ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಕೊಲ್ಲೂರು: ಶಿಕಾರಿಗೆ ತೆರಳಿದ್ದ ಯುವಕ ಗುಂಡಿಗೆ ಬಲಿ

Srinivasa Murthy VN
Updated On : 12 Aug 2013, 11:56 am

ಉಡುಪಿ: ಕೋವಿಯಿಂದ ಆಕಸ್ಮಿಕವಾಗಿ ಹಾರಿದ ಗುಂಡು ತಗುಲಿ ಬೇಟೆಗೆ ತೆರಳಿದ್ದ ಯುವಕ ಮೃತಪಟ್ಟ ಘಟನೆ ಕೊಲ್ಲೂರು ಠಾಣಾ ವ್ಯಾಪ್ತಿಯ ವಂಡ್ಸೆ ಸಮೀಪದ ಕೈಕಾಣ ಎಂಬಲ್ಲಿ ಶನಿವಾರ ತಡರಾತ್ರಿ ನಡೆದಿದೆ. ಶೀನಾ ಆಚಾರ್ಯ ಅವರ ಮಗ ಪ್ರಭಾಕರ ಆಚಾರ್ಯ (30) ಮೃತ ಯುವಕ. ಈತ ಮೊಬೈಲ್ ಟವರ್ ಟೆಕ್ನಿಶಿಯನ್ ಆಗಿ ಕೊಲ್ಲೂರು ಪರಿಸರದಲ್ಲಿ ಕೆಲಸ ನಿರ್ವಹಿಸುತ್ತಿದ್ದ. ಶನಿವಾರ ತಡರಾತ್ರಿ ವಂಡ್ಸೆಯ ಕೈಕಾಣದ ಅರಣ್ಯ ಪ್ರದೇಶದಲ್ಲಿ ರಾಜು, ನಾಗರಾಜ ಪೂಜಾರಿ, ಸಂತೋಷ, ಸುಂದರ ಪೂಜಾರಿ ಅವರೊಂದಿಗೆ ಶಿಕಾರಿಗಾಗಿ ತೆರಳಿದ್ದ ಪ್ರಭಾಕರ ಆಚಾರ್ಯ ಗುಂಡಿಗೆ ಬಲಿಯಾಗಿದ್ದು ಶವ ಭಾನುವಾರ ಬೆಳಗ್ಗೆ ಕಾಡಿನ ಮಧ್ಯೆ ಪತ್ತೆಯಾಗಿದೆ. ಪ್ರಭಾಕರ ಆಚಾರ್ಯನ ಸಂಗಡಿಗರು ಮಾಹಿತಿ ನೀಡಿದ ಬಳಿಕವೇ ಪೊಲೀಸರಿಗೆ ವಿಷಯ ತಿಳಿದಿದೆ.
ಕೊಲೆ ಸಂಶಯ ದೂರು: ಮೃತನ ಅಣ್ಣ ಮಂಜುನಾಥ ಆಚಾರ್ಯ ಕೊಲ್ಲೂರು ಪೊಲೀಸರಿಗೆ ದೂರು ನೀಡಿದ್ದು, ಶಿಕಾರಿಗೆ ತೆರೆಳಿದ ತಂಡದಲ್ಲಿ ಯಾವುದೋ ವೈಯಕ್ತಿಕ ದ್ವೇಷದಿಂದ ತನ್ನ ಸಹೋದರನನ್ನು ಗುಂಡಿಟ್ಟು ಕೊಲೆ ಮಾಡಿರುವುದಾಗಿ ಶಂಕೆ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಜ್ಞರು ಭೇಟಿ ನೀಡಿದ್ದು, ಕುಂದಾಪುರ ಡಿವೈಎಸ್ಪಿ ಯಶೋಧಾ ಮಾರ್ಗದರ್ಶನದಲ್ಲಿ ಸಾಕ್ಷ್ಯಗಳನ್ನು ಕಲೆಹಾಕಿದರು. ಕೊಲ್ಲೂರು ಠಾಣೆಯಲ್ಲಿ ಪ್ರಥಮ ವರ್ತಮಾನ ವರದಿ ದಾಖಲಿಸಿಕೊಂಡಿದ್ದು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ತನಿಖೆ ಮುಂದುವರಿದಿದೆ.

ಕಂದಕಕ್ಕೆ ಉರುಳಿದ ವಾಹನ: 9 ಪ್ರವಾಸಿಗರಿಗೆ ಗಾಯ
ಉಪ್ಪಿನಂಗಡಿ: ಯಾತ್ರೆ ಮುಗಿಸಿ ಹಿಂತಿರುಗುತ್ತಿದ್ದ ತುಮಕೂರಿನ ನಿವಾಸಿಗರ ತಂಡ ಪ್ರಯಾಣಿಸುತ್ತಿದ್ದ ಟಾಟಾ ಸುಮೋ ವಾಹನ ಶಿರಾಡಿ ಸಮೀಪ ರಾ.ಹೆ. 75ರ 20 ಅಡಿ ಆಳದ ಕಂದಕಕ್ಕೆ ಬಿದ್ದು 9 ಮಂದಿ ಗಾಯಗೊಂಡ ಘಟನೆ ಭಾನುವಾರ ನಡೆದಿದೆ. ತುಮಕೂರಿನ ನಿವಾಸಿಗರ ತಂಡ ಉಳ್ಳಾಲ ದರ್ಗಾವನ್ನು ಸಂದರ್ಶಿಸಿ, ಹಿಂತಿರುಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಈ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ, ಸುಮೋದಲ್ಲಿದ್ದ ಇಮ್ರಾನ್ (24), ಇಂತಿಯಾಸ್ ಪಾಷಾ (25), ಖಾಲಿದ್ (25), ತಶ್ರೀಫ್ ಪಾಷಾ(20), ಶಬೀರ್ (21), ಅಶ್ರಫ್ ಅಲಿ(21), ಮುಬಾರಕ್ ಬಾಷಾ(25), ಶಹೀದ್ ಅಮರ್ (19), ಇಮ್ರಾನ್ ರಹಿಮತ್ (20) ಎಂಬವರು ಗಾಯಗೊಂಡು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಂದಕಕ್ಕೆ ಬಿದ್ದ ಪರಿಣಾಮ ಗಾಯಾಳುಗಳಿಗೆ ಮೂಳೆ ಮುರಿತವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪುತ್ತೂರು ಟ್ರಾಫಿಕ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೈಸೂರಿನ ಓರ್ವ ಸಮುದ್ರ ಪಾಲು?
ಮಂಗಳೂರು: ಉಳ್ಳಾಲ ಸೋಮೇಶ್ವರದಲ್ಲಿ ಭಾನುವಾರ ಸಮುದ್ರಕ್ಕಿಳಿದ ಮೈಸೂರು ಮೂಲದ ನಾಲ್ಕು ಮಂದಿ ಯುವಕರ ತಂಡದಲ್ಲಿ ಓರ್ವ ಭಾನುವಾರ ಸಮುದ್ರ ಪಾಲಾದ ಘಟನೆ ಸಂಭವಿಸಿದೆ. ಉಳಿದ ಮೂವರನ್ನು ಜೀವರಕ್ಷಕ ಸಿಬ್ಬಂದಿ ರಕ್ಷಿಸಿದ್ದಾರೆ.
ಮೈಸೂರಿನಿಂದ ಬಂದಿದ್ದ ನಾಲ್ವರು ಯುವಕರು ಮಧ್ಯಾಹ್ನ ಸೋಮೇಶ್ವರದಲ್ಲಿ ಸಮುದ್ರಕ್ಕೆ ಇಳಿದಿದ್ದಾರೆ. ಸಮುದ್ರಕ್ಕೆ ಇಳಿಯಬೇಡಿ ಎಂದು ಜೀವರಕ್ಷಕ ಸಿಬ್ಬಂದಿ ಯುವಕರಿಗೆ ತಿಳಿ ಹೇಳಿದರೂ, ಕೇಳದೆ ಮುಂದುವರಿದಿದ್ದಾರೆ. ಅಷ್ಟರಲ್ಲಿ ನಾಲ್ವರು ನೀರಿನ ಸೆಳೆತಕ್ಕೆ ಸಿಲುಕಿದರು. ತಕ್ಷಣವೇ ಅಲ್ಲಿದ್ದ ಜೀವರಕ್ಷಕ ಸಿಬ್ಬಂದಿ ಸಮುದ್ರಕ್ಕೆ ಧುಮುಕಿ ಮೂವರನ್ನು ಅಪಾಯದಿಂದ ಪಾರು ಮಾಡುವಲ್ಲಿ ಸಫಲರಾಗಿದ್ದಾರೆ. ಆದರೆ ಒಬ್ಬಾತ ನೀರು ಪಾಲಾಗಿದ್ದಾನೆ ಎನ್ನಲಾಗಿದೆ. ಜೀವರಕ್ಷಣೆ ಪಡೆದ ಕೂಡಲೇ ಮೂವರು ಯುವಕರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡುವುದಾಗಿ ಹೇಳಿ ಹೋದವರು ಕಾಲ್ಕಿತ್ತಿದ್ದಾರೆ. ಆದ್ದರಿಂದ ಯುವಕರ ತಂಡದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ ಎಂದು ಜೀವರಕ್ಷಕ ಸಿಬ್ಬಂದಿ ಹೇಳಿದ್ದಾರೆ. ಜೀವರಕ್ಷಕ ಸಿಬ್ಬಂದಿ ಉಳ್ಳಾಲ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಪೊಲೀಸರಿಗೂ ಹೆಚ್ಚಿನ ವಿವರ ತಿಳಿದಿಲ್ಲ, ಆದ್ದರಿಂದ ಘಟನೆ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಸಾಲ ಹಿಂತಿರುಗಿಸಲು ಹೇಳಿದ್ದಕ್ಕೆ ಹಲ್ಲೆ
ಉಪ್ಪಿನಂಗಡಿ: ಕೊಟ್ಟಿದ್ದ ರು. 90 ಸಾಲ ಮರುಪಾವತಿಸುವಂತೆ ಕೇಳಿದ್ದಕ್ಕೆ ಕೋಲಿನಿಂದ ಹೊಡೆದು ಹಲ್ಲೆ ನಡೆಸಿದ ಘಟನೆ ಉಪ್ಪಿನಂಗಡಿ ಪೊಲೀಸ್ ಠಾಣೆ ವ್ಯಾಪ್ತಿಯ ಉರುವಾಲು ಗ್ರಾಮದ ಚೆಂಡೆತ್ತಿಮಾರ್ ಎಂಬಲ್ಲಿ ನಡೆದಿದೆ. ಧರ್ಮರಾಜ ಪೂಜಾರಿ (46) ಸಾಲ ನೀಡಿ ಪೆಟ್ಟು ತಿಂದವರು. ಧರ್ಮರಾಜ ಪೂಜಾರಿ ಅವರು ರಾಜೇಶ್ ಎಂಬವರಿಗೆ ನೀಡಿದ್ದರು ಎನ್ನಲಾದ ರು. 90 ಹಣವನ್ನು ಹಿಂತಿರುಗಿಸುವಂತೆ ಶನಿವಾರ ಮಧ್ಯಾಹ್ನ ತಿಳಿಸಿದ್ದರು ಎನ್ನಲಾಗಿದೆ. ಇದರಿಂದ ಕುಪಿತರಾದ ರಾಜೇಶ್ ಅವರ ಅಣ್ಣ ಮತ್ತು ತಾಯಿ ರಾತ್ರಿವೇಳೆ ಧರ್ಮರಾಜ ಪೂಜಾರಿ ಮನೆಗೆ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಬಿದಿರ ಕೋಲಿನಿಂದ ಮನಸೋ ಇಚ್ಛೆ ಹೊಡೆದು ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ. ಗಾಯಾಳು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ
ಉಪ್ಪಿನಂಗಡಿ: ಸಹೋದರಿಯರಿಗೆ ವಿವಾಹವಾಗದಿರುವುದು ಹಾಗೂ ತನಗೂ ವಿವಾಹವಾಗದಿರುವುದರಿಂದ ಜೀವನದಲ್ಲಿ ಜಿಗುಪ್ಸೆಗೊಂಡ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ನಡೆದಿದೆ. ನೆಲ್ಯಾಡಿಯ ಇಚ್ಚೂರು ಮನೆ ನಿವಾಸಿ ರುಕ್ಮಯ ಗೌಡ (36) ಮೃತರು. ಅವರು ಎಲೆಕ್ಟ್ರಿಷಿಯನ್ ವೃತ್ತಿಯವರಾಗಿದ್ದು, ಸಮಸ್ಯೆಗಳ ಬಗ್ಗೆ ಬೇಸರಗೊಂಡು ನೆಲ್ಯಾಡಿಯ ಸಮುದಾಯ ಭವನದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವ್ಯಾನ್ ಪಲ್ಟಿ; ಇಬ್ಬರು ಗಂಭೀರ
ವಿಟ್ಲ; ತಾಂತ್ರಿಕ ತೊಂದರೆಯಿಂದ ಮಾರುತಿ ವ್ಯಾನ್ ಪಲ್ಟಿ ಹೊಡೆದ ಪರಿಣಾಮ ರಸ್ತೆ ಬದಿಯಲ್ಲಿದ್ದ ದೈವಸ್ಥಾನವೊಂದರ ಕಾಣಿಕೆ ಹುಂಡಿಯ ಮೇಲೆ ಹತ್ತಿ ನಿಂತ ಘಟನೆ ವಿಟ್ಲ ಸಮೀಪ ನಡೆದಿದ್ದು ಬಾಲಕ ಸಹಿತ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ವ್ಯಾನ್ ಚಾಲಕ ಕೊಳ್ನಾಡು ಗ್ರಾಮದ ಕೊಪ್ಪಳ ನಿವಾಸಿ ಸೋಮಶೇಖರ ಶೆಟ್ಟಿ(47) ಮತ್ತು ಅವರ ಪುತ್ರ ಪುಷ್ಪರಾಜ್(11) ಗಾಯಗೊಂಡವರು. ಬಾಲಕ ವ್ಯಾನ್ನಿಂದ ರಸ್ತೆಗೆಸೆಲ್ಪಟ್ಟಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇವರು ಭಾನುವಾರ ಬೆಳಗ್ಗೆ ವಿಟ್ಲದಿಂದ ವ್ಯಾನ್ನಲ್ಲಿ ತನ್ನ ಮನೆಗೆ ಹೋಗುತ್ತಿದ್ದ ವೇಳೆ ವಿಟ್ಲ- ಸಾಲೆತ್ತೂರು ರಸ್ತೆಯ ಕೊಡಂಗಾಯಿ ಎಂಬಲ್ಲಿನ ರಸ್ತೆ ತಿರುವು ತಲುಪುತ್ತಿದ್ದಂತೆಯೇ ವ್ಯಾನ್ನಲ್ಲಿ ತಾಂತ್ರಿಕ ವೈಫಲ್ಯ ಕಾಣಿಸಿಕೊಂಡಿದ್ದು ವಾಹನ ನಿಲ್ಲಿಸಲು ಚಾಲಕ ಪ್ರಯತ್ನಿಸುತ್ತಿದ್ದಂತೆಯೇ ಮೂರು ಪಲ್ಟಿ ಹೊಡೆದಿದೆ. ಪಲ್ಟಿ ಹೊಡೆದ ರಭಸಕ್ಕೆ ರಸ್ತೆ ಬದಿಯಲ್ಲಿದ್ದ ದೈವಸ್ಥಾನವೊಂದರ ಕಾಣಿಕೆ ಹುಂಡಿಯ ಮೇಲೆ ವ್ಯಾನ್ ಹತ್ತಿ ನಿಂತಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement