ್ಲಾಸ್, 10 ಜನರಲ್ ದ್ವಿತೀಯ ದರ್ಜೆ ಮತ್ತು 2 ಲಗೇಜು ಬೋಗಿಗಳನ್ನು ಒಳಗೊಂಡಿವೆ.
ಈ ರೈಲಿನ ನಿಯಮಿತ ಸಂಚಾರ ಆ.11ರಿಂದ ಶುರುವಾಗಲಿದ್ದು, ಯಶವಂತಪುರದಿಂದ ಪ್ರತಿ ಭಾನುವಾರ ರಾತ್ರಿ 11.55ಕ್ಕೆ ಹೊರಟು ಮಂಗಳೂರು ಸೆಂಟ್ರಲ್ಗೆ ಮರುದಿನ ಸಂಜೆ 5.40ಕ್ಕೆ ತಲುಪಲಿದೆ. ಮಂಗಳೂರು ಸೆಂಟ್ರಲ್ನಿಂದ ಸೋಮವಾರ ರಾತ್ರಿ 8ಕ್ಕೆ ಹೊರಟು ಮಂಗಳವಾರ ಮಧ್ಯಾಹ್ನ 1.30ಕ್ಕೆ ಯಶವಂತಪುರಕ್ಕೆ ಆಗಮಿಸಲಿದೆ. ಈ ರೈಲು 1ಎಸಿ 2-ಟೈರ್, 1 ಎಸಿ 3-ಟೈರ್, 7 ಸ್ಲೀಪರ್ ಕ್ಲಾಸ್, 6 ಸಾಮಾನ್ಯ ದ್ವಿತೀಯ ದರ್ಜೆ ಹಾಗೂ 2 ಲಗೇಜು ಬೋಗಿಯನ್ನೊಳಗೊಂಡಿದೆ. ಯಶವಂತಪುರದಿಂದ ಬಾಣಸವಾಡಿ, ಕೃಷ್ಣರಾಜಪುರಂ, ಬಂಗಾರಪೇಟೆ, ಕುಪ್ಪಂ, ಸೇಲಂ, ಈರೋಡು, ತಿರುಪ್ಪುರ, ಕೊಯಂಬತ್ತೂರು, ಪಾಲಕ್ಕಾಡ್, ಶೋರ್ನೂರ್, ತಿರೂರ್, ಕೋಯಿಕ್ಕೋಡ್, ವಡಕರ, ತಲಶ್ಶೇರಿ, ಕಣ್ಣೂರು, ಪಯ್ಯನ್ನೂರು, ಕಾಞಂಗಾಡ್ ಮತ್ತು ಕಾಸರಗೋಡು ಮಾರ್ಗವಾಗಿ ಮಂಗಳೂರು ಸೆಂಟ್ರಲ್ ಸಂಪರ್ಕಿಸಲಿದೆ ಎಂದು ನೈಋತ್ಯ ರೇಲ್ವೆ ಫಾಲ್ಘಾಟ್ ವಿಭಾಗ ಪ್ರಕಟಣೆ ತಿಳಿಸಿದೆ.