ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

'ಕೆಲವರಿಂದ ಕೆಲವರಿಗಾಗಿ ಕೆಲವರಿಗೋಸ್ಕರ' ಸರ್ಕಾರ: ನಿವೃತ್ತ ನ್ಯಾ. ಸಂತೋಷ್ ಹೆಗ್ಡೆ ಟೀಕೆ

Srinivasa Murthy VN
Updated On : 12 Aug 2013, 11:55 am

ವಿಟ್ಲ:  ಅಂದು 'ಜನರಿಂದ ಜನರಿಗಾಗಿ ಜನರಿಗೋಸ್ಕರ' ಎಂಬಂತಿದ್ದ ಸರ್ಕಾರ ಇಂದು 'ಕೆಲವರಿಂದ ಕೆಲವರಿಗಾಗಿ ಕೆಲವರಿಗೋಸ್ಕರ' ಎಂದಾಗಿದೆ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಟೀಕಿಸಿದ್ದಾರೆ.
ಇಲ್ಲಿನ ವಿಠಲ ಪದವಿ ಪೂರ್ವ ಕಾಲೇಜಿನ ಸುವರ್ಣ ರಂಗ ಮಂದಿರದಲ್ಲಿ ವಿಟ್ಲ ರೋಟರಿ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 'ಸಾಮಾಜಿಕ ಮೌಲ್ಯಗಳ ಕುಸಿತ' ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು.
ಸಮಾಜ ಹುಟ್ಟುವಾಗಲೇ ಭ್ರಷ್ಟಾಚಾರ ಕೂಡ ಹುಟ್ಟಿಕೊಂಡಿದೆ. ಇದರಿಂದ ಸಮಾಜ ಕೆಡುವುದಿಲ್ಲ, ಅದನ್ನು ಬೆಳೆಸಲು ಬಿಟ್ಟರೆ ಮಾತ್ರ ಅಪಾಯ. ಪ್ರತಿಯೊಂದು ಅನ್ಯಾಯದ ಹಿಂದೆ ಇರುವ ಕಾರಣ ದುರಾಸೆ, ಜನರಿಗೆ ತೃಪ್ತಿ ಎನ್ನುವುದರ ಅರ್ಥ ತಿಳಿಯಬೇಕು. ಅದರಿಂದ ಸಮಾಜದ ಸುಧಾರಣೆ ಸಾಧ್ಯ ಎಂದು ಹೆಗ್ಡೆ ಅಭಿಪ್ರಾಯಪಟ್ಟರು.
ಭ್ರಷ್ಟರಿಗೆ ಗೌರವ ಬೇಡ: ಒಬ್ಬ ವ್ಯಕ್ತಿ ಬೇರೆಯವರ ಹೊಟ್ಟೆಗೆ ಕಲ್ಲು ಹಾಕಿ, ದೋಚಿ ಬಂದ ಹಣದಿಂದ ಅವನಿಗೆ ತೃಪ್ತಿ ಸಿಗಲು ಸಾಧ್ಯ ಇಲ್ಲ. ನಿಮ್ಮನ್ನು ನೀವು ಯಾರಿಗೂ ಹೋಲಿಸಬೇಡಿ. ಇದ್ದುದರಲ್ಲಿಯೇ ಸಂತೋಷಪಡಿ ಎಂದು ಕಿವಿಮಾತು ಹೇಳಿದ ಅವರು, ಸಮಾಜ ಅಧಿಕಾರದಲ್ಲಿರುವ ಭ್ರಷ್ಟರನ್ನು ಗೌರವಿಸುತ್ತಿದೆ. ಇದು ತಪ್ಪು ಸಂದೇಶವನ್ನು ಕೊಡುತ್ತದೆ ಎಂದರು.
