ಡಾ. ಕುರುಂಜಿ ನಿಧನಕ್ಕೆ ಅಭಾವಿಪ ಸಂತಾಪ
ಮಂಗಳೂರು: ಶಿಕ್ಷಣ ಕ್ಷೇತ್ರದ ಹರಿಕಾರ, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಸುಳ್ಯದ ಸ್ಥಾಪಕಾಧ್ಯಕ್ಷ ಕುರುಂಜಿ ವೆಂಕಟರಮಣ ಗೌಡ ಅವರ ನಿಧನಕ್ಕೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಂತಾಪ ವ್ಯಕ್ತಪಡಿಸಿದೆ. ಪ್ರಾಥಮಿಕ ಶಿಕ್ಷಣದಿಂದ ವೈದ್ಯಕೀಯ ಸಂಸ್ಥೆಗಳು ಸೇರಿದಂತೆ ಹಲವು ಕಾಲೇಜುಗಳನ್ನು ಸ್ಥಾಪಿಸಿದ ವೆಂಕಟರಮಣರು ಆಧುನಿಕ ಸುಳ್ಯದ ಕನಸುಗಾರರಾಗಿದ್ದರು. ಸಮಾಜದ ಸೇವಾ ಕಾರ್ಯಗಳನ್ನು ಮಾಡುತ್ತಿದ್ದ ಇವರು ವಿದ್ಯಾರ್ಥಿಗಳಿಗೆ ಆಸರೆಯಾಗಿದ್ದರು. ಇವರ ನಿಧನ ಶಿಕ್ಷಣ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಉಂಟುಮಾಡಿದೆ ಎಂದು ಪರಿಷತ್ ನಗರ ಕಾರ್ಯದರ್ಶಿ ಯತೀಶ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
'ನಕಲಿ ಎನ್ಕೌಂಟರ್ಸಿಬಿಐ ತನಿಖೆಯಾಗಲಿ'
ಮಂಗಳೂರು: ಭಾರತದ ಪೊಲೀಸರು, ಸೇನೆ, ಅರೆಸೇನೆ ಪಡೆ 555 ಶಂಕಿತ ನಕಲಿ ಎನ್ಕೌಂಟರ್ ನಡೆಸಿದೆ ಎಂಬ ಹೇಳಿಕೆ ನೀಡಿರುವ ಕೇಂದ್ರ ಗೃಹ ಸಚಿವ ಆ್ಯಂಟನಿ ಅವರು 2009ರ ಏ. 1 ರಿಂದ 2013 ಫೆ. 15ರವರೆಗೆ ದೇಶದಲ್ಲಿ ನಡೆದ ಎಲ್ಲ ನಕಲಿ ಎನ್ಕೌಂಟರ್ ಪ್ರಕರಣಗಳನ್ನು ಸಿಬಿಐ ತನಿಖೆ ನಡೆಸಲಿ ಎಂದು ಪ್ಯಾಪುಲರ್ ಫ್ರಂಟ್ ಆಫ್ ಇಂಡಿಯಾ ಆಗ್ರಹಿಸಿದೆ. ಭಾರತದಲ್ಲಿ ನಡೆಯುತ್ತಿರುವ ನಕಲಿ ಎನ್ಕೌಂಟರ್ ಹತ್ಯೆ ಪ್ರಕರಣಕ್ಕೆ ಕಳೆದ ಕೆಲವು ವರ್ಷಗಳಿಂದ ವಿವಿಧ ಮಾನವ ಹಕ್ಕುಗಳ ಸಂಘಟನೆಗಳು ಕಳವಳ ವ್ಯಕ್ತಪಡಿಸಿದೆ. ಆದರೆ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಇದರ ಪರಿಣಾಮ ನಕಲಿ ಎನ್ಕೌಂಟರ್ ಪ್ರಕರಣ ಹೆಚ್ಚಾಗಿವೆ ಎಂದು ಸಂಘಟನೆ ಕಾರ್ಯದರ್ಶಿ ಇಲ್ಯಾಸ್ ಮುಹಮ್ಮದ್ ತುಂಬೆ ಪ್ರಕಟಣೆಯಲ್ಲಿ ಹೇಳಿದ್ದಾರೆ. ರಕ್ಷಣಾ ಪಡೆಗಳಿಗೆ ನಕಲಿ ಎನ್ಕೌಂಟರ್ ನಡೆಸಲು ನೆರವಾಗುವ ಕಾನೂನನ್ನು ಸರ್ಕಾರ ಕೂಡಲೇ ರದ್ದುಪಡಿಸಬೇಕು. ಸಂತ್ರಸ್ತ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಪ್ರಾದೇಶಿಕ ಕೇಂದ್ರ ನಿರ್ದೇಶಕ ವರ್ಗ
ಮಂಗಳೂರು: ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಮಂಗಳೂರು ಪ್ರಾದೇಶಿಕ ಕೇಂದ್ರ ನಿರ್ದೇಶಕ ಎನ್.ಮಂಜುನಾಥ್ರನ್ನು ಧಾರವಾಡ ಕೇಂದ್ರಕ್ಕೆ ಹಾಗೂ ಬೀದರ್ ಕೇಂದ್ರದಿಂದ ಎಚ್.ಎಸ್.ರೋಹಿತ್ರನ್ನು ಮಂಗಳೂರು ಕೇಂದ್ರಕ್ಕೆ ವರ್ಗಾವಣೆ ಮಾಡಲಾಗಿದೆ ಎಂದು ಮುಕ್ತ ವಿವಿ ಕುಲಪತಿಗಳ ಪ್ರಕಟಣೆ ತಿಳಿಸಿದೆ.
ವೇದವಿದ್ಯಾ ಡಿಪ್ಲೊಮಾಗೆ ಆಹ್ವಾನ
ಮಂಗಳೂರು: ನಂತೂರಿನಲ್ಲಿರುವ ಶ್ರೀಭಾರತೀ ಕಾಲೇಜಿನಲ್ಲಿ ಸಾಮಾನ್ಯರಿಗೆ ವೇದ-ವಿದ್ಯೆ ಸಂಸ್ಕಾರ ಸಂಶೋಧನಾ ಕೇಂದ್ರದಲ್ಲಿ ವೇದ ವಿದ್ಯಾ ಡಿಪ್ಲೊಮಾ ಕೋರ್ಸ್ ನಡೆಸಲಾಗುತ್ತಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಕೋರ್ಸ್ ಅವಧಿ 6 ತಿಂಗಳಾಗಿದ್ದು, ರು. 3 ಸಾವಿರ ಶುಲ್ಕ ನಿಗದಿಪಡಿಸಲಾಗಿದೆ. ಪ್ರತಿ ಶನಿವಾರ ಮಧ್ಯಾಹ್ನ 2ರಿಂದ ಸಂಜೆ 4.30ರ ವರೆಗೆ ಮತ್ತು ಪ್ರತಿ ಭಾನುವಾರ ಬೆಳಗ್ಗೆ 9.30ರಿಂದ ಸಂಜೆ 4.30ರ ವರೆಗೆ ತರಗತಿ ನಡೆಯುವುದು. ಕನಿಷ್ಠ ಯಾವುದೇ ಪದವಿ ಪಡೆದವರು ಕೋರ್ಸ್ ಸೇರಲು ಅರ್ಹರು. ವಯೋವುತಿ ನಿರ್ಬಂಧವಿಲ್ಲ. ವೇದ ಸಾಹಿತ್ಯ ಮತ್ತು ಸಂಸ್ಕೃತಿ, ಸಂಸ್ಕೃತ ಸಾಹಿತ್ಯ, ಆಯ್ಕೆ ವೇದ ಸೂಕ್ತಗಳು, ಇತಿಹಾಸ ಕಾವ್ಯಗಳು, ಪುರಾಣಗಳ ಪರಿಚಯ ಇದರ ಪಠ್ಯವಸ್ತು. ಆಸಕ್ತರು ಆ.16ರೊಳಗೆ ಅರ್ಜಿ ಸಲ್ಲಿಸಬಹುದು. ಅರ್ಜಿಯನ್ನು ಕಾಲೇಜಿನ ವೆಬ್ಸೈಟ್ www.shreebharathicollege.com ಅಥವಾ ಕಾಲೇಜಿಗೆ ಭೇಟಿ ನೀಡಿ ಪಡೆಯಬಹುದು ಎಂದು ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.