ಮದ್ಮಲ್, ಬೊಂಡಾಸ್ ಮೀನು ರಾಶಿ ಬಲೆಗೆ
ಮಂಗಳೂರು: ಕಳೆದ ಎರಡು ತಿಂಗಳಿನಿಂದ ಆಳಸಮುದ್ರ ಯಾಂತ್ರೀಕೃತ ಮೀನುಗಾರಿಕೆ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಕರಾವಳಿ ಜನರಿಗೆ ಮೀನು ಖರೀದಿ ಗಗನ ಕುಸುಮದಂತಿತ್ತು.
ಆದರೆ ಆಗಸ್ಟ್ನಿಂದ ಮತ್ತೆ ಬೋಟುಗಳು ಸಮುದ್ರಕ್ಕಿಳಿದ ಪರಿಣಾಮ ಶನಿವಾರ ಮಂಗಳೂರಿನಲ್ಲಿ ಭರಪೂರ ಮೀನಿನ ಆವಕವಾಗಿದೆ. 10 ಸಾವಿರ ಕೆ.ಜಿ. ಮದ್ಮಲ್ ಮೀನು ಹಾಗೂ 1 ಸಾವಿರ ಕೆ.ಜಿ. ಕಪ್ಪೆ ಬೊಂಡಾಸ್ ಧಕ್ಕೆಗೆ ಬಂದಿದೆ. ಮದ್ಮಲ್ ಮೀನು, ಮುರು ಮೀನು, ವಿವಿಧ ಬಗೆಯ ಬೊಂಡಾಸ್ ಬಂದರು ಧಕ್ಕೆಯಲ್ಲಿ ರಾಶಿ ಬಿದ್ದಿವೆ. ಮಂಗಳೂರು ಯಾಂತ್ರಿಕ ಮೀನುಗಾರರ ಸಹಕಾರಿ ಸಂಘದಿಂದ 150 ಬೋಟುಗಳು ಸಮುದ್ರಕ್ಕಿಳಿದಿದ್ದು, ಶನಿವಾರ ಮತ್ತು ಭಾನುವಾರ 29 ಬೋಟುಗಳು ವಾಪಸ್ ಬಂದಿವೆ. ಒಂದು ಬೋಟಿನಲ್ಲಿ ಸುಮಾರು ಸಾವಿರ ಕೆ.ಜಿ. ಮೀನುಗಳು ಸಂಗ್ರಹಗೊಳ್ಳುತ್ತವೆ. ಮೀನುಗಳ ಭರಪೂರ ಆವಕದಿಂದ ಖುಷಿಗೊಂಡ ಮೀನು ವ್ಯಾಪಾರಿಗಳು ತಮ್ಮ ತಮ್ಮ ಬುಟ್ಟಿಯಲ್ಲಿ ರಾಶಿ ರಾಶಿ ಮೀನುಗಳನ್ನು ಹಾಕಿಕೊಂಡು ಮಾರಾಟಕ್ಕೆ ತೊಡಗಿದ್ದಾರೆ. 2 ತಿಂಗಳು ನದಿ ಮತ್ತು ತಮಿಳುನಾಡಿನಿಂದ ಬರುತ್ತಿದ್ದ ಮೀನು ತಿನ್ನುತ್ತಿದ್ದ ಕರಾವಳಿಗರಿಗೆ ಇನ್ನು ಮುಂದೆ ಸಮುದ್ರದ ಮೀನು ಸವಿಯುವ ಅವಕಾಶ ಬಂದಿದೆ.