'ಯಕ್ಷ ಕುಸುಮ' ಬಿಡುಗಡೆ, ನಾವಡಗೆ ಸನ್ಮಾನ
ಮಂಗಳೂರು: ಮಂಗಳೂರಿನ ಕಲ್ಕೂರ ಪ್ರತಿಷ್ಠಾನ ಹಾಗೂ ಸರಯೂ ಬಾಲ ಯಕ್ಷವೃಂದ ವತಿಯಿಂದ ರಾಜ್ಯ ಪ್ರಶಸ್ತಿ ಪುರಸ್ಕೃತ ಕಲಾವಿದ ರವಿ ಅಲೆವೂರಾಯ ವರ್ಕಾಡಿ ಸಂಪಾದಿತ 10 ಯಕ್ಷಗಾನ ಪ್ರಸಂಗಗಳ 'ಯಕ್ಷಕುಸುಮ' ಗ್ರಂಥ ಬಿಡುಗಡೆ ಭಾನುವಾರ ನಗರದಲ್ಲಿ ನಡೆಯಿತು.
ಪುರಭವನದಲ್ಲಿ ನಡೆದ ಸಮಾರಂಭದಲ್ಲಿ ಗ್ರಂಥ ಬಿಡುಗಡೆಗೊಳಿಸಿದ ಮಂಗಳೂರು ಆಕಾಶವಾಣಿ ಕಾರ್ಯಕ್ರಮ ನಿರ್ದೇಶಕ ಡಾ.ವಸಂತ ಕುಮಾರ್ ಪೆರ್ಲ ಮಾತನಾಡಿ, ಮಕ್ಕಳಿಗೆ ಯಕ್ಷಗಾನ ಕಲೆ ಮುಂದುವರಿಸುವುದು ಕಾರ್ಯಕ್ರಮಕ್ಕೆ ಕಾಯಕಲ್ಪ ನೀಡಿದಂತೆ. ಪಾರ್ತಿಸುಬ್ಬನ ನಂತರ ಯಕ್ಷಗಾನದಲ್ಲಿ ಬೇಕಾದಷ್ಟು ಪ್ರಸಂಗಗಳು ಹೊರಬಂದಿವೆ. ಆದರೆ ಜನಮಾನಸದಲ್ಲಿ ಬೇರೂರುವ ಹೊಸ ಪ್ರಸಂಗಗಳು ಮೂಡಿಬರಬೇಕು. ಹಳೆ ಕಥಾವಸ್ತುಗಳಿಗೆ ಪುನರ್ಜನ್ಮ ನೀಡಬೇಕು, ಈಗಿನ ತಲೆಮಾರಿನ ಬೇಡಿಕೆಗೆ ಸ್ಪಂದಿಸಬೇಕು ಎಂದು ಆಶಿಸಿದರು.
ಮಧೂರು ಉದಯ ನಾವಡಗೆ ಪ್ರಶಸ್ತಿ ಪ್ರದಾನ: ಈ ಸಂದರ್ಭ ಉಭಯ ತಿಟ್ಟುಗಳ ಕಲಾವಿದ ಮಧೂರು ಉದಯ ನಾವಡರಿಗೆ ನಗದು ರು. 10 ಸಾವಿರ, ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಲಾಯಿತು.
ಉಪನ್ಯಾಸಕ ಪುರುಷೋತ್ತಮ ಭಟ್ ನಡುವಜೆ ಅಭಿನಂದನಾ ಭಾಷಣದಲ್ಲಿ, ಉಭಯ ತಿಟ್ಟುಗಳಲ್ಲಿ ಪುಂಡುವೇಷ, ಸ್ತ್ರೀವೇಷಧಾರಿಯಾಗಿ ಮಿಂಚಿದ ನಾವಡರು, ಗಿರ್ಕಿ ಪ್ರವೀಣ. ಒಂದು ತಾಳಕ್ಕೆ ವೈವಿಧ್ಯಮಯವಾಗಿ ಕುಣಿಯುತ್ತಾರೆ. ಇಂಥ ಕಲಾವಿದ ಸಿಗುವುದು ಅಪರೂಪ ಎಂದರು.
ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡಮಿ ಮಾಜಿ ಅಧ್ಯಕ್ಷ ಕುಂಬ್ಳೆ ಸುಂದರ ರಾವ್, ಮಹಾನಗರ ಪಾಲಿಕೆ ಸಂಘ ಚಾಲಕ ಡಾ.ಸತೀಶ್ ರಾವ್, ಉದ್ಯಮಿ ಹರೀಶ್ ಕಲ್ಬಾವಿ, ಶ್ರೀಕೃಷ್ಣ ಯಕ್ಷಸಭಾ ಅಧ್ಯಕ್ಷ ಕೆ.ಎಸ್.ಕಲ್ಲೂರಾಯ, ಕಟೀಲು ಶ್ರೀದುರ್ಗಾ ಮಕ್ಕಳ ಮೇಳ ಅಧ್ಯಕ್ಷ ಹರಿನಾರಾಯಣದಾಸ ಆಸ್ರಣ್ಣ, ಪಣಂಬೂರು ಯಕ್ಷನಂದನ ಸಂಚಾಲಕ ಸಂತೋಷ್ ಐತಾಳ, ಜೈನ್ ಟ್ರಾವೆಲ್ಸ್ ಮಾಲೀಕ ರತ್ನಾಕರ ಜೈನ್, ತುಳುಕೂಟ ಅಧ್ಯಕ್ಷ ದಾಮೋದರ ನಿಸರ್ಗ, ಗೌರವ ಸಂಚಾಲಕ ಹರಿಕೃಷ್ಣ ಪುನರೂರು ಹಾಜರಿದ್ದರು.
ಯಕ್ಷಗಾನ ಕಲಾವಿದ ಕದ್ರಿ ನವನೀತ ಶೆಟ್ಟಿ ಕೃತಿ ಪರಿಚಯಿಸಿದರು. ಯಕ್ಷವೃಂದ ಅಧ್ಯಕ್ಷ ಮಧುಸೂದನ ಅಲೆವೂರಾಯ, ರವಿ ಅಲೆವೂರಾಯ, ಸುಧಾಕರ ರಾವ್ ಪೇಜಾವರ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.
ಸಮಾರಂಭಕ್ಕೆ ಮೊದಲು ಮಕ್ಕಳ ಮೇಳದಿಂದ 'ಪಂಚವಟಿ' ಪ್ರಸಂಗ ಹಾಗೂ ಬಳಿಕ ಯಕ್ಷವೃಂದದಿಂದ 'ಶಾಂಭವಿ ವಿಜಯ' ಯಕ್ಷಗಾನ ಬಯಲಾಟ ಜರುಗಿತು.