20 ವರ್ಷ ತೆರಿಗೆ ಕಟ್ಟಬೇಕಿಲ್ಲ: ನಂತರ ನಡೆದ ಸಂವಾದ ಕಾರ್ಯಕ್ರಮದಲ್ಲಿ '73 ಟ್ರಿಲಿಯನ್ ಹಣ ಡೆಡ್ ಆಗಿದೆ, ಅದನ್ನು ಉಪಯೋಗಿಸುವ ಹಾಗಿಲ್ವಾ' ಎಂಬ ಕಾನೂನು ವಿದ್ಯಾರ್ಥಿ ಕುಮಾರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಂತೋಷ್ ಹೆಗ್ಡೆ, ಆ ಹಣ ಸಂಪೂರ್ಣ ಸರ್ಕಾರದಲ್ಲಿಲ್ಲ. ಹೆಚ್ಚಿನದ್ದು ಸ್ವಿಸ್ ಬ್ಯಾಂಕ್ನಲ್ಲಿದೆ. ಹಿಂದೆ ಇದನ್ನು ವಾಪಸ್ ತರುವ ವಿಚಾರದಲ್ಲಿ ಬಹಳ ಬೇಡಿಕೆಗಳು ಬಂದಿದ್ದವು. ಯಾವುದೇ ಸರ್ಕಾರ ಇದಕ್ಕೆ ಸರಿಯಾದ ಉತ್ತರ ಈವರೆಗೂ ನೀಡಿಲ್ಲ. ಆ ಹಣ ಭಾರತಕ್ಕೆ ವಾಪಸ್ ಬಂದರೆ ಸುಮಾರು 20 ವರ್ಷ ತೆರಿಗೆ ಕಟ್ಟಬೇಕಿಲ್ಲ ಎಂದರು.
ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ಅವರು, ಲೋಕಾಯುಕ್ತದ ಕೆಲಸ ಕೇವಲ ದಾಳಿ ಮಾಡಿ ಭ್ರಷ್ಟರನ್ನು ಹಿಡಿಯುವುದು ಮಾತ್ರ. ದಾಳಿ ಮಾಡುವಾಗ ಸಿಕ್ಕಿದ ಅಕ್ರಮ ಸಂಪತ್ತೆಲ್ಲ ಪೊಲೀಸ್ ಕಸ್ಟಡಿಯಲ್ಲಿರುತ್ತದೆ. ನಿಯಮಾನುಸಾರ ಅದು ಸರ್ಕಾರಕ್ಕೆ ಹೋಗುತ್ತದೆ. ದುರಂತವೆಂದರೆ ಕೆಲವು ಅಪರಾಧಿಗಳಿಗೆ ಪ್ರಮೋಷನ್ ಕೂಡ ಆಗಿದೆ ಎಂದರು.
ಸುಮಾರು ಒಂದು ಗಂಟೆ ಸಂವಾದ ನಡೆಯಿತು. ರೋಟರಿ ಕ್ಲಬ್ ಅಧ್ಯಕ್ಷ ಭಾಸ್ಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ರಶೀದ್ ವಿಟ್ಲ ಪರಿಚಯಿಸಿದರು.
 ನಿಯೋಜಿತ ಅಧ್ಯಕ್ಷ ಡಾ. ಜೆಡ್ಡು ಗಣಪತಿ ಭಟ್ ವಂದಿಸಿದರು. ಉಪನ್ಯಾಸಕ ಡಿ.ಬಿ. ಅಬ್ದುಲ್ ರಹಿಮಾನ್ ಸಂವಾದ ನಡೆಸಿಕೊಟ್ಟರು. ಉಪಾಧ್ಯಕ್ಷ ಡಿ.ಬಿ. ಅಬೂಬಕ್ಕರ್ ಮತ್ತು ಡಾ.ವಿ.ಕೆ. ಹೆಗ್ಡೆ ನಿರ್ವಹಿಸಿದರು. ಶ್ರೀಮಂದರ್ ಜೈನ್ ಸಹಕರಿಸಿದರು.

ಒಬ್ಬ ವ್ಯಕ್ತಿ ಬೇರೆಯವರ ಹೊಟ್ಟೆಗೆ ಕಲ್ಲು ಹಾಕಿ, ದೋಚಿ ಬಂದ ಹಣದಿಂದ ಅವನಿಗೆ ತೃಪ್ತಿ ಸಿಗಲು ಸಾಧ್ಯ ಇಲ್ಲ. ನಿಮ್ಮನ್ನು ನೀವು ಯಾರಿಗೂ ಹೋಲಿಸಬೇಡಿ. ಇದ್ದುದರಲ್ಲಿಯೇ ಸಂತೋಷಪಡಿ ಎಂದು ಕಿವಿಮಾತು ಹೇಳಿದ ಅವರು, ಸಮಾಜ ಅಧಿಕಾರದಲ್ಲಿರುವ ಭ್ರಷ್ಟರನ್ನು ಗೌರವಿಸುತ್ತಿದೆ. ಇದು ತಪ್ಪು ಸಂದೇಶವನ್ನು ಕೊಡುತ್ತದೆ.
-ನಿವೃತ್ತ ನ್ಯಾ. ಸಂತೋಷ್ ಹೆಗ್ಡೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement