ಬ್ರಾಹ್ಮಣ ಕುವರರಿಗೆ ಕೈಕೊಟ್ಟ ಕಾಶ್ಮೀರಿ ವಧುಗಳು!
-ಜಿತೇಂದ್ರ ಕುಂದೇಶ್ವರ
ಮಂಗಳೂರು: ಒಂದೇ ಒಂದು ಕಾಶ್ಮೀರಿ ವಧು ಕರಾವಳಿಯ ಬ್ರಾಹ್ಮಣ ವರನನ್ನು ಒಪ್ಪಿ ಮದುವೆಯಾಗಿಲ್ಲ!
ಕರಾವಳಿಯ ಬ್ರಾಹ್ಮಣ ಕುವರರಿಗೆ ವಧು ಕೊರತೆ ಹಿನ್ನೆಲೆಯಲ್ಲಿ ಕಾಶ್ಮೀರಿ ವಧುಗಳನ್ನು ಕರೆ ತಂದು ಮದುವೆ ಮಾಡಿಸುವ ಕಶ್ಯಪ ಯುವ ಬ್ರಾಹ್ಮಣ ವೇದಿಕೆ ಪ್ರಯತ್ನ ಮಾಧ್ಯಮದಲ್ಲಿ ವರ್ಷದ ಹಿಂದೆ ಅಬ್ಬರದ ಪ್ರಚಾರ ಪಡೆದಿತ್ತು.
ಆದರೆ, ಉತ್ತರ ಭಾರತದ ಒಂದೇ ಒಂದು ವಧು ಕನಿಷ್ಠ ವರ ದರ್ಶನಕ್ಕೂ ಬಂದಿಲ್ಲ. ಈ ಪ್ರಯತ್ನದಲ್ಲಿ ಉತ್ತರ ಭಾರತದ ಎನ್ಜಿಒ (ಸರ್ಕಾರೇತರ ಸಂಘಟನೆಗಳು)ಗಳಿಗೆ ಕಶ್ಯಪ ಯುವ ವೇದಿಕೆ 3 ಲಕ್ಷಕ್ಕೂ ಹೆಚ್ಚು ಖರ್ಚು ಮಾಡಿದೆ. ವಧುವನ್ನು ಕರೆಸದೆ ಉತ್ತರ ಭಾರತದ ಮಧ್ಯವರ್ತಿಗಳು 1.7 ಲಕ್ಷ ಕಬಳಿಸಿದ್ದಾರೆ.
ಮಾಧ್ಯಮಗಳ ಪ್ರಚಾರ ಮತ್ತು ಸಂಘಟಕರ ಭರವಸೆ ಮಾತುಗಳನ್ನು ನಂಬಿ 400ಕ್ಕೂ ಹೆಚ್ಚು ಬ್ರಾಹ್ಮಣ ಯುವಕರು ವೇದಿಕೆಯಲ್ಲಿ1 ಸಾವಿರ ನೀಡಿ ನೋಂದಣಿ ಮಾಡಿದರು. ಸೆಪ್ಟೆಂಬರ್ನಲ್ಲಿ ಕಾಶ್ಮೀರಿ ವಧುಗಳ ಬೇಟೆ ಆರಂಭವಾಗಿತ್ತು.
ನಾವು ಉತ್ತರ ಭಾರತಕ್ಕೆ 6 ಬಾರಿ ಹೋಗಿದ್ದೇವೆ. ಉತ್ತರ ಭಾರತದ ಮಹಿಳಾ ಪರೋಪಕಾರಿ ಸಂಘದ ಇಂದ್ರನಾಥ ಉಪಾಧ್ಯಾಯ ಮತ್ತು ನಾಲ್ಕು ಮಂದಿ ಕರಾವಳಿಗೆ ಬಂದಿದ್ದರು. ಕಾಶಿ ಪುರೋಹಿತ ತಿವಾರಿ, ಸ್ವಯಂ ಸೇವಾ ಸಂಸ್ಥೆ ಅಮಿತ್ ಮಿಶ್ರಾ ಕೂಡಾ ಪ್ರತ್ಯೇಕವಾಗಿ ಬಂದಿದ್ದರು. ಅವರನ್ನು ಕಾಸರಗೋಡು, ಸುರತ್ಕಲ್, ಬಂಟ್ವಾಳ, ಪುತ್ತೂರು ತಾಲೂಕಿನ ಮನೆಗಳಿಗೆ ಕರೆದುಕೊಂಡು ಹೋಗಿ ಮನೆಗಳಲ್ಲಿ 5ರಿಂದ 6 ದಿನ ಇದ್ದರು. ಊಟೋಪಚಾರ ಪಡೆದು ಇಲ್ಲಿನ ವಾತಾವರಣ ಹಿಡಿಸಿದೆ ಎಂದು ಹೇಳಿ ಹೋದವರು ಮತ್ತೆ ಬಂದಿಲ್ಲ ಎನ್ನುತ್ತಾರೆ ಕಶ್ಯಪ ಯುವ ವೇದಿಕೆಯ ಕೆ.ಆರ್. ಭಟ್.
'ಮಾಧ್ಯಮದಲ್ಲಿ ಪ್ರಚಾರ ಸಿಕ್ಕಿದ್ದರಿಂದ ಒತ್ತಡ ಹೆಚ್ಚಾಯಿತು. ನೋಂದಣಿ ಹೆಚ್ಚಾಯಿತು. ಜನರು ಸುಲಭದಲ್ಲಿ ವ್ಯವಸ್ಥೆ ಮಾಡುತ್ತೇವೆ ಎಂದು ತಪ್ಪಾಗಿ ಅರ್ಥ ಮಾಡಿಕೊಂಡರು. ನೋಂದಣಿ ಮಾಡಿದ ಕೆಲವರು ಹಣ ವಾಪಸ್ ಕೇಳಿದರು. ಸಂಗ್ರಹವಾದ ಹಣ ಎಲ್ಲ ಖರ್ಚಾಗಿದೆ' ಎಂದು ಭಟ್ಟರು ಬೇಸರಿಸುತ್ತಾರೆ.
ಆ ಭಾಗದಲ್ಲಿ ಬ್ರಾಹ್ಮಣ ವರಂದಿರು 10-15 ಲಕ್ಷ ವರದಕ್ಷಿಣೆ ಕೇಳುವುದರಿಂದ ವಧುಗಳಿಗೆ ಸಮಸ್ಯೆ ಇದೆ. ಈ ಭಾಗದಲ್ಲಿ ವಧುಗಳ ಕೊರತೆ ಇದೆ. ಇಲ್ಲಿನ ಜನಜೀವನ ಬಗ್ಗೆ ತಿಳಿಯದೆ ವಧುಗಳು ಬರಲು ಹಿಂದೇಟು ಹಾಕುತ್ತಾರೆ. ಒಂದು ಊರಿನಿಂದ ಹತ್ತು, ಇಪ್ಪತ್ತು ಯುವತಿಯರು ಮದುವೆಯಾಗಿ ಬಂದರೆ ಸಮಸ್ಯೆಯಾಗದು, ಇನ್ನೂ ಭರವಸೆ ಇದೆ. ಕಾಲ ಕೂಡಿ ಬರಬೇಕು ಅಷ್ಟೇ ಎನ್ನುತ್ತಾರೆ ಭಟ್ಟರು.
ಉಂಡೂ ಹೋದರು, ಕೊಂಡೂ ಹೋದರು!
ಇಲ್ಲಿಗೆ ಬಂದು ಮನೆಗಳಲ್ಲಿ ತಂಗಿ ಊಟ ಮಾಡಿದ ಉತ್ತರ ಭಾರತವರು, ನಮ್ಮೂರಲ್ಲಿಯೂ ಪ್ರಚಾರ ಮಾಡುತ್ತೇವೆ ಎಂದು ಹೇಳಿ ಹೋಗುವಾಗ 10, 15 ಸಾವಿರ ಪಡೆದರು. ಹತ್ತು ಮಂದಿ ರೈಲಲ್ಲಿ ಬರುವುದಾಗಿ ಹೇಳಿ ಕೈಕೊಟ್ಟರು, ನಮಗೆ ಟಿಕೆಟ್ಗೆ 20 ಸಾವಿರ ಖರ್ಚಾಯಿತು. ಅವರ ಮೊಬೈಲ್ ಕರೆನ್ಸಿ, ತಿರುಗಾಟ ಇತ್ಯಾದಿ ಖರ್ಚು ನಾವೇ ಭರಿಸಿದೆವು. ಈಗ 'ಪುನಃ ಬನ್ನಿ ವಧುಗಳನ್ನು ಹುಡುಕಿ ಕೊಡುತ್ತೇವೆ' ಎನ್ನುತ್ತಿದ್ದಾರೆ. ಒಮ್ಮೆ ಕೈಸುಟ್ಟುಕೊಂಡೆವು. ಪುನಃ ಕೈ ಸುಟ್ಟುಕೊಳ್ಳುವ ಧೈರ್ಯ ಇಲ್ಲ. ಇಲ್ಲಿಗೆ ಬಂದ ಮೇಲೆ ಪ್ರಯಾಣ ವೆಚ್ಚ ನೀಡುವ ಭರವಸೆ ನೀಡಿರುವುದಾಗಿ ಕೆ.ಆರ್. ಭಟ್ ವಿವರಿಸುತ್ತಾರೆ